ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣೇಶ ಗೌರಿ ಕರ್ನಾಟಕ ಇಟನರರಿ-2008

By Staff
|
Google Oneindia Kannada News

Ganesha Gowri Festival Flyer-2008ಬೆಂಗಳೂರು, ಆ. 29 : ತನ್ನನ್ನು ನಂಬಿದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಗಣಪ ಭೂಲೋಕಕ್ಕೆ ಸದ್ಯದಲ್ಲೇ ಇಳಿದು ಬರುತ್ತಿದ್ದಾನೆ. ವಿಘ್ನನಾಶಕನ ಬರುವಿಕೆಗೆ ಒಂದು ದಿವಸ ಮುಂಚೆಯೇ ಅವನ ಹೆಮ್ಮೆಯ ಅಮ್ಮ ಸ್ವರ್ಣಗೌರೀಯೂ ಆಗಮಿಸುತ್ತಿದ್ದು ಅವರಿಬ್ಬರಿಗೂ ವಿಜೃಂಭಣೆಯ ಸ್ವಾಗತ ಕೋರಲು ಸಮಗ್ರ ಕರ್ನಾಟಕ ತುದಿಗಾಲಲ್ಲಿ ನಿಂತಿದೆ.

ಗಣಪ ಮತ್ತು ಗೌರಿಯರ ಇಸವಿ 2008 ಕರ್ನಾಟಕ ಪ್ರವಾಸದ ಇಟನರಿ ಇಂತಿರುತ್ತದೆ : ಸರ್ವಧಾರಿ ಸಂವತ್ಸರ ಭಾದ್ರಪದ ಶುಕ್ಲ ತೃತೀಯ ದಿನದಂದು ಬೆಳಗ್ಗೆ [ಸೆಪ್ಟೆಂಬರ್ 2, ಮಂಗಳವಾರ] ಗೌರಿಯ ಆಗಮನ. ಅಂದು ಬೆಳಗ್ಗೆ ಸುಮಾರು 8 ಗಂಟೆಗೆ ನಾರಿಮಣಿರಿಂದ ಆರತಿ ಎತ್ತಿ ಸ್ವಾಗತ. ಹತ್ತುಗಂಟೆಗೆ ಗಜಗೌರಿ ವ್ರತ ಆರಂಭ. ವಸ್ತ್ರ, ಒಡವೆ, ನಾನಾ ವಿಧ ಸುಗಂಧ ಪುಷ್ಪಗಳಿಂದ ಅಲಂಕೃತಗೊಂಡ ಕುಂಕುಮ ಶೋಭಿತೆ ಅಮ್ಮನೋರಿಗೆ ಶ್ರದ್ಧಾಭಕ್ತಿಗಳಿಂದ ಪೂಜೆ ಪುರಸ್ಕಾರ. ಮಧ್ಯಾನ್ಹ 12 ಗಂಟೆಗೆ ಮಹಾಮಂಗಳಾರತಿ, ಬಾಗಿನ, ಕಾಯಿ ಹೋಳಿಗೆ ಇತ್ಯಾದಿ ಖಾದ್ಯಗಳ ನೈವೇದ್ಯ. ಪ್ರಸಾದ ವಿನಿಯೋಗ. ಸಂಜೆ 7 ಗಂಟೆಗೆ ಸುಮಂಗಲಿಯರ ಸಮ್ಮುಖದಲ್ಲಿ ಆರತಿ. ಅರಿಶಿನ, ಕುಂಕುಮ, ತಾಂಬೂಲ.

ಮಾರನೆ ದಿನ, ಭಾದ್ರಪದ ಶುಕ್ಲ ಚೌತಿ [ಸೆಪ್ಟೆಂಬರ್ 3,ಬುಧವಾರ] ಸಿದ್ಧಿವಿನಾಯಕ ವ್ರತ. ಅಂದು ಬೆಳಗ್ಗೆ ಮುಂಚೆ ಅವರವರಮನೆ, ಗಲ್ಲಿ, ಕಚೇರಿ, ಅಂಗಡಿ, ಮುಂಗಟ್ಟುಗಳಲ್ಲಿ ಯಥೋಚಿತವಾಗಿ ಮಂಟಪ, ಶಾಮಿಯಾನಗಳ ನಿರ್ಮಾಣ. ಶ್ರೀಮಂತರು ಚಿನ್ನದಿಂದಲೂ, ಮಧ್ಯಮವರ್ಗದವರು ಕಂಚಿನಿಂದಲೂ, ಬಡವರು ಮಣ್ಣಿನಿಂದ ಮಾಡಿದ ಆದರೆ ಬಣ್ಣ ಲೇಪಿಸಿದ ಗಣಪನ ವಿಗ್ರಹಗಳನ್ನು ತಂದು ಪ್ರತಿಷ್ಠಾಪನೆ.

ಮಂಟಪಗಳಿಗೆ ಸಂಭ್ರಮದಿಂದ ಅಲಂಕಾರ. ಬೆಳಗ್ಗೆ 10 ಗಂಟೆಗೆ ಸಿದ್ಧಿವಿನಾಯಕ ವ್ರತ ಆರಂಭ. ಸಿಕ್ಕರೆ ಪುರೋಹಿತರಿಂದ ಇಲ್ಲವೆ ಕ್ಯಾಸೆಟ್ಟುಗಳಿಂದ ಹೊರಹೊಮ್ಮುವ ಶ್ಲೋಕ,ಮಂತ್ರ,ಹಾಡುಗಳಿಂದ ಪೂಜೆ. ಗರಿಕೆ, ನಾನಾ ವಿಧ ಫಲ, ಪುಷ್ಪ ಪರಿಮಳಗಳಿಂದ ಅತಿಥಿಗೆ ಪೂಜೆ. ಬೆನಕ ಬೆನಕ ಏಕದಂತ, ಪಚ್ಚಕಲ್ಲು, ಪಾಣಿಪೀಠ, ಮುತ್ತಿನುಂಡೆ ಒಪ್ಪವುಳ್ಳ ವಿಘ್ನೇಶ್ವರನಿಗೆ ತಪ್ಪದೆ ಇಪ್ಪತ್ತೊಂದು ನಮಸ್ಕಾರಗಳು. ವಾಯಿನದಾನ ಸಮರ್ಪಣೆ.

ಆನಂತರ ಉತ್ತರ ಮಂಗಳ ನೀರಾಜನ. ಕರಿಗಡಬು ನೈವೇದ್ಯ, ತೀರ್ಥಪ್ರಸಾದ ವಿನಿಯೋಗ. ಸಂಜೆ 7 ಗಂಟೆಗೆ ಚಂದ್ರನನ್ನು ನೋಡಿದ ಕಳಂಕ ನಿವಾರಣಾರ್ಥ ಶಮಂತಕೋಪಾಖ್ಯಾನ ಪಠನ. ಮಂಗಳಾರತಿ, ಗುಗ್ಗರಿ ವಿತರಣೆ. ಅವರವರ ನಗರ, ಪಟ್ಟಣ, ಹಳ್ಳಿಗಳಲ್ಲಿ ಸ್ಥಳೀಯ ಆಡಳಿತದವರು ನಿಗದಿ ಮಾಡಿದ ಬಾವಿ, ಕೆರೆ, ಕೊಳಗಳತ್ತ ಗಣೇಶನ ಮೆರವಣಿಗೆ. ವಿಗ್ರಹ ವಿಸರ್ಜನೆ. ಹಾರ್ದಿಕ ಬೀಳ್ಕೊಡುಗೆ.

ವಿಸೂ : ಮನೆಮನೆಗಳಲ್ಲಿ, ಸರಕಾರಿ ಹಾಗೂ ಖಾಸಗಿ ಕಚೇರಿಗಳಲ್ಲಿ, ಬೀದಿಬೀದಿಗಳಲ್ಲಿ ಸರ್ವಾಂತರಯಾಮಿ ಗಣಪನ ಉತ್ಸವ ಏರ್ಪಟ್ಟು ನಾಡಿಗೆ ನಾಡೇ ಹಬ್ಬದ ವಾತಾವರಣದಲ್ಲಿ ಮೀಯುವುದರಿಂದ ಶಾಲೆ ಕಾಲೇಜು, ರಾಜ್ಯ ಕೇಂದ್ರ ಸರಕಾರದ ಕಚೇರಿ ಮತ್ತು ಬ್ಯಾಂಕುಗಳಿಗೆ ಸೆ. 3ರಂದು ಬುಧವಾರ ಸಾರ್ವತ್ರಿಕ ರಜಾ ಘೋಷಿಸಲಾಗಿರುತ್ತದೆ.

ಗಣೇಶ ಬಂದ... ಎಷ್ಟೊಂದು ಕಡುಬು ತಂದ...ಗಣೇಶ ಬಂದ... ಎಷ್ಟೊಂದು ಕಡುಬು ತಂದ...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X