ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣೇಶನನ್ನು ಒಲಿಸಿಕೊಳ್ಳಲು 7 ವಿಧಾನಗಳು

By Prasad
|
Google Oneindia Kannada News

ಜಗತ್ತಿನ ಎಲ್ಲ ಅಡ್ಡಿ ಆತಂಕಗಳನ್ನು ನಿವಾರಿಸಿ, ಕೆಲಸ ಕಾರ್ಯಗಳೆಲ್ಲ ನಿರ್ವಿಘ್ನವಾಗಿ ನಡೆಯಲೆಂದು ಆಶೀರ್ವದಿಸಲು, ಭಾದ್ರಪದ ಮಾಸ ಶುಕ್ಲ ಪಕ್ಷ ಚತುರ್ಥಿಯಂದು ವಿಘ್ನವಿನಾಯಕ ಗಣಪ ನಿಮ್ಮ ಮನೆಯಲ್ಲಿ ಪ್ರತಿಷ್ಠಾಪನೆಯಾಗಲಿದ್ದಾನೆ. ನಲ್ಲಿಯಲ್ಲಿ ಕಾವೇರಿ ನೀರು ಬರಲಿ ಬರದಿರಲಿ, ಮಾರುಕಟ್ಟೆಯಲ್ಲಿ ಹೂವು ಹಣ್ಣು ತರಕಾರಿ ಆಹಾರ ಧಾನ್ಯಗಳ ಬೆಲೆ ಗಗನಕ್ಕೇರಲಿ ಬಿಡಲಿ, ಇಲ್ಲಿ ಹಬ್ಬದ ಸಡಗರಕ್ಕೇನು ಬರವಿಲ್ಲ.

ರೀ ನೋಡಿದ್ರಾ ಶಾಂತಮ್ನೋರೆ ಮಲ್ಲಿಗೆ ಮೊಳಕ್ಕೆ ಇಪ್ಪತ್ತು ರುಪಾಯಿಯಂತೇರಿ, ಶಾವಂತಿಗೆ ಮಾರಿಗೆ 70ರಿಂದ 80 ರು. ಅಂತೇರಿ, ಇನ್ನು ಬಾಳೆ ಹಣ್ಣಿನ ಬೆಲೆ ಕೇಳಿದ್ರಾ... ಅಂತ ಗೊಣಗುತ್ತಲೇ ಕೈಗೆ ಬಾಸ್ಕೆಟ್ ಏರಿಸಿಕೊಂಡು, ಸಿಕ್ರೆಟ್ ಪಾಕೇಟಲ್ಲಿ ಸ್ವಲ್ಪ ಹಣ ಜಾಸ್ತಿಯೇ ಇಟ್ಟುಕೊಂಡು ಹೆಂಗಳೆಯರನೇಕರು ಕಿಚಿಕಿಚಿ ಮಳೆಯ ರಾಡಿಯಲ್ಲಿ ಚೌಕಾಸಿ ಮಾಡುತ್ತ ಹಬ್ಬಕ್ಕೆ ಬೇಕಾದ ವಸ್ತುಗಳನ್ನೆಲ್ಲ ಕೊಳ್ಳುತ್ತಿದ್ದಾರೆ.

ಇದಕ್ಕಿಂತ ಇನ್ನೊಂದು ಅವಕಾಶ ಸದ್ಯದಲ್ಲಿ ಸಿಗುವುದಿಲ್ಲ ಎಂದು ವ್ಯಾಪಾರಸ್ಥರು ಭರ್ಜರಿ ಕಮಾಯಿ ಮಾಡುತ್ತಿದ್ದಾರೆ. ಮಾವಿನ ಸೊಪ್ಪು ಮಾರುವವರು ಕೂಡ ಭರ್ಜರಿ ಕಮಾಯಿ ಮಾಡಿಕೊಂಡಿರುತ್ತಾರೆ. ನಮ್ಮ ಹಿಂದೂ ಹಬ್ಬಗಳೇ ಹಾಗೆ, ಯಾವ ವಸ್ತುವನ್ನೂ ಬಿಡುವಂತಿಲ್ಲ. ಈ ಬಾರಿ ನೆಂಟರನ್ನು ಅವರಿದ್ದಲ್ಲಿಯೇ ಇರಲು ಬಿಟ್ಟರೂ ಪರವಾಗಿಲ್ಲ, ಪೂಜೆ ಪುನಸ್ಕಾರಗಳು ಮತ್ತು ಹಬ್ಬದೂಟ ಮಾತ್ರ ಭರ್ಜರಿಯಾಗಿಯೇ ಆಗಬೇಕು.

ಇಷ್ಟಕ್ಕೂ ಗಣೇಶ ಅಂದ್ರೆ ದೊಡ್ಡವರಿಗೆ ಮಾತ್ರವಲ್ಲ, ಚಿಕ್ಕಮಕ್ಕಳಿಗೂ ಬಲು ಪ್ರೀತಿ. ದೊಡ್ಡವರಾದರೆ ಭಕ್ತಿಭಾವದಿಂದ ಪೂಜೆ ಮಾಡಿ ಮುಂದೆ ಯಾವುದೇ ವಿಘ್ನಗಳು ಬಾರದಿರಲಿ ಎಂದು ಪರಿಪರಿಯಾಗಿ ಬೇಡಿಕೊಂಡು, ಗಲ್ಲಗಲ್ಲ ಬಡಿದುಕೊಂಡು ಚಾಮರಕರ್ಣನನ್ನು ಅರ್ಚಿಸಿದರೆ, ಮಕ್ಕಳಿಗೆ ಕಾರ್ಟೂನ್‌ನಲ್ಲಿ ಕಾಣುವ, ಹಿಮಾಲಯದಲ್ಲಿ ಸ್ಕೇಟಿಂಗ್ ಆಡುತ್ತ ಚೆಲ್ಲಾಟವಾಡುವ ಗಣಪನಂತೆಯೇ ಈ ವಿನಾಯಕನೂ ಇರುತ್ತಾನಾ ಎಂದು ತಿಳಿಯುವ ಹಂಬಲ.

ಇಷ್ಟು ಮಾತ್ರವಲ್ಲ, ಅಡುಗೆಮನೆಯಲ್ಲಿ ಕರಿದ ಕಡುಬು, ಕರ್ಚಿಕಾಯಿ, ಕುಚ್ಚಿದ ಕಡುಬು, ಮೋದಕ, ಆಂಬೋಡೆ, ಚಿತ್ರಾನ್ನ, ಪಾಯಸ, ಕಟ್ಟಿದ ಸಾರು, ಎರಡು ಬಗೆಯ ಪಲ್ಯ, ಕೋಸಂಬ್ರಿ ಮಾಡಿ, ಮನೆಮಂದಿಗೆಲ್ಲ ತೃಪ್ತಿಯಾಗುವಂತೆ ಬಡಿಸುವ ಸಡಗರ ಮನೆಯ ಹೆಣ್ಣುಮಕ್ಕಳಿಗೆಲ್ಲ. ನೈವೇದ್ಯ ಮಾಡುವ ಮೊದಲೇ ಪುಟ್ಟ ಮಗು ಕಡುಬು, ಆಂಬೋಡೆ ಬಾಯಿಗಿಟ್ಟುಕೊಂಡರೆ ಕೋಪಿಸಿಕೊಳ್ಳಬೇಡಿ, ಮಕ್ಕಳು ದೇವರ ಸಮಾನ.

ಎಲ್ಲ ಕಾರ್ಯಗಳಿಗೂ ಮೊದಲು ಪೂಜಿತನಾಗುವ ಏಕದಂತನಿಗೆ ಎಲ್ಲವೂ ವಿಧ್ಯುಕ್ತವಾಗಿಯೇ ಆಗಬೇಕು. ಗಣಪನ ಹಬ್ಬವೆಂದರೆ ಅದೊಂದು ವ್ರತ. ಪೇಟೆಯಿಂದ ಪರಿಸರ ಪ್ರೇಮಿ ಗಣೇಶನನ್ನು ತಂದು ಮಂಟಪದಲ್ಲಿ ಪ್ರತಿಷ್ಠಾಪಿಸಿ ಸಂಜೆಗೆ ಅಥವಾ, ಮೂರು, ಐದು ಅಥವಾ ಏಳು ದಿನಗಳ ನಂತರ ಬಕೇಟಿನಲ್ಲಿ ಅಥವಾ ಕೆರೆಯಲ್ಲಿ ಅಥವಾ ಬಾವಿಯಲ್ಲಿ ವಿಸರ್ಜನೆ ಮಾಡಿ, ನಂತರ ಶಮಂತಕೋಪಾಖ್ಯಾನ ಕೇಳಿ ಚಂದ್ರಾಮನ ನೋಡಿದ ಪಾಪ ಕಳೆದುಕೊಳ್ಳುವವರೆಗೆ ಎಲ್ಲವೂ ಅತ್ಯಂತ ಶಿಸ್ತುಬದ್ಧವಾಗಿಯೇ ಆಗಬೇಕು.

ಗಣೇಶನನ್ನು ಒಲಿಸಿಕೊಳ್ಳಲು ಏಳು ವಿಧಾನಗಳು

ಮಣ್ಣಿನ ಗಣೇಶನಿಗೆ ಬಣ್ಣ ಬೇಡವೇ ಬೇಡ

ಮಣ್ಣಿನ ಗಣೇಶನಿಗೆ ಬಣ್ಣ ಬೇಡವೇ ಬೇಡ

ಮಾರುಕಟ್ಟೆಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಹಿಡಿದು ಜೇಡಿ ಮಣ್ಣಿನಿಂದ ಮಾಡಿದ ಗಣೇಶನವರೆಗೆ ಬಗೆಬಗೆಯ ರೂಪದ, ಬಗೆಬಗೆಯ ಗಾತ್ರದ, ಬಗೆಬಗೆಯ ಮೌಲ್ಯದ, ವಿವಿಧ ಬಣ್ಣದ ಸುಂದರ ಮೂರ್ತಿಗಳು ಲಭ್ಯವಿವೆ. ಆದರೆ, ನೀವು ನಿಜವಾಗಿಯೂ ಪರಿಸರ ಪ್ರೇಮಿಯಾಗಿದ್ದರೆ ನೈಸರ್ಗಿಕ ಬಣ್ಣ ಬಳಿದಿರದ, ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂತ ತಯಾರಿಸಿರದ, ಪರಿಸರವನ್ನು ಕಲುಷಿತಗೊಳಿಸದ ಗೌರಿಸುತನನ್ನು ಮನೆಗೆ ಕರೆತನ್ನಿ. ಗಣಪ ನಿಮಗೆ ನಿಮ್ಮ ಕುಟುಂಬಕ್ಕೆ ಸನ್ಮಂಗಳವನ್ನು ಮಾಡಿಯೇ ಮಾಡುತ್ತಾನೆ.

ಹೂವುಗಳು ಪರಿಮಳ ಸೂಸುವಂತಿರಲಿ

ಹೂವುಗಳು ಪರಿಮಳ ಸೂಸುವಂತಿರಲಿ

ಆಹಾ ಮಾರುಕಟ್ಟೆಗೆ ಕಾಲಿಟ್ಟ ತಕ್ಷಣ ಕಾಣುವ ವೈವಿಧ್ಯಮಯ ಹೂವುಗಳನ್ನು ನೋಡಿದರೇನೇ ಒಂದು ಬಗೆಯ ಆನಂದ, ಆದರೆ ಕೊಳ್ಳಲು ಹೋದಾಗ ಮಾತ್ರ ಹೂವು ಬಾಡಿದಂತೆ ಮುಖ ಬಾಡಿಬಿಡುತ್ತದೆ. ಏನ್ಮಾಡುವುದು ದುಬಾರಿ ಜಮಾನಾ. ಗಜಾನನನಿಗೆ ಮಲ್ಲಿಗೆ, ಸೇವಂತಿಗೆ, ಡೇರೆ, ಸಂಪಿಗೆ, ಗುಲಾಬಿ, ಕೇದಗೆ, ಕಮಲ, ಸೌಗಂಧಿಕಾ ಮುಂತಾದ ಹೂವುಗಳೆಂದರೆ ಬಲು ಪ್ರೀತಿ. ಈ ಹೂವುಗಳ ಜೊತೆಗೆ ಏಲಕ್ಕಿ ಹೂವಿನ ಹಾರವನ್ನು, ಅದು ದುಬಾರಿಯಾಗಿದ್ದರೂ ಕೊಳ್ಳಲು ಮರೆಯಬೇಡಿ.

ಮಂಟಪದ ಅಲಂಕಾರಕ್ಕೆ ಹಸುರು ಹೊನ್ನು

ಮಂಟಪದ ಅಲಂಕಾರಕ್ಕೆ ಹಸುರು ಹೊನ್ನು

ಮನೆಯಲಿರುವ ಮಂಟದ ಅಳತೆಗೆ ತಕ್ಕಂತೆ ಬಾಳೆ ಗಿಡಗಳನ್ನು ತನ್ನಿರಿ. ಮನೆಯ ಮುಂಬಾಗಿಲು, ದೇವರ ಕೋಣೆ, ಕಳಶಕ್ಕೆ ಮತ್ತು ಪಂಟಪವನ್ನು ಸೂಕ್ತವಾಗಿ ಅಲಂಕರಿಸಲು ಮಾವಿನ ಸೊಪ್ಪಿನ ಎಲೆಗಳು ಎಲ್ಲೆಂದರಲ್ಲಿ ಸಿಗುತ್ತಿವೆ. ಕೇದಗೆಯಿಂದ ಮಾಡಿದ ಅಲಂಕಾರಿಕ ವಸ್ತುಗಳೂ ಪೇಟೆಯಲ್ಲಿ ಲಭ್ಯ. ಪವಿತ್ರ ತುಳಸಿ ಮತ್ತು ಬಿಲ್ವ ಪತ್ರೆ ಸೇರಿದಂತೆ 21 ಬಗೆಯ ಪತ್ರೆಗಳು ದಂಡಿಯಾಗಿರಲಿ. ಹಾಗೆಯೆ, ನೈವೇದ್ಯಕ್ಕೆ ಮತ್ತು ಊಟಕ್ಕೆ ಎಳೆಯ ಬಾಳೆಎಲೆ. ಜೊತೆಗೆ, ಬಾಳೆಹಣ್ಣಿನ ನೈವೇದ್ಯವಿಡಲು, ಸತ್ಪಾತ್ರರಿಗೆ ದಾನ ನೀಡಲು, ನಂತರ ಊಟವಾದ ಮೇಲೆ ಜಗಿಯಲು ವೀಳ್ಯದೆಲೆ ತರಲು ಮರೆಯಬೇಡಿ.

ಎಂತೆಂಥ ಹಣ್ಣುಗಳು ಇದ್ದರೆ ಸೂಕ್ತ

ಎಂತೆಂಥ ಹಣ್ಣುಗಳು ಇದ್ದರೆ ಸೂಕ್ತ

ಹಣ್ಣುಗಳೆಂದ ಕೂಡಲೆ ಅನೇಕರ ಕಣ್ಣುಗಳು ಕಿರಿದಾಗಿಬಿಡುತ್ತವೆ. ರೇಟೇ ಹಾಗಿವೆ. ಗಜಾನನನ ಮುಂದೆ ಅಲಂಕಾರಕ್ಕೇ ಆಗಲಿ, ನೈವೇದ್ಯಕ್ಕೇ ಆಗಲಿ, ಮನೆಗೆ ಬಂದ ಮುತ್ತೈದೆಯರಿಗೆ ಅರಿಷಿಣ ಕುಂಕುಮ ಹಚ್ಚಿ ಗುಗ್ಗರಿಯೊಡನೆ ನೀಡುವುದಕ್ಕೇ ಆಗಲಿ ಅನೇಕ ಬಗೆಯ ಹಣ್ಣುಗಳು ಬೇಕಾಗುತ್ತವೆ. ಸೇಬು, ಮೋಸಂಬಿ, ಅನಾನಸ್, ಸೀಬೆಹಣ್ಣು, ಸೀತಾಫಲ, ಬಾಳೆಹಣ್ಣು, ಸಪೋಟ ಮುಂತಾದ ಹಣ್ಣುಗಳು ಧಾರಾಳವಾಗಿ ಲಭ್ಯವಿವೆ. ನೀವು ಕೂಡ ಧಾರಾಳಿತನ ತೋರಿ ಕನಿಷ್ಠಪಕ್ಷ 5 ಬಗೆಯ ಹಣ್ಣುಗಳನ್ನು ಕೊಂಡುತನ್ನಿ.

ಗಣೇಶ ಚತುರ್ಥಿಯಿದು, ವಿಶಿಷ್ಟ ಭಕ್ಷ್ಯಗಳಿವು

ಗಣೇಶ ಚತುರ್ಥಿಯಿದು, ವಿಶಿಷ್ಟ ಭಕ್ಷ್ಯಗಳಿವು

ಬಹುಶಃ ಗಣೇಶ ಚತುರ್ಥಿಯಂದು ಮಾಡುವಷ್ಟು ವೈವಿಧ್ಯಮಯ, ಸ್ವಾದಿಷ್ಟಕರ ತಿನಿಸುಗಳನ್ನು ಬೇರೆ ಯಾವ ಹಬ್ಬದಲ್ಲಿಯೂ ಮಾಡುವುದಿಲ್ಲ. ಕರಿದ ಕಡುಬು, ಕರ್ಚಿಕಾಯಿ, ಕುಚ್ಚಿದ ಕಡುಬು, ಮೋದಕ, ಆಂಬೋಡೆ, ಚಿತ್ರಾನ್ನ, ಪಾಯಸ, ಕಟ್ಟಿದ ಸಾರು, ಎರಡು ಬಗೆಯ ಪಲ್ಯ, ಕೋಸಂಬ್ರಿ... ವಾವ್ ವಾವ್! ಕಡುಬನ್ನು ಕರೆಯುತ್ತಿದ್ದರೆ ಪಕ್ಕದ ಮನೆಗೂ ಅದರ ಪರಿಮಳ ಹಬ್ಬಿರುತ್ತದೆ. ಇನ್ನು ಅವುಗಳನ್ನು ಹೇಗೆ ಮಾಡಬೇಕೆಂದು ತಿಳಿಸುವ ಅಗತ್ಯವೇ ಇಲ್ಲ. ಆದರೆ, ಮೃಷ್ಟಾನ್ನ ಭೋಜನ ಸವಿಯುವಾಗಲೂ ಒಂದು ಮಿತಿಯರಲಿ. ಆರೋಗ್ಯ ಹಾಳಾಗುವಂತೆ ತಿಂದು ಮುಂದೆ ವೈದ್ಯರ ಹತ್ತಿರ ಅಲೆಯಬೇಡಿ.

ಪೂಜೆಯಿಂದ ಹಿಡಿದು ವಿಸರ್ಜನೆಯವರೆಗೆ

ಪೂಜೆಯಿಂದ ಹಿಡಿದು ವಿಸರ್ಜನೆಯವರೆಗೆ

ನೀವೇ ಸ್ವತಃ ಕುಳಿತು ಅರ್ಚಕರ ಸಹಾಯದಿಂದ ಮಂತ್ರಪಠನದೊಡನೆ ಪದ್ಧತಿಯಂತೆ ಭಗವಂತನನ್ನು ಭಜಿಸುವುದು ಸರಿಯಾದ ವಿಧಾನ. ಆದರೆ, ಭಡಜಿ, ಅರ್ಚಕ, ಪೂಜಾರಿಗಳಿಗೆ ಇಂದು ಭಾರೀ ಬೇಡಿಕೆ. ಪೂಜಾರಿಗಳು ಸಿಗದಿದ್ದರೆ ಗಣೇಶ ಪೂಜಾವಿಧಾನದ ಸಿಡಿ ಅಥವಾ ಕ್ಯಾಸೆಟ್ಟುಗಳು ಲಭ್ಯವಿವೆ. ಅದನ್ನು ಕೇಳುತ್ತಲೇ ಪೂಜೆ ಸಲ್ಲಿಸಿದರೂ ಗಣೇಶ ಕೋಪಗೊಳ್ಳುವುದಿಲ್ಲ, ಬೇಕಾದ ವರವನ್ನು ಕೊಟ್ಟೇ ಕೊಡುತ್ತಾನೆ. ಆದರೆ, ಪೂಜೆಯ ನಂತರ ಸತ್ಪಾತ್ರರಿಗೆ ದಾನ ಕೊಡುವುದನ್ನು ಮಾತ್ರ ಮರೆಯಬೇಡಿ. ಹಾಗೆಯೆ, ಗಣಪತಿಯನ್ನು ವಿಸರ್ಜಿಸುವಾಗ ನಿಗದಿಪಡಿಸಿದ ಸ್ಥಳದಲ್ಲಿ, ಪರಿಸರ ಹಾಳಾಗದಂತೆ 'ಗಣಪತಿ ಬಪ್ಪ ಮೋರಯಾ, ಮುಂದಿನ ವರ್ಷ ಬೇಗನೆ ಬಾ' ಎಂದು ಹೇಳುತ್ತ ವಿಸರ್ಜಿಸಿ.

ವೃಥಾ ಅಪವಾದದಿಂದ ಪಾರಾಗಿರಿ

ವೃಥಾ ಅಪವಾದದಿಂದ ಪಾರಾಗಿರಿ

ಗಣೇಶನನ್ನು ವಿಸರ್ಜಿಸುವ ಹಂತದಲ್ಲಿ ಬೇಡಬೇಡವೆಂದರೂ ಮೋಡದ ಮರೆಯಲ್ಲಿ ಡೊಳ್ಳುಹೊಟ್ಟೆಯ ಗಣಪನನ್ನು ನೋಡಿ ನಗುತ್ತಿರುವ ಚತುರ್ಥಿಯ ಚಂದ್ರ ಕಂಡೇ ಕಾಣುತ್ತಾನೆ. ಚಂದ್ರನನ್ನು ನೋಡಿದರೆ ನಮಗೂ ಕೃಷ್ಣನಿಗೆ ದ್ವಾಪರಯುಗದಲ್ಲಿ ಶ್ಯಮಂತಕ ಮಣಿ ಕದ್ದ ಅಪವಾದ ಬರುತ್ತದೆಯೆಂಬ ನಂಬಿಕೆಯಿದೆ. ಆದರೆ ಡೋಂಟ್ ವರಿ. ಗಣೇಶ ಪೂಜಾ ವಿಧಾನದ ಸಿಡಿಯ ಕೊನೆಗೆ, ವಿಸರ್ಜನಾ ಮಂತ್ರದ ನಂತರ ಶ್ಯಮಂತಕೋಪಾಖ್ಯಾನ ಇದ್ದೇ ಇರುತ್ತದೆ. ಎಲ್ಲರೂ ಪಟ್ಟಾಗಿ ಕುಳಿತು ಒಂದು ಬಾರಿ ಕೇಳಿ ಎಲ್ಲ ಆರೋಪಗಳಿಂದ ಮುಕ್ತರಾಗಿಬಿಡಿ.


ಗಣಪತಿ ಬಪ್ಪ ಮೋರಯಾ, ಮುಂದಿನ ವರ್ಷ ಬೇಗನೆ ಬಾ. ಶರಣು ಶರಣಯ್ಯ ಶರಣು ಬೆನಕ ನೀಡಯ್ಯ ಬಾಳೆಲ್ಲ ಬೆಳಗುವಾ ಬೆಳಕ. ಬೆನಕ ಬೆನಕಾ ಏಕದಂತಾ ಪಚ್ಚೆಕಲ್ಲು ಪಾಣಿಪೀಠ ಮುತ್ತಿನುಂಡೆ ಹೊನ್ನಗಂಟೆ ಇಂತೊಪ್ಪುವ ಸಿದ್ಧಿವಿನಾಯಕಗೆ ಇಪ್ಪತ್ತೊಂದು ನಮಸ್ಕಾರಗಳು. [ಚಿತ್ರಪಟ : ಬೆಂಗಳೂರು ಗಾಂಧಿ ಬಜಾರಿನಲ್ಲಿ ಗಣಪತಿ ಹಬ್ಬದ ಸಂಭ್ರಮ]

English summary
Gowri Ganesha festival is an auspicious festival in Karnataka and all over India. Ganesha will be worshipped by one and all to appease Him and get blessings for a prosperous life. Here you can find 7 ways to appease the Lord of the universe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X