ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಬಂದಿದೆ ದೀಪ ಬಾಣ ಬಿರುಸು ; ಓ ಬೆಳಕೆ ನಮ್ಮನು ಹರಸು..

By Staff
|
Google Oneindia Kannada News

ಶ್ರೀಕೃಷ್ಣನಿಂದ ಸಂಹಾರಗೊಳ್ಳುವಾಗ ನರಕಾಸುರ ವರವೊಂದನ್ನು ಬೇಡಿಕೊಂಡನಂತೆ ತನ್ನ ಸಾವನ್ನು ಜನ ಹಬ್ಬದಂತೆ ಆಚರಿಸಲಿ ಎಂದು. ಆಗಿನ ರಾಕ್ಷಸರೂ ಎಷ್ಟೊಂದು ಕವಿ ಹೃದಯದವರಾಗಿದ್ದರಲ್ಲವೆ ?!

ದೀಪ ಗಾಳಿಗೆ ನಂದದಂತೆ ಕೈ ಅಡ್ಡ ಹಿಡಿದ ರವಿವರ್ಮನ ಸುಂದರಿಯ ಮುಖದ ಮೇಲೆ ಪ್ರತಿಫಲಿಸಿರುವ ಬೆಳಕು. ಸುಮ್ಮನಿದ್ದರೇ ಎಲ್ಲ ಕೇಳಿಸುವುದು ಎನ್ನುವ ಬೇಂದ್ರೆಯ ದೀಪದಮಲ್ಲಿಯ ಬೆಳಕು. ದೀಪದ ಸಾಲಿನ ನಡುವೆ ಕೂತವರ ಮೈ ಮರೆಸುವ ನರಸಿಂಹಸ್ವಾಮಿಯವರ ಕವನದ ಬೆಳಕು. ಲೋಕವನ್ನೇ ತೂಗಿದ ಥೆರೆಸಾ ಕಣ್ಣ ಬೆಳಕು.

ಮತ್ತೊಂದು ದೀಪಾವಳಿ ಬಂದಿದೆ. ಎಂದಿಗಿಂತ ಎರಡು ಹೆಜ್ಜೆ ಮುಂಚಾಚಿಕೊಂಡ ಅಂಗಡಿಗಳಲ್ಲಿ ತರತರದ ಪಟಾಕಿ. ತೂಗುಬಿದ್ದಿರುವ ವಿಶೇಷಾಂಕಗಳು. ಅವುಗಳೊಳಗೆ ಹಬ್ಬಕ್ಕೆ ಮಾವನ ಮನೆಗೆ ಬಂದ ಅಳಿಯನ ಕುರಿತ ಅದೇ ವ್ಯಂಗ್ಯಚಿತ್ರಗಳು. ನವರಾತ್ರಿಯ ಬೆನ್ನಿಗೇ ಬಂದ ಮತ್ತೊಂದು ಹಬ್ಬವನ್ನು ಶಪಿಸುತ್ತಾ ಹೆಂಗಸರು ತಯಾರಿ ನಡೆಸಿದ್ದಾರೆ. ಟಿವಿ ಚಾನೆಲ್ಲುಗಳಲ್ಲಿ ಅವತ್ತು ವಿಶೇಷ ಆಕರ್ಷಣೆಗಳು ಬೇರೆ. ಹೊಚ್ಚ ಹೊಸ ಚಲನಚಿತ್ರಗಳು. ಸುಮ್ಮನೆ ಮನೆಯಲ್ಲಿ ಹಬ್ಬ ಮಾಡಿಕೊಂಡಿರುವುದು ಬಿಟ್ಟು ಲೈವ್‌ ಕಾರ್ಯಕ್ರಮಗಳಲ್ಲಿ ಬಂದು ತಲೆ ತಿನ್ನುತ್ತಾರೆ ಸಿನಿಮಾ ನಟನಟಿಯರು. 'ಇನ್ನೂ ಆಗಲಿಲ್ವೇನೊ ನಿಮ್ಮಮ್ಮಂದು" ಎಂದು ಮಕ್ಕಳನ್ನು ಕೇಳುತ್ತಾ ಚಾನೆಲ್ಲು ಬದಲಿಸುತ್ತೇವೆ ನಾವು. ಆದ ಮೇಲೆ ಪಟ್ಟಾಗಿ ಉಂಡು ಆಕಳಿಸುತ್ತಾ ಮಧ್ಯಾಹ್ನವನ್ನು ಕಳೆಯುತ್ತೇವೆ.

ನಮ್ಮ ಪಾಲಿಗೆ ಹಬ್ಬವೆಂದರೆ ಕೇವಲ ಇನ್ನೊಂದು ಸಾರ್ವಜನಿಕ ರಜೆ. ತಿಂಗಳಿಂದ ಹಣ ಹೊಂದಿಸಿ, ಒಂದು ಸಂಜೆ ಮನೆಮಂದಿಯೆಲ್ಲ ಒಟ್ಟಾಗಿ ಪೇಟೆಗೆ ಹೋಗಿ ಬಟ್ಟೆ ಖರೀದಿಸಿ (ಬಜೆಟ್‌ ಮೀರಬಯಸುವ ಮಕ್ಕಳಿಗೆ ಕಣ್ಣಲ್ಲೇ 'ಶ್‌...ಶ್‌.." ಮಾಡಿ), ಹದಿನೈದು ದಿನ ಮುಂಚಿತವಾಗೇ ಹೊಲಿಸಿ ಬೀರುವಿನೊಳಗಿಟ್ಟು , ಹಬ್ಬದ ದಿನವನ್ನೇ ಕಾದು ತೊಟ್ಟ ಸಡಗರ ಪಡುವ ಕಾಲ ಹೋಗಿದೆ. ಸಿಹಿ ಅಡಿಗೆ ಮಾಡಲೂ ಹಬ್ಬವನ್ನೇ ಕಾಯುವ ಯುಗವನ್ನೂ ನಾವು ದಾಟಿದ್ದೇವೆ. ಬೇಕೆಂದಾಗ ಅಂಗಡಿಯಿಂದ ತರಹೇವಾರಿ ಸಿಹಿ ತಿಂಡಿ ತಂದು ತಿನ್ನುವ, ಕಣ್ಣಿಗೆ ಚಂದ ಕಂಡ ಸಿದ್ಧ ಉಡುಪುಗಳನ್ನು ಟ್ರಯಲ್‌ ರೂಮಿನಿಂದ ಧರಿಸಿಕೊಂಡೇ ಮನೆಗೆ ಹೋಗುವ ದಿನಗಳಿವು. ಹಾಗಾಗೇ ಯಾವ ಸಂಭ್ರಮಕ್ಕೂ ಹಬ್ಬ ಬರಲಿ ಎಂದು ಕಾಯಬೇಕಾದ ದರ್ದು (ತಾಳ್ಮೆ) ನಮಗಿಲ್ಲ . ಅದಕ್ಕೇ ನಮಗೆ ಹಬ್ಬದ ರಾತ್ರಿ ಮಲಗುವಾಗ ಗೊಂದಲವಾಗುತ್ತದೆ- ಇಂದು ಮಾಡಿದ್ದು ಯಾವ ಹಬ್ಬ ?

ಇಂಥದ್ದರಲ್ಲಿ ಹಬ್ಬಗಳನ್ನು ಕೊಂಚಮಟ್ಟಿಗಾದರೂ ಅನನ್ಯಗೊಳಿಸುವುದು ಆಚರಣೆಯ ವಿಧಿವಿಧಾನಗಳು. ದೀಪಾವಳಿ ಎಂದರೆ ಕಣ್ಣು ಕೋರೈಸುವ ಪಟಾಕಿಗಳು. ವರ್ಷದ ಅತಿ ಕಡಿಮೆ ಬೆಳಕಿರುವ ತಿಂಗಳಲ್ಲೇ ಬರುವ ಈ ಬೆಳಕಿನ ಹಬ್ಬದಂದು ಮನೆಯ ಮುಂದೆ, ಕಾಂಪೌಂಡಿನ ಮೇಲೆ, ಕಿಟಕಿಯ ಬಳಿಯಲ್ಲಿ ಸಾಲುಸಾಲು ಮಣ್ಣಿನ ಹಣತೆಗಳನ್ನು ಹಚ್ಚಿಡುತ್ತೇವೆ. 14 ವರ್ಷ ವನವಾಸ ಮುಗಿಸಿ ಬಂದ ಶ್ರೀರಾಮನ ಸ್ವಾಗತಕ್ಕೆ ಅಷ್ಟು ಮಾಡಬೇಕಲ್ಲವೆ ? ಶ್ರೀಕೃಷ್ಣನಿಂದ ಸಂಹಾರಗೊಳ್ಳುವಾಗ ನರಕಾಸುರ ವರವೊಂದನ್ನು ಬೇಡಿಕೊಂಡನಂತೆ ತನ್ನ ಸಾವನ್ನು ಜನ ಹಬ್ಬದಂತೆ ಆಚರಿಸಲಿ ಎಂದು. ಆಗಿನ ರಾಕ್ಷಸರೂ ಎಷ್ಟೊಂದು ಕವಿ ಹೃದಯದವರಾಗಿದ್ದರಲ್ಲವೆ ?!

ಲಕ್ಷ್ಮಿ ಒಳ ಬರುತ್ತಾಳೆ. ಮನೆಯನ್ನೆಲ್ಲ ಸ್ವಚ್ಛಗೊಳಿಸಬೇಕೀಗ (ಕೊಳಕು ಮನೆಗೆ ಆಕೆ ಬರುವುದೇ ಇಲ್ಲವಂತೆ!). ಈಗ ಸಿಗುತ್ತವೆ ನೋಡಿ ಎಂದೋ ಕಳೆದಿದ್ದ ಹಿತ್ತಾಳೆ ಚೆಂಬು, ಮಗಳ ಚಿಟ್ಟೆ ಲಂಗ, ಒಂದೇ ಒಂದಿದ್ದ ಸೋಡಾಗೋಲಿ. ಮನವನ್ನೂ ಶುದ್ಧಗೊಳಿಸಿ ದೀಪ ಹೊತ್ತಿಸೋಣ. ಉರಿದುಹೋಗಲಿ ಅಳಿದುಳಿದ ಕಲ್ಮಶಗಳೆಲ್ಲಾ ಜ್ಯೋತಿಯಲ್ಲಿ . ಲಕ್ಷ್ಮಿ , ರಾಮನೇ ಏನು, ಮುಕ್ಕೋಟಿ ದೇವತೆಗಳೂ ಒಳಬರಬಹುದು ಈಗ. ಮನುಷ್ಯರಿಗೂ ಉಳಿದಿರಲಿ ಅಷ್ಟು ಜಾಗ.

ಮುಸ್ಸಂಜೆಯಾಗಿ ಸ್ವಲ್ಪಾದರೂ ಕತ್ತಲಾಗುವುದನ್ನೇ ಕಾದು ಚಡಪಡಿಸುತ್ತವೆ ಮಕ್ಕಳು. ಹಾ ! ಈಗಾದರೆ ತೆರೆಯಬಹುದು ಪಟಾಕಿ ಪೊಟ್ಟಣವನ್ನು. ಮೊದಲು ಕಲ್ಲಲ್ಲಿ ಕುಟ್ಟುವ ಪಟಾಕಿ, ಆಮೇಲೆ ಸಣ್ಣ ಸಣ್ಣ ಪಟಾಕಿಗಳು. ಹೂಕುಂಡ, ವಿಷ್ಣು ಚಕ್ರ, ಭೂಚಕ್ರಗಳೆಲ್ಲ ಕಟ್ಟ ಕಡೆಗೆ. ಈ ಸಲವೇ ಮೊದಲ ಬಾರಿ ನಕ್ಷತ್ರ ಕಡ್ಡಿ ಹಿಡಿಯುವ ಧೈರ್ಯ ಮಾಡಿದ್ದಾಳೆ ಪುಟ್ಟಿ . ದೀಪಕ್ಕೆ ಹಿಡಿದ ತಂತಿ ಮತಾಪೋ ಬೇಗ ಹೊತ್ತಿಕೊಳ್ಳುತ್ತಿಲ್ಲ . ಅಷ್ಟರೊಳಗೆ ಒಮ್ಮೆ ಅವಳ ಕಣ್ಣ ಹೊಳಪು ನೋಡಿಬಿಡಿ. ಲಕ್ಷ್ಮಿ ಪಟಾಕಿ ಹೊಡೆಯುವ ಮೊದಲು ಒಂದ್‌ ನಿಮಿಷ ತಾಳಿ, ದಾಟಿ ಬಿಡಲಿ ಆ ಕಡೆ ಮನೆಯ ಅಜ್ಜ ...

ಈ ರಾತ್ರಿ 'ಟುಸ್‌" ಎಂದ ಪಟಾಕಿಗಳನ್ನೆಲ್ಲ ಆರಿಸಿ, ಸುರುಳಿ ಬಿಚ್ಚಿ , ಒಳಗಿನ ಮದ್ದಿನ ಪುಡಿಯನ್ನು ಕಾಗದವೊಂದಕ್ಕೆ ವರ್ಗಾಯಿಸುತ್ತಾರೆ ಬೀದಿ ಮಕ್ಕಳು ನಾಳೆ. ಮತ್ತು ಆ ಕಾಗದಕ್ಕೆ ಬೆಂಕಿ ಹೊತ್ತಿಸಲಾಗುತ್ತದೆ. ಎರಡೇ ಕ್ಷಣದಲ್ಲಿ ಅದು 'ಢಂ" ಎಂದು ಸಿಡಿಯಲಿದೆ ; ಅಥವಾ 'ಸುರ್‌" ಎಂದು ಭಗ್ಗನೆ ಬೆಳಕಾದರೂ ಚೆಲ್ಲಲಿದೆ.*ಎಲ್ಲರೂ ಮಲಗಿದ ಮೇಲೂ ಅಲೌಕಿಕ ಪ್ರಭೆಯಿಂದ ಉರಿಯುತ್ತಿದೆ, ತಾರಸಿಗೆ ತೂಗಿದ ಆಕಾಶದೀಪ.(ಸ್ನೇಹಸೇತು : ವಿಜಯ ಕರ್ನಾಟಕ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X