ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆನಪಿನ ಗಣಿಯಿಂದ ಎದ್ದುಬಂದ ರತ್ನಸಿಂಹಾಸನ

By Staff
|
Google Oneindia Kannada News

ದಸರಾ ಉತ್ಸವಕ್ಕೆ ಸಾಕ್ಷಿ -ಬಂಗಾರ

17ನೇ ಶತಮಾನದಲ್ಲಿ ಈ ಸಿಂಹಾಸನವು ಮೈಸೂರು ಅರಸರ ವಶಕ್ಕೆ ಬಂತು. 1600ರ ಆದಿ ಭಾಗದಲ್ಲಿ ಅನಾರೋಗ್ಯ ಪೀಡಿತನಾಗಿದ್ದ ವಿಜಯನಗರದ ಪ್ರತಿನಿಧಿ ಶ್ರೀರಂಗರಾಯನು ತನ್ನ ವಶದಲ್ಲಿ ಶ್ರೀರಂಗಪಟ್ಟಣದಲ್ಲಿದ್ದ ಈ ಸಿಂಹಾಸನವನ್ನು ಮೈಸೂರು ಒಡೆಯರ ಮನೆತನಕ್ಕೆ ಒಪ್ಪಿಸಿದ. 1610ರಲ್ಲಿ ಮೈಸೂರು ಅರಸರಾದ ರಾಜ ಒಡೆಯರು ಈ ರತ್ನಸಿಂಹಾಸನವನ್ನು ಏರಿ, ನಾಡ ಉತ್ಸವ ಆಚರಿಸಿದರಂತೆ. ಅಂದಿನಿಂದಲೂ ಪ್ರತಿವರ್ಷ ಉತ್ಸವ ಆಚರಿಸುವಂತೆ ಆದೇಶಿಸಿದರಂತೆ. ಇದಕ್ಕೆ ಕಾರಣವೂ ಇಲ್ಲದಿಲ್ಲ . ವಿಜಯನಗರ ಅರಸರು ಆರಂಭಿಸಿದ್ದ ದಸರಾ ಉತ್ಸವದಲ್ಲಿ ಈ ಸಿಂಹಾಸನದ ಪಾತ್ರವೂ ಪ್ರಮುಖವಾಗಿತ್ತು. ಹೀಗಾಗಿ ತಾವು ಸಿಂಹಾಸನಾರೋಹಣ ಮಾಡಿದ ದಿನದಿಂದಲೂ ಮೈಸೂರು ಒಡೆಯರು ಅನೂಚಾನವಾಗಿ ದಸರೆ ಉತ್ಸವವನ್ನು ನಡೆಸುತ್ತಿದ್ದಾರೆ ಎಂದು ತಲತಲಾಂತರದಿಂದ ಈ ಕತೆ ಕೇಳಿದ ಮೈಸೂರಿನ ಹಿರಿಯರು ಹೇಳುತ್ತಾರೆ. ಇದಕ್ಕೆ ಪುಷ್ಟಿ ನೀಡುವ ಶಿಲಾ ಶಾಸನಗಳೇ ಮೊದಲಾದ ಕೆಲವು ಐತಿಹಾಸ ದಾಖಲೆಗಳೂ ಲಭ್ಯ.

ಔರಂಗಜೇಬನ ಕೊಡುಗೆ : ಮತ್ತೊಂದು ಕತೆಯ ರೀತ್ಯ 17ನೇ ಶತಮಾನದಲ್ಲಿ ಈ ಸಿಂಹಾಸನವನ್ನು ಔರಂಗಜೇಬನು ಮೈಸೂರು ಒಡೆಯರಾದ ಚಿಕ್ಕದೇವರಾಜ ಮಹಾಪ್ರಭುಗಳಿಗೆ ಕಾಣಿಕೆಯಾಗಿ ನೀಡಿದನಂತೆ. ಇದನ್ನು ಪುಷ್ಟೀಕರಿಸುವಂತಹ ಯಾವುದೇ ದಾಖಲೆಗಳು ದೊರೆತಿಲ್ಲ ಎನ್ನುತ್ತಾರೆ ಕೆಲವು ಇತಿಹಾಸಜ್ಞರು.

ಮತ್ತೊಂದು ಕತೆಯ ರೀತ್ಯ ಈ ಸಿಂಹಾಸನ ಮೈಸೂರು ಅರಸರಿಗೆ ದೊರಕಿದ್ದೇ 1799ರಲ್ಲಂತೆ. ಶ್ರೀರಂಗಪಟ್ಟಣದ ಅರಮನೆಯ ಕೊಠಡಿಯಾಂದರಲ್ಲಿ ದೊರೆತ ಈ ಸಿಂಹಾಸನವನ್ನು ರಿಪೇರಿ ಮಾಡಿಸಿ 1799ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ ಪಟ್ಟಾಭಿಷೇಕವನ್ನು ಈ ರತ್ನ ಸಿಂಹಾಸನದಲ್ಲಿ ಮಾಡಲಾಯಿತಂತೆ. ಆದರೆ, 1799ಕ್ಕಿಂತಲೂ ಹಿಂದೆ ಅಂದರೆ ಸರಿಯಾಗಿ 100 ವರ್ಷಗಳ ಹಿಂದೆಯೇ ಈ ರತ್ನ ಸಿಂಹಾಸನ ಮೈಸೂರು ಒಡೆಯರಾಗಿದ್ದ ಚಿಕ್ಕದೇವರಾಜ ಒಡೆಯರ ವಶದಲ್ಲಿತ್ತು ಎಂಬುದಕ್ಕೆ ಶಿಲಾಶಾಸನವೊಂದರ ದಾಖಲೆ ಇದೆ.

ಔರಂಗಜೇಬನು ಕಾಣಿಕೆಯಾಗಿ ನೀಡಿದ ಮರದ ಸಿಂಹಾಸನಕ್ಕೆ ಕಾಲಾನಂತರದಲ್ಲಿ ಚಿನ್ನ - ಬೆಳ್ಳಿಯ ಹೊದಿಕೆ ಹಾಕಿ ಅದನ್ನು ಸಾಲಂಕೃತಕೊಳಿಸಿ ನಯನ ಮನೋಹರವಾಗಿ ಮಾಡಲಾಗಿದೆ ಎನ್ನುವವರೂ ಇದ್ದಾರೆ. ಯಾರು ಏನೇ ಅನ್ನಲಿ. ಸುವರ್ಣದ ಮಾವಿನ ಎಲೆಗಳು, ಬಂಗಾರದ ಬಾಳೆಯ ಕಂದುಗಳಿಂದಲೂ ಹಲವು ಪಕ್ಷಿಗಳ ಲಾಂಛನವನ್ನೂ ಹೊತ್ತಿರುವ ಅತಿ ಸುಂದರವಾದ ಈ ಸಿಂಹಾಸನವನ್ನು ಅವಕಾಶವಾದರೆ ನೀವೂ ಒಮ್ಮೆ ನೋಡಿಬಿಡಿ. ದಸರಾ ಮಹೋತ್ಸವ ಸಂದರ್ಭದಲ್ಲಿ ಮಾತ್ರ ಈ ಸಿಂಹಾಸನ ನೋಡಬಹುದು. ಬರುತ್ತೀರಿ ತಾನೆ ದಸರೆಗೆ?

back
ಮುಖಪುಟ / ಮೈಸೂರು ದಸರಾ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X