ಆಯುಧ ಪೂಜೆ 2021: ಮಹತ್ವ ಹಾಗೂ ಪೂಜಾ ವಿಧಾನ
ಮಹಾನವಮಿ ಅಥವಾ ಆಯುಧಪೂಜೆಯನ್ನು ನವರಾತ್ರಿಯ 9ನೇ ದಿನ ಆಚರಿಸುತ್ತಾರೆ. ಈ ವರ್ಷ ಅಕ್ಟೋಬರ್ 14ರಂದು ಆಯುಧ ಪೂಜಾ ನಡೆಯಲಿದೆ.
ಆಶ್ವಯುಜ ಮಾಸದ ಶುಕ್ಲ ಪಕ್ಷದ ನವಮಿಯ ದಿನ. ಈ ದಿನ ಹೆಸರೇ ಹೇಳುವಂತೆ ಆಯುಧಗಳಿಗೆ ಪೂಜೆ ಮಾಡುವ ದಿನ. ಹಿಂದೆ ಮೈಸೂರಿನ ಮಹಾರಾಜರು ಮಹಾನವಮಿಯ ದಿನ ಎಲ್ಲಾ ಆಯುಧಗಳನ್ನು, ತಮ್ಮ ಪಟ್ಟದ ಕತ್ತಿಯನ್ನೂ ಸಹ ತೆಗೆದಿಟ್ಟು ಪೂಜೆ ಮಾಡುತ್ತಿದ್ದರು.
ಈ ದಿನ ಅವುಗಳಿಗೆ ವಿರಾಮ/ವಿಶ್ರಾಂತಿ/ರಜಾ ದಿನ. ಈ ಆಯುಧಗಳು ನಮ್ಮನ್ನು ವರುಷವೆಲ್ಲ ಕಾಪಾಡಿವೆ. ಈ ಒಂದು ದಿನ ಅವುಗಳಿಗೆ ವಿರಾಮ ಕೊಟ್ಟು, ಅವುಗಳಿಗೆ ಕೃತಜ್ಞತೆ ಸಲ್ಲಿಸಿ, ಮುಂದಿನ ವರ್ಷವೂ ಹೀಗೆ ನಮ್ಮನ್ನು ಕಾಪಾಡಿ ಎಂದು ಅವುಗಳಿಗೆ ಪೂಜೆ ಮಾಡುತ್ತಿದ್ದರು. ರಾಜರ ಆಳ್ವಿಕೆ ಮುಗಿದರೂ, ಈ ಆಯುಧ ಪೂಜೆ ಇಂದಿಗೂ ಎಲ್ಲರೂ ಆಚರಿಸುತ್ತಾರೆ.

ಈ ದಿನ ದೇವರ ಪೂಜೆಯ ಜೊತೆ ಆಯುಧಗಳಿಗೂ ಪೂಜೆ ಮಾಡಬೇಕು. ಮನೆಯಲ್ಲಿ ದಿನ ನಿತ್ಯ ಉಪಯೋಗಿಸುವ ಆಯುಧಗಳು(ಚಾಕು,ಕತ್ತರಿ,ಇತ್ಯಾದಿ),ಯಂತ್ರೋಪಕರಣಗಳು/ಸಲಕರಣೆಗಳು (gadgets/machines - ಟಿ.ವಿ, ಕಂಪ್ಯೂಟರ್, ಒಲೆ, ಫ್ರಿಡ್ಜ್, ಇತ್ಯಾದಿ), ಮತ್ತು ವಾಹನಗಳು (ಕಾರ್, ಸ್ಕೂಟರ್, ಸೈಕಲ್, ಇತ್ಯಾದಿ) - ಇವುಗಳನ್ನೆಲ್ಲ ಸ್ವಚ್ಛ ಮಾಡಿ ( ಒದ್ದೆ ಬಟ್ಟೆಯಿಂದ ಒರಸಿ/ನೀರಿನಿಂದ ತೊಳೆಯಿರಿ), ಅರಿಶಿನ ಕುಂಕುಮ ಹಚ್ಚಿ, ಹೂವು, ಗೆಜ್ಜೆವಸ್ತ್ರ ಹಾಕಿ, ಊದಿನ ಕಡ್ಡಿ ಹಚ್ಚಿ, ಮಂಗಳಾರತಿ ಮಾಡಿ. ನಾವು ವರ್ಷವೆಲ್ಲಾ ಈ ಉಪಕರಣಗಳಿಂದ ಉಪಯೋಗ ಪಡೆದಿರುತ್ತೇವೆ, ಇವತ್ತು ಅವುಗಳಿಗೆ, ಕೃತಜ್ಞತಾ ಭಾವದಿಂದ ಪೂಜೆ ಮಾಡಿ, ಮುಂದೆಯೂ ನಮಗೆ ಸಹಾಯ ಮಾಡಿ ಎಂದು ಪ್ರಾರ್ಥಿಸಿ.
ಆಯುಧ ಪೂಜೆ ಮಹತ್ವ:
ಪೌರಾಣಿಕ ಹಿನ್ನೆಲೆಯ ಪ್ರಕಾರ ದುರ್ಗೆಯು ಚಾಮುಂಡಿಯ ಅವತಾರವನ್ನು ತಾಳಿ ದುಷ್ಟನಾದ ಮಹಿಷಾಸುರನನ್ನು ಸಂಹರಿಸುತ್ತಾಳೆ. ಮಹಿಷನನ್ನು ಸಂಹರಿಸಲು ದೇವಿ ಉಪಯೋಗಿಸಿದ ಆಯುಧಗಳನ್ನು ಆಕೆ ಮತ್ತೆ ಬಳಸದೇ ಭೂಲೋಕದಲ್ಲಿ ಎಸೆದು ಹೋಗುತ್ತಾಳೆ. ನಂತರ ದೇವಿ ಎಸೆದ ಆಯುಧಗಳನ್ನು ಮನುಷ್ಯರು ತಂದು ಪೂಜಿಸಲು ಆರಂಭಿಸಿದರು ಇದೇ ಮುಂದೆ ಆಯುಧ ಪೂಜೆಯಾಗಿ ಆಚರಣೆಗೆ ಬಂತು ಎನ್ನಲಾಗುತ್ತದೆ.
ದುರ್ಗಾ ದೇವಿಯು ಅರುಣೋದಯ ಕಾಲದಲ್ಲಿ ಶಂಭಾಸುರ, ರಕ್ತಬಬೀಜಾಸುರನನ್ನು ಸಂಹರಿಸಿದಳು ಆದ್ದರಿಂದ ಉದಯದಿಂದ ಆರು ಘಳಿಗೆ ಅಷ್ಟಮೀಯುಕ್ತವಾಗಿದ್ದಲ್ಲಿ ಅದು ಮಹಾನವಮಿ ಎಂದೆನಿಸುತ್ತದೆ. ಆಶ್ವಿನಿ ಮಾಸದ ಶುಕ್ಲ ನವಮಿಯು ರಾತ್ರಿಯವರೆಗೂ ವ್ಯಾಪಿಸಿದ್ದರೆ ಅದು ಕುದುರೆ, ಆನೆ, ಶಸ್ತ್ರಾಸ್ತ್ರಗಳ ಪೂಜೆಗೆ ಯೋಗ್ಯ ಘಳಿಗೆ ಎನ್ನಲಾಗುತ್ತದೆ.
ದ್ವಾಪರ ಯುಗದಲ್ಲಿ ಪಾಂಡವರು 12 ವರ್ಷ ವನವಾಸ ಹಾಗೂ ಒಂದು ವರ್ಷ ಅಜ್ಞಾತವಾಸ ಮುಗಿಸಿ ಬಂದ ದಿನವೇ ವಿಜಯದಶಮಿ ಎನ್ನಲಾಗುತ್ತದೆ. ಅಜ್ಞಾತವಾಸದ ಸಮಯದಲ್ಲಿ ಪಾಂಡವರು ತಮ್ಮ ಶಸ್ತ್ರಾಸ್ತ್ರಗಳನ್ನು ಬನ್ನೀ ಮರದಲ್ಲಿ ಬಚ್ಚಿಟ್ಟಿರುತ್ತಾರೆ.
ಅಜ್ಞಾತವಾಸ ಕಳೆದ ವಿಜಯದಶಮಿಯಂದು ಬನ್ನೀ ಮರದಲ್ಲಿ ಬಚ್ಚಿಟ್ಟಿದ್ದ ಆಯುಧಗಳನ್ನು ತೆಗೆದು ಪೂಜಿಸಿ, ನಂತರ ವಿರಾಟರಾಜನ ಶತ್ರುಗಳಾದ ಕೌರವರ ಮೇಲೆ ವಿಜಯವನ್ನು ಸಾಧಿಸಿದರು ಎಂಬ ನಂಬಿಕೆ ಇದೆ.
ಆಯುಧ ಪೂಜಾ ವಿಧಿ:
ದುರ್ಗಾದೇವಿಯು ದುಷ್ಟರ ಸಂಹಾರಕ್ಕಾಗಿ ಅಷ್ಟಭುಜಗಳಿಂದ ಕೂಡಿದವಳಾಗಿ ಅವತರಿಸಿದಳು. ಹಾಗಾಗಿ ಅವಳು ಧರಿಸಿರುವ ಆಯುಧಗಳಾದ ಬಿಲ್ಲು ,ಶೂಲ ,ಬಾಣ ,ಗುರಾಣಿ ,ಕತ್ತಿ ,ಶಂಖ ,ಚಕ್ರ , ಗದೆಗಳನ್ನು ಮಹಾನವಮಿಯಂದು ಪೂಜಿಸಬೇಕು ಎನ್ನಲಾಗುತ್ತದೆ. ಆಯುಧ ಪೂಜೆಯಂದು ಆಯುಧಗಳನ್ನು ಇರಿಸಿ ಕಲಶವನ್ನು ಸ್ಥಾಪಿಸಿ ದುರ್ಗಾ ದೇವಿಹಾಗೂ ನರಸಿಂಹದೇವರನ್ನು ಶೋಡಷೋಚಾರಪೂಜೆಗಳಿಂದ ಪೂಜಿಸಬೇಕು.
ಆಯುಧ ಪೂಜೆಗೆ ಬೇಕಾಗುವ ವಸ್ತುಗಳು:
ಅರಿಶಿಣ
ಸಿಂಧೂರ ಅಥವಾ ಕುಂಕುಮ
ಅಡಿಕೆ- ವೀಳ್ಯದೆಲೆ
ಮಂಡಕ್ಕಿ
ಬಿಳಿಕುಂಬಳಕಾಯಿ ಅಥವಾ ನಿಂಬೆಹಣ್ಣು
ಬಾಳೆಹಣ್ಣು
ಹಣ್ಣುಗಳು
ಕಬ್ಬುಗಳ ತುಂಡು
ಪುಡಿ ಮಾಡಿದ ಬೆಲ್ಲ
ಕಾಯಿ ತುರಿ ಹಾಗೂ ಒಂದು ತೆಂಗಿನಕಾಯಿ
ಬಾಳೆಎಲೆ
ಅಗರಬತ್ತಿ
ಕರ್ಪೂರ
ನೈವೇದ್ಯದ ತಿನಿಸುಗಳು












Click it and Unblock the Notifications