ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಕ್ಷಗಾನ ಕಲಾವಿದ ವಾಮನ ಕುಮಾರ್ ಪರಿಚಯ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜನವರಿ 20; ಕರಾವಳಿಯ ಗಂಡುಕಲೆ ಯಕ್ಷಗಾನ ಮತ್ತೊಂದು ಅನರ್ಘ್ಯ ರತ್ನವನ್ನು ಕಳೆದುಕೊಂಡಿದೆ. ಕಳೆದ 28 ವರ್ಷಗಳಿಂದ ಯಕ್ಷಗಾನ ರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಹಿರಿಯ ಯಕ್ಷಗಾನ ಕಲಾವಿದ ವಾಮನ ಕುಮಾರ್ ವೇಣೂರು (47) ಯಕ್ಷಗಾನ ಪ್ರದರ್ಶನ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಬೈಕ್ ಅಫಘಾತದಲ್ಲಿ ಸಾವನ್ನಪ್ಪಿದ್ದಾರೆ.

ಗುರುವಾರ ಮುಂಜಾನೆ ಮೂಡಬಿದಿರೆಯ ಗಂಟಾಲ್ ಕಟ್ಟೆ ಎಂಬಲ್ಲಿ ಈ ಘಟನೆ ನಡೆದಿದೆ. ಕಳೆದ ರಾತ್ರಿ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾಡ ಸಮೀಪದ ಕೋಣ್ಕಿ ಎಂಬಲ್ಲಿ ಯಕ್ಷಗಾನ ಪ್ರದರ್ಶನ ಮುಗಿಸಿ ಬೆಳಗಿನ ಜಾವ ಮನೆಗೆ ತೆರಳುವಾಗ ಅಪಘಾತ ಸಂಭವಿಸಿದೆ.

 ಕೊರೊನಾ ಕರ್ಫ್ಯೂ; ಕರಾವಳಿ ಯಕ್ಷಗಾನ ಕಲಾವಿದರ ಬದುಕು ಮತ್ತೆ ಅತಂತ್ರ ಕೊರೊನಾ ಕರ್ಫ್ಯೂ; ಕರಾವಳಿ ಯಕ್ಷಗಾನ ಕಲಾವಿದರ ಬದುಕು ಮತ್ತೆ ಅತಂತ್ರ

ಕಳೆದ 28 ವರ್ಷದಲ್ಲಿ ಯಕ್ಷಗಾನ ರಂಗದಲ್ಲಿ, ವಿವಿಧ ಮೇಳಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ವಾಮನ ಕುಮಾರ್ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರಿನವರು. ಕೋವಿಡ್ ಕಾರಣದಿಂದ ಯಕ್ಷಗಾನ ಕಾಲಮಿತಿ ಯಲ್ಲಿ ನಡೆಯುತ್ತಿರುವ ಕಾರಣ, ಯಕ್ಷಗಾನ ಮುಗಿಸಿ ತಡರಾತ್ರಿ ಮತ್ತೆ ಮನೆಗೆ ಬರುವ ವೇಳೆ ಮುಂಜಾನೆ ಬೈಕ್ ಒಮಿನಿ ಕಾರ್‌ಗೆ ಡಿಕ್ಕಿಯಾಗಿ ವಾಮನ ಕುಮಾರ್ ಮೃತಪಟ್ಟಿದ್ದಾರೆ.

ಯಕ್ಷಗಾನ ಕಲಿಯಲು ಉಡುಪಿಗೆ ಬಂದ ಉತ್ತರ ಭಾರತದ ವಿದ್ಯಾರ್ಥಿಗಳುಯಕ್ಷಗಾನ ಕಲಿಯಲು ಉಡುಪಿಗೆ ಬಂದ ಉತ್ತರ ಭಾರತದ ವಿದ್ಯಾರ್ಥಿಗಳು

Yakshagana Artist Venur Vaman Kumar Profile

ವಾಮನ ಕುಮಾರ್ ವೇಣೂರು ಅವರದ್ದು ಕಳೆದ 28 ವರ್ಷದ ಯಕ್ಷಗಾನ ತಿರುಗಾಟವಾಗಿದ್ದು, ಈ ಅವಧಿಯಲ್ಲಿ ನಾಲ್ಕು ಮೇಳಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಶಾಲೆಯ ಜೀವನದಲ್ಲೇ ಯಕ್ಷಗಾನದ ಬಗ್ಗೆ ವಿಶೇಷ ಹೊಂದಿದ್ದ ವಾಮನ ಕುಮಾರ್ ಯಕ್ಷಗಾನ ಮೇಳಕ್ಕೆ ಸೇರಲು ಆಸೆ ಉಂಟಾಗಿ ಮೊದಲು ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತಾಕಲಾ ಯಕ್ಷ ನಾಟ್ಯ ತರಬೇತಿ ಕೇಂದ್ರದಲ್ಲಿ ಆರು ತಿಂಗಳುಗಳ ಕಾಲ ತರಬೇತಿ ಪಡೆದಿದ್ದರು.

ಯಕ್ಷಗಾನ; ಪೆರ್ಡೂರು ಮೇಳದಿಂದ ಜನ್ಸಾಲೆ ಔಟ್, ಧಾರೇಶ್ವರ ಇನ್ ಯಕ್ಷಗಾನ; ಪೆರ್ಡೂರು ಮೇಳದಿಂದ ಜನ್ಸಾಲೆ ಔಟ್, ಧಾರೇಶ್ವರ ಇನ್

ಆ ಬಳಿಕ ಧರ್ಮಸ್ಥಳ ಮೇಳದಲ್ಲೇ ಸುಮಾರು ಎರಡು ವರ್ಷಗಳ ಕಾಲ ಕಲಾವಿದರಾಗಿ ಸೇವೆ ಸಲ್ಲಿಸಿದ್ದರು. ಯಕ್ಷಗಾನ ಪ್ರಸಂಗ ಆರಂಭಕ್ಕೂ ಮುನ್ನ ಬರುವ ಬಾಲಗೋಪಾಲ ಕಲಾವಿದನಾಗಿ ಸೇವೆ ಸಲ್ಲಿಸಿದ್ದರು. ಪ್ರಸಂಗಕರ್ತ ಮನೋಹರ್ ಕುಮಾರ್ ಅವರಿಂದ ಪ್ರಭಾವಿತರಾಗಿ ಧರ್ಮಸ್ಥಳದಲ್ಲಿ ಕರ್ಗಲ್ಲು ವಿಶ್ವೇಶ್ವರ ಭಟ್ ಅವರಿಂದ ಯಕ್ಷಗಾನದ ಹೆಜ್ಜೆ ಕಲಿತಿದ್ದರು.

ಆರಂಭದಲ್ಲಿ ಧರ್ಮಸ್ಥಳ ಮೇಳ ನಂತರ ನಾಲ್ಕು ವರ್ಷಗಳ ಕಾಲ ಕದ್ರಿ ಮೇಳ, 15 ವರ್ಷಗಳ ಕಾಲ ಮಂಗಳಾದೇವಿ ಮೇಳ, ಕಳೆದ 9 ವರ್ಷಗಳಿಂದ ಹಿರಿಯಡ್ಕ ಮೇಳದಲ್ಲಿ ವೇಷಧಾರಿಯಾಗಿ ಮತ್ತು ಮೇಳದ ಮ್ಯಾನೇಜರ್ ಆಗಿ ವಾಮನ ಕುಮಾರ್ ಅವರು ಸೇವೆ ಸಲ್ಲಿಸುತ್ತಿದ್ದರು.

ಹಿರಿಯಡ್ಕ ಮೇಳ ಕಳೆದ 8 ವರ್ಷಗಳಿಂದ ತೆಂಕುತಿಟ್ಟಿನ ಪೂರ್ಣಾವಧಿ ಮೇಳವಾಗಿದ್ದು, ಈ ಮೇಳದ ಹಿರಿಯ ಕಲಾವಿದರಾಗಿ ಮತ್ತು ಮ್ಯಾನೇಜರ್ ಆಗಿ ವಾಮನ ಕುಮಾರ್ ಸೇವೆ ಸಲ್ಲಿಸಿದ್ದರು. ಮೊದಲು ಪೂರ್ವ ರಂಗದ ಬಾಲ ಗೋಪಾಲನಾಗಿ ಯಕ್ಷಗಾನ ವೇಷ ಆರಂಭಿಸಿದ ವಾಮನ ಕುಮಾರ್ ಬಳಿಕ 15 ವರ್ಷಗಳ ಕಾಲ ಸ್ತ್ರೀ ವೇಷದಲ್ಲಿ ಪ್ರಸಿದ್ಧಿ ಪಡೆದಿದ್ದರು. ತಿರುಲೆದ ತೀರ್ಥ ಯಕ್ಷಗಾನ ಪ್ರಸಂಗದ ತೇಜಾಕ್ಷಿ ಪಾತ್ರ, ವಜ್ರಕುಟುಂಬ, ಮಲ್ಲಿಗೆ ಸಂಪಿಗೆ, ಚೆನ್ನಿ ಚೆನ್ನಮ್ಮ ಪ್ರಸಂಗ ವಾಮನ ಕುಮಾರ್‌ಗೆ ಬಹಳ ಪ್ರಸಿದ್ಧಿಯನ್ನು ತಂದುಕೊಟ್ಟಿತು. ಪೌರಾಣಿಕ ಪ್ರಸಂಗಗಳಲ್ಲೂ ಮಿಂಚಿದ ವಾಮನ ಕುಮಾರ್ ಶಶಿಪ್ರಭೆ, ಪ್ರಮೀಳೆ ವೇಷ ಪ್ರಖ್ಯಾತಿ ತಂದುಕೊಟ್ಟಿತು.

ತನ್ನ ಯಕ್ಷಗಾನ ಜೀವನದ ಬಗ್ಗೆ ಇತ್ತೇಚೆಗೆ ಸಾಮಾಜಿಕ ಜಾಲತಾಣ ವೊಂದರಲ್ಲಿ ವಾಮನ ಕುಮಾರ್ ಸುದೀರ್ಘವಾಗಿ ಹೇಳಿಕೊಂಡಿದ್ದರು.
"ನಾನು 5ನೇ ತರಗತಿಯಲ್ಲಿ ಇರುವಾಗ ಸುರತ್ಕಲ್, ಕರ್ನಾಟಕ, ಧರ್ಮಸ್ಥಳ ಮೇಳಗಳ ಯಕ್ಷಗಾನವನ್ನು ನೋಡಿ ಆಸಕ್ತಿ ಹೆಚ್ಚಿಸಿಕೊಂಡಿದ್ದೆ. 8ನೇ ತರಗತಿಯಲ್ಲಿ ಆಸಕ್ತಿ ಹೆಚ್ಚಾಗಿ ಧರ್ಮಸ್ಥಳ ಮೇಳಕ್ಕೆ ಸೇರಿ ಆರು ತಿಂಗಳು ಅಭ್ಯಾಸ ಮಾಡಿದೆ. ಬಳಿಕ ಧರ್ಮಸ್ಥಳ ಮೇಳದಲ್ಲೇ ಯಕ್ಷಗಾನ ಜೀವನ ಆರಂಭಿಸಿ ಬಳಿಕ ಕದ್ರಿ ಮಂಗಳಾದೇವಿ ಮೇಳದಲ್ಲಿ ತಿರುಗಾಟ ನಡೆಸಿ ಸದ್ಯ ಹಿರಿಯಡ್ಕ ಮೇಳದಲ್ಲಿ ಇರೋದಾಗಿ" ಹೇಳಿದ್ದರು.

ಹಿರಿಯ ಯಕ್ಷಗಾನ ಕಲಾವಿದ ದಿ. ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ ಮಾರ್ಗದರ್ಶನ ದಲ್ಲಿ ಕೃಷ್ಣ, ವಿಷ್ಣು, ಸುರ್ದಶನ, ಚಂಡ ಮುಂಡ ಪೌರಾಣಿಕ ವೇಷವನ್ನೂ ನಿಭಾಯಿಸಿ ವಾಮನ ಕುಮಾರ್ ಸೈ ಎನಿಸಿಕೊಂಡಿದ್ದರು.

ತಡರಾತ್ರಿಯ ತನಕ ಪ್ರದರ್ಶನ ನೀಡಿ ಆಯಾಸ ಮತ್ತು ನಿದ್ದೆಯ ಮಂಪರಿನಲ್ಲಿ ಮತ್ತೆ ರಾತ್ರಿ ಮನೆಗೆ ಬೈಕಿನಲ್ಲಿ ತೆರಳೋದರಿಂದ ಕಲಾವಿದರ ಜೀವಕ್ಕೂ ಅಪಾಯವಾಗಿದೆ. ಈ ಹಿಂದೆಯೂ ಇದೇ ಮಾದರಿಯಲ್ಲಿ ರಸ್ತೆ ಅಫಘಾತವಾಗಿ ಕಲಾವಿದರು ಜೀವ ತೆತ್ತಿದ್ದಾರೆ. ಬೆಳಗ್ಗಿನವರೆಗೆ ಯಕ್ಷಗಾನ ನಡೆಯುವ ಸ್ಥಳದಲ್ಲೇ ವಿಶ್ರಾಂತಿ ಪಡೆದು ಬೆಳಗ್ಗೆ ಮನೆಗೆ ಹಿಂದುರುಗಬೇಕೆಂದು ಯಕ್ಷಗಾನ ಸಂಘಟಕರು ಮನವಿ ಮಾಡಿದರೂ, ಮನೆಗೆ ತಲುಪಿ ವಿಶ್ರಾಂತಿ ಪಡೆಯುವ ಧಾವಂತದಿಂದ ದೂರದೂರುಗಳಿಂದ ತಡರಾತ್ರಿ ಬೈಕ್ ಏರಿ ತಮ್ಮ ಊರಿಗೆ ಹೋಗುವ ಕಲಾವಿದರು ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳುತ್ತಿರೋದು ದುರಂತವಾಗಿದೆ.

English summary
Yakshagana artist Venur Vaman Kumar (47) died in road accident at Moodabidri, Dakshina Kannada district. Here are the profile of Venur Vaman Kumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X