ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನ ಹೃದಯದಲ್ಲಿ ಜೇನುತುಂಬಿದ ಪಾಪಣ್ಣ ಮೇಷ್ಟ್ರು

By Staff
|
Google Oneindia Kannada News

Rajendra Hemanth, USA
ಕ್ರಿಕೆಟ್ ಬಿಟ್ಟರೆ ಕ್ರೀಡಾಪಟುಗಳಿಗೆ ಭಾರತದಲ್ಲಿ ಒಳ್ಳೆ ಭವಿಷ್ಯವಿಲ್ಲ ಎಂಬ ಮಾತನ್ನು ನನ್ನ ವಿಷಯದಲ್ಲಿ ಸುಳ್ಳಾಗಿಸಿದವರು ಟೇಬಲ್ ಟೆನಿಸ್ ಗುರು ಪಾಪಣ್ಣ. ಅವರು ಅಂದು ನನ್ನ ಎದೆಯಲ್ಲಿ ಚಿಮುಕಿಸಿದ ಜೇನು ಇಂದು ನನ್ನ ಇಡೀ ಬಾಳು ಬದುಕಿಗೆ ಸ್ಪೂರ್ತಿಯ ಚಿಲುಮೆಯಾಯಿತು. ಗುರುಭ್ಯೋನ್ನಮಃ .

ಲೇಖನ : ರಾಜೇಂದ್ರ ಹೇಮಂತ್, ಮಿಚಿಗನ್, ಯು.ಎಸ್.ಎ

Who put the honey in your heart? ಹೀಗೊಂದು ವಾಕ್ಯವನ್ನು ಓದಿದಾಗ ನನ್ನ ಮನದಲ್ಲಿ ಥಟ್ ಎಂದು ಮೂಡುವ ವ್ಯಕ್ತಿಯ ಹೆಸರು ಪಾಪಣ್ಣ ಮೇಷ್ಟ್ರದ್ದು. ಸಂಗಮೇಶ್ವರ ವಿದ್ಯಾ ಕೇಂದ್ರದಲ್ಲಿ ಗಣಿತ ಬೋಧಿಸುತ್ತಿದ್ದ ಶಾಲಾ ಪ್ರಾಂಶುಪಾಲರು. ಕೇವಲ ಗಣಿತ ಕಲಿಸುವ ಮೇಷ್ಟ್ರಾಗಿರಲಿಲ್ಲ ಅವರು. ವಿದ್ಯಾರ್ಥಿಗಳಾದ ನಮಗೆ ಪಠ್ಯೇತರ ಚಟುವಟಿಕೆಗಳನ್ನು ಪರಿಚಯಿಸಿಕೊಟ್ಟವರು. ಪಾಪಣ್ಣ ಮೇಷ್ಟ್ರು ಕಲಿಸಿದ ಗಣಿತಕ್ಕಿಂತ ಅವರು ನನಗೆ ಕಲಿಸಿದ ಹವ್ಯಾಸಗಳೇ ನನ್ನ ಜೀವನದ ದಿಸೆಯನ್ನು ಬದಲಿಸಿತು.

ನನ್ನ ಜೀವನ ಸಾಗಿಬಂದ ಹಾದಿಯಲ್ಲಿ ಒಮ್ಮೆ ಹಿಂತಿರುಗಿ ನೋಡಿದಾಗ ಅನ್ನಿಸುವುದು ನನ್ನ ಇಂದಿನ ಸ್ಥಾನ, ಉತ್ತಮ ಸ್ತರದ ಜೀವನಕ್ಕೆ ಕಾರಣ ಟೇಬಲ್ ಟೆನ್ನಿಸ್. ಪಾಪಣ್ಣ ಮೇಷ್ಟ್ರು ನನ್ನ ಟೇಬಲ್ ಟೆನ್ನಿಸ್ ಕಲಿಕೆಯನ್ನು ಪ್ರೇರೇಪಿಸಿದ ಗುರು. ಇಂದಿಗೂ ಚೆನ್ನಾಗಿ ನೆನಪಿದೆ ಪಾಪಣ್ಣ ಮೇಷ್ಟ್ರೊಡನೆ ನನ್ನ ಮೊದಲ ಭೇಟಿ. ಮೈಸೂರಿನ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದ ಅಮ್ಮನಿಗೆ ಬೆಂಗಳೂರಿಗೆ ವರ್ಗವಾದಾಗ 9ನೇ ತರಗತಿಗೆ ದಾಖಲಾಗಲು ವಿಜಯನಗರದ ಸಂಗಮೇಶ್ವರ ಶಾಲೆಯಲ್ಲಿ ಪಾಪಣ್ಣ ಮೇಷ್ಟ್ರನ್ನು ಭೇಟಿ ಮಾಡಿದೆ. ಗಣಿತ ಮೇಷ್ಟ್ರಾದ ಅವರು ನನಗೆ ಕೇಳಿದ ಪ್ರಶ್ನೆ (a+b) whole cube formula ಹೇಳಲಿಕ್ಕೆ. ಸರಿಯುತ್ತರ ಕೇಳಿದ ಅವರು ಫೀಸ್ ಕಟ್ಟಿ ಶಾಲೆಗೆ ಸೇರ್ಕೊ ಎಂದರು.

ಪಾಪಣ್ಣ ಮೇಷ್ಟ್ರು ಬ್ರಹ್ಮಚಾರಿ. ಆಯ್ಕೆಯೋ ಅಥವಾ ಅನಿವಾರ್ಯವೋ ಗೊತ್ತಿಲ್ಲ. ಆದರೆ ಒಂದೆರಡು ಬಾರಿ ಹೇಳಿದ್ದರು. ಹುಡುಗಿಯರನ್ನೇನೋ ನೋಡಿದೆ ಆದರೆ ಕೈಗೂಡಲಿಲ್ಲ ಅಂತ. ಕುಟುಂಬ ನಿರ್ವಹಣೆಯ ಯಾವುದೇ ಜವಾಬ್ದಾರಿಯಿಲ್ಲದ್ದರಿಂದಲೋ ಏನೋ ಶಾಲಾ ಮಕ್ಕಳಲ್ಲಿ ಕ್ರಿಯಾತ್ಮಕ ಹವ್ಯಾಸಗಳನ್ನು ರೂಢಿಸುವತ್ತ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ತಮ್ಮ ಸ್ವಂತ ಹಣದಿಂದಲೇ ಶಾಲಾ ಆವರಣದಲ್ಲಿ ಎರಡು ಟೇಬಲ್ ಟೆನ್ನಿಸ್ ಬೋರ್ಡುಗಳನ್ನು ಹಾಕಿಸಿದ್ದರು. ರ್‍ಯಾಕೆಟ್ ಮತ್ತು ಬಾಲ್‌ಗಳನ್ನು ಜಪಾನಿನಿಂದ ತರಿಸಿದ್ದರು. ಆಮದು ಮಾಡಿದ ರ್‍ಯಾಕೆಟ್‌ಗಳು ಕೆಲವು ನುರಿತ ಆಟಗರರಿಗೆ ಮಾತ್ರ ಲಭ್ಯವಿತ್ತು. ಹೊಸಬರು ಚೈನಾ ಅಥವಾ ಸ್ಥಳೀಯವಾಗಿ ದೊರೆಯುವ ರ್‍ಯಾಕೆಟ್‌ಗಳಿಗೇ ತೃಪ್ತಿ ಪಡಬೇಕಿತ್ತು. ನನಗೆ ಸಿಕ್ಕಿದ್ದು ಚೈನಾದಲ್ಲಿ ತಯಾರಿಸಿದ ರ್‍ಯಾಕೆಟ್.

ನನ್ನ ಅದೃಷ್ಟವೋ ಅಥವಾ ಓದುವುದು, ಹಸು/ಎಮ್ಮೆ ಮೇಯಿಸುವುದು ಬಿಟ್ಟರೆ ಬೇರೇನೂ ನನಗೆ ಕೆಲಸವಿಲ್ಲದ್ದಕ್ಕೋ ಅಥವಾ ನನ್ನನ್ನು ನಾನು ನಿರೂಪಿಸಲಿಕ್ಕೋ ಟೇಬಲ್ ಟೆನ್ನಿಸ್ ಆಟದಲ್ಲಿ ನನ್ನನ್ನು ನಾನು ತೊಡಗಿಸಿಕೊಂಡೆ. ಆಸಕ್ತಿಯಿಟ್ಟು ಅಭ್ಯಾಸ ಮಾಡತೊಡಗಿದೆ. ಆದರೆ ಕೆಲವು ತೊಡಕುಗಳಿದ್ದವು. ನಾನು 9ನೇ ತರಗತಿಗೆ ಸಂಗಮೇಶ್ವರ ಶಾಲೆಯನ್ನು ಸೇರಿದ್ದರಿಂದ ಪಾಪಣ್ಣ ಮೇಷ್ಟ್ರು ನನ್ನ ಟೇಬಲ್ ಟೆನ್ನಿಸ್ ಕಲಿಸುವ ಬಗ್ಗೆ ಹೆಚ್ಚು ಆಸಕ್ತಿ ವಹಿಸಲಿಲ್ಲ. ಎಂಟನೇ ತರಗತಿಯ ವಿದ್ಯಾರ್ಥಿಗಳು 3 ವರ್ಷ ಅದೇ ಶಾಲೆಯಲ್ಲಿರುವುದರಿಂದ ಅವರ ಬಗ್ಗೆ ಹೆಚ್ಚು ಖಾಳಜಿ ವಹಿಸಿ ತರಬೇತಿ ನೀಡುತ್ತಿದ್ದರು. ಅಲ್ಲದೆ ಒಳ್ಳೆಯ ಸ್ಟ್ರೋಕ್‌ಗಳಿಗೆ ಭಂಗ ತರುವ ನನ್ನ ಆಟದ ಕೆಲವು ಭಂಗಿಗಳೂ ಅವರಿಗೆ ಇಷ್ಟವಾಗುತ್ತಿರಲಿಲ್ಲ.

ಪಾಪಣ್ಣ ಮೇಷ್ಟ್ರು ಮುಂಜಾನೆ 5.30ಕ್ಕೇ ಶಾಲೆಗೆ ಬಂದು ಬೆಳಿಗ್ಗೆ 8 ಗಂಟೆಯವರೆಗೂ ತರಬೇತಿ ನೀಡುತ್ತಿದ್ದರು. ನನಗೆ ಹಿರಿಯ ವಿದ್ಯಾರ್ಥಿಗಳೊಡನೆ ಆಡಲು ಅವಕಾಶ ಸಿಗುತ್ತಿರಲಿಲ್ಲ. ಆದರೆ ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಆ ಅವಕಾಶ ಅನಾಯಾಸವಾಗಿ ಸಿಗುತ್ತಿತ್ತು! ಈ ವಿಷಯವಾಗಿ ನನಗೆ ಪಾಪಣ್ಣ ಮೇಷ್ಟ್ರ ಬಗ್ಗೆ ತುಸು ಕೋಪವಿತ್ತು. ಅದೇ ಕೋಪ ನನ್ನನ್ನು ಮತ್ತಷ್ಟು ಗಮನವಿಟ್ಟು ಅಭ್ಯಾಸ ಮಾಡಲು ಪ್ರೇರೇಪಿಸಿತು. ನಾನು 9ನೇ ತರಗತಿಯಾದ್ದರಿಂದ 8ನೇ ತರಗತಿಯ ಹುಡುಗರನ್ನು ಹೆದರಿಸಿ ಬಲವಂತ ಮಾಡಿ ಶಾಲಾ ವೇಳೆಯ ನಂತರ ಹಾಗೂ ಭಾನುವಾರಗಳಂದು ಅವರೊಡನೆ ಅಭ್ಯಾಸ ಮಾಡುತ್ತಾ ಇದ್ದೆ. ಕ್ರಮೇಣ ನನ್ನ ಟೇಬಲ್ ಟೆನ್ನಿಸ್ ಪರಿಣಿತಿ ಉತ್ತಮಗೊಂಡು ಬಲುಬೇಗ ಶಾಲೆಯ ಉತ್ತಮ ಆಟಗಾರರ ಗುಂಪಿಗೆ ನಾನೂ ಸೇರ್ಪಡೆಯಾಗಿದ್ದೆ.

ನನ್ನ ಈ ಪ್ರಗತಿಯನ್ನು ಗಮನಿಸುತ್ತಾ ಬಂದಿದ್ದ ಪಾಪಣ್ಣ ಮೇಷ್ಟ್ರು ಹಿರಿಯ ವಿದ್ಯಾರ್ಥಿಗಳಿಗೆಂದೇ ಮೀಸಲಾಗಿದ್ದ ಉತ್ತಮ ರ್‍ಯಾಕೆಟ್ ನನಗೆ ಕೊಟ್ಟರು. ಸಕಾಲಕ್ಕೆ ರಾಜ್ಯ ಯುವಜನ ಕೇಂದ್ರದಲ್ಲಿ ಉತ್ತಮ ತರಬೇತುಗಾರ ಕೂಡಾ ಲಭಿಸಿದರು. ಪಾಪಣ್ಣ ಮೇಷ್ಟ್ರು ನಮ್ಮನ್ನು ಬೆಂಗಳೂರು ಮಾತ್ರವಲ್ಲದೆ ಇತರೇ ಊರುಗಳಲ್ಲಿ ನಡೆಯುವ ಟೇಬಲ್ ಟೆನ್ನಿಸ್ ಟೂರ್ನಮೆಂಟುಗಳಿಗೂ ಸಹಾ ನಮ್ಮನ್ನು ಕರೆದೊಯ್ಯುತ್ತಿದ್ದರು. ಇವೆಲ್ಲದರ ಫಲ ಹತ್ತನೇ ತರಗತಿಯಲ್ಲಿದ್ದಾಗ ರಾಜ್ಯ ಸಬ್‌ಜೂನಿಯರ್ ವರ್ಗದಲ್ಲಿ 5ನೇ ಶ್ರೇಯಾಂಕದ ಆಟಗಾರನಾದೆ. ಅಲ್ಲದೇ ಅಂತರ ಶಾಲಾ ಸ್ಪರ್ಧೆಯಲ್ಲಿ ನಮ್ಮ ಶಾಲೆಗೆ ಜೂನಿಯರ್ ಚಾಂಪಿಯನ್‌ಶಿಪ್ ದಕ್ಕಿಸಿಕೊಟ್ಟಿದ್ದಲ್ಲದೆ ಸ್ವಂತಕ್ಕೆ ಸೈಕಲ್ ಕೂಡ ಗೆದ್ದಿದ್ದೆ. ಅದೇ ಸ್ಪರ್ಧೆಯಲ್ಲಿ ಹಿರಿಯರ ವಿಭಾಗದಲ್ಲಿ ಶಾಲೆಯು ದ್ವಿತೀಯ ಸ್ಥಾನ ಗಳಿಸಿತು. ನನಗೊಂದು HMT ವಾಚ್ ಕೂಡಾ ಲಭಿಸಿತ್ತು. ದ್ವಿತೀಯ ಪಿ.ಯು.ಸಿ. ಮುಗಿಸುವ ವೇಳೆಗೆ ಟೇಬಲ್ ಟೆನ್ನಿಸ್ ಜೂನಿಯರ್ ವಿಭಾಗದಲ್ಲಿ ರಾಜ್ಯ ಚಾಂಪಿಯನ್ ಆಗಿದ್ದೆ. ಅದರ ಫಲವೇ ಕ್ರೀಡಾ ಮೀಸಲಾತಿಯಲ್ಲಿ ದೊರೆತ ನನ್ನ ಇಂಜಿನೀಯರಿಂಗ್ ಸೀಟು ಮೈಸೂರಿನ NIEಯಲ್ಲಿ. ಬಹುಶಃ ಕ್ರೀಡಾ ಮೀಸಲಾತಿಯ ನೆರವಿಲ್ಲದೇ ಇದ್ದಲ್ಲಿ ನಾನು ಇಂಜಿನೀಯರಿಂಗ್ ಸೇರುವುದು ಅಸಂಭವವಿತ್ತು ಅನಿಸುತ್ತದೆ.

ಪಾಪಣ್ಣ ಮೇಷ್ಟ್ರು ನಮಗೆ ಖಗೋಳ ಶಾಸ್ತ್ರ, ಪಕ್ಷಿ ವೀಕ್ಷಣೆ, ಚಾರಣ, ಛಾಯಾಚಿತ್ರಗ್ರಹಣ ಎಲ್ಲದರಲ್ಲು ಆಸಕ್ತಿಯನ್ನು ಮೂಡಿಸಿದ್ದರು. ನನ್ನ ಸಹಪಾಠಿ ರಾಜು ಚೆಸ್ ಚಾಂಪಿಯನ್ ಆಗಲೂ ಸಹ ಪಾಪಣ್ಣ ಮೇಷ್ಟ್ರ ಸಹಾಯ, ಪರಿಶ್ರಮವಿತ್ತು. ಅವರು ಪಕ್ಷಿ ವೀಕ್ಷಣೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ಅದರಲ್ಲೂ ಪಕ್ಷಿಗಳ ಗೂಡುಗಳನ್ನು ಹುಡುಕುವುದರಲ್ಲಿ ನಿಷ್ಣಾತರು. ಅನೇಕ ಪಕ್ಷಿ ಛಾಯಾಗ್ರಾಹಕರು ತಮ್ಮೊಡನೆ ಪಕ್ಷಿಗಳ ಗೂಡುಗಳ ಚಿತ್ರ ತೆಗೆಯಲೆಂದೇ ಪಾಪಣ್ಣ ಮೇಷ್ಟ್ರನ್ನು ಕರೆದೊಯ್ಯುತ್ತಿದ್ದರು.

ಇಂದಿಗೂ ಪಾಪಣ್ಣ ಮೇಷ್ಟ್ರು ತೋರಿದ ಹಾದಿಯಲ್ಲೇ ನಡೆದು ಬಂದಿರುವೆ. ಅವರು ಆಸಕ್ತಿ ಮೂಡಿಸಿದ ಬಹುತೇಕ ಚಟುವಟಿಕೆಗಳಲ್ಲಿ ಇಂದಿಗೂ ನನ್ನನ್ನು ತೊಡಗಿಸಿಕೊಂಡಿರುವೆ. ಟೇಬಲ್ ಟೆನ್ನಿಸ್ ಅಂತೂ ನನ್ನ ಜೀವನದ ಅವಿಭಾಜ್ಯ ಅಂಗ. ಪಾಪಣ್ಣ ಮೇಷ್ಟ್ರು ನನ್ನ ಹೃದಯದಲ್ಲಿ ತುಂಬಿದ ಜೇನು ನನ್ನ ಜೀವನದಲ್ಲಿ ನಾನು ಬಗೆದದ್ದಕ್ಕಿಂತಲೂ ಹೆಚ್ಚಿನತೆರದಲ್ಲಿ ನನ್ನ ಜೀವನ ಸಾಫಲ್ಯಕ್ಕೆ ಕಾರಣವಾಗಿದೆ. ಈ ಶಿಕ್ಷಕರ ದಿನಾಚರಣೆಯಂದು ವರ್ಷಗಳ ಹಿಂದೆ ನಮ್ಮನ್ನಗಲಿರುವ ದಿವ್ಯ ಚೇತನಕ್ಕೆ ನನ್ನ ಹೃತ್ಪೂರ್ವಕ ನಮನ.

ಪಾಠ ಕಲಿಸಿದ ಶಿಕ್ಷಕರ ನೆನಕೆ

ಜೀವನದ ಅರಿವು ಮೂಡಿಸುವ ಪ್ರತಿಯೊಬ್ಬನೂ ಶಿಕ್ಷಕನೇ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X