Year End Special 2024: ಈ ವರ್ಷ ಬೆಂಗಳೂರಿನಲ್ಲಿ ದಾಖಲಾದ ತ್ರಿಬಲ್ ರೈಡಿಂಗ್ ಪ್ರಕರಣಗಳು
ಬೆಂಗಳೂರು ನಗರದ ಸಂಚಾರಿ ಪೊಲೀಸರು ತ್ರಿಬಲ್ ರೈಡಿಂಗ್ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಳ್ಳುತ್ತಾರೆ. ತ್ರಿಬಲ್ ರೈಡ್ ಮಾಡಬೇಡಿ ಎಂದು ವಾಹನ ಸವಾರರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಕೈಗೊಳ್ಳುತ್ತಾರೆ. ಆದರೆ ಜನರು ಮಾತ್ರ ಈ ನಿಯಮ ಪಾಲನೆ ಮಾಡುವುದಿಲ್ಲ. ಇದಕ್ಕೆ ಸಾಕ್ಷಿ ನಗರದಲ್ಲಿ ಈ ವರ್ಷ ದಾಖಲಾದ ಕೇಸುಗಳ ಸಂಖ್ಯೆ.
ಸಂಚಾರಿ ಪೊಲೀಸರ ಮಾಹಿತಿಯಂತೆ 2024ರಲ್ಲಿ ಉದ್ಯಾನ ನಗರಿ ಬೆಂಗಳೂರಿನಲ್ಲಿ 1,49,694 ತ್ರಿಬಲ್ ರೈಡಿಂಗ್ ಪ್ರಕರಣಗಳು ದಾಖಲಾಗಿವೆ. ತ್ರಿಬಲ್ ರೈಡಿಂಗ್ ವಾಹನ ಸವಾರರು ಹಿಂಬದಿ ಕುಳಿತಿರುವವರು, ಪಾದಾಚಾರಿಗಳಿಗೆ ಸಹ ಅಪಾಯು ಉಂಟು ಮಾಡುತ್ತದೆ. ಇದು ಕಾನೂನು ಬಾಹಿರ ಎಂದು ತಿಳಿದಿದ್ದರೂ ಸಹ ಜನರು ನಿಯಮ ಉಲ್ಲಂಘನೆ ಮಾಡಿ ದಂಡವನ್ನು ಕಟ್ಟುತ್ತಾರೆ.

ತ್ರಿಬಲ್ ರೈಡಿಂಗ್ ಮಾಡುವ ಸಂದರ್ಭದಲ್ಲಿ ರಸ್ತೆ ಅಪಘಾತಗಳು ನಡೆದು ಗಾಯಗೊಂಡ ಪ್ರಕರಣಗಳು ನಡೆದಿವೆ. ಆದರೆ ತ್ರಿಬಲ್ ರೈಡಿಂಗ್ ಮಾಡುವುದನ್ನು ಜನರು ಬಿಟ್ಟಿಲ್ಲ. ಅದರಲ್ಲೂ ಮಕ್ಕಳನ್ನು ಶಾಲೆಗೆ ಬಿಡಲು ಹೆಲ್ಮೆಟ್ ಧರಿಸದೇ ಬೈಕ್‌ನಲ್ಲಿ ಮೂವರು ಹೋಗುವ ಪ್ರಕರಣಗಳು ನಗರದಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ತ್ರಿಬಲ್ ರೈಡಿಂಗ್ ಮಾಡುವುದು ಸಂಚಾರ ನಿಯಮ ಉಲ್ಲಂಘನೆಯಾಗಿದೆ. ಅಲ್ಲದೇ ತ್ರಿಬಲ್ ರೈಡಿಂಗ್ ಮಾಡುವಾಗ ಮೂವರು ಸಹ ಹೆಲ್ಮೆಟ್ ಧರಿಸಿರುವುದಿಲ್ಲ. ಆದ್ದರಿಂದ ವಿಶೇಷ ಕಾರ್ಯಾಚರಣೆ ನಡೆಸುವಾಗ ಸಿಕ್ಕಿಬಿದ್ದರೆ ಹೆಚ್ಚಿನ ದಂಡವನ್ನು ಪಾವತಿ ಮಾಡಬೇಕಾಗುತ್ತದೆ. ಕ್ಯಾಮರಾಗಳ ಸಹಾಯದಿಂದ ತ್ರಿಬಲ್ ರೈಡಿಂಗ್ ಪತ್ತೆ ಹಚ್ಚಿ ವಾಹನ ಮಾಲೀಕರಿಗೆ ದಂಡದ ನೋಟಿಸ್ ನೀಡುವ ಕಾರ್ಯವನ್ನು ಪೊಲೀಸರು ಮಾಡುತ್ತಿದ್ದಾರೆ.
ಅಂಕಿ ಸಂಖ್ಯೆಗಳ ವಿವರ: ಸಂಚಾರಿ ಪೊಲೀಸರ ಮಾಹಿತಿ ಪ್ರಕಾರ ಬೆಂಗಳೂರು ನಗರದಲ್ಲಿ ಕಳೆದ ಮೂರು ವರ್ಷಗಳಿಂದ ತ್ರಿಬಲ್ ರೈಡಿಂಗ್ ಕೇಸುಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಪ್ರತಿ ವರ್ಷ 10ಕ್ಕೂ ಅಧಿಕ ಹೊಸ ಪ್ರಕರಣಗಳು ಸೇರ್ಪಡೆಯಾಗುತ್ತಿವೆ.
ನಗರದಲ್ಲಿ 2022ರಲ್ಲಿ 1,62,617 ತ್ರಿಬಲ್ ರೈಡಿಂಗ್ ಕೇಸುಗಳು ದಾಖಲಾಗಿದ್ದವು. 2023ರಲ್ಲಿ ಈ ಪ್ರಕರಣಗಳ ಸಂಖ್ಯೆ 1,17,738 ಆಗಿತ್ತು. ಈ ವರ್ಷ 1,49,694 ಪ್ರಕರಣಗಳು ದಾಖಲಾಗಿದ್ದು, ಸಂಚಾರ ನಿಯಮ ಉಲ್ಲಂಘನೆ ಮಾಡಿದ ಸವಾರರಿಂದ 4,97,6,400 ರೂ. ದಂಡವನ್ನು ಸಂಗ್ರಹ ಮಾಡಲಾಗಿದೆ.
ತ್ರಿಬಲ್ ರೈಡಿಂಗ್ ಪ್ರಕರಣಗಳಿಂದ ರಸ್ತೆ ಅಪಘಾತಗಳು ಸಂಭವಿಸಿ ಗಾಯಗೊಳ್ಳುವುದು, ಜೀವ ಹಾನಿ ಸಹ ಸಂಭವಿಸುತ್ತಿದೆ. ಈ ಕುರಿತು ಸಂಚಾರಿ ಪೊಲೀಸರು ಅರಿವು ಮೂಡಿಸುತ್ತಲೇ ಇದ್ದಾರೆ. ಆದರೆ ಜನರು ಮಾತ್ರ ಈ ನಿಯಮಗಳನ್ನು ಗಾಳಿಗೆ ತೂರಿ, ತ್ರಿಬಲ್ ರೈಡಿಂಗ್ ಮಾಡುತ್ತಾರೆ.
ಕೆಲವೇ ದಿನಗಳ ಹಿಂದೆ ತ್ರಿಬಲ್ ರೈಡಿಂಗ್‌ನಿಂದ ಸಂಭವಿಸಿದ ರಸ್ತೆ ಅಪಘಾತದಲ್ಲಿ 19 ವರ್ಷದ ಬಿಬಿಎ ವಿದ್ಯಾರ್ಥಿ ಬಿಜಿಎಸ್ ಫ್ಲೈ ಓವರ್ ಮೇಲೆ ಸಾವನ್ನಪ್ಪಿದ್ದ. ಈ ಅಪಘಾತದಲ್ಲಿ ಮೂವರು ಸಹ ಹೆಲ್ಮೆಟ್ ಧರಿಸಿರಲಿಲ್ಲ. ಅಪಘಾತದಲ್ಲಿ ಒಬ್ಬ ಮೃತಪಟ್ಟರೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ರಾತ್ರಿ 8.30ರ ಸುಮಾರಿಗೆ ಈ ಅಪಘಾತವಾಗಿತ್ತು.
ಪೊಲೀಸರು ತ್ರಿಬಲ್ ರೈಡಿಂಗ್ ಪ್ರಕರಣಗಳ ಕುರಿತು ಮಾತನಾಡಿದ್ದು, ಎಐನಿಂದಾಗಿ ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚುವುದು ಸುಲಭವಾಗಿದೆ. ಈಗಾಗಲೇ ನಗರದಲ್ಲಿ ಕ್ಯಾಮರಾಗಳ ಮೂಲಕ ಇಂತಹ ಕೇಸುಗಳನ್ನು ಪತ್ತೆ ಹಚ್ಚಿ, ಫೋಟೋಗಳ ಸಮೇತ ಸವಾರರ ಮನೆಗೆ ನೋಟಿಸ್ ಕಳಿಸಲಾಗುತ್ತಿದೆ ಎಂದು ಹೇಳಿದ್ದಾರೆ.












Click it and Unblock the Notifications