ಸುಬ್ಬುವಿನ ಮೊದಲ ವರ್ಷದ ದೀಪಾವಳಿ ಆವಾಂತರ

Humor by Srinath Bhalle
ಮೊದಲ ದೀಪಾವಳಿ. ಸ್ವಲ್ಪ ಮುಂಚಿತವಾಗೇ ಬಂದಿದ್ದ. ಹೌದು, ಈಗ ಬಂದಿರುವುದಕ್ಕಿಂತ ಮುಂಚಿತವಾಗಿ. ರಾಮೂ ಜೊತೆ ಹೋಗಿ ಅವನಿಗಿಷ್ಟವಾದ ಮತ್ತು ಇವನಿಗಿಷ್ಟವಾದ ಪಟಾಕಿಗಳನ್ನು ಸಾಕಷ್ಟು ತಂದಿದ್ದ. ರಾಮುವಿನ ಆರೆಸ್ಸೆಸ್ ಕೋಲಿಗೆ ದಪ್ಪನೆಯ ಊದಿನ ಕಡ್ಡಿ ಕಟ್ಟಿ ಎರಡು ಲಕ್ಷ್ಮೀ ಪಟಾಕಿ ಹೊಡೆದವನು, ಸಂಜೆ ಮಿಕ್ಕಿದ್ದು ನೋಡೋಣ ಎಂದು ಸುಮ್ಮನಾಗಿದ್ದ. ಇರುಳುಗಣ್ಣಿದ್ದವರಿಗೆ ರಾತ್ರಿ ಕಣ್ಣು ಕಾಣೋಲ್ವಂತೆ. ಸುಬ್ಬನ ವಿಷಯದಲ್ಲಿ ಸ್ವಲ್ಪ ಇದೇ ರೀತಿ ನ್ಯೂನತೆ, ಆದರೆ ಉಲ್ಟ. ಸಂಜೆ ಕಳೆದು ರಾತ್ರಿ ಆಗುತ್ತಿದ್ದಂತೆ ಏನೋ ಸಿಕ್ಕಾಪಟ್ಟೆ ಧೈರ್ಯ.

ಒಂದು ತೆಂಗಿನ ಚಿಪ್ಪು ತೆಗೆದುಕೊಂಡು, ಒಳಗಿನಿಂದ ಆಟಂ ಬಾಂಬ್ ನ ಬತ್ತಿ ಹೊರಬರಿಸಿ, ಸ್ವಲ್ಪ ಹತ್ತಿರದಿಂದ, ಚಿಕ್ಕ ಊದಿನ ಕಡ್ಡಿಯಿಂದ ಬತ್ತಿಯನ್ನು ಅಂಟಿಸಿದ್ದ. ಊಹಿಸಿದ್ದಕ್ಕಿಂತ ಬೇಗ ಉರಿದ ಆ ಬಾಂಬ್ ಜೋರಾಗಿ ಸಿಡಿದು ತೆಂಗಿನ ಚಿಪ್ಪನ್ನು ಎಂಟೂ ದಿಕ್ಕಿಗೆ ಸಿಡಿಸಿತ್ತು. ಚಿಪ್ಪಿನ ಜೊತೆ ಎಂಟೂ ದಿಕ್ಕಿಗೆ ಸುಬ್ಬನ ಬಾಯಲ್ಲಿನ ಮುಂದಿನ ಎರಡು ಹಲ್ಲುಗಳೂ ಸೇರಿತ್ತು! ಚಿಪ್ಪಿನ ಒಂದು ದೊಡ್ಡ ಚೂರು ಬಾಯಿಗೆ ಬಡಿದು, ಹಲ್ಲು ಮುರಿದು, ಕಿವಿಯಲ್ಲೆಲ್ಲ ಶಬ್ದವೇ ತುಂಬಿ ಸುಬ್ಬ ನಾರ್ಮಲ್ ಗೆ ಬರುವ ಹೊತ್ತಿಗೆ ಘಂಟೆ ಹತ್ತಾಗಿತ್ತು. ಅಲ್ಲಿಗೆ ಮೊದಲ ದೀಪಾವಳಿ ಮುಗಿದಿತ್ತು!

ಬೆಳಿಗ್ಗೆ ತಲೆಗೆ ಎಣ್ಣೆ ಒತ್ತಿ, ಸೀಗೆಪುಡಿ ತಿಕ್ಕಿ ತಲೆ ಸ್ನಾನ ಮಾಡುವುದು ದೀಪಾವಳಿ ಹಬ್ಬದ ಒಂದು ವಿಶೇಷ. ಕೂದಲಿಗೆ ಎಣ್ಣೆ ಒತ್ತಲು, ತಲೆ ಮೇಲೆ ಕೂದಲು ಇದ್ದರೆ ತಾನೇ? ತಲೆ ಮೇಲಿರೋ ಕೂದಲೆಲ್ಲ ಸೈಡ್ ವಿಂಗ್ ಗೆ ಜರುಗಿತ್ತು. ಅಂತೂ ಬೆಳಗಿನ ಸ್ನಾನ ಆಯ್ತು. ಮನೆಯಲ್ಲಿದ್ದರೆ ಪಟಾಕಿ ಸಿಡಿಸಬೇಕಾಗುತ್ತದೆ ಎಂದುಕೊಂಡು, ಹೆಂಡತಿಯೊಡನೆ ಮಾರುಕಟ್ಟೆ ಸುತ್ತಿ, ತಿಂಗಳ ದಿನಸಿ ತಂದಿಟ್ಟ. ಮನೆಯಲ್ಲಿದ್ದರೆ ಮಗಳು ಅಡುಗೆಯಲ್ಲಿ ಸಹಾಯ ಮಾಡುತ್ತಿದ್ದಳು ಎಂದು ಅತ್ತೆ ಗೊಣಗಿಕೊಂಡರೂ ದಿನಸಿ ನೋಡಿ ಏನೂ ಹೇಳದೆ ಸುಮ್ಮನಾದರು!

ಸೂರ್ಯನಿಳಿದು ಚಂದ್ರನೇರುವ ಸಮಯದಲ್ಲಿ, ಎಲ್ಲರ ಆತಂಕ ಮೇಲೇರುತ್ತಿದ್ದಂತೆ, ಸುಬ್ಬನ ಸಂತಸವೂ ಮೇಲೇರುತ್ತಿತ್ತು. ಲಕ್ಷಣವಾಗಿ ಪ್ಯಾಂಟು-ಶರಟು ಧರಿಸಿ ಸಿದ್ದನಾಗಿದ್ದ. ಜರತಾರಿ ಪಂಚೆಯುಟ್ಟು, ಹೊಸ ಶರ್ಟು ತೊಟ್ಟು, ರೇಷ್ಮೆ ವಲ್ಲಿಯನ್ನು ಹೊದ್ದ ರಾಯರು, ಸಂತಸದಲ್ಲಿ ಪಾಲ್ಗೊಳ್ಳಲು ಸಿದ್ದರಾಗಿದ್ದರು. ಭೂ-ಚಕ್ರ, ಹೂಕುಂಡ ಎಂಬೆಲ್ಲ ಚಿಕ್ಕ ಪುಟ್ಟ ಅಸ್ತ್ರಗಳು ಮುಗಿದ ಮೇಲೆ, ಸುಬ್ಬನ ಬತ್ತಳಿಕೆಯಿಂದ ಹೊರಬಂದಿತ್ತು ಬ್ರಹ್ಮಾಸ್ತ್ರ, ರಾಕೆಟ್!

ಸುರುಳಿ ಸುತ್ತುತ್ತ, ಗಂಟೆಗೆ 30 ಕಿಲೋಮೀಟರ್ ವೇಗದಲ್ಲಿ ಸಾಗಿ, ಕೊನೆಯಲ್ಲಿ ಸಿಡಿಯುತ್ತದೆ ಎಂಬ ವಿಷಯ ಹೊತ್ತ ಪ್ಯಾಕೆಟ್ ಹೊರತೆಗೆದ ಸುಬ್ಬ. ಮೊದಲ ರಾಕೆಟ್ ಹೊರತೆಗೆದು, ಖಾಲೀ ಕೂಲ್ ಡ್ರಿಂಕ್ ಬಾಟ್ಲಿಯಲ್ಲಿಟ್ಟು ಉದ್ಘಾಟನೆ ಮಾಡಿಯೇಬಿಟ್ಟ. ಶರವೇಗದಲ್ಲಿ ಸುರುಳಿಯಾಕಾರದಿ ಮೇಲಕ್ಕೆ ಸಾಗಿ, ಆಕಾಶದಲ್ಲಿ ಕಿಡಿಗಳ ಹೂ ಚೆಲ್ಲಿ ಢಮ್ ಎಂದಿತು. ಎಲ್ಲರೂ ಸೇರಿ ಚಪ್ಪಾಳೆ ಹೊಡೆದರು. ಸ್ಪೂರ್ತಿ ಉಕ್ಕಿ, ಮತ್ತೊಂದು ಅಸ್ತ್ರ ಹೊರತೆಗೆದ ಸುಬ್ಬ. ಮತ್ತೊಮ್ಮೆ ಬಾಟ್ಲಿಯಲ್ಲಿಟ್ಟು ಬತ್ತಿಯನ್ನು ಅಂಟಿಸಿದ.

ಮೊದಲ ಬಾರಿ ಅದ್ಬುತವಾಗಿ ಸಾಗಿದ್ದ ರಾಕೆಟ್, ಟೇಕ್ ಆಫ್ ಆಗುವ ಮುನ್ನ ಬಾಟ್ಲಿಯನ್ನು ಸ್ವಲ್ಪ ಅಲುಗಿಸಿ ಹೋಗಿತ್ತು. ಅದನ್ನು ನಮ್ ಸುಬ್ಬ ಮತ್ತೆ ಸರಿ ಮಾಡಿರಲಿಲ್ಲ. ಎರಡನೇ ಅಸ್ತ್ರ ಬಾಟ್ಲಿಯನ್ನೂ ಮತ್ತೊಮ್ಮೆ ಅಲ್ಲಾಡಿಸಲು, ಅದು ಕೆಳಕ್ಕೆ ಉರುಳಿತು. ಮೊದಲ ಲಾಂಚ್ ನಿಂದ ಸ್ಪೂರ್ತಿಗೊಂಡ ರಾಯರು ನಾಲ್ಕು ಹೆಜ್ಜೆ ಮುಂದೆ ಬಂದು ನಿಂತಿದ್ದರು. ರಾಕೆಟ್ ಗೆ ಭೇದ-ಭಾವ ಇಲ್ಲ ನೋಡಿ. ಉರುಳಿದ ಬಾಟ್ಲಿಯಿಂದ ಹೊರ ಚಿಮ್ಮಿ, ಪಂಚೆಯೊಳಕ್ಕೆ ಸಿಕ್ಕಿಕೊಂಡು ಸುರುಳಿ ಸುತ್ತುವ ಪ್ರಯತ್ನದಲ್ಲಿ ಸೋತು, ಕಿಡಿ ಹಾರಿಸಿ ಢಂ ಎನ್ನುವಷ್ಟರಲ್ಲಿ ರಾಯರು ಹೆದರಿ ಮೂರ್ಛಿತರಾಗಿದ್ದರು!

ಕಿಡಿಯಿಂದ ಸುಟ್ಟ ಪಂಚೆಯನ್ನು ಕಿತ್ತೊಗೆದ ಸುಬ್ಬ, ರಾಯರನ್ನು ಅನಾಮತ್ತಾಗಿ ತನ್ನ ಕೈಗಳಲ್ಲಿ ಹೊತ್ತುಕೊಂಡು, ಪೆಚ್ಚುಮೋರೆ ಹಾಕಿಕೊಂಡು, ಒಳ ನಡೆದ. ಅಲ್ಲಿಗೆ ಎರಡನೇ ದೀಪಾವಳಿ ಮುಗಿದಿತ್ತು! ಅಳಿಯ ಪೆದ್ ಪೆದ್ದಾಗಿ ಮಾತನಾಡಿದರೆ ಏನು? ಮನದಲ್ಲಿ ಶುದ್ದ. ಮಾವನೆಂಬೋ ಗೌರವ ಮತ್ತು ಕಾಳಜಿ. ಸದಾ ಮಡದಿಗೆ ಸಹಾಯ ಮಾಡೊ ಇವನು, ಆ ದಿನ ಅತ್ತೆಗೆಂದು ಜರಡಿ ಕೊಟ್ಟ. ಮನೆಗೆ ದಿನಸಿ ತಂದಿಟ್ಟ. ಅತಿ ವಿದ್ಯಾವಂತರೇ ಸ್ವಂತ ಜನರನ್ನ ದೂರ ತಳ್ಳುವ ಈ ಕಾಲದಲ್ಲಿ ಸುಬ್ಬ ಚಿನ್ನದಲ್ಲಿ ಚಿನ್ನ. ಚಿನ್ನದ ಬೆಲೆ ಎಷ್ಟೇ ಏರಿದ್ದರೂ ಇವನೆತ್ತರಕ್ಕೆ ಏರೋಲ್ಲ ಬಿಡಿ! ದೂರದಲೆಲ್ಲೋ ಅಣ್ಣಾವ್ರ ಹಾಡು ಕೇಳಿಸುತ್ತಿತ್ತು "ದೀಪಾವಳಿ, ದೀಪಾವಳಿ, ಗೋವಿಂದ ಲೀಲಾವಳಿ, ಅಳಿಯ ಮಗನಾದನು, ಮಾವ ಮಗುವಾದನು."

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+