ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸವಿನೆನಪುಗಳು ಬೇಕು ಸವಿಯಲೀ ಬದುಕು

By Staff
|
Google Oneindia Kannada News

ಜೀವನ ಸಂಮೃದ್ಧಿಯ ಸಂಕೇತವಾದ ದೀಪಾವಳಿಯನ್ನು ದೀಪದ ಹಾವಳಿ ಎಂದು ಬಣ್ಣಿಸಿದವರೂ ಇದ್ದಾರೆ. ಆಶ್ವಯುಜ ಚತುರ್ದಶಿಯಿಂದ ಆರಂಭವಾಗಿ ಕಾರ್ತಿಕ ಪಾಡ್ಯದವರೆಗೆ ಮೂರು ದಿನ ಆನಂತರ ಪೂರ್ಣ ಮಾಸ ಆಚರಿಸುವ ಬೆಳಕಿನ ಹಬ್ಬ ದೀಪಾವಳಿ. ಈ ಬಾರಿ ದೀಪಾವಳಿ ಅಕ್ಟೋಬರ್‌ 24 ರಿಂದ ಆರಂಭ. ಅಂದೇ ನರಕ ಚತುರ್ದಶಿ. 26 ಭಾನುವಾರ ಬಲಿಪಾಡ್ಯಮಿ. ಈ ಸಂದರ್ಭದಲ್ಲಿ ದಟ್ಸ್‌ಕನ್ನಡ ಕನ್ನಡ ಬಳಗದಿಂದ ನಿಮಗೆ, ನಿಮ್ಮ ಬಂಧು ಬಾಂಧವರಿಗೆ ನಿಮ್ಮ ಇಷ್ಟ ಮಿತ್ರರಿಗೆಲ್ಲ ಹಬ್ಬದ ನೆನಪುಗಳು ಹಾಗೂ ಶುಭಾಶಯಗಳು.

ಹಿನ್ನೆಲೆ : ಮದುವೆಯಾದ ನವದಂಪತಿಗಳಿಗಂತೂ ದೀಪಾವಳಿ ಹರ್ಷದಾಯಕ ಹಬ್ಬ. ಈ ಹಬ್ಬದಲ್ಲಿ ಅಳಿಯ ದೇವರನ್ನು ಸತ್ಕರಿಸುವ ವಾಡಿಕೆ ಇದೆ. ಗುಜರಾತೀಯರು ಜೈನಧರ್ಮದ 24ನೇ ತೀರ್ಥಂಕರನಾದ ಮಹಾವೀರನು ನಿರ್ವಾಣ ಹೊಂದಿದ ದಿನವಾದ ದೀಪಾವಳಿ ಅಮಾವಾಸ್ಯೆಯನ್ನು ಹೊಸವರ್ಷದ ಆರಂಭ ಎಂದೂ ಆಚರಿಸುತ್ತಾರೆ. ಅಂದು ಲಕ್ಷ್ಮಿಯನ್ನು ಪೂಜಿಸುವುದು ಸಂಪ್ರದಾಯ.

ನೀರು ( ಬಂದರೆ ) ತುಂಬುವ ಹಬ್ಬ : ದೀಪಾವಳಿಯನ್ನು ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಧನತ್ರಯೋದಶಿಯಂದು ನೀರುತುಂಬುವ ಹಬ್ಬ ಎಂದೂ ಕರೆಯುತ್ತಾರೆ. ಅಂದು ಬಚ್ಚಲು ಮನೆಯನ್ನು ಸಾರಿಸಿ, ಗುಡಿಸಿ, ರಂಗೋಲಿಯಿಂದ ಸಿಂಗರಿಸಿ ಸುಣ್ಣವ ಬಳಿದು ರಂಗುಗೊಳಿಸಿ ನೀರು ತುಂಬುತ್ತಾರೆ. ರಾತ್ರಿ ಹಬ್ಬದಡಿಗೆ ಮಾಡಿ ಊಟ ಮಾಡಿ, ಮಾರನೇ ದಿನ ಚತುರ್ದಶಿಯಂದು ಬೆಳಗಿನ ಜಾವ ತೈಲಾಭ್ಯಂಜನ ಮಾಡುತ್ತಾರೆ. ಶ್ರೀಕೃಷ್ಣನು ನರಕಾಸುರನನ್ನು ವಧಿಸಿದ ದಿನವೆಂದು ಆಚರಿಸುತ್ತಾರೆ. ಚಂದ್ರೋದಯ ಕಾಲದಲ್ಲಿ ಮಾಡುವ ಈ ಸ್ನಾನ ಗಂಗಾಸ್ನಾನಕ್ಕೆ ಸಮ ಎಂಬುದು ನಂಬಿಕೆ.

ಅಭ್ಯಂಜನವಾಗುವ ತನಕ ಪಟಾಕಿ ಹಚ್ಚಲು ಅನುಮತಿ ನೀಡದ ಕಾರಣ ಮಕ್ಕಳು ನಸುಕಿನಲ್ಲೇ ಎದ್ದು, ಸ್ನಾನಮಾಡಿ ಹೊಸಬಟ್ಟೆ ಧರಿಸಿ, ಪಟಾಕಿ ಹಚ್ಚಿ ಆನಂದಿಸಲು ಸಿದ್ಧರಾಗುತ್ತಾರೆ. ಸಂಜೆಯ ನಂತರ ಮನೆಯ ಮುಂದೆ, ಹೊಸಿಲುಗಳ ಪಕ್ಕದಲ್ಲಿ , ತುಳಸಿ ಕಟ್ಟೆಯ ಸುತ್ತಾ, ಕಾಂಪೌಂಡ್‌ ಮೇಲೆ ಪುಟ್ಟ ಹಣತೆಗಳಲ್ಲಿ ದೀಪ ಹಚ್ಚಿಡುವುದು ಹಿಂದಿನಿಂದಲೂ ನಡೆದುಬಂದಿದೆ. ಕೆಲವರು ತಮ್ಮ ಮನೆಯ ಮುಂದೆ ಆಕಾಶಬುಟ್ಟಿಗಳನ್ನೂ ಕಟ್ಟುತ್ತಾರೆ. ಒಂದು ತಿಂಗಳ ಕಾಲ ಇದು ಅವಿರತವಾಗಿ ಸಾಗುತ್ತದೆ. ಕಾರ್ತೀಕ ದೀಪೋತ್ಸವಕ್ಕೂ ಇಂದೇ ನಾಂದಿ.

ಅಮಾವಾಸ್ಯೆಯ ದಿನ ಸಂಜೆ, ಹಣವನ್ನೂ, ಸುವರ್ಣವನ್ನೂ ಇಟ್ಟು, ಲಕ್ಷ್ಮೀದೇವಿಯನ್ನು ಪೂಜಿಸಲಾಗುತ್ತದೆ. ಪೇಟೆಗಳಲ್ಲಿ, ಅಂಗಡಿಗಳಲ್ಲಿ ಲಕ್ಷ್ಮೀ ಪೂಜೆ ಮಾಡಿ ಪ್ರಸಾದ ಹಂಚಲಾಗುತ್ತದೆ. ಮಾರನೆಯ ದಿನ ಬಲಿಪಾಡ್ಯಮಿ. ಮಹಾ ಗರ್ವಿಷ್ಟನಾಗಿದ್ದ ಬಲಿಯನ್ನು ವಾಮನ ರೂಪಿಯಾದ ನಾರಾಯಣ ಪಾತಾಳಕ್ಕೆ ತುಳಿದ ದಿನ. ಹಿರಣ್ಯ ಕಶಿಪುವಿನ ಪುತ್ರ ಮಹಾ ದೈವಭಕ್ತವಾಗಿದ್ದ ಪ್ರಹ್ಲಾದನ ಮೊಮ್ಮಗ ಬಲಿ ಚಕ್ರವರ್ತಿಯು ತಪೋಬಲ ಹಾಗೂ ತನ್ನ ಭುಜಬಲ ಪರಾಕ್ರಮದಿಂದ ಗರ್ವಿಷ್ಠನಾಗಿ ದೇವೇಂದ್ರನನ್ನು ಸೋಲಿಸಿ ಅಮರಾವತಿಯನ್ನು ತನ್ನ ಕೈವಶ ಮಾಡಿಕೊಂಡಾಗ, ಶ್ರೀಮನ್ನಾರಾಯಣನು ವಾಮನನಾಗಿ ಅವತರಿಸಿ, ಮೂರಡಿ ಜಾಗವನ್ನು ಬಲಿಯಿಂದ ದಾನವಾಗಿ ಪಡೆದು, ತ್ರಿವಿಕ್ರಮನಾಗಿ ಬೆಳೆದು ಆಕಾಶ - ಭೂಮಿಗಳ ಒಂದು ಮಾಡಿ ಅಳೆದು, ನಿಂತ ನಂತರ ಮತ್ತೊಂದು ಅಡಿಯನ್ನು ಬಲಿಯ ತಲೆಯ ಮೇಲೆ ಇಟ್ಟು ಪಾತಾಳಕ್ಕೆ ತುಳಿಯುತ್ತಾನೆ.

ಪರಮ ದಾನಿಯಾದ ಬಲಿಯ ದಾನ ಗುಣವನ್ನು ಮೆಚ್ಚಿ, ಪ್ರತಿ ಸಂವತ್ಸರದಲ್ಲೂ ಬಲಿ ಪಾಡ್ಯಮಿಯ ದಿನ ಸಂಧ್ಯಾಕಾಲದಲ್ಲಿ ಬಲಿಯ ಪೂಜೆ ನಡೆಯುವಂತೆ ವರ ನೀಡುತ್ತಾನೆ. ಆ ಸಮಯದಲ್ಲಿ ಬಲಿಯು ಭೂಮಿಗೆ ಬರುತ್ತಾನೆ ಎಂಬುದು ನಂಬಿಕೆ. ಇಂತಹ ಪಾತಾಳ ಪ್ರವೇಶದ ದ್ವಾರವನ್ನು ಸ್ವತಃ ನಾರಾಯಣನೇ ಕಾಯುತ್ತಿದ್ದಾನಂತೆ. ಅದಕ್ಕೆ ಸಗಣಿಯಲ್ಲಿ ಕೋಟೆ ಕಟ್ಟಿ, ರಾಗಿಯ ತೆನೆ ಸಿಕ್ಕಿಸಿ, ಹೊಸಿಲಿನ ಬಳಿ ಹಾಗೂ ದೇವರ ಮನೆಯ ಮುಂದೆ ಬೆನಕ ರೂಪಿ ಎಂದು ಸಗಣಿಯ ಕೋನಗಳನ್ನೂ ಇಡುತ್ತಾರೆ.

ಯಮ ದ್ವಿತೀಯ : ಮಾರನೆಯ ದಿನವನ್ನು ಯಮ ದ್ವಿತೀಯ ಎಂದೂ ಆಚರಿಸುತ್ತಾರೆ. ಆ ದಿನ ಅಕ್ಕ ತಂಗಿಯರು, ಅಣ್ಣ ತಮ್ಮಂದಿರನ್ನು ತಮ್ಮ ಮನೆಗೆ ಕರೆದು ಊಟ ಹಾಕಿ, ಉಡುಗೊರೆ ನೀಡಿ ಕಾಣಿಕೆ ನೀಡುವುದೂ ಉಂಟು. ಉತ್ತರ ಕರ್ನಾಟಕ ಭಾಗದಲ್ಲಿ ಮಾರನೆ ದಿನವನ್ನು ಅಕ್ಷ ತದಿಗೆ ಎಂದೂ ನಾಲ್ಕನೇ ದಿನವನ್ನು ತಾಯಿ ಚೌತಿ ಎಂದೂ ಅಚರಿಸುತ್ತಾರೆ. ಮನೆಯ ಹಿರಿಯರನ್ನೂ ವಿಶೇಷವಾಗಿ ಅಜ್ಜಿ, ಮುತ್ತಜ್ಜಿಯರನ್ನು ಸತ್ಕರಿಸುವ ಸಂಪ್ರದಾಯವೂ ಕೆಲವೆಡೆ ಇದೆ.

ಕರ್ನಾಟಕದಲ್ಲಿ ದೀಪಾವಳಿಯನ್ನು ಹಟ್ಟಿ ಹಬ್ಬ ಎಂದೂ ಆಚರಿಸುತ್ತಾರೆ. ಗೋಪಾಲಕರನ್ನು ಮಳೆಯಿಂದ ರಕ್ಷಿಸಲು ಶ್ರೀಕೃಷ್ಣ ಪಾಡ್ಯದಂದು ಗೋವರ್ಧನ ಗಿರಿ ಎತ್ತಿದ ದಿನವೆಂದೂ ಹೇಳಲಾಗುವ ಕಾರಣ ಗೋವರ್ಧನ ಪ್ರತಿಪದೆ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಗೋಪಾಲಕನಾದ ಕೃಷ್ಣನ ಮೆಚ್ಚಿಸಲು ಪಾಂಡವರು, ಸಗಣಿಯಲ್ಲಿ ಕೋನ ರಚಿಸಿ ಕೃಷ್ಣನ ಪೂಜಿಸಿದ್ದರಂತೆ, ಇದೇ ಸಂಪ್ರದಾಯ ಅಂದಿನಿಂದಲೂ ನಡೆದು ಬಂದಿದೆ, ಇಂದಿನವರೆವಿಗೂ !!

*

ಕಾಲ ಸ್ವಲ್ಪ ಬದಲಾಗಿದೆ. ಪಟಾಕಿ ಹಚ್ಚುವುದರಿಂದ ಉಂಟಾಗುವ ಹಣದ ಪೋಲು, ಪರಿಸರ ಮಾಲಿನ್ಯ ಮತ್ತು ಮಾರಕ ಪಟಾಕಿ ಬಳಸುವುದರಿಂದ ಉಂಟಾಗುವ ಅಪಘಾತ - ಸಾವು ನೋವುಗಳ ಬಗ್ಗೆ ಜನತೆಯಲ್ಲಿ, ಅಲ್ಲಲ್ಲಿ ಅರಿವು ಮೂಡುತ್ತಿದೆ. ಸಂಪ್ರದಾಯದ ಪ್ರಕಾರವೇ ಹಬ್ಬ ಆಚರಿಸುವ ಪರಂಪರೆ ಕ್ರಮೇಣ ಕಣ್ಮರೆಯಾಗುತ್ತಿದೆ. ಹಿರಿಯರು ಹಳ್ಳಿಯಲ್ಲಿ , ಮಕ್ಕಳು ನಗರಗಳಲ್ಲಿ ನೆಲೆನಿಂತಮೇಲೆ ಪಾರಂಪರಿಕ ಸಂಭ್ರಮ ಎಲ್ಲಿಂದಲಾದರೂ ಬರುತ್ತದೆ? ಕೆಲವರ ಮನೆಗಳಲ್ಲಿ ಇನ್ನೂ ಆ ಸಂಭ್ರಮ ಕಾಣುತ್ತದೆ, ಇನ್ನು ಕೆಲವರಿಗೆ ಉದಾಸೀನ ಮತ್ತೆ ಕೆಲವರಿಗೆ ಇಂತಹ ಸಂಭ್ರಮಗಳು ಕೇವಲ ನೆನಪಾಗಿ ಉಳಿದಿವೆ. ನೆನಪುಗಳು ಕಾಡುತ್ತವೆ.

ನಿಮ್ಮ ನೆನಪುಗಳನ್ನು ಮತ್ತು ಸಂಬಂಧಗಳನ್ನು ನವೀಕರಿಸಿಕೊಳ್ಳುವುದಕ್ಕೆ ಅನೇಕ ಮಾರ್ಗಗಳಿವೆ. ಅವುಗಳಲ್ಲಿ ಇಂಟರ್‌ನೆಟ್‌ ಸುಲಭವಾಗಿ ಕೈಗೆಟಕುವ ಸಾಧನ. ಈ ಅನುಕೂಲ ಉಪಯೋಗಿಸಿಕೊಂಡು ನಿಮ್ಮ ಕುಟುಂಬಕ್ಕೆ ಒಂದು ಶುಭಾಶಯ ಪತ್ರ, ಒಂದು ಉಡುಗೊರೆ ಕಳಿಸಿಕೊಡಿ. ಸಂಬಂಧಗಳು ಇನ್ನಷ್ಟು ಮಧುರವಾಗಲಿ, ಶಾಶ್ವತವಾಗಿರಲಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X