ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮ್ಮನ ಕಣ್ಣೀರಿಗೆ ನನ್ನ ಕಣ್ಣೀರೇ ಉತ್ತರ ಹೇಳಿತ್ತು

By * ಕಾಂತರಾಜ್, ಬೆಂಗಳೂರು
|
Google Oneindia Kannada News

Why I quit drinking liquor : A true story
ಇದು ಸತ್ಯ ಕಥೆ. ಸರಿಯಾಗಿ 1 ವರ್ಷದ ಹಿಂದೆ. ಇದೇ ಡಿಸೆಂಬರ್ 31ರ ಬೆಳಿಗ್ಗೆ ಮರಗಟ್ಟಿಸುವ ಥಂಡಿ ಸ್ವೆಟರ್ ಹೊದ್ದಿರುವ ನನ್ನ ಮೈಯನ್ನು ಗಡಗಡನೆ ನಡುಗಿಸಿತ್ತು. ಆದಿನ ಕಳೆದ 364 ದಿನದ ಯಾವುದೇ ದಿನಗಳಲ್ಲಿ ಕಾಣದಿದ್ದ ಕಾತುರ, ಚಟಪಡಿಕೆ, ಉತ್ಸಾಹವನ್ನು ತುಂಬಿತ್ತು. ಬೆಳಿಗ್ಗೆ 7 ಗಂಟೆಯಿಂದ ಮುಂದಿನ 12 ಗಂಟೆಗಳು ಕಳೆದು ಯಾವಾಗ ಸಂಜೆ 7ರ ಗಂಟೆ ಬಾರಿಸುತ್ತದೋ ಎಂಬ ನಿರೀಕ್ಷೆ.

ಮೈತುಂಬೆಲ್ಲ ಪಾತರಗಿತ್ತಿಗಳು ಓಡಾಡಿದಂತಹ ಅನುಭವ. ಇದು ನಾನೊಬ್ಬನೇ ಅನುಭವಿಸಿದ್ದಲ್ಲ. ನನ್ನ ವಾರಿಗೆಯ ಎಲ್ಲ ಏಳೆಂಟು ಚಿಗುರು ಮೀಸೆಯ ಯುವಕರಿಗೆ ಹಗಲಿನ ಒಂದೊಂದು ಘಳಿಗೆಯೂ ಒಂದೊಂದು ಯುಗವಾಗಿ ಕಾಡಿತ್ತು. ಸಂಜೆಯ ಹೊತ್ತಿಗೆ ಭಾಸ್ಕರ ಭೂರಮೆಯ ಕೆನ್ನೆಯ ಕೆಂಪೇರಿಸಿ ಬಾನಂಗಳದಲ್ಲಿ ಮುಳುಗುವ ಹೊತ್ತಿನಲ್ಲಿ ನಮ್ಮ ಮೈಮನಗಳಲ್ಲಿ ಪುಳಕದ ಜಲಪಾತ ಧುಮ್ಮಿಕ್ಕುತ್ತಿತ್ತು.

'ಫ್ರೆಂಡ್ಸ್ ಮನೆಯಲ್ಲಿ ಕೇಕ್ ಕಟ್ ಮಾಡ್ತೀವಿ. ನಾಳೆ ಬೆಳಿಗ್ಗೆ ಬರ್ತೀನಿ' ಎಂಬ ಸುಳ್ಳನ್ನು ಮನೆಯಲ್ಲಿ ಹೇಳಿ ಬೆಂಗಳೂರು ಹೊರವಲಯದ ಢಾಬಾವೊಂದರಲ್ಲಿ ಹೊಸವರ್ಷಾಚರಣೆಗೆಂದು ನಮ್ಮ ಬೈಕುಗಳು ಸಾಗಿದ್ದವು. ಇಂಥ ಸುಳ್ಳು ಹೇಳುವುದರಲ್ಲಿ ನಾವೆಲ್ಲ ನಿಸ್ಸೀಮರಾಗಿದ್ದೆವು. ಸ್ನೇಹಿತರೆಲ್ಲ ಒಟ್ಟಿಗೆ ಸೇರಿ ಢಾಬಾ ತಲುಪುವ ಹೊತ್ತಿಗೆ ರಾತ್ರಿ ಹತ್ತು ಗಂಟೆ ದಾಟಲು ಹತ್ತು ನಿಮಿಷ ಬಾಕಿ ಇತ್ತು.

ಢಾಬಾ ತುಂಬೆಲ್ಲ ಜೀನ್ಸ್ ಧಾರಿ ಯುವಕ ಯುವತಿಯರೆ. ಕೆಲವರಿಗೆ ತಮ್ಮನ್ನು ಯಾರಾದರೂ ಗಮನಿಸಿಬಿಡುತ್ತಾರಾ ಎಂಬ ದುಗುಡ ಮನೆಮಾಡಿದ್ದು ಅವರ ಮುಖಗಳಲ್ಲಿ ಎದ್ದು ಕಾಣುತ್ತಿತ್ತು. ನಮ್ಮ ಟೀಮಿಗೆ ಇದು ಹೊಸದೇನೂ ಆಗಿಲ್ಲದಿದ್ದರಿಂದ ಬಿಂದಾಸ್ ಆಗಿ ಗಂಟೆ ಹನ್ನೆರಡು ಬಾರಿ ಬಾರಿಸುವ ಅಮೃತ ಘಳಿಗೆಗೆ ಕಾಯುತ್ತಿದ್ದೆವು. ಹಾಗೆಯೆ, ಅಮೃತಸದೃಶ ಸುರಾಪಾನಕ್ಕಾಗಿ ಮನಸ್ಸುಗಳು ಹಾತೊರೆಯುತ್ತಿದ್ದವು.

ಕಡೆಗೂ ಆ ಘಳಿಗೆ ಬಂದೇಬಿಟ್ಟಿತು. ಕೈಕುಲುಕುವಿಗೆ, ತಬ್ಬುವಿಕೆಗಳು ಮುಗಿದ ನಂತರ ಕಾಂದಾ ಭಜಿ, ಮಸಾಲಾ ಶೇಂಗಾ, ಎಗ್ ಬುರ್ಜಿ ಜೊತೆಜೊತೆ ಎಮ್ಸಿ, ತ್ರಿಬಲ್ ಎಕ್ಸ್ ರಮ್ ನೀರಿನ ಮಿಶ್ರಣದೊಂದಿಗೆ ಹನಿಹನಿಯಾಗಿ ಗಂಟಲಿಗೆ ಇಳಿಯುತ್ತಿತ್ತು. ಧೂಮ ತನ್ನ ಲೀಲೆ ಆರಂಭಿಸಿತ್ತು. ಮೈತುಂಬ ಭರ್ತಿ ಅರಿವೆಗಳಿದ್ದರೂ, ಮೈಮೇಲೆ ಜಗತ್ತಿನ ಅರಿವಿರಲಿಲ್ಲ. 'ಪರಮಾತ್ಮ' ಹೊಟ್ಟೆಗೆ ಇಳಿಯುತ್ತಿದ್ದಂತೆ ನನ್ನ ಬಾಯಿಯಿಂದ ಹರಕುಮುರುಕು ಇಂಗ್ಲಿಷ್ ಮಾತುಗಳು, ತೊದಲು ನುಡಿಗಳೊಂದಿಗೆ ಪುಂಖಾನುಪುಂಖವಾಗಿ ಹೊರಹೊಮ್ಮಲು ಪ್ರಾರಂಭಿಸಿದವು.

ಆ ಮಾತುಗಳನ್ನು ಸ್ನೇಹಿತರ ಬಾಯಲ್ಲಿ ಈಗ ಕೇಳಿದರೆ ಅಸಹ್ಯದಿಂದ ಕುಗ್ಗಿಹೋಗುತ್ತೇನೆ. ಆದರೆ, ಆ ಕ್ಷಣದಲ್ಲಿ ಪರಿವೆ ಇದ್ದರೆ ತಾನೆ? ಕಿಕ್ ಯಾವ ರೀತಿ ಏರಿತ್ತೆಂದರೆ ಎಲ್ಲಿದ್ದೇವೆ, ಯಾವ ಸ್ಥಿತಿಯಲ್ಲಿದ್ದೇವೆ, ಎತ್ತ ಸಾಗುತ್ತಿದ್ದೇನೆ, ಹಗಲೋ ರಾತ್ರಿಯೋ ಎಂಬ ಅರಿವು ಕೂಡ ಇರಲಿಲ್ಲ. ಗೊತ್ತಿಲ್ಲದೆ ಹೋಗಿ ದನದ ಕೊಟ್ಟಿಗೆಯ ಬಳಿ, ಸೆಗಣಿಯ ವಾಸನೆಯ ನಡುವೆ ಬಿದ್ದುಕೊಂಡಿದ್ದೆ. ಆದರೆ, ಕಣ್ಣು ಬಿಟ್ಟಾಗ ಮಾತ್ರ ಪಕ್ಕದಲ್ಲಿ ಅಮ್ಮ ಕುಳಿತಿದ್ದಳು.

ಇಂತಹ ಅನೇಕ ಸಂಜೆಗಳನ್ನು ನಾವು ಕಳೆದಿದ್ದರೂ ಕಣ್ಣು ಬಿಟ್ಟಾಗ ಪಕ್ಕದಲ್ಲಿ ಅಮ್ಮ ಕೂಡುವಂತೆ ಯಾವತ್ತೂ ಆಗಿರಲಿಲ್ಲ. ನಾನೀ ಸ್ಥಿತಿಯಲ್ಲಿ ಇದ್ದೇನೆಂದು ನಂಬಲು ಅಮ್ಮ ತಯಾರಿರಲಿಲ್ಲ. ನನ್ನ ಮಗ ಅಂಥವನಲ್ಲ ಎಂದೇ ಆಕೆಯ ಹೃದಯ ಮಿಡಿಯುತ್ತಿತ್ತು. ಆದರೆ, ವಸ್ತುಸ್ಥಿತಿ ಹಿಂದಿನ ಎಲ್ಲ ಸುಳ್ಳುಗಳನ್ನು ಬರಿದು ಮಾಡಿತ್ತು. ಕೊರಳಿನ ನರಗಳು ಬಿಗಿದುಕೊಂಡಿದ್ದವು. ಅಮ್ಮನ ಕೈಗಳು ನನ್ನ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದವು. ಕಣ್ಣುಗಳಿಂದ ಮಾತ್ರ ಹನಿಗಳು ಪ್ರವಾಹೋಪಾದಿಯಲ್ಲಿ ಹೊರಬರಲಾರಂಭಿಸಿದವು.

ಭಾಷೆ ಕೊಡುವವರೆಗೆ ಕೈಬಿಡುವುದಿಲ್ಲ ಎಂಬಂತೆ ಗಟ್ಟಿಯಾಗಿ ಹಿಡಿದುಕೊಂಡಿದ್ದಳು. ಸರಕ್ಕನೆ ನನ್ನ ಕೈಗಳನ್ನು ಎಳೆದುಕೊಂಡು ತನ್ನ ತಲೆಯ ಮೇಲೆ ಇರಿಸಿಕೊಂಡಳು. ಕಣ್ಣೀರು ಇನ್ನೂ ಧಾರಾಕಾರವಾಯಿತು. ಆ ಕಣ್ಣುಗಳ, ಮನಸಿನ ಮಾತುಗಳೊಂದಿಗೆ, ಅವಮಾನದಿಂದ, ನಾಚಿಕೆಯಿಂದ, ಹೇಸಿಗೆಯಿಂದ ಕುಸಿದು ಪಾತಾಳಕ್ಕಿಳಿದಿದ್ದ ನನ್ನ ಕಣ್ಣುಗಳಲ್ಲಿ ಇಳಿದಿದ್ದ ಹನಿಗಳೇ ಉತ್ತರ ಹೇಳಿದ್ದವು. ಅದೇ ಕೊನೆ...

English summary
Why I quit drinking liquor? This is a true story of a person who could not see through his mother's eyes after spending a night on December 31. What happened after the new year party? What to know? Read this story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X