• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಂಥ ಹದವಿತ್ತಾ ? ದಸರೆಗೆ ಎಂಥ ಮುದವಿತ್ತಾ ?

By Staff
|

* ಪಾವನಿ

ಬೃಂದಾವನದಲ್ಲಿ ರಾಧಾ ಕೃಷ್ಣರ ಪ್ರೇಮ ವಿಲಾಸದ ಸೊಲ್ಲು ಕೇಳುತ್ತಿಲ್ಲ ; ಅಸಲಿಗೆ ಕನ್ನಂಬಾಡಿ ಕಟ್ಟೆಯಲ್ಲಿ ಭರಪೂರ ನೀರಿಲ್ಲ . ವಿದ್ಯುದ್ದೀಪಗಳ ಪ್ರಭಾವಳಿಯಿದ್ದರೂ ಅರಮನೆಯ ವೈಭವಕ್ಕೆ ಯಾವುದೋ ಸೂತಕದ ಕಳೆ. ಸಯ್ಯಾಜಿರಾವ್‌ ರಸ್ತೆ ಎಂದಿನಂತೆ ಗಿಜಿಗುಡುತ್ತಿದ್ದರೂ ಅಲ್ಲಿ ಜೀವನೋತ್ಸಾಹದ ತುಳುಕಿಲ್ಲ . ಅರಮನೆಯ ಪಕ್ಕದ ಮಾರುಕಟ್ಟೆಯಲ್ಲಿ ಮಣ್ಣಿನ ಬಸವ, ಲಿಂಗ ಮಾರುವ ಮುದುಕಿಯೂ ಸಪ್ಪಗಿದ್ದಾಳೆ.ಮೈಸೂರಿಗೆ ಮೈಸೂರೆ ಸೊರಗಿದಂತಿದೆ ! ಅರಮನೆಯ ಸಂಪ್ರದಾಯಗಳಿಗಷ್ಟೇ ನಾಡಹಬ್ಬ ಸೀಮಿತವಾಗಿ ಮಹಾಜನತೆ ಮಹಾಮೌನದಲ್ಲಿ ಮುಳುಗಿದೆ!

This time you cant see this !ದಸರೆ ಎಂದರೆ ಎಷ್ಟೊಂದು ಸಂಭ್ರಮವಿತ್ತು . ದೇಶದ ಮಾತು ಬಿಡಿ, ಡೈರಿಯಲ್ಲಿ ದಿನ ಗುರುತಿಟ್ಟ ವಿದೇಶಿಯರೂ ದಸರೆ ಹೊತ್ತಿನಲ್ಲಿ ಮೈಸೂರಿನತ್ತ ಮುಖ ಮಾಡುತ್ತಿದ್ದರು. ಹದಿನಾರರ ಕನಸಿನ ಹುಡುಗಿಯಂತೆ ಮೈಸೂರು ಸಿಂಗರಗೊಳ್ಳುತ್ತಿತ್ತು . ಯಾವುದೇ ಹೊಟೇಲ್‌ ಎಡತಾಕಿದರೂ ಒಂದು ರೂಂ ಖಾಲಿಯಿರುತ್ತಿರಲಿಲ್ಲ . ವ್ಯಾಪಾರಿಗಳ ಪಾಲಿಗೆ ದಸರೆಯೆಂದರೆ ಸುಗ್ಗಿಯ ಕಾಲ. ಜಂಬೂ ಸವಾರಿ ದಿನವಂತೂ ಮರಳ ಕಣ ನೆಲಕ್ಕೆ ಬೀಳದಷ್ಟು ಜನ ಸಾಗರ. ನಾಡದೇವಿ ಚಾಮುಂಡೇಶ್ವರಿಯ ವಿಗ್ರಹವಿರುವ ಅಂಬಾರಿ ಹೊತ್ತು ಠೀವಿಯಿಂದ ಸಾಗುವ ಗಜರಾಜನ ಕಣ್ಣುಗಳಲ್ಲಿ ತುಂಬಿಕೊಳ್ಳುತ್ತಿದ್ದ ರಾಜಬೀದಿಯ ಇಕ್ಕೆಲಗಳಲ್ಲಿನ ಲಕ್ಷಾಂತರ ಮಂದಿ.... ಇದೆಲ್ಲ ದೂಸರಾ ಇಲ್ಲದ ದಸರಾದ ಕತೆ. ನಾಡಹಬ್ಬ ನವರಾತ್ರಿಯ ವೈಭವದ ನೆನಪುಗಳು.

ಅದ್ದೂರಿ ದಸರಾ ನಡೆದು ಯಾವ ಕಾಲವಾಯಿತು. ಟೀವಿಯಲ್ಲಿ ನೇರ ಪ್ರಸಾರವಿರುತ್ತದೆ ಎಂತಲೋ ಏನೋ ಜನ ಕೂಡ ಮೈಸೂರಿನ ಬಸ್ಸು ಹತ್ತುವುದನ್ನು ಮರೆತಿದ್ದಾರೆ. ಒಂದು ವರ್ಷ ಬರ, ಇನ್ನೊಂದು ವರ್ಷ ಅತಿವೃಷ್ಟಿ , ಮತ್ತೊಂದು ವರ್ಷ ಭೂಕಂಪ, ಮಗದೊಂದು ವರ್ಷ ಇನ್ನೊಂದು ; ದಸರೆಗೆ ಪ್ರತಿವರ್ಷವೂ ಒಂದೊಂದು ರಾಹು ಇದ್ದದ್ದೇ. ದಸರೆ ಅದ್ದೂರಿಯಾಗಿ ಆಚರಿಸಿ ಯಾವ ಕಾಲವಾಯಿತು ?

ಈ ಬಾರಿಯೂ ರಂಗೇರದ ದಸರಾ

ನಾಡಹಬ್ಬ ನವರಾತ್ರಿಯನ್ನು ಈ ವರ್ಷ ಅದ್ದೂರಿಯಾಗಿ ಆಚರಿಸಲು ಸರ್ಕಾರವೇನೊ ಮುಂದಾಯಿತು. ಆದರೆ ಪ್ರಕೃತಿಗೆ ಯಥಾಪ್ರಕಾರದ ಮುನಿಸು. ಗುಳೆ ಹೊಂಟ ಮಳೆಯಿಂದಾಗಿ ಬರ. ಇನ್ನೊಂದೆಡೆ ನರಹಂತಕ ವೀರಪ್ಪನ್‌ನಿಂದ ಮಾಜಿ ಸಚಿವ ನಾಗಪ್ಪ ಅಪಹರಣ. ಇವೆರಡಕ್ಕೂ ಕಲಶವಿಟ್ಟಂತೆ ಕಾವೇರಿಗೆ ಬಿದ್ದ ಕಿಚ್ಚು - ಅದ್ದೂರಿ ದಸರೆಗೆ ಅಡ್ಡಿಯಾಗಲು ಇನ್ನೇನು ಬೇಕು?

‘ಬರಗಾಲ ಅಂತ ಮಸಾಲೆ ದೋಸೆ ತಿನ್ನೋದು ಬಿಟ್ಟಿದ್ದೀರಾ? ಸಂಜೆ ಪಾನಿ ಪೂರಿ ತಿನ್ನೋದು ಬಿಟ್ಟಿದ್ದೀರಾ?’ ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕುತ್ತಾ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ವಿಶ್ವನಾಥ್‌ ಅದ್ದೂರಿ ದಸರೆ ಆಚರಣೆಯೇ ಸರಿಯೆಂದು ಪಟ್ಟು ಹಿಡಿದರು. ಆದರೆ, ಹಿರಿಯ ಸಾಹಿತಿಗಳು ಕಲಾವಿದರು ಸಚಿವರಿಗೆ ತಿರುಗಿ ಬಿದ್ದರು. ಸೂತಕದ ಮನೆಯಲ್ಲಿ ವೈಭವದ ದಸರಾ ಕೂಡದೆಂದರು. ಈ ಕಾರಣದಿಂದಾಗಿ ದಸರಾ ಪುನಶ್ಚೇತನದ ನಿರೀಕ್ಷೆ ಜಾರಿಯಾಗಲೇ ಇಲ್ಲ .

ಕರುಣಾಳು ಬಾ ಬೆಳಕೆ..

ಅಕ್ಟೋಬರ್‌ 14 ರ ಸೋಮವಾರ ಆಯುಧಪೂಜೆ. 15 ರಂದು ವಿಜಯ ದಶಮಿ. ದುಷ್ಟ ಸಂಹಾರ, ಶಿಷ್ಟ ರಕ್ಷಣೆಯ ಪ್ರತೀಕವಾದ ದಿನಗಳು. ತಾಯಿ ಚಾಮುಂಡೇಶ್ವರಿಗೆ ನವರಾತ್ರಿ ಸಂದರ್ಭದಲ್ಲಿ ವಿಶೇಷ ಪೂಜೆ. ಮಳೆ ಸುರಿಯಲಿ, ನಾಗಪ್ಪ ನಾಡಿಗೆ ವಾಪಸ್ಸಾಗಲಿ, ಕಾವೇರಿಗೆ ಬಿದ್ದ ಕಿಚ್ಚು ತಣ್ಣಗಾಗಲಿ... ಬೇರೆ ಕೋರಿಕೆ ಇನ್ನೇನಿದ್ದೀತು.

ಮೈಸೂರಷ್ಟೇ ಅಲ್ಲ , ನಾಡಿನ ವಿವಿಧ ಭಾಗಗಳಲ್ಲೂ ದಸರೆ ಆಚರಣೆ ನಡೆಯುತ್ತದೆ. ತುಮಕೂರು, ಕೋಲಾರ, ಮಂಡ್ಯ, ಬೆಂಗಳೂರು ಮುಂತಾದೆಡೆಗಳಲ್ಲಿ ನವರಾತ್ರಿ ಆಚರಣೆ ಉಂಟು. ಮಡಿಕೇರಿ ದಸರೆಯಂತೂ ಮೈಸೂರಿನ ದಸರೆಗೆ ಪರ್ಯಾಯವೆಂಬಂತೆ ಗರಿಗಟ್ಟಿಕೊಳ್ಳುತ್ತಿದೆ. ಆದರೆ ಮೈಸೂರು ದಸರೆಗೆ ಯಾವುದು ಸಾಟಿ. ಮೈಸೂರು ಕನ್ನಡನಾಡಿನ ಸಾಂಸ್ಕೃತಿಕ ರಾಜಧಾನಿ. ಕನ್ನಡದ ಜಂಬೂಸವಾರಿ ಅಲ್ಲಿಂದಲೇ ಹೊರಡುವುದು. ದಸರೆಯೆಂದರೆ ತಕ್ಷಣ ನೆನಪಾಗುವುದು ಮೈಸೂರು ದಸರೆಯೇ. ದಸರೆಯಿಲ್ಲದ ಮೈಸೂರನ್ನು, ಮೈಸೂರಿಲ್ಲದ ದಸರೆಯನ್ನು ಕಲ್ಪಿಸಿಕೊಳ್ಳುವುದು ಹೇಗೆ ?

ಅದ್ದೂರಿ ಮಾತ್ರವಲ್ಲ , ಅರ್ಥಪೂರ್ಣತೆಯನ್ನೂ ಕಳಕೊಳ್ಳುತ್ತಿರುವುದು ದಸರೆಯ ದುರಂತ. ದಸರೆ ನಡೆಯದಿದ್ದರೆ ಯಾವ ಕೊಂಪೆ ಮುಳುಗೀತು ಅನ್ನುವ ಸಿನಿಕರಿಗೂ ಕೊರತೆಯಿಲ್ಲ . ಆದರೆ, ದಸರೆಯೆನ್ನುವುದು ಕೇವಲ ಹಬ್ಬವಲ್ಲ ಅನ್ನುವುದನ್ನು ನಾವೆಲ್ಲ ನೆನಪಿಡಬೇಕು. ದಸರೆ ಒಂದು ನೆಪ : ನಾಡಹಬ್ಬದ ವೇದಿಕೆಯಲ್ಲಿ ಕನ್ನಡಿಗರೆಲ್ಲ ಒಂದಾಗಲು, ನಾಡಿನ ಗರಿಮೆ ಜಗತ್ತಿಗೆ ಸಾರಲು, ಕನ್ನಡ ಸಂಸ್ಕೃತಿಯ ಬೇರುಗಳಿಗೆ ನೀರೆರೆಯಲು ದಸರೆ ಒಂದು ವೇದಿಕೆಯಾಗಿದ್ದಿತು. ದಸರೆ ಸೊರಗಿದರೆ ಈ ಎಲ್ಲ ಉದ್ದೇಶಗಳೂ ಸೊರಗುತ್ತವೆ. ಆ ಕಾರಣದಿಂದಲೇ ದಸರೆಗೆ ಇನ್ನಿಲ್ಲದ ಪ್ರಾಮುಖ್ಯ.

ದಸರೆ ಮುಂದಿನ ಸಲವಾದರೂ ಅದ್ದೂರಿಯಾಗಲಿ. ವಿಶ್ವದ ಕಣ್ಣು ಬೆಂಗಳೂರಿನತ್ತ ಹೊರಳಲಿ.

Post Your Views

Click here to go to top

ಮುಖಪುಟ / ಮೈಸೂರು ದಸರಾ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X