ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಿನ ಗರಡಿಮನೆಗಳಲ್ಲೀಗ ದಸರಾ ಕುಸ್ತಿಗೆ ತಾಲೀಮು!

By ಬಿಎಂ ಲವಕುಮಾರ್
|
Google Oneindia Kannada News

ಮೈಸೂರು, ಆಗಸ್ಟ್ 26: ಮೈಸೂರು ದಸರಾ ಬರುತ್ತಿದೆ ಎನ್ನುವಾಗಲೇ ನಗರದಲ್ಲಿರುವ ಗರಡಿ ಮನೆಗಳಲ್ಲಿ ಸಂಚಲನ ಶುರುವಾಗುತ್ತದೆ. ಹಿಂದಿನ ಕಾಲದಲ್ಲಿ ದಸರಾದಲ್ಲಿ ಕುಸ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿತ್ತು. ಅದು ಈಗಲೂ ಮುಂದುವರೆದುಕೊಂಡು ಬಂದಿದ್ದು, ದಸರಾ ಕುಸ್ತಿಪಂದ್ಯಾವಳಿ ಇವತ್ತಿಗೂ ಖ್ಯಾತಿಯನ್ನು ಪಡೆದಿದೆ.

ಮೈಸೂರು ಮಹಾರಾಜರು ಕುಸ್ತಿ ಪಟುಗಳಿಗೆ ತಮ್ಮ ಆಸ್ಥಾನದಲ್ಲಿ ಮಹತ್ವದ ಸ್ಥಾನವನ್ನು ಕೊಟ್ಟಿದ್ದರು. ವರ್ಷಕ್ಕೊಮ್ಮೆ ನಡೆಯುವ ದಸರಾದ ವೇಳೆ ಕುಸ್ತಿ ಪಂದ್ಯಾವಳಿಯನ್ನು ನಡೆಸಿ ಗೆದ್ದವರಿಗೆ ಬಹುಮಾನ ಮಾತ್ರವಲ್ಲದೆ, ಬಿರುದುಗಳನ್ನು ನೀಡಿ ಗೌರವಿಸುತ್ತಿದ್ದರು ಎಂಬುದು ಇತಿಹಾಸ. ಮಹಾರಾಜರು ಕುಸ್ತಿಗೆ ನೀಡಿದ ಪ್ರೋತ್ಸಾಹವೇ ಇವತ್ತಿಗೂ ಮೈಸೂರು ನಗರದಲ್ಲಿ ಗರಡಿಮನೆಗಳನ್ನು ಕಾಣಲು ಸಾಧ್ಯವಾಗಿದೆ. ಅಷ್ಟೇ ಅಲ್ಲದೆ ದಸರಾದಲ್ಲಿ ಕುಸ್ತಿ ಪಂದ್ಯಾವಳಿ ಉಳಿದು ಬೆಳೆಯಲು ಕಾರಣವಾಗಿದೆ.

Mysuru Dasara Exhibition 2022 : ಮೈಸೂರು ದಸರಾಕ್ಕೆ ಮೆರುಗು ತರಲಿದೆ ವಸ್ತುಪ್ರದರ್ಶನMysuru Dasara Exhibition 2022 : ಮೈಸೂರು ದಸರಾಕ್ಕೆ ಮೆರುಗು ತರಲಿದೆ ವಸ್ತುಪ್ರದರ್ಶನ

ಮೈಸೂರು ನಗರಕ್ಕೊಂದು ಸುತ್ತು ಬಂದರೆ ಬೇರೆಲ್ಲೂ ಕಾಣದಷ್ಟು ಗರಡಿಮನೆಗಳು ಇಲ್ಲಿ ಕಾಣಿಸುತ್ತವೆ. ಈ ಗರಡಿ ಮನೆಗಳು ಕೇವಲ ದಸರಾದ ಸಮಯದಲ್ಲಿ ಮಾತ್ರ ಸಕ್ರಿಯವಾಗಿರದೆ, ವರ್ಷ ಪೂರ್ತಿ ಇಲ್ಲಿ ತಾಲೀಮು ನಡೆಯುತ್ತಿರುತ್ತದೆ. ಆದರೆ ದಸರಾ ಸಮಯದಲ್ಲಿ ಪ್ರತಿ ಗರಡಿ ಮನೆಗಳಲ್ಲಿಯೂ ವಿದ್ಯುತ್ ನಂತಹ ಸಂಚಲನವಿರುತ್ತದೆ. ಒಬ್ಬ ಪೈಲ್ವಾನ್ ತಾನು ದಸರಾ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಬೇಕೆಂಬ ಕನಸು ಕಾಣುತ್ತಿರುತ್ತಾನೆ. ಮತ್ತು ಅದಕ್ಕಾಗಿ ವರ್ಷಾನುಗಟ್ಟಲೆ ತಾಲೀಮು ನಡೆಸುತ್ತಾನೆ.

ಕರಿತೊಟ್ಟಿಯಲ್ಲಿ ವಜ್ರಮುಷ್ಠಿ ಕಾಳಗ

ಕರಿತೊಟ್ಟಿಯಲ್ಲಿ ವಜ್ರಮುಷ್ಠಿ ಕಾಳಗ

ಹಾಗೆನೋಡಿದರೆ ಮೈಸೂರಿನ ಈ ಕುಸ್ತಿಗೆ ಮತ್ತು ಪೈಲ್ವಾನರಿಗೆ ರಾಜಮಹಾರಾಜರು ತಮ್ಮ ಆಡಳಿತಾವಧಿಯಲ್ಲಿ ರಾಜಮರ್ಯಾದೆಯನ್ನು ನೀಡಿದ್ದರು. ಪೈಲ್ವಾನ್‌ರನ್ನು ಅರಮನೆಗೆ ಕರೆಯಿಸಿ ಪ್ರತಿ ವಾರವೂ ಕುಸ್ತಿ ನಡೆಸಲಾಗುತ್ತಿತ್ತು. ಅಪ್ರತಿಮ ಸಾಧನೆ ತೋರಿದ ಪೈಲ್ವಾನರಿಗೆ ರಾಜರೇ ಆಶ್ರಯ ನೀಡಿ ಪ್ರೋತ್ಸಾಹಿಸುತ್ತಿದ್ದರು. ಹೀಗಾಗಿ ನಗರದಾದ್ಯಂತ ಗರಡಿಮನೆಗಳು ಹುಟ್ಟಿಕೊಂಡಿದ್ದವು. ಮುಂಜಾನೆ ಚುಮುಚುಮು ಚಳಿಯಲ್ಲಿಯೇ ಗರಡಿ ಮನೆಗೆ ಹೋಗಿ ಪೈಲ್ವಾನರು ಅಭ್ಯಾಸ ನಡೆಸುತ್ತಿದ್ದರು.

ದಸರಾ ಸಂದರ್ಭ ನಡೆಯುವ ಕುಸ್ತಿ ಪಂದ್ಯದಲ್ಲಿ ತನ್ನ ಬಲ ಪ್ರದರ್ಶಿಸಿ ಮಹಾರಾಜರಿಂದ ಪ್ರಶಂಸೆ ಪಡೆಯುತ್ತಿದ್ದರು. ಜಯಶಾಲಿಯಾದ ಪೈಲ್ವಾನರಿಗೆ ದಸರಾ ಕೇಸರಿ, ದಸರಾ ಕಂಠೀರವ, ದಸರಾ ಕುಮಾರ ಪ್ರಶಸ್ತಿ ನೀಡಲಾಗುತ್ತಿತ್ತು. ಇದು ಇಂದಿಗೂ ಮುಂದುವರೆದುಕೊಂಡು ಬರುತ್ತಿದ್ದು, ದಸರಾ ಸಂದರ್ಭ ಕರಿತೊಟ್ಟಿಯಲ್ಲಿ ನಡೆಯುವ ವಜ್ರಮುಷ್ಠಿ ಕಾಳಗ ಇದಕ್ಕೆ ಸಾಕ್ಷಿಯಾಗಿದೆ.

ಗಮನ ಸೆಳಯುವ ಗರಡಿ ಮನೆಗಳು

ಗಮನ ಸೆಳಯುವ ಗರಡಿ ಮನೆಗಳು

ರಾಜರ ಕಾಲದ ನಂತರದ ದಿನಗಳನ್ನು ನೋಡಿದರೆ ಬಹಳಷ್ಟು ಗರಡಿ ಮನೆಗಳು ಇತಿಹಾಸದ ಪುಟ ಸೇರಿವೆ. ಕೆಲವೇ ಕೆಲವು ಗರಡಿಮನೆಗಳಷ್ಟೇ ಉಳಿದುಕೊಂಡಿವೆ. ಈಗಿನ ಯುವಕರು ಆಧುನಿಕ ಜಿಮ್‌ಗಳತ್ತ ಮುಖ ಮಾಡಿದ್ದಾರೆ. ಆದರೆ ಕೆಲವು ಪೈಲ್ವಾನ್ ಗಳು ಮಾತ್ರ ಗರಡಿಮನೆಗಳನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿದ್ದಾರೆ.

ಆ ಪೈಕಿ ಈಗಲೂ ಸುಣ್ಣದಕೇರಿ ನಾಲಾ ಬೀದಿಯ ಗೋಪಾಲಸ್ವಾಮಿ ಗರಡಿ, ಬಸವೇಶ್ವರ ರಸ್ತೆಯ ಮಹಾಲಿಂಗೇಶ್ವರ ಮಠದ ಗರಡಿ, ಕೆ.ಜಿ.ಕೊಪ್ಪಲು, ಪಡುವಾರಹಳ್ಳಿಯ ಹತ್ತೂ ಜನರ ಗರಡಿ, ಹುಲ್ಲಿನ ಬೀದಿಯ ಈಶ್ವರರಾಯನ ಗರಡಿ, ಬೆಸ್ತರ ಕಾಳಣ್ಣವರ ಗರಡಿ, ಫಕೀರ್ ಅಹಮ್ಮದ್ ಸಾಹೇಬರ ಗರಡಿ ಹೀಗೆ ಹಲವು ಗರಡಿ ಮನೆಗಳು ನಮ್ಮ ಗಮನಸೆಳೆಯುತ್ತವೆ. ಮೈಸೂರಿನ ಗರಡಿಮನೆಗಳಲ್ಲಿ ತಯಾರಾದ ಪೈಲ್ವಾನರ ಪೈಕಿ ಬೆಟ್ಟದ ಚಿಕ್ಕಣ್ಣ, ಪೈ.ಪಾಪಣ್ಣ, ಪೈ.ಶಂಕರ್ ಚಕ್ರವರ್ತಿ, ಚಿನ್ನ, ಅನಂತ್, ಮಹೇಶ್ ಪಂಡಿತ್ ಹೀಗೆ ನೂರಾರು ಪೈಲ್ವಾನ್‌ಗಳು ತಮ್ಮ ಪ್ರತಿಭೆ ಪ್ರದರ್ಶಿಸಿ ಮೈಸೂರಿನ ಖ್ಯಾತಿಯನ್ನು ಹೆಚ್ಚಿಸಿದ್ದಾರೆ.

ಪೈಲ್ವಾನರ ದಿನಚರಿ

ಪೈಲ್ವಾನರ ದಿನಚರಿ

ದಸರಾ ಬರುತ್ತಿದ್ದಂತೆಯೇ ಹಗಲು ರಾತ್ರಿ ಎನ್ನದೆ ತಾಲೀಮು ನಡೆಯುತ್ತದೆ. ಪೈಲ್ವಾನರ ದಿನಚರಿ, ಅವರ ಊಟ, ತಾಲೀಮು ಎಲ್ಲವೂ ವಿಭಿನ್ನವಾಗಿರುತ್ತದೆ. ಪ್ರತಿದಿನವೂ ದೇಹವನ್ನು ವ್ಯಾಯಾಮ, ಕಸರತ್ತಿನ ಮೂಲಕ ದಂಡಿಸುತ್ತಾರೆ. ಮುಂಜಾನೆ ಎದ್ದು ಗರಡಿಮನೆಗೆ ಹೋಗುವ ಪೈಲ್ವಾನರು ಅಲ್ಲಿರುವ ಪರಿಕರಗಳಾದ ಕಲ್ಲುಗುಂಡು, ಬಳೆ, ಗದೆ, ಕೊಂತ, ಕಂಬಕಟ್ಟೋದು, ಮಣ್ಣಿನಲ್ಲಿ ಪರಸ್ಪರ ಕುಸ್ತಿ ಅಭ್ಯಾಸ ನಡೆಸುವುದಲ್ಲದೆ, ಈ ಸಂದರ್ಭ ಹುಲಿಹೆಜ್ಜೆ, ಡೇಕ್ನಿ, ಕಟಾಪ್, ಹನುಮಾನ್ ದಂಡೆ, ಸುತ್ತಂಡೆ, ಚಪ್ಪಡಿದಂಡೆ, ಬಸ್ಕಿ ಮುಂತಾದ ಕಸರತ್ತುಗಳನ್ನು ಕೂಡ ಅಭ್ಯಾಸ ಮಾಡುತ್ತಾರೆ.

ಗರಡಿಮನೆಯಿಂದ ತಾಲೀಮು ನಡೆಸಿ ಬರುವ ಪೈಲ್ವಾನರು ಮನೆಗೆ ಬರುತ್ತಿದ್ದಂತೆಯೇ ಲೀಟರ್‌ಗಟ್ಟಲೆ ಬಾದಾಮಿ ಬೀಜಗಳ ಮಿಶ್ರಣ ಮಾಡಿದ ಹಾಲು, ಬೆಲ್ಲ ಮತ್ತು ರವೆಯಿಂದ ಮಾಡಿದ ಸಿಹಿ ತಿನಿಸು, ಬೆಣ್ಣೆ ಮುಂತಾದ ಪೌಷ್ಠಿಕ ಆಹಾರಗಳನ್ನು ಸೇವನೆ ಮಾಡುತ್ತಾರೆ. ಮಧ್ಯಾಹ್ನ ಚಪಾತಿ, ರಾಗಿ ಮುದ್ದೆ, ಅನ್ನ ಸಾರು, ಹಾಲು, ಬೆಣ್ಣೆ, ಹಣ್ಣು ಹೀಗೆ ಆಹಾರ ಸೇವನೆ ಸಾಗುತ್ತದೆ. ಮೊದಲೆಲ್ಲಾ ಪೈಲ್ವಾನ್ ಇದ್ದಾರೆಂದರೆ ಅದು ಊರಿಗೊಂದು ಹೆಮ್ಮೆ. ಅಲ್ಲದೆ ಅವರಿಗೆ ಎಲ್ಲಾ ರೀತಿಯ ಪ್ರೋತ್ಸಾಹ ನೀಡಿ ದಸರಾ ಕುಸ್ತಿಗೆ ಕಳುಹಿಸಲಾಗುತ್ತಿತ್ತು.

ದಸರಾ ಕುಸ್ತಿಯಲ್ಲಿ ಭಾಗವಹಿಸುವ ತವಕ

ದಸರಾ ಕುಸ್ತಿಯಲ್ಲಿ ಭಾಗವಹಿಸುವ ತವಕ

ಕಳೆದ ಎರಡು ವರ್ಷಗಳ ಬಳಿಕ ದಸರಾವನ್ನು ಅದ್ಧೂರಿಯಾಗಿ ಆಚರಿಸಲು ಸಿದ್ಧತೆ ನಡೆಸಲಾಗುತ್ತಿದ್ದು, ದಸರಾ ಕುಸ್ತಿ ಪಂದ್ಯಾವಳಿಗೆ ಗರಡಿಮನೆಗಳು ಸದ್ದಿಲ್ಲದೆ ಸಜ್ಜುಗೊಳ್ಳುತ್ತಿವೆ. ವಿವಿಧ ಕುಸ್ತಿ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಗೆಲುವು ಪಡೆದವರು ದಸರಾದಲ್ಲಿ ನಡೆಯುವ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿ ದಸರಾ ಕೇಸರಿ, ದಸರಾ ಕಂಠೀರವ, ದಸರಾ ಕುಮಾರ ಪ್ರಶಸ್ತಿ ಪಡೆಯುವ ಹಂಬಲದಲ್ಲಿದ್ದಾರೆ. ಅದು ಏನೇ ಇರಲಿ ಕಲೆ ಸಂಸ್ಕೃತಿಯ ಪೋಷಕರಾದ ಮೈಸೂರು ಮಹಾರಾಜರು ಕುಸ್ತಿಗೂ ಹೆಚ್ಚಿನ ಪ್ರಾಧ್ಯಾನ್ಯತೆ ನೀಡಿದ್ದರು. ಅವರು ನೀಡಿದ ಪ್ರೋತ್ಸಾಹವೇ ಇವತ್ತಿಗೂ ಮೈಸೂರಿನಲ್ಲಿ ಗರಡಿಮನೆಗಳು ಉಳಿದು ಹೊಸ ಕುಸ್ತಿ ಪಟುಗಳ ಹುಟ್ಟಿಗೆ ದಾರಿ ಮಾಡಿಕೊಟ್ಟಿವೆ.

English summary
Before Dasara event the wrestling centers gets the fillip for activities and the wrestlers prepare themselves to compete during Dasara celebrations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X