ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ದಸರಾ ಅಂದ್ರೆ... ಸಂಸ್ಕೃತಿಯ ವೈಭವದ ಮೆರವಣಿಗೆ

|
Google Oneindia Kannada News

ಮೈಸೂರು, ಆಗಸ್ಟ್‌ 24: ಮಕ್ಕಳಿಂದ ಮುದುಕರವರೆಗೂ, ಸಿರಿವಂತರಿಂದ ಬಡವರವರೆಗೆ, ಮನೆಗಳಿಂದ ಬೀದಿ ತನಕ ಎಲ್ಲರೂ ಒಟ್ಟಾಗಿ ಕಲೆತು ಆಚರಿಸುವ ಹಬ್ಬವೇ ದಸರಾ.. ಹೀಗಾಗಿಯೇ ಇದನ್ನು ನಾಡಹಬ್ಬ ಎಂದು ಕರೆಯಲಾಗುತ್ತದೆ. ದಸರಾ ಹಬ್ಬವನ್ನು ಒಂದೊಂದು ಊರಿನಲ್ಲಿ ಒಂದೊಂದು ಬಗೆಯಲ್ಲಿ ಆಚರಿಸುತ್ತಾರೆ. ಆದರೆ ಎಲ್ಲೆಡೆಯೂ ಕಂಗೊಳಿಸುವುದು ಮಾತ್ರ ಸಡಗರ, ಸಂಭ್ರಮವೇ

ಬೇರೆಡೆ ಆಚರಿಸುವ ದಸರಾಗಳಿಗೆ ಹೋಲಿಸಿದರೆ ಮೈಸೂರು ದಸರಾ ವಿಭಿನ್ನ ಮತ್ತು ವಿಶಿಷ್ಟವಾಗಿದ್ದು, ಹಾಗಾಗಿಯೇ ಇದು ವಿಶ್ವವಿಖ್ಯಾತವಾಗಿದೆ. ವಿದ್ಯುತ್ ದೀಪಗಳಿಂದ ಜಗಮಗಿಸುವ ನಗರ, ಅದರಾಚೆಗೆ ವಿವಿಧ ಕಾರ್ಯಕ್ರಮಗಳು, ಜಂಬೂಸವಾರಿ, ದರ್ಬಾರ್ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ದಸರಾಗೆ ಮೆರಗು ನೀಡುವುದರೊಂದಿಗೆ ಕರ್ನಾಟಕ ರಾಜ್ಯದ ಸಂಸ್ಕೃತಿಯನ್ನು ದೇಶ ವಿದೇಶಗಳ ಮುಂದೆ ತೆರೆದಿಡುತ್ತದೆ.

ಹಾಗೆ ನೋಡಿದರೆ ಮೈಸೂರು ದಸರಾದಲ್ಲಿ ಏನಿದೆ ಏನಿಲ್ಲ ಎಂಬುದನ್ನು ಹೇಳುವುದೇ ಕಷ್ಟವಾಗುತ್ತದೆ. ತನ್ನದೇ ಆದ ಇತಿಹಾಸದೊಂದಿಗೆ ಸಂಪ್ರದಾಯದ ಮೆರುಗಿದೆ. ಸಂಸ್ಕೃತಿಯ ಲೇಪನವಿದೆ. ಅದರಾಚೆಗೆ ಬಡವ, ಶ್ರೀಮಂತ, ಜಾತಿ,ಧರ್ಮದ ಹಂಗಿಲ್ಲದೆ ಎಲ್ಲರೂ ಕಲೆತು ಸಂಭ್ರಮಿಸುವ ಭಾವೈಕ್ಯತೆಯಿದೆ. ಹೀಗಾಗಿಯೇ ಇದೊಂದು ಜನೋತ್ಸವ ಎಂದರೂ ತಪ್ಪಾಗಲಾರದು.

ದಸರಾ ಮಹೋತ್ಸವ: ಗಜಪಡೆ ಸುರಕ್ಷತೆಗೆ ಸಿಸಿ ಕ್ಯಾಮೆರಾ 'ಕಣ್ಗಾವಲು'ದಸರಾ ಮಹೋತ್ಸವ: ಗಜಪಡೆ ಸುರಕ್ಷತೆಗೆ ಸಿಸಿ ಕ್ಯಾಮೆರಾ 'ಕಣ್ಗಾವಲು'

ಮೈಸೂರು ದಸರಾ ಇವತ್ತು ನಾಲ್ಕು ಶತಮಾನಗಳ ಇತಿಹಾಸದ ಹಿರಿಮೆ ಮತ್ತು ಸಾಂಸ್ಕೃತಿಕ ರಂಗುರಂಗಿನ ಗರಿಮೆಯೊಂದಿಗೆ ಬೆಡಗು ಭಿನ್ನಾಣದ ಮಿಳಿತದೊಂದಿಗೆ ಒಂಭತ್ತು ದಿನಗಳ ಕಾಲ ಜನರ ಪಾಲಿಗೆ ಸಾಂಸ್ಕೃತಿಕ ಸುಗ್ಗಿಯಾಗಿ, ಹಳ್ಳಿಗಳಿಂದ ಆರಂಭವಾಗಿ ಜಾಗತಿಕ ಜಗುಲಿಯ ಎತ್ತರಕ್ಕೆ ದಸರಾ ಬೆಳೆದು ನಿಂತು ಜನಮನದ ಜನತಾ ದಸರಾ ಆಗಿ ದೇಶ ವಿದೇಶಗಳಲ್ಲಿ ವಿರಾಜಿಸುತ್ತಿದೆ.

ವಿಶ್ವವನ್ನೇ ತನ್ನತ್ತಾ ತಿರುಗಿಸುವ ಜಂಬೂಸವಾರಿ

ವಿಶ್ವವನ್ನೇ ತನ್ನತ್ತಾ ತಿರುಗಿಸುವ ಜಂಬೂಸವಾರಿ

ಚಾಮುಂಡೇಶ್ವರಿಯ ಒಂಭತ್ತು ಅವತಾರಗಳ ಪೂಜೆಯ ನಂತರ ಹತ್ತನೇ ದಿನ ನಾಡ ಹಬ್ಬಕ್ಕೆ ಕಿರೀಟವಿಟ್ಟಂತೆ ನಡೆಯುವ ವಿಜಯದಶಮಿ, ಅದಕ್ಕೆ ಕಳೆಕಟ್ಟುವ ಜಂಬೂಸವಾರಿ ವಿಶ್ವದ ಎಲ್ಲೆಡೆಯ ಜನರ ಸೆಳೆಯುತ್ತದೆ. ಹೀಗಾಗಿ ದಸರಾವನ್ನು ವರ್ಣಿಸಲು ಪದಗಳು ಸಾಲದಾಗುತ್ತವೆ. ಇನ್ನು ದಸರಾಕ್ಕೆ ದಿನಗಳು ಹತ್ತಿರವಾಗುತ್ತವೆ ಎನ್ನುವಾಗಲೇ ಹಳ್ಳಿಹಳ್ಳಿಗಳಲ್ಲಿ ದಸರಾ ಸಂಭ್ರಮ ಮುಗಿಲು ಮುಟ್ಟುತ್ತದೆ. ನಾಡಹಬ್ಬಕ್ಕಾಗಿ ಅರಮನೆ, ಚಿನ್ನದ ಸಿಂಹಾಸನ, ಚಿನ್ನಬೆಳ್ಳಿಯ ಅಂಬಾರಿಗಳು, ದೇವರುಗಳು ಸಿದ್ಧಗೊಂಡರೆ, ಮೈಸೂರಿನ ಗಲ್ಲಿಗಲ್ಲಿಗಳಲ್ಲೂ ಜನ ಹಿತ್ತಾಳೆ, ಕಂಚಿನ ದೇವರುಗಳ ವಿಗ್ರಹ ತೊಳೆದು ಆಯುಧ ಪೂಜೆಗೆ ಸಜ್ಜಾಗುತ್ತಾರೆ. ಜನ ಸಾಮಾನ್ಯರು ದಸರಾ ಸಂಭ್ರಮದಲ್ಲಿ ಮಿಂದೇಳಲು ಹಾತೊರೆಯುತ್ತಾರೆ.

ದಸರಾಕ್ಕ ಗಜಪಡೆಯಿಂದ ಕಳೆ

ದಸರಾಕ್ಕ ಗಜಪಡೆಯಿಂದ ಕಳೆ

ಮೈಸೂರು ದಸರಾಕ್ಕೆ ಕಳೆ ಬರುವುದೇ ಗಜಪಡೆಯಿಂದ. ಅವುಗಳು ತಾವಿದ್ದ ಶಿಬಿರಗಳಿಂದ ಅರಮನೆ ಅಂಗಳ ಸೇರಿ ಜಂಬೂ ಸವಾರಿಗೆ ತಾಲೀಮು ನಡೆಸಲು ಆರಂಭಿಸುತ್ತಿದ್ದಂತೆಯೇ ದಸರಾದ ಕಳೆ ಮೈಸೂರನ್ನು ಆವರಿಸತೊಡಗುತ್ತದೆ. ಬಳಿಕ ಕೆಲವರು ತಮ್ಮ ಮನೆಗಳಿಗೆ ಸುಣ್ಣಬಣ್ಣ ಬಳಿದರೆ, ಅರಮನೆ ಸೇರಿದಂತೆ ಕಟ್ಟಡಗಳನ್ನು ಸಿಂಗಾರಗೊಳಿಸುವ ಕಾರ್ಯ ಆರಂಭವಾಗುತ್ತದೆ. ಬೀದಿಗಳಿಂದ ಹಿಡಿದು ರಾಜಮಾರ್ಗಗಳವರೆಗೆ ರಸ್ತೆಗಳನ್ನು ದುರಸ್ತಿಗೊಳಿಸುವ, ಇಕ್ಕೆಲಗಳನ್ನು ಸ್ವಚ್ಛಗೊಳಿಸುವ ಕೆಲಸ ಭರದಿಂದ ಸಾಗುತ್ತದೆ.

ರಸ್ತೆಯುದ್ದಕ್ಕೂ, ವೃತ್ತ, ಕಟ್ಟಡಗಳಿಗೆ ವಿದ್ಯುದ್ದೀಪದ ಅಲಂಕಾರ ಮಾಡುವ ಕೆಲಸವೂ ನಡೆಯುತ್ತದೆ. ಮನೆಮನೆಗಳಲ್ಲಿ ಹೆಣ್ಮಕ್ಕಳು ಬೊಂಬೆ ಕೂರಿಸುವತ್ತ ಚಿತ್ತ ಹರಿಸಿದರೆ, ಗರಡಿ ಮನೆಗಳಲ್ಲಿ ತಾಲೀಮು ಜೋರಾಗಿ ನಡೆಯುತ್ತದೆ. ದೇಗುಲಗಳಲ್ಲಿ ವಿವಿಧ ವಿಶೇಷ ಪೂಜೆಗಳಿಗೆ ತಯಾರಿಯೂ ಆರಂಭವಾಗುತ್ತದೆ. ಅದಕ್ಕೆಲ್ಲ ಇಂಬು ನೀಡುವ ನಿಸರ್ಗ ಆಗೊಮ್ಮೆ ಈಗೊಮ್ಮೆ ಮಳೆ ಸುರಿಸಿ ಶುಭ ಹಾರೈಸುತ್ತದೆ.

ವಿದ್ಯುದ್ದೀಪದ ಬೆಳಕಿನಲ್ಲಿ ಮಿಂದೇಳುವ ಪರಿವಾರ

ವಿದ್ಯುದ್ದೀಪದ ಬೆಳಕಿನಲ್ಲಿ ಮಿಂದೇಳುವ ಪರಿವಾರ

ಸಣ್ಣಗಿನ ಚಳಿ ಮುದ ನೀಡುತ್ತದೆ. ಸದಾ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ಮರೆತವರು. ರಾತ್ರಿಯಾಗುತ್ತಿದ್ದಂತೆಯೇ ಮನೆಯಿಂದ ಹೊರಗೆ ಬಂದು ತಮ್ಮ ಪರಿವಾರದೊಂದಿಗೆ ವಿದ್ಯುದ್ದೀಪದ ಬೆಳಕಿನಲ್ಲಿ ಮಿಂದೆದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ತಮಗಿಷ್ಟದ ಪದಾರ್ಥಗಳನ್ನು ಸೇವಿಸಿ, ತಮಗೆ ಬೇಕಾಗಿದ್ದನ್ನು ಖರೀದಿಸಿ ಮನೆಯ ಹಾದಿ ಹಿಡಿಯುತ್ತಾರೆ. ಹೀಗಾಗಿ ರಾತ್ರಿ ಆಯಿತೆಂದರೆ ನಗರದಲ್ಲಿ ಜನಸಾಗರ ನೆರೆಯುತ್ತದೆ.

ಇದೆಲ್ಲದರ ನಡುವೆ ದಸರಾ ಸಂದರ್ಭದಲ್ಲಿ ಅರಮನೆಯಿಂದ ಮನೆಮನೆಗೆ ದಸರಾ ಸಂಭ್ರಮವೂ ಸಾಗುತ್ತದೆ. ಸಿರಿವಂತರು ಬೊಂಬೆ ಪ್ರದರ್ಶನ, ತೋಟಗಳ ಹಬ್ಬ ಮಾಡಿದರೆ, ಕೇರಿಕೇರಿಯ ಬಡಜನರು ಪೂರ್ವಿಕರನ್ನು ಸ್ಮರಿಸಿ ಪಿತೃ ಪಕ್ಷ ಮಾಡುತ್ತಾರೆ. ಬಾಳೆ ಎಲೆಯ ಮೇಲೆ ತಾಮ್ರ, ಹಿತ್ತಾಳೆ, ಅಥವಾ ಮರದಿಂದ ಮಾಡಿದ ದೇವರುಗಳ ಹಾಗೂ ಫೋಟೋ ಇಟ್ಟು ಪೂಜಿಸಿ ಕೃತಾರ್ಥರಾಗುತ್ತಾರೆ. ಒಕ್ಕಲು ಮನೆತನದ ಜನ, ವ್ಯಾಪಾರಸ್ಥರು, ಉದ್ದಿಮೆದಾರರು ಆಯುಧ ಪೂಜೆ ನೆರವೇರಿಸುತ್ತಾರೆ.

ಎಲ್ಲಾ ವರ್ಗದ ಜನರನ್ನು ಒಂದೆಡೆ ಸೇರಿಸುವ ದಸರಾ

ಎಲ್ಲಾ ವರ್ಗದ ಜನರನ್ನು ಒಂದೆಡೆ ಸೇರಿಸುವ ದಸರಾ

ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವುದರೊಂದಿಗೆ ವಿಧ್ಯುಕ್ತವಾಗಿ ಆರಂಭವಾಗುವ ಮೈಸೂರು ದಸರಾ ಒಂಭತ್ತು ರಾತ್ರಿಹಗಲು ಮಿಂಚಿನಂತೆ ಮೆರೆಯುವುದನ್ನು ನಾವು ಕಾಣಬಹುದಾಗಿದೆ. ಕೃಷಿಯೇ ಬದುಕಾಗಿ, ಜನಸಂಪರ್ಕ ದೂರವಾಗಿ, ಮನರಂಜನೆಯಿಂದ ವಂಚಿತವಾಗಿ ತಮ್ಮದೇ ಬದುಕಿನಲ್ಲಿ ಮುಳುಗಿರುತ್ತಿದ್ದ ಕಾಲದಲ್ಲಿ ದಸರಾ ಎಲ್ಲರನ್ನು ಒಂದೆಡೆ ಸೇರಿ ಸಂಭ್ರಮಿಸಲು ಅನುಕೂಲ ಮಾಡಿಕೊಟ್ಟಿತ್ತು. ಹೀಗಾಗಿ ಅವತ್ತಿನಿಂದ ಇವತ್ತಿನವರೆಗೆ ಇತಿಹಾಸದ ಕಾಲಘಟ್ಟಗಳಿಗೆ ಹೊಸತು ಕೊಂಡಿಯನ್ನು ಸೇರಿಸಿರುವ ದಸರಾ, ಮಕ್ಕಳು, ಮುದುಕರು, ಸಿರಿವಂತರು ಬಡವರು ಹೀಗೆ ಎಲ್ಲರಿಗೂ ಸಂಭ್ರಮವನ್ನು ಉಣಬಡಿಸುತ್ತಲೇ ಸಾಗುತ್ತಿದೆ. ಇದು ದಸರಾದ ವಿಶೇಷತೆಯೂ ಹೌದು.

English summary
Mysuru Dasara is not just a celebration of a Hindu festival, Celebration of Tradition, Heritage, and Glory and one of the greatest events annually in Karnataka,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X