ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಸಲದ ಮೈಸೂರು ದಸರಾ ಜಂಬೂ ಸವಾರಿ ಬಲು ದುಬಾರಿ

By Staff
|
Google Oneindia Kannada News


ಮೊಳ ಸೇವಂತಿಗೆ 6 ರುಪಾಯಿ, ಪೂಜೆ ಹೇಗೆ ಮಾಡಿಯಾನು ಬಡಪಾಯಿ

ಮೈಸೂರು/ಬೆಂಗಳೂರು : ಟಿಕೇಟು ದರ 1,000, 500, 300, 200 ಮತ್ತು 50 ರುಪಾಯಿ- ಉಸ್ತಾದ್‌ ಜಾಕಿರ್‌ ಹುಸೇನ್‌ ಸಂಗೀತ ಕಚೇರಿಯ ಟಿಕೇಟು ದರ ಪಟ್ಟಿ ಇದಲ್ಲ. ಈ ಬಾರಿಯ ದಸರಾ ಜಂಬೂ ಸವಾರಿ (ಅ. 05) ನೋಡಲು ನಾಡಾಡಿಗಳು ತೆರಬೇಕಾದ ಶುಲ್ಕ ಪಟ್ಟಿ ಇದು.

ಬರದ ಕರಿ ನೆರಳಲ್ಲೂ ಸಾಂಸ್ಕೃತಿಕ ಬಡತನ ಯಾಕೆ ಬೇಕು ಎಂದು ಜನರ ತಲೆ ಸವರಿ ಖಾಸಗಿಯವರ ಪ್ರಾಯೋಜಕತ್ವದಲ್ಲಿ ದಸರಾಗೆ ಬಣ್ಣ ಬಳಿಯುತ್ತಿರುವ ಸರ್ಕಾರ, ನೇರವಾಗಿ ಕಾರ್ಪೊರೇಟ್‌ ಕುಳಗಳ ಜೊತೆ ವ್ಯಾಪಾರಕ್ಕೆ ಇಳಿದುಬಿಟ್ಟಿರುವಂತಿದೆ. ಹಿಂದೆಲ್ಲ 25 ರುಪಾಯಿಗೆ ಜಂಬೂ ಸವಾರಿ ಕಣ್ಣುತುಂಬಿಕೊಳ್ಳುತ್ತಿದ್ದ ಜನ ಸಾಮಾನ್ಯರು ಈಗ ಬಲರಾಮನ ಮೇಲಿನ ಚಿನ್ನದ ಅಂಬಾರಿಯ ಅಂದ ನೋಡೋಕೆ ತಮ್ಮ ಒಂದು ದಿನದ ಕೂಲಿ ಖರ್ಚು ಮಾಡಬೇಕಾದ ಪರಿಸ್ಥಿತಿ. ಅಂದಹಾಗೆ, ಈ ರೇಟ್‌ ಕಾರ್ಡನ್ನು ಜಾರಿಗೆ ತಂದಿರುವುದು ಮೈಸೂರು ಮಹಾನಗರ ಪಾಲಿಕೆ. ಕುದುರೆ ಸವಾರಿ ಮಾಡಿದ ಮೊದಲ ಮಹಿಳಾ ಮೇಯರ್‌ ಎಂಬ ಖ್ಯಾತಿಯನ್ನು ಈ ಬಾರಿ ದಸರಾದಲ್ಲಿ ಗಿಟ್ಟಿಸಿಕೊಂಡ ಮೋದಾಮಣಿಯವರಿಗೆ ಧನ್ಯವಾದಗಳು !

ಅರಮನೆಯ ಆವರಣದ ಒಳಗೆ ಜಂಬೂಸವಾರಿ ನೋಡುವುದು ಅನೇಕರ ಕನಸು. ಈ ಬಾರಿ ಆವರಣದಲ್ಲಿ 6 ಸಾವಿರ ಕುರ್ಚಿಗಳನ್ನು ಹಾಕಲಾಗಿದೆ. ಈ ಪೈಕಿ 2000 ಆಸನಗಳು 5 ಸಾವಿರ ರುಪಾಯಿ ಕೊಟ್ಟು ಗೋಲ್ಡ್‌ ಕಾರ್ಡ್‌ ಪಡೆದಿರುವ ಕುಳಗಳಿಗೆ ಮೀಸಲು. ಇನ್ನು ಮಿಕ್ಕ ಸೀಟುಗಳಿಗೆ ದೂರಕ್ಕನುಗುಣವಾಗಿ ಸಾವಿರ, ಐನೂರು, ಮೂನ್ನೂರು, ಇನ್ನೂರು ಹಾಗೂ ಐವತ್ತು ರುಪಾಯಿ ತೆರಬೇಕು. ಇನ್ನು ಬನ್ನಿ ಮಂಟಪದಲ್ಲಿ ನಡೆಯುವ ಪಂಜಿನ ಕವಾಯಿತು ನೋಡಲು ಟಿಕೇಟು ದರ- 25 ಹಾಗೂ 100 ರುಪಾಯಿ. ಕನಿಷ್ಠ 20 ಸಾವಿರ ಮಂದಿ ಇದನ್ನು ವೀಕ್ಷಿಸುತ್ತಾರೆ. ಈ ಬಾರಿ 100ರ ನೋಟು ಅನೇಕರಿಗೆ ದೊಡ್ಡದಾಗಿರುವುದರಿಂದ ಈ ಸಂಖ್ಯೆ ಕಡಿಮೆಯಾಗುವ ಸಂಭವವಿದೆ.

ಯೇಸುದಾಸ್‌ ಸಂಗೀತ, ಯಯಾತಿ ನಾಟಕ ಇವುಗಳ ನಡುವೆ ‘ವಿವ’ ಸಂಗೀತವನ್ನು ದಸರಾ ಮೆರವಣಿಗೆಯಲ್ಲಿ ಸರ್ಕಾರ ತುರುಕಿರುವುದು ಮುಂದೆ ಖಾಸಗೀಕೃತ ದಸರಾ ಬ್ರಿಯಾನ್‌ ಆ್ಯಡಮ್ಸ್‌ ಸಂಗೀತವನ್ನೂ ಕೇಳಿಸಬಹುದು ಎನ್ನುವ ಮುನ್ಸೂಚನೆಯಾಗಿದೆ. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಜಾಗತಿಕ ಚಿಂತನೆ ಮಾಡುತ್ತಿರುವ ಸರ್ಕಾರಕ್ಕೆ ಇನ್ನೊಂದು ಧನ್ಯವಾದ !

ಆಯುಧ ಪೂಜೆ ಇಷ್ಟೊಂದು ದುಬಾರಿಯಾದರೆ ಹೇಗೆ ಸ್ವಾಮಿ?
ಒಂದು ಸೈಕಲ್‌ಗೆ ಚೆನ್ನಾಗಿ ಸಿಂಗಾರ ಮಾಡಿ, ಒಂದು ಮಾರು ಹೂವು ಹಾಕಿ ಪೂಜೆ ಮಾಡಲು ಕನಿಷ್ಠ 100 ರುಪಾಯಿ ಬೇಕು ಅಂದರೆ, ಬಡವರು ಬದುಕಬೇಕೋ ಬೇಡವೋ ಅಂತ ಜನ ಅಲವತ್ತುಕೊಳ್ಳುತ್ತಿದ್ದಾರೆ. ಅ. 04 ಹಾಗೂ 05 ಆಯುಧ ಪೂಜೆ- ವಿಜಯದಶಮಿ ಸಂಭ್ರಮದಲ್ಲಿ ಎಲ್ಲೆಲ್ಲೂ ಸೇವಂತಿ ಹೂವಿನ ಘಮಘಮ. ಆದರೆ, ವ್ಯಾಪಾರಕ್ಕೆ ನಿಂತರೆ ರಾಮ ರಾಮ. ಒಂದು ಮೊಳ ಸೇವಂತಿಗೆ 6 ರುಪಾಯಿ. ಮೊಲ್ಲೆ ಮಾತಾಡಿಸುವುದೇ ಕಷ್ಟ. ಬೂದುಗುಂಬಳದ ಬೆಲೆಯೂ ಅದರ ಗಾತ್ರದಂತೆಯೇ.

ಒಟ್ಟಿನಲ್ಲಿ, ನಾಡಹಬ್ಬ ಇವತ್ತು ಬಲು ದುಬಾರಿ !

(ಇನ್ಫೋ ವಾರ್ತೆ)

ಮುಖಪುಟ / ಮೈಸೂರು ದಸರಾ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X