ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಸರಾ ಪ್ರಯುಕ್ತ ಮಡೀಕೇರಿಗೆ ನಿರಂತರ ವಿದ್ಯುತ್

By Staff
|
Google Oneindia Kannada News

madikeri jana dasaraಮಡಿಕೇರಿ, ಅ. 8: ದಸರಾ ನಾಡಹಬ್ಬದ ಪ್ರಯುಕ್ತ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ ಮಡಿಕೇರಿ ನಗರ ಹಾಗೂ ಗೋಣಿಕೊಪ್ಪಲು ವ್ಯಾಪ್ತಿಯಲ್ಲಿ ಅ. 9 ರಂದು ನಿರಂತರ ವಿದ್ಯುತ್ ಸರಬರಾಜು ಒದಗಿಸುವ ನಿಟ್ಟಿನಲ್ಲಿ ಮತ್ತು ಸಾರ್ವಜನಿಕರ ಸುರಕ್ಷತೆ ಹಿತ ದೃಷ್ಟಿಯಿಂದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಮಡಿಕೇರಿ ಸೆಸ್ಕಾಂ ಕಾರ್ಯ ನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

ಮಡಿಕೇರಿ ವಿಭಾಗ ವ್ಯಾಪ್ತಿಗೆ ಬರುವ ಎಲ್ಲಾ 66/33/11 ಕೆವಿ ಉಪವಿತರಣಾ ಕೇಂದ್ರಗಳ ತುರ್ತು ನಿರ್ವಹಣಾ ಕೆಲಸಗಳನ್ನು ಪೂರ್ಣಗೊಳಿಸಲಾಗಿದೆ.
ಮಡಿಕೇರಿ ಹಾಗೂ ಗೋಣಿಕೊಪ್ಪಲು ನಗರ ವ್ಯಾಪ್ತಿಗೆ ಬರುವ ಎಲ್ಲಾ11 ಕೆವಿ ಮಾರ್ಗ ವಿದ್ಯುತ್ ವಿತರಣಾ ಪರಿವರ್ತಕ ಕೇಂದ್ರ ಹಾಗೂ ಎಲ್ ಟಿ ಮಾರ್ಗಗಳ ನಿರ್ವಹಣಾ ಕೆಲಸಗಳನ್ನು ಪೂರ್ಣಗೊಳಿಸಿ ಸುಸ್ಥಿತಿಯಲ್ಲಿಡಲಾಗಿದೆ.

ಅಲಂಕೃತ ಮಂಟಪಗಳು ಸಾಗುವ ರಸ್ತೆಯ ಅಡ್ಡಲಾಗಿ ಹಾದು ಹೋಗಿರುವ ಎಲ್ಲಾ ವಿದ್ಯುತ್ ಮಾರ್ಗಗಳ ಪರಿವೀಕ್ಷಣೆ ನಡೆಸಿ ಸುಸ್ಥಿತಿಯಲ್ಲಿಡಲಾಗಿದೆ ಮತ್ತು ಸಾಧ್ಯವಾದ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ದಸರಾ ಹಬ್ಬದ ದಿನದಂದು ಎಲ್ಲಾ ಮಂಟಪಗಳ ಜೊತೆಯಲ್ಲಿ ಇಬ್ಬರು ನೌಕರರನ್ನು ನೇಮಿಸಲಾಗುವುದು ಹಾಗೂ ಇತರ ಮುಖ್ಯ ಕೇಂದ್ರಗಳಲ್ಲಿ ನೌಕರರನ್ನು ನೇಮಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು. ಮಡಿಕೇರಿ ನಗರದ ಸೇವಾ ಕೇಂದ್ರದಲ್ಲಿ ತುರ್ತು ಕೆಲಸಗಳಿಗೆ ಅನುಕೂಲವಾಗುವಂತೆ ಒಂದು ಜೀಪು (ಏಣಿ, ಇತರ ಸಾಮಾಗ್ರಿ ಹಾಗೂ ಸಲಕರಣಿಗಳೊಂದಿಗೆ) ಹಾಗೂ 4 ಜನ ನೌಕರರನ್ನು ನೇಮಿಸಲಾಗುವುದು.

ಮಡಿಕೇರಿ ನಗರಕ್ಕೆ ಪ್ರಸ್ತುತ: 66/33 ಕೆವಿ ಕುಶಾಲನಗರ ಉಪವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜಾಗುತ್ತಿದ್ದು, ಸದರಿ ಮಾರ್ಗದಲ್ಲಿ ಯಾವುದಾದರೊಂದು ರೀತಿಯಲ್ಲಿ ಅಡಚಣೆಯುಂಟಾದಾಗ 66/33 ಕೆವಿ ವೀರಾಜಪೇಟೆ ಕೇಂದ್ರದಿಂದ ವಿದ್ಯುತ್ ಸರಬರಾಜು ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಮತ್ತು 33 ಕೆವಿ ಮಾರ್ಗಗಳ ಪರಿವೀಕ್ಷಣೆಗೂ ಮತ್ತು ತುರ್ತು ಕೆಲಸಗಳನ್ನು ನಿರ್ವಹಿಸಲು ವಾಹನ ಹಾಗೂ ಸಿಬ್ಬಂದಿಗಳನ್ನು ನೇಮಿಸಲಾಗುತ್ತದೆ.

ದೂರದರ್ಶನ ಜಾಲದ ಕೇಬಲ್‌ಗಳು ವಿದ್ಯುತ್ ವಿತರಣಾ ಮಾರ್ಗದ ಕಂಬಗಳ ಮೇಲೆಯೇ ಹಾದು ಹೋಗಿದ್ದು, ಹಲವಾರು ಕಡೆ ಸೂಕ್ತ ಅಂತರವನ್ನು ಕಾಪಾಡಿಕೊಳ್ಳುವಂತೆ ಸಂಬಂಧಪಟ್ಟ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ.

ವಿದ್ಯುತ್ ವಿತರಣಾ ಮಾರ್ಗಗಳು ಸಾಮಾನ್ಯವಾಗಿ ಭೂಮಿಯಿಂದ 18 ರಿಂದ 20 ಅಡಿಗಳಷ್ಟು ಅಂತರದಲ್ಲಿದ್ದು, ಮಂಟಪಗಳನ್ನು 25 ಅಡಿಗಳಿಗೂ ಅಧಿಕ ಎತ್ತರದಲ್ಲಿ ನಿರ್ಮಿಸುವುದರಿಂದ ವಿದ್ಯುತ್ ಮಾರ್ಗಗಳ ಹತ್ತಿರ ಮಂಟಪಗಳನ್ನು ಸಾಗಿಸುವ ಸಂದರ್ಭಗಳಲ್ಲಿ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸುವುದು ಅನಿವಾರ್ಯವಾಗಿರುತ್ತದೆ. ಆದ್ದರಿಂದ ಎಲ್ಲಾ ಮಂಟಪಗಳ ಅಧ್ಯಕ್ಷರಿಗೂ ಹಾಗೂ ಮಂಟಪದ ಜೊತೆಯಲ್ಲಿರುವ ಪ್ರತಿನಿಧಿಗಳಿಗೂ ಮಂಟಪ ಸಾಗುವ ಮಾರ್ಗದ ವಿದ್ಯುತ್ ಕಡಿತಗೊಳಿಸಿದ ನಂತರ ಮಾತ್ರ ಮುಂದಕ್ಕೆ ಸಾಗಿಸುವಂತೆಯೂ ಹಾಗೂ ಮಂಟಪಗಳ ಜೊತೆಯಲ್ಲಿರುವ ನಿಗಮದ ನೌಕರರೊಂದಿಗೆ ಸಹಕರಿಸುವಂತೆಯೂ ಕೋರಲಾಗಿದೆ.

ಮಿನಿ ದಸರಾ ಜಾತ್ರೆ ಸಂಭ್ರಮ
ಅ. 9 ರಂದು ನಿಗಮದ 33/11 ಕೆವಿ ಉಪವಿತರಣಾ ಕೇಂದ್ರ, 24 ಗಂಟೆ ಸೇವಾಕೇಂದ್ರ ಹಾಗೂ ಸೇವಾ ಕೇಂದ್ರದ ವಾಹನದ ಜೊತೆ ಪೊಲೀಸ್ ಸಿಬ್ಬಂದಿಗಳನ್ನು ವೈರ್ ಲೆಸ್ ಮತ್ತು ದೂರವಾಣಿ ಸಲಕರಣೆಯೊಂದಿಗೆ ನೇಮಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕೋರಲಾಗಿದೆ. ದಸರಾ ಜಾತ್ರೆಯ ದಿನದಂದು ಅಂಗಡಿ ಮಳಿಗೆಗಳು ಹಾಗೂ ಮನೆಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲು ನಿಗಮದಿಂದ ಅನುಮತಿ ಪಡೆದುಕೊಳ್ಳುವಂತೆ ಕೋರಲಾಗಿದೆ.

ಈಗಾಗಲೇ ಮುಖ್ಯ ಬೀದಿಗಳಲ್ಲಿ ಹಾಗೂ ಮುಖ್ಯ ಸಮಾರಂಭದ ವೇದಿಕೆಗೆ ಬೆಳಕಿನ ವ್ಯವಸ್ಥೆ ಒದಗಿಸಲು ಪುರಸಭೆ/ದಸರಾ ಕಮಿಟಿಯ ವತಿಯಿಂದ ಕ್ರಮ ಕೈಗೊಳ್ಳಲಾಗಿದ್ದು, ವಿದ್ಯುತ್ ಪರಿವೀಕ್ಷಕರ ಅನುಮತಿಯಿಂದ ಕ್ರಮ ಕೈಗೊಳ್ಳಲಾಗಿದ್ದು, ವಿದ್ಯುತ್ ಪರಿವೀಕ್ಷಕರ ಅನುಮತಿ ಪಡೆದುಕೊಳ್ಳುವಂತೆ ಚೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಕೋರಿದ್ದಾರೆ.

ಪುಷ್ಪ ಪ್ರದರ್ಶನ: ಮಡಿಕೇರಿ ರಾಜಾಸೀಟು ಉದ್ಯಾನವನದಲ್ಲಿ ದಸರಾ ಹಬ್ಬದ ಪ್ರಯುಕ್ತ ರಾಜಾಸೀಟು ಅಭಿವೃದ್ಧಿ ಸಮಿತಿ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ಅ.8 ಹಾಗೂ 9 ರಂದು ಉದ್ಯಾನವನದ ಒಳಭಾಗದಲ್ಲಿ ರೋಸ್ ಗ್ಲೋಬ್, ಊಟಿ ಹೂ ಹಾಗೂ ಆಂಥೋರಿಯಂ ಹೂಗಳ ಪ್ರದರ್ಶನ ಮತ್ತು ಉದ್ಯಾನವನವನ್ನು ವಿದ್ಯುತ್ ದೀಪಗಳಿಂದ ಅಲಂಕಾರ ಹಾಗೂ ಸಂಜೆ ನೃತ್ಯ ಕಾರಂಜಿ ಚಾಲನೆ ಮಾಡುವ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
(ದಟ್ಸ್ ಕನ್ನಡವಾರ್ತೆ)

ಮೈಸೂರು ದಸರಾ ಸುದ್ದಿಗಳು
ದಸರಾ ಸಂಭ್ರಮದ ಚಿತ್ರಸಂಪುಟ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X