ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಸರಾ ಯಶಸ್ವಿಗೆ 'ಶೋಭಾ'ಯಾಮಾನ

By Staff
|
Google Oneindia Kannada News

Shobha Karandlajeಮೈಸೂರು, ಅ. 14 : ಐತಿಹಾಸಿಕ ಮೈಸೂರು ದಸರಾ ಉತ್ಸವದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಜಿಲ್ಲಾ ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆ ಮುಂದಿನ ವರ್ಷದ ದಸರಾ ಹಬ್ಬವನ್ನು ಈ ಸಲಕ್ಕಿಂತ ಉತ್ತಮ ರೀತಿಯಲ್ಲಿ ಆಯೋಜನೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಮುಂದಿನ ವರ್ಷ ದಸರಾ ಹಬ್ಬಕ್ಕೆ ಆರು ತಿಂಗಳ ಮೊದಲೇ ನಗರವನ್ನು ಅಲಂಕಾರ ಮಾಡುವ ಇಂಗಿತ ವ್ಯಕ್ತಪಡಿಸಿದರು. ನಗರದ ಮೂಲಭೂತ ಸೌಕರ್ಯಗಳ ಕುರಿತು ಕೈಗೆತ್ತಿಕೊಂಡಿರುವ ಎಲ್ಲ ಯೋಜನೆಗಳು ಮುಂದಿನ ಮೇ ಅಥವಾ ಜೂನ್ ತಿಂಗಳಲ್ಲಿ ಕೊನೆಗೊಳ್ಳಬೇಕು ಎಂದು ಸೋಮವಾರ ನಡೆಸಿದ ಅಧಿಕಾರಿಗಳ ಸಭೆಯಲ್ಲಿ ಸ್ಪಷ್ಟವಾದ ಸೂಚನೆ ನೀಡಲಾಗಿದೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.

ದಸರಾ ಹಬ್ಬಕ್ಕೆ ಮುನ್ನಾ ನಗರದ ಮೂಲಭೂತ ಸೌಕರ್ಯಗಳಿಗೆ ಚಾಲನೆ ನೀಡಲಾಗುತ್ತಿದೆ. ಇದರಿಂದ ಕಾಮಗಾರಿಗಳು ಕಳಪೆ ಗುಣಮಟ್ಟದ್ದಾಗಿರುತ್ತವೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ. ಈ ವಿಷಯವೂ ನಮ್ಮ ಗಮನಕ್ಕೂ ಬಂದಿದ್ದೂ ಮುಂದಿನ ವರ್ಷ ದಸರಾ ಹಬ್ಬ ಆರು ತಿಂಗಳ ಮೊದಲೇ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ಅವರು ಹೇಳಿದರು.

ಮುಂದಿನ ವರ್ಷದ ದಸರಾಕ್ಕೆ ಸರ್ಕಾರ 100 ಕೋಟಿ ರುಪಾಯಿ ಅನುದಾನ ನೀಡಲಿದೆ. ಈ ಹಣವನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳಲು ಸಂಬಂಧಿಸಿದ ಇಲಾಖೆಗೆ ಜವಾಬ್ದಾರಿ ನೀಡಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮ ಸೇರಿ ಎಲ್ಲ ಕಾರ್ಯಕ್ರಮಗಳ ಪಟ್ಟಿಯನ್ನು ಮೂರು ತಿಂಗಳ ಮೊದಲೇ ಪೂರ್ಣಗೊಳಿಸಲಾಗುವುದು. ಹಬ್ಬ 15 ದಿನ ಇರುವಾಗಲೇ ಎಲ್ಲ ಕೆಲಸಗಳನ್ನು ಮುಗಿಸಿ ಸರ್ವಸನ್ನದ್ಧವಾಗಿರುವಂತೆ ನೋಡಿಕೊಳ್ಳಲಾಗುವುದು ಎಂದು ಅವರು ವಿವರಿಸಿದರು.

ಬಿಜೆಪಿ ಸರ್ಕಾರದ ಏಕೈಕ ಮಹಿಳಾ ಸಚಿವೆ ಎಂಬ ಗರಿಮೆ ಹೊತ್ತಿರುವ ಶೋಭಾ ಕರಂದ್ಲಾಜೆ ಅವರಿಗೆ ಯಡಿಯೂರಪ್ಪ ಸಂಪುಟದಲ್ಲಿ ಸಚಿವ ಸ್ಥಾನವನ್ನು ಗಿಟ್ಟಿಸಿದರು. ಜೊತೆಗೆ ಮೈಸೂರು ಜಿಲ್ಲಾ ಉಸ್ತುವಾರಿ ಜವಾಬ್ದಾರಿಯೂ ಅವರ ಮೇಲೆ ಬಿದ್ದಿತು. ಮೈಸೂರು ಜಿಲ್ಲಾ ಉಸ್ತುವಾರಿ ಹೊತ್ತಿರುವವರು ಐತಿಹಾಸಿಕ ಮೈಸೂರು ದಸರಾ ಉತ್ಸವದ ಅಧ್ಯಕ್ಷರಾಗುವುದು ವಾಡಿಕೆ. ನಿರೀಕ್ಷೆಯಂತೆ ಉತ್ಸವದ ಅಷ್ಟೂ ಜವಾಬ್ದಾರಿ ಶೋಭಾ ಅವರ ಹೆಗಲೇರಿತು. ಆಗ ಅನೇಕ ಕಡೆಗಳಿಂದ ಟೀಕೆ ಟಿಪ್ಪಣಿಗಳು ಕೇಳಿ ಬಂದವು. ಹೆಣ್ಣು ಮಗಳು ದಸರಾ ಉತ್ಸವದಂತಹ ಐತಿಹಾಸಿಕ ಕಾರ್ಯಕ್ರಮವನ್ನು ಯಾವುದೇ ವಿಘ್ನವಿಲ್ಲದೆ ನಡೆಸಿಕೊಡಲು ಸಾಧ್ಯವೆ ಎಂದು ತಮ್ಮ ಮೂಗಿನ ನೇರಕ್ಕೆ ಜನಸಾಮಾನ್ಯರು ಸೇರಿ ರಾಜಕಾರಣಿಗಳು ಮಾತನಾಡಿದರು. ಆದರೆ ತಮಗೆ ವಹಿಸಿರುವ ಜವಾಬ್ದಾರಿಯನ್ನು ಸವಾಲಾಗಿ ಸ್ವೀಕರಿಸಿದ ಅವರು, ಉತ್ಸವಕ್ಕೆ ಭಂಗಬಾರದಂತೆ ಹಗಲು ರಾತ್ರಿ ದುಡಿದರು. ದಸರಾ ಹಬ್ಬವನ್ನು ಯಶಸ್ವಿಯಾಗಿ ಮುಗಿಸಿ ಎಲ್ಲರಿಂದ ಸೈ ಎನಿಸಿಕೊಂಡರು.

(ದಟ್ಸ್ ಕನ್ನಡ ವಾರ್ತೆ)

ದಸರಾ ಸುದ್ದಿಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X