ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುಷ್ಟ ನಿಗ್ರಹ, ಶಿಷ್ಟ ರಕ್ಷಣೆಯ ವಿಜಯದಶಮಿ

By Staff
|
Google Oneindia Kannada News

jayachamaraja wodeyar (Photo courtesy : www.vikramsampath.com)ಇಂದು ನವರಾತ್ರಿಯ ಹತ್ತನೇ, ಹಾಗೂ ಕಡೆಯ ದಿವಸ. ವಿಜಯ ದಶಮಿ. ರಾಮ ರಾವಣನನ್ನು ಕೊಂದು, ವಿಜಯ ಪಡೆದ ದಿನವೆಂದೂ, ದೇವಿ ಚಾಮುಂಡೇಶ್ವರಿ ಮಹಿಷಾಸುರನನ್ನು ಸಂಹರಿಸಿದ ದಿನವೆಂದೂ ನಾವು ಈ ದಿನವನ್ನು ಆಚರಿಸುತ್ತೇವೆ.

ಮಾಹಿತಿ : ಹಂಸಾನಂದಿ

ಮೈಸೂರು ರಾಜ್ಯದ ಕಡೆಯ ದೊರೆಗಳಾದ ಜಯಚಾಮರಾಜೇಂದ್ರ ಒಡೆಯರು ಒಬ್ಬ ಪ್ರತಿಭಾನ್ವಿತ ಸಂಗೀತಗಾರರು, ವಾಗ್ಗೇಯಕಾರರೂ ಆಗಿದ್ದರೆಂಬುದು ಹೆಚ್ಚಾಗಿ ಜನಕ್ಕೆ ತಿಳಿದಿಲ್ಲದಿರುವುದು ದೌರ್ಭಾಗ್ಯವೇ ಸರಿ.

ಜಯಚಾಮರಾಜೇಂದ್ರ ಒಡೆಯರು ಮೊದಲು ಕಲಿತದ್ದು ಪಾಶ್ಚಾತ್ಯ ಸಂಗೀತ. ಲಂಡನ್ನಿನ್ಸ್ ಟ್ರಿನಿಟಿ ಕಾಲೇಜಿನಲ್ಲಿ ಪಿಯಾನೋ ವಿದ್ಯಾರ್ಥಿಗಳಿಗೆ ದೊರೆಯಬಹುದದ ಅತಿ ಹೆಚ್ಚಿನ ಪ್ರಶಸ್ತಿಗಳನ್ನು ಪಡೆದು ಅವರು ಹೊರಬಂದರು. ಪಟ್ಟವೇರಿದ ಮೇಲೆ, ಸುಮಾರು ಆರು ವರ್ಷ ಕಾಲ ಮೈಸೂರು ವಾಸುದೇವಾಚಾರ್ಯರಲ್ಲಿ ಕರ್ನಾಟಕ ಸಂಗೀತದ ಅಭ್ಯಾಸ ಮಾಡಿದರು. 1945 ರಿಂದ 1947ರ ವರೆಗೆ ಸುಮಾರು ಎರಡುವರ್ಷಗಳ ಅವಧಿಯಲ್ಲಿ ತೊಂಬತ್ತನಾಕು ಕೃತಿಗಳನ್ನು ರಚಿಸಿದ್ದಾರೆ ಒಡೆಯರು. ತಮ್ಮ ರಚನೆಗಳನ್ನು ಇವರು ಮೊದಲು ಪಿಯಾನೋದಲ್ಲೇ ನುಡಿಸಿ, ಅದನ್ನು ತಿದ್ದಿ ತೀಡಿ, ನಂತರ ತಮ್ಮ ಗುರುಗಳಿಗೂ, ಹಾಗೂ ಅರಮನೆಯ ಇತರ ವಿದ್ವಾಂಸರಿಗೂ ಕೇಳಿಸಿ, ಅವರ ಅಭಿಪ್ರಾಯವನ್ನು ಕೇಳಿ, ನಂತರ ತಮ್ಮ ಕೃತಿಗಳಿಗೆ ಪೂರ್ಣಸ್ವರೂಪವನ್ನು ಕೊಡುತ್ತಿದ್ದ ವಿಷಯವನ್ನು ಇವರನ್ನು ಹತ್ತಿರದಿಂದ ನೋಡಿದ ಸಂಗೀತವಿದ್ವಾಂಸರು ಹೇಳಿದ್ದಾರೆ.

ಇವರ ಕೃತಿಸಮೂಹದಲ್ಲಿ ಗಮನಿಸಬೇಕಾದ ಅಂಶವೆಂದರೆ, ಇವರು ಒಂದು ರಾಗದಲ್ಲಿ ಕೇವಲ ಒಂದೇ ರಚನೆ ಮಾಡಿದ್ದಾರೆ. ಅಂದರೆ ೯೪ ರಚನೆಗಳಿಗೂ ಬೇರೆ ಬೇರೆ ರಾಗಗಳನ್ನೇ ಬಳಸಿದ್ದಾರೆ. ಇನ್ಯಾವ ವಾಗ್ಗೇಯಕಾರರೂ ಈ ಮೊದಲು ಹಾಗೆ ರಚಿಸಿರುವುದು ದಾಖಲಾಗಿಲ್ಲ.

ಒಡೆಯರಾಳಿದ ಮೈಸೂರಿನ ಅಧಿದೇವತೆ ಚಾಮುಂಡೇಶ್ವರಿ. ಒಡೆಯರು ಆಳಿದ್ದು ಕನ್ನಡ ನಾಡನ್ನು. ಇವೆರಡಕ್ಕೂ ಹೊಂದುವಂತೆ, ಇಂದು ನಾನು ಆಯ್ದಿರುವ ರಚನೆ ಜಯಚಾಮರಾಜ ಒಡೆಯರು ರಚಿಸಿರುವ ಕನ್ನಡ ರಾಗದ ಕೃತಿ - ಶ್ರೀ ಚಾಮುಂಡೇಶ್ವರಿ ದೇವಿ ಎಂಬುದು. ಹೌದು, ಕನ್ನಡ ಎಂಬುದೊಂದು ಮಾತ್ರವೇ ಒಂದು ನಾಡು, ಇಂದು ನುಡಿ, ಮತ್ತು ಸಂಗೀತ ಪ್ರಪಂಚದಲ್ಲಿ ಒಂದು ರಾಗ - ಈ ಎಲ್ಲಕ್ಕೂ ಸರಿಹೋಗಬಲ್ಲ ಹೆಸರು.

ಇದನ್ನು ನೀವು ಈ ಕೆಳಗಿನ ಕೊಂಡಿಗಳಲ್ಲಿ ಕೇಳಬಹುದು (ಕೃಪೆ: ಸಂಗೀತಪ್ರಿಯ.ಆರ್ಗ್) :

ಡಾ.ಆರ್.ಎನ್. ಶ್ರೀಲತಾ ಅವರ ಕಂಠದಲ್ಲಿ
ರುದ್ರಪಟ್ಟಣ ಸಹೋದರರು: ತಾಗರಾಜನ್ ಮತ್ತು ಡಾ.ತಾರಾನಾಥ್ ಅವರ ಕಂಠದಲ್ಲಿ

ಒಡೆಯರು ಶ್ರೀವಿದ್ಯಾ ಉಪಾಸಕರಾಗಿದ್ದು, ತಮ್ಮ ರಚನೆಗಳಲ್ಲಿ ಶ್ರೀವಿದ್ಯಾ ಎಂಬ ಅಂಕಿತವನ್ನು ಬಳಸಿದ್ದಾರೆ. ಅವರಿಗೆ ಶ್ರೀವಿದ್ಯೆಯ ದೀಕ್ಷೆ ದೊರೆತಾಗ ಅವರಿಗೆ ಚಿತ್ಪ್ರಭಾನಂದ ಎಂಬ ದೀಕ್ಷಾನಾಮವನ್ನು ಇಡಲಾಗಿತ್ತು. ಕೆಲವು ರಚನೆಗಳಲ್ಲಿ, ಚಿತ್ಪ್ರಭಾನಂದ ಎಂಬ ಮುದ್ರೆಯೂ ಕಂಡುಬರುತ್ತದೆ. ಜಯಚಾಮರಾಜ ಒಡೆಯರ ಎಲ್ಲ ರಚನೆಗಳೂ ಸಂಸ್ಕೃತ ಭಾಷೆಯಲ್ಲಿವೆ. ಮುತ್ತುಸ್ವಾಮಿ ದೀಕ್ಷಿತರ ಶೈಲಿಯನ್ನು ಹೋಲುವ, ಇವರ ಶೈಲಿ, ಅಷ್ಟು ಸರಳವಲ್ಲದಿದ್ದರೂ, ರಸಭರಿತವಾದದ್ದು.

ಮೈಸೂರಿನಲ್ಲಿ, ಜಂಬೂಸವಾರಿಯಲ್ಲಿ ಚಾಮುಂಡೇಶ್ವರಿಯ ಮೆರವಣಿಗೆ ಹೋಗುವ ಈ ದಿನ, ಒಡೆಯರು ರಚಿಸಿದ ಚಾಮುಂಡೇಶ್ವರಿಯ ಮೇಲಿನ ಕೃತಿ, ಈ ನವರಾತ್ರಿಯ ಹಬ್ಬಸಾಲಿಗೆ ಸರಿಯಾದ ಮಂಗಳವೆಂದು ನನ್ನ ಅನಿಸಿಕೆ.

ಪೂರಕ ಓದಿಗೆ:
ದಸರಾ ಹಬ್ಬದ ಸಂಭ್ರಮದ ಸುದ್ದಿಗಳು
ನವರಾತ್ರಿಯ ಗ್ಯಾಲರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X