Get Updates
Get notified of breaking news, exclusive insights, and must-see stories!

ವಿಶ್ವ ದೃಷ್ಟಿ ದಿನ 2020; "ದೃಷ್ಟಿಯಲ್ಲಿ ಭರವಸೆ"ಯೇ ಧ್ಯೇಯ

2013ನೇ ಮೇ ತಿಂಗಳಿನಲ್ಲಿ 66ನೇ ವಿಶ್ವ ಆರೋಗ್ಯ ಸಂಸ್ಥೆಯ ಸಭೆ ನಡೆಯಿತು. ಈ ಸಭೆಯಲ್ಲಿ ಅಂಧತ್ವ ದೃಷ್ಟಿ ಅಸಮತೆಯನ್ನು ಹೋಗಲಾಡಿಸಲು ವಿಶ್ವದಾದ್ಯಂತ ಕ್ರಮಗಳನ್ನು ತೆಗೆದುಕೊಳ್ಳುವ ಕುರಿತು ನಿರ್ಣಯವನ್ನು ತೆಗೆದುಕೊಳ್ಳಲಾಯಿತು. ಅಂತೆಯೇ ಪ್ರತೀ ವರ್ಷ 8 ಅಕ್ಟೋಬರ್ ದಿನದಂದು 'ವಿಶ್ವ ದೃಷ್ಟಿ ದಿನ' ಎಂದು ಆಚರಿಸಲಾಗುತ್ತದೆ.

2020 ವಿಶ್ವ ದೃಷ್ಟಿ ದಿನದ ಅಂಗವಾಗಿ ಘೋಷಣೆ ಹೀಗಿದೆ. 'ದೃಷ್ಟಿಯಲ್ಲಿ ಭರವಸೆ'. ಹೌದು. ದೃಷ್ಟಿಯಲ್ಲಿ ಭರವಸೆ ಅತ್ಯಗತ್ಯ. ಯಾವುದನ್ನು ಆರೋಗ್ಯ ರೀತಿಯಲ್ಲಿ ಉಳಿಸಿಕೊಳ್ಳಲು ಸಾಧ್ಯವೋ ಅದನ್ನು ಉಳಿಸಿಕೊಳ್ಳುವುದು ಎಲ್ಲರ ಹಕ್ಕು. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸಹಜವಾಗಿ ಪರಿಹರಿಸಬಹುದಾದಂತಹ ಅಂಧತ್ವ ಮತ್ತು ಅಸಮತೆ ಇರುವ ದೃಷ್ಟಿ ದೋಷವನ್ನು ಸರಿಪಡಿಸಲು ಖಂಡಿತ ಸಾಧ್ಯವಿದೆ. ಅದಕ್ಕಾಗಿ ನಾವು ಭರವಸೆ ಕೊಡಬೇಕು. ಅದುವೇ ವಿಶ್ವ ದೃಷ್ಟಿ ದಿನದ 2020ನೇ ಸಾಲಿನ ಘೋಷವಾಕ್ಯ.

ಪ್ರತೀ ವರ್ಷ ಕಣ್ಣಿನ ಆರೋಗ್ಯದ ಕುರಿತು ಸಾರ್ವಜನಿಕ ಅರಿವು ಮೂಡಿಸುವ ಕಾರ್ಯವನ್ನು ಆರೋಗ್ಯ ಇಲಾಖೆಯು ಸಮರ್ಥವಾಗಿ ಮಾಡುತ್ತಿದೆ. ಇಡೀ ವಿಶ್ವದಲ್ಲಿ ಒಂದು ನೂರು ಕೋಟಿ ಜನಕ್ಕೆ ದೃಷ್ಟಿ ದೋಷ ಸರಿಪಡಿಸಬಹುದಾಗಿದೆ. ಗಂಭೀರ ಮತ್ತು ಗಂಭೀರವಲ್ಲದ ಯಾವುದೇ ಕಣ್ಣಿನ ಆರೋಗ್ಯ ಸಮಸ್ಯೆಯನ್ನು ಬಗೆಹರಿಸಲು ಮತ್ತು ಸುದೀರ್ಘಕಾಲ ಜೀವನದ ಅಂತಿಮ ಘಟ್ಟದವರೆಗೆ ದೃಷ್ಟಿ ಸಮಸ್ಯೆ ಬರದಂತೆ ತಡೆಯುವುದು ಸರ್ಕಾರಗಳ ಆದ್ಯ ಕರ್ತವ್ಯವೂ ಆಗಿದೆ. ಈ ಹಿನ್ನೆಲೆಯಲ್ಲಿ ವಿಶ್ವ ದೃಷ್ಟಿ ದಿನ ಸಾರ್ವಜನಿಕ ಕಾರ್ಯಕ್ರಮವಾಗಿದ್ದು ಇದನ್ನು ಸಾರ್ವಜನಿಕರು ಅರಿವು ಮೂಡಿಸಿಕೊಳ್ಳುವುದು ಅತ್ಯಗತ್ಯವಿದೆ.

 ಕಣ್ಣು ಒಂದು ವಿಸ್ಮಯ

ಕಣ್ಣು ಒಂದು ವಿಸ್ಮಯ

ಕಣ್ಣು ಅಂದರೆ ಅದೊಂದು ಅದ್ಭುತ. ವಿಸ್ಮಯ. ನಿಗೂಢವಲ್ಲ! ತಿಳಿದುಕೊಂಡರೆ ಸುಲಭ. ಮನುಷ್ಯನ ಬುದ್ಧಿಶಕ್ತಿಯ ಅನ್ವೇಷಕ ಸಾಮರ್ಥ್ಯ ಎಂತಹುದು ಎಂಬುದನ್ನು ನಾವು ಅರ್ಥೈಸಿಕೊಂಡಾಗ ಕಣ್ಣಿನ ಆರೋಗ್ಯ ಸಮಸ್ಯೆಗಳನ್ನು ನಾವು ಬಗೆಹರಿಸುತ್ತಿರುವ ವೈಜ್ಞಾನಿಕ ಆವಿಷ್ಕಾರ ಅದನ್ನು ಸರಳೀಕೃತಗೊಳಿಸಿದೆ. ಪಂಚೇಂದ್ರಿಯಗಳಲ್ಲಿ ಕಣ್ಣು ಪ್ರಧಾನವಾದದ್ದು. ಮನುಷ್ಯನಿಗೆ ಸೌಂದರ್ಯಪ್ರಜ್ಞೆಗೆ ಸಾಕ್ಷಿ ಕಣ್ಣುಗಳು. ವ್ಯಕ್ತಿಯ ವ್ಯಕ್ತಿತ್ವದ ಕಿರೀಟ ಕಣ್ಣುಗಳು.

ಮನುಷ್ಯನ ಕಣ್ಣಿನ ಮುಂಭಾಗದ ಬಿಳಿಯ ಭಾಗವನ್ನು ಸ್ಕ್ಲೀರಾ ಎಂದು ಕರೆಯುತ್ತೇವೆ. ಕಣ್ಣು ಗುಡ್ಡೆಯ ಹೊರಪದರದ 5/6 ರಷ್ಟು ಭಾಗ ವ್ಯಾಪ್ತಿಯನ್ನು ಸ್ಕ್ಲೀರಾ ಎಂಬ ಪೊರೆ ಆವರಿಸಿಕೊಂಡಿದೆ. ಕಣ್ಣು ಗುಡ್ಡೆಯ ಶೇ.1/6 ರಷ್ಟು ಮಧ್ಯಭಾಗದಲ್ಲಿ ಇರುವುದೇ ಕಾರ್ನಿಯಾ. ಕಾರ್ನಿಯಾ ದುಂಡಾದ ಆಕಾರದಲ್ಲಿದೆ. ಇದು ಕಪ್ಪು ಬಣ್ಣದಿಂದ ಕೂಡಿರುತ್ತದೆ. ಕಣ್ಣು ಗುಡ್ಡೆಯ ಒಳಭಾಗವನ್ನು ಮಧ್ಯದ ಪದರ ಎನ್ನಲಾಗುತ್ತದೆ. ಕಣ್ಣು ಗುಡ್ಡೆಯನ್ನು ಸಂಪೂರ್ಣವಾಗಿ ಆವರಿಸಿಕೊಂಡಿರುವ ಚರ್ಮಪೊರೆ ಇದೆ. ಮಧ್ಯದ ಪದರ ರಕ್ತನಾಳಗಳಿಂದ ಕೂಡಿದೆ. ಪಾಪೆ ಪೊರೆಸ್ಪಂದನ ಲೋಮಾಂಗ ಮತ್ತು ಚರ್ಮಪೊರೆಗಳು ಕಣ್ಣಿನಲ್ಲಿ ಬೆಳಕು ಪ್ರವೇಶವನ್ನು ನಿಯಂತ್ರಿಸಲು ಸಹಕರಿಸುತ್ತವೆ. ಅಲ್ಲದೇ ಕಣ್ಣಿಗೆ ಬೇಕಾದ ರಕ್ತ ಮತ್ತು ಪೋಷಕಾಂಶಗಳನ್ನು ಪೂರೈಸುತ್ತವೆ. ಪಾಪೆ ಪೊರೆ ಮಧ್ಯದಲ್ಲಿರುವ ರಂಧ್ರಕ್ಕೆ ಕಣ್ಣಿನ ಪಾಪೆ ಎನ್ನಲಾಗುತ್ತದೆ. ಇದು ಸ್ಪಷ್ಟ ದೃಷ್ಟಿಗೆ ಬೇಕಾದ ಬೆಳಕನ್ನು ನಿಯಂತ್ರಿಸಿ ಕಾರ್ಯ ನಿರ್ವಹಿಸುತ್ತದೆ.

 ಕಣ್ಣಿನ ಮಹತ್ವ ಅರಿಯಲೇಬೇಕು

ಕಣ್ಣಿನ ಮಹತ್ವ ಅರಿಯಲೇಬೇಕು

ಮುಖದ ಮೂಳೆಯ ಗುಳಿಗಳಲ್ಲಿ ಎರಡು ಕಣ್ಣುಗಳನ್ನು ಪ್ರಕೃತಿ ಪ್ರಧಾನವಾಗಿ ಜೋಡಿಸಿ ಇಟ್ಟಿದೆ. ಕಣ್ಣಿನ ಸಂರಕ್ಷಣೆಗೆಂದೇ ರೆಪ್ಪೆಗಳು ಇವೆ. ಕಣ್ಣಿನ ಮೇಲೆ, ಕೆಳಗೆ ರೆಪ್ಪೆಗಳಿದ್ದು, ದೂಳು, ಹಾರಾಡುವ ಹುಳು ಹುಪ್ಪಟೆಗಳು, ಬೆವರಿನ ನೀರು ಕಣ್ಣಿನೊಳಗೆ ಹೋಗದಂತೆ ರಕ್ಷಿಸುತ್ತವೆ. ಬೆಳಕು, ಗಾಳಿಯಿಂದ ಕಣ್ಣನ್ನು ರಕ್ಷಿಸುತ್ತವೆ. ಕಣ್ಣೀರಿನಿಂದಾಗಿ ಉದ್ರೇಕಕಾರಿ ವಸ್ತುಗಳು ತೊಳೆದು ಹೋಗುವಂತೆ ಸೃಷ್ಟಿ ಇದೆ. ಕಣ್ಣೀರಿನಿಂದ ಸೋಂಕು ರೋಗಗಳು ನಿಯಂತ್ರಣಕ್ಕೆ ಬರುತ್ತವೆ. ಕಣ್ಣುಗಳಲ್ಲಿ ಕಣ್ಣೀರು ಸಮಾಂತರವಾಗಿ ಹಂಚಿಕೊಂಡು ಸ್ವಚ್ಛ ಮತ್ತು ತೇವಾಂಶದಿಂದ ಹೊಳಪು ಇರುವಂತೆ ಮಾಡುತ್ತದೆ. ಕಣ್ಣಿನ ರೆಪ್ಪೆಗಳ ನಿಯಮಿತ ಚಲನೆಯಿಂದ ಕಣ್ಣುಗಳಿಗೆ ನಿರಂತರ ರಕ್ಷಣೆ ದೊರೆಯುತ್ತದೆ.

ಕಣ್ಣಿನ ಒಳಗೆ ಇರುವ ಪದರವನ್ನು ಅಕ್ಷಿಪಟಲ ಎಂದು ಕರೆಯಲಾಗುತ್ತದೆ. ಇದು ಕ್ಯಾಮರಾ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಅಕ್ಷಿಪಟಲ ಹಳದಿ ಚುಕ್ಕೆ ಮತ್ತು ಶಂಖುಗಳಿಂದ ಕೂಡಿದೆ. ಅಕ್ಷಿಪಟಲದ ಪ್ರಮುಖ ಭಾಗವೆಂದರೆ ರಾಡ್ ‌ಗಳು. ದೃಷ್ಟಿ ನರದ ಮುಖಾಂತರ ಶಂಖುಗಳು ಮತ್ತು ರಾಡ್ ‌ಗಳು ನಾವು ನೋಡಲ್ಪಡುವ ಯಾವುದೇ ವಸ್ತುವಿನ ಅಚ್ಚನ್ನು ಮೆದುಳಿಗೆ ತಿಳಿಸುತ್ತವೆ. ನಿಮಗೆ ತಿಳಿದಿರಲಿ ಅಂತಾ ಒಂದು ಮಾತು. ಕಣ್ಣಿಗಿಂತ ಮೆದುಳಿನ ದೃಷ್ಟಿ ತುಂಬಾ ಚುರುಕು. ಇದರಿಂದಾಗಿಯೇ ನಾವು ವಸ್ತುಗಳನ್ನು ನೋಡಲು ಮತ್ತು ತಿಳಿಯಲು ಸಾಧ್ಯ.

 ಮೂರು ಪದರಗಳಿಂದ ರಚನೆಯಾಗಿರುವ ಕಣ್ಣುಗುಡ್ಡೆ

ಮೂರು ಪದರಗಳಿಂದ ರಚನೆಯಾಗಿರುವ ಕಣ್ಣುಗುಡ್ಡೆ

ಕಣ್ಣುಗುಡ್ಡೆ ಮೂರು ಪದರಗಳಿಂದ ರಚನೆಯಾಗಿದೆ. ಅವು ಹೀಗಿವೆ. ಕಾರ್ನಿಯಾ, ರಕ್ತನಾಳ ಮತ್ತು ನರಸ್ನಾಯು, ಅಕ್ಷಿಪಟಲ. ಕಣ್ಣುಗುಡ್ಡೆಯ ಮಧ್ಯದ ಪದರದಲ್ಲಿ ಮೂರು ಭಾಗಗಳಿದ್ದು ಅವುಗಳ ಹೆಸರು ಕೋರೈಡ್, ಸೀಲಿಯರಿ ಬಾಡಿ, ಐರೀಸ್. ಕಣ್ಣು ಹತ್ತು ಭಾಗಗಳಿಂದ ಕೂಡಿದೆ. ಅವೆಂದರೆ... ಕಾರ್ನಿಯಾ, ಕರಿಯಾಲಿ, ಸ್ಕ್ಲೀರಾ, ಲೆನ್ಸ್, ಐರೀಸ್, ಮೆಡಿಯಲ್ ರೆಕ್ಟಸ್ ಮಸಲ್, ಆಪ್ಟಿಕ್ ನರ್ವ್, ಆಪ್ಟಿಕ್ ನರ್ವ್ ಫೈರ್ಸ್, ರೆಟಿನಾ, ಮ್ಯಾಕುಲಾ. ಬೆಳಕಿನ ಕಿರಣಗಳು ಅಕ್ಷಿಪಟಲದ ಮೇಲೆ ವಕ್ರೀಭವಿಸಲು ಕಾರ್ಯನಿರ್ವಹಿಸುವ ಮೂರು ಮಾಧ್ಯಮಗಳಿವೆ. ಅವು ಏಕ್ವಿಯಸ್ ದ್ರವ, ಪಾರದರ್ಶಕ ಮಸೂರಾ, ಕಾಚಿರಸ.

ಕಣ್ಣೀರಿನ ಮುಖ್ಯವಾದ ಅಂಗಗಳು ಯಾವುವು ಅಂದರೆ, ಕಣ್ಣೀರಿನ ಗ್ರಂಥಿಗಳು, ಕಣ್ಣೀರಿನ ನಾಳಗಳು, ಕಣ್ಣೀರಿನ ಚೀಲಗಳು. ಆರೋಗ್ಯವಂತ ಕಣ್ಣಿನ ಒತ್ತಡದ ಪ್ರಮಾಣ ಹತ್ತರಿಂದ ಇಪ್ಪತ್ತು ಮಿ.ಮೀ.(ಪಾದರಸ). ಕಣ್ಣಿನ ಒತ್ತಡವನ್ನು ಒತ್ತಡ ಮಾಪಕ ಯಂತ್ರದಿಂದ ಅಳೆಯಲಾಗುತ್ತದೆ. ಸಾಮಾನ್ಯ ಕಣ್ಣಿನ ಒತ್ತಡದ ಪ್ರಮಾಣಕ್ಕಿಂತ ಹೆಚ್ಚಿನ ಒತ್ತಡ ಕಂಡುಬಂದರೆ ನೇತ್ರ ಚಿಕಿತ್ಸಾ ತಜ್ಞ ವೈದ್ಯರ ಬಳಿ ಕಣ್ಣಿಗೆ ಬಂದಿರಬಹುದಾದ ರೋಗ ಯಾವುದೆಂದು ಅಂದಾಜಿಸಬಹುದಾದರೆ ಅದಕ್ಕೊಂದು ಹೆಸರಿದೆ, ಅದೇ ಗ್ಲಾಕೋಮಾ.

 ದೃಷ್ಟಿ ಮಾನವನ ಮೂಲ ಹಕ್ಕುಗಳಲ್ಲಿ ಒಂದು

ದೃಷ್ಟಿ ಮಾನವನ ಮೂಲ ಹಕ್ಕುಗಳಲ್ಲಿ ಒಂದು

ದೃಷ್ಟಿ ಮಾನವನ ಮೂಲ ಹಕ್ಕುಗಳಲ್ಲಿ ಒಂದು. ಯಾವ ಪ್ರಜೆಯೂ ಅನವಶ್ಯಕವಾಗಿ ಅನಿರೀಕ್ಷಿತವಾಗಿ ದೃಷ್ಟಿಹೀನನಾಗಬಾರದು. ದೃಷ್ಟಿಹೀನತೆ ಸಂಭವಿಸಿದರೂ ನಮ್ಮಲ್ಲಿ ಲಭ್ಯವಿರುವ ಕೌಶಲ್ಯ ಮತ್ತು ಸಂಪನ್ಮೂಲಗಳಿಂದ ಸಾಧ್ಯವಾದಷ್ಟು ದೃಷ್ಟಿ ಅಸಮತೆಯಾಗದಂತೆ ರಕ್ಷಿಸಬೇಕು. ಸಾಧ್ಯತೆ ಇದ್ದಲ್ಲಿ ಪೂರ್ಣ ಪ್ರಮಾಣದಲ್ಲಿ ದೃಷ್ಟಿ ಬರುವಂತೆ ಮಾಡಬೇಕು. ಹೀಗೆಂದು ಕೇಂದ್ರ ಆರೋಗ್ಯ ಸಲಹಾ ಸಮಿತಿ ಸಭೆಯು ದಿನಾಂಕ: 1-4-1975 ರಲ್ಲಿ ನಿರ್ಣಯ ಅಂಗೀಕರಿಸಿದರು.

ಅವಧಿಗಿಂತ ಮೊದಲು ಜನಿಸುವ ಶಿಶು 1500 ಗ್ರಾಂಗಿಂತ ಕಡಿಮೆ ತೂಕ ಹೊಂದಿ ಜನಿಸಿದರೆ ನರದ ಕಾಯಿಲೆ ಕಂಡುಬರುವ ಸಾಧ್ಯತೆ ಇರುತ್ತದೆ. ಆದರೆ ಕಣ್ಣಿನ ನರದ ಕಾಯಿಲೆಗೆ ರೋಗ ಲಕ್ಷಣಗಳು ಗೋಚರಿಸುವುದಿಲ್ಲ. ಆದ್ದರಿಂದ ಹುಟ್ಟುವ ಶಿಶುವನ್ನು ಕಡ್ಡಾಯವಾಗಿ ತೂಕ ಮಾಡಲಾಗುತ್ತದೆ. ಜೊತೆಗೆ ಗರ್ಭಿಣಿ ಅವಧಿಯಲ್ಲಿ ತಾಯಂದಿರಿಗೆ ಸರ್ಕಾರವೇ ಪೋಷಕಾಂಶಯುಕ್ತ ಆಹಾರವನ್ನು ಅಂಗನವಾಡಿ ಮುಖಾಂತರ ಪೂರೈಸುತ್ತಿದೆ. ಆರೋಗ್ಯವಂತ ಗರ್ಭಿಣಿ ಮಾತ್ರ ಆರೋಗ್ಯವಂತ ಶಿಶುವನ್ನು ಈ ಜಗತ್ತಿಗೆ ಕೊಡಲು ಸಾಧ್ಯ. ಆದ್ದರಿಂದ ತಾಯಿಯ ಆರೋಗ್ಯದತ್ತ ಸರ್ಕಾರದ ಕಾಳಜಿ ಇದೆ.

 ನವಜಾತ ಶಿಶುವಿಗೂ ಕಣ್ಣು ಪರೀಕ್ಷೆ ಮುಖ್ಯ

ನವಜಾತ ಶಿಶುವಿಗೂ ಕಣ್ಣು ಪರೀಕ್ಷೆ ಮುಖ್ಯ

ನವಜಾತ ಶಿಶುವಿಗೆ ಕಣ್ಣು ಪರೀಕ್ಷೆ ನಂತರವೇ ಕಣ್ಣಿಗೆ ಸಂಬಂಧಿಸಿದಂತೆ ನರದ ಕಾಯಿಲೆ ಇರುವುದು ಪತ್ತೆಯಾಗುವುದು ಸಾಧ್ಯ. ಈ ನರದ ಕಾಯಿಲೆಗೆ ನಿರ್ದಿಷ್ಟವಾದ ಚಿಕಿತ್ಸೆ ಇರುವುದಿಲ್ಲ. ಆದರೆ ತಾಯಿ ಎದೆಹಾಲು ಇದಕ್ಕೆ ಸೂಕ್ತ ಪರಿಹಾರ. ತಾಯಿ ಹೆಚ್ಚು ಆಹಾರವನ್ನು ಕಾಲಕಾಲಕ್ಕೆ ಸೇವಿಸಬೇಕು. ಮಗುವಿಗೆ ನಿಯಮಿತ ಅಂತರದಲ್ಲಿ ಸ್ತನ್ಯಪಾನ ಮಾಡಿಸಬೇಕು. ಇದು ತಾಯಿಯ ಜವಾಬ್ದಾರಿ... ಕುಟುಂಬದ ಹೊಣೆಗಾರಿಕೆ.

ಅ 'ಅನ್ನಾಂಗ' ಎಂದರೆ ವಿಟಮಿನ್ 'ಎ'. ಇದರ ಕೊರತೆಯಾದರೆ ಮಕ್ಕಳಿಗೆ ದೃಷ್ಟಿಹೀನತೆ ಉಂಟಾಗುತ್ತದೆ. ಮತ್ತು ಹಲವು ರೀತಿಯ ಕಣ್ಣಿನ ದೋಷಗಳು ಕಂಡುಬರುತ್ತವೆ. ಕಣ್ಣಿಗೆ ಬಿಳಿಭಾಗಕ್ಕೆ ಕಂಜೆಕ್ಟಿವಾ ಎಂದು ಕರೆಯಲಾಗುತ್ತದೆ. ಈ ಬಿಳಿಭಾಗ ಒಣಗುತ್ತದೆ. ಕಣ್ಣಿನ ಕಾಂತಿ ಕಳೆದುಕೊಳ್ಳುತ್ತದೆ. ಒರಟಾಗಿ ಕಾಣಿಸುತ್ತದೆ. ಸುಕ್ಕುಗಟ್ಟಿದ ಬೂದುಬಣ್ಣದ ಉಬ್ಬಾದ ಕಲೆಗಳು ಕಂಡುಬರುತ್ತವೆ. ಈ ಕಲೆಗಳನ್ನು 'ಬಿಟಾಟ್ ಸ್ಪಾಟ್'ಗಳು ಎನ್ನಲಾಗುತ್ತದೆ. ಈ ಬಿಟಾಟ್ ಸ್ಪಾಟ್‌ಗಳು ಉಲ್ಬಣಗೊಂಡ ಪರಿಸ್ಥಿತಿಯಲ್ಲಿ ಕಾರ್ನಿಯಾಗೆ ತೀವ್ರ ತೊಂದರೆ ಸಂಭವಿಸುವದ ಸಾಧ್ಯತೆ ಹೆಚ್ಚು ಇರುತ್ತದೆ. ಸಾಮಾನ್ಯವಾಗಿ ಬಿಟಾಟ್ ಸ್ಪಾಟ್ ತೊಂದರೆ ಐದು ವರ್ಷದೊಳಗಿನ ಮಕ್ಕಳಲ್ಲಿ ಕಂಡುಬರುತ್ತದೆ. ಆದ್ದರಿಂದ ತಕ್ಷಣವೇ ಅ 'ಅನ್ನಾಂಗ' ಕೊರತೆಯನ್ನು ನೀಗಿಸುವ ಸಂಬಂಧ ಅನ್ನಾಂಗದ ಕೊರತೆಯನ್ನು ನಿವಾರಿಸಲು ಅ 'ಅನ್ನಾಂಗ' ದ್ರಾವಣ ಹಾಕುವ ಕಾರ್ಯಕ್ರಮವು ಜಾರಿಯಲ್ಲಿರುತ್ತದೆ.

 ಸರ್ಕಾರದಿಂದ ಅಂಧತ್ವ ನಿವಾರಣಾ ಕಾರ್ಯಕ್ರಮ

ಸರ್ಕಾರದಿಂದ ಅಂಧತ್ವ ನಿವಾರಣಾ ಕಾರ್ಯಕ್ರಮ

ಕಣ್ಣಿನ ಪೊರೆ ಸಾಮಾನ್ಯವಾಗಿ ಎಲ್ಲಾ ವ್ಯಕ್ತಿಗಳಿಗೂ ಬರಬಹುದಾದ ಒಂದು ಪೋಷಕಾಂಶಗಳ ಕೊರತೆಯ ಕಣ್ಣಿನ ಲಕ್ಷಣ. ಕಣ್ಣಿನ ಪೊರೆಗೆ ಇಂತಹುದೇ ವಯಸ್ಸು, ಲಿಂಗಭೇದ ಎಂದೇನೂ ಇಲ್ಲ. ಕಣ್ಣಿನ ಪೊರೆಗೆ ದೃಷ್ಟಿದೋಷ ಮೊದಲನೇ ಹಂತ. ಕಣ್ಣಿನ ಪೊರೆ ಎಂದರೆ ತಲೆನೋವು, ಕಣ್ಣು ಕೆಂಪಗಾಗುವುದು, ಕಣ್ಣು ನೋವು ಇದ್ಯಾವುದೂ ಇರುವುದಿಲ್ಲ. ಆರಂಭ ಹಂತದಲ್ಲಿ ಕಣ್ಣಿನಿಂದ ನೀರು ಹೆಚ್ಚು ಪ್ರಮಾಣದಲ್ಲಿ ಹರಿಯುತ್ತದೆ. ಕಣ್ಣಿನ ನೋಡುವ ಶಕ್ತಿ ಕ್ರಮೇಣ ಮಸುಕಾಗುತ್ತಾ ಹೋಗುತ್ತದೆ. ದೂರದ ವಸ್ತುಗಳನ್ನು ಕಂಡುಹಿಡಿಯಲು ಆಗುವುದಿಲ್ಲ. ಅಥವಾ ಅತೀ ಹತ್ತಿರದಿಂದ ಓದಿದರೂ ಅಕ್ಷರಗಳು ಕಾಣಿಸುವುದಿಲ್ಲ ಎಂದಾದರೆ ಕಣ್ಣಿನ ಪೊರೆ ಬಂದಿರಲು ಸಾಧ್ಯತೆ ಹೆಚ್ಚು.

ಮಧುಮೇಹ ತೊಂದರೆ ಅಥವಾ ಕಣ್ಣಿಗೆ ಆಗುವ ಗಾಯಗಳಿಂದಲೂ ಕಣ್ಣಿಗೆ ಪೊರೆ ಬರುವ ಸಾಧ್ಯತೆ ಇದೆ. ಕಣ್ಣಿಗೆ ಪೊರೆ ಬಂದಿದೆ ಅಂದರೆ ಸಹಜವಾಗಿ ಆರು ಮೀಟರ್ ದೂರದಿಂದ ವ್ಯಕ್ತಿಯ ಪ್ರತೀ ಕಣ್ಣಿನ ದೃಷ್ಟಿಯನ್ನು ಪ್ರತ್ಯೇಕವಾಗಿ 'ಕೈಬೆರಳುಗಳನ್ನು ಗುರುತಿಸಿ ಹೇಳುವ ಪರೀಕ್ಷೆ'ಗೆ ಗುರಿಪಡಿಸುವುದರಿಂದ ಸಾಧ್ಯ. ಈಗ ಆಧುನಿಕ ಯಂತ್ರಗಳಿಂದಲೂ ದೃಷ್ಟಿದೋಷದ ಸಮಸ್ಯೆಯನ್ನು ಕಂಡುಹಿಡಿಯಲು ಸಾಧ್ಯ ಇದೆ. ವಯೋವೃದ್ಧರಲ್ಲಿ ಕಣ್ಣಿನ ಪೊರೆ ಸಮಸ್ಯೆ ತುಂಬಾ ಸಾಮಾನ್ಯ. ಕಣ್ಣಿನ ಪೊರೆಯನ್ನು ನಿರ್ಲಕ್ಷಿಸುವುದು ಸರಿಯಲ್ಲ. ಸಣ್ಣ ಶಸ್ತ್ರಚಿಕಿತ್ಸೆಯ ಮೂಲಕ ಕಣ್ಣು ಪೊರೆಯನ್ನು ನಿವಾರಿಸಿ ದೃಷ್ಟಿಯನ್ನು ಸ್ವಚ್ಛವಾಗಿ ಮತ್ತು ಸ್ಪಷ್ಟವಾಗಿ ಕಾಣಿಸುವಂತೆ ಮಾಡುವುದಕ್ಕೆ ಸರ್ಕಾರ ಅಂಧತ್ವ ನಿವಾರಣಾ ಕಾರ್ಯಕ್ರಮವನ್ನು ರಾಷ್ಟ್ರಮಟ್ಟದಲ್ಲಿ ಹಮ್ಮಿಕೊಂಡಿರುವುದು. ಆದ್ದರಿಂದ ಸಾರ್ವಜನಿಕರು ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆಯಬಹುದು.

 ರವೆಗಣ್ಣು ರೋಗ ಎಂದರೆ ಏನು?

ರವೆಗಣ್ಣು ರೋಗ ಎಂದರೆ ಏನು?

ಇದೊಂದು ಸೋಂಕುರೋಗ. ಕಣ್ಣುಗುಡ್ಡೆ ಕೆಂಪಾಗುತ್ತದೆ. ಕಣ್ಣಿನಲ್ಲಿ ನೀರು ಸೋರುತ್ತದೆ. ಕಣ್ಣಿನ ರೆಪ್ಪೆಯ ಒಳಭಾಗದಲ್ಲಿ ರವೆಯ ಕಣಗಳು ಇರುವಂತೆ ಭಾಸವಾಗುತ್ತದೆ. ಕಣ್ಣುಗಳಿಗೆ ಒತ್ತಿದಂತೆ ಅನುಭವವಾಗುತ್ತದೆ. ರೆಪ್ಪೆಗಳು ಭಾರವೆನಿಸುತ್ತವೆ. ಈ ಲಕ್ಷಣಗಳು ಕಂಡುಬಂದರೆ ಇದನ್ನೇ 'ಪ್ರಕೋಮಾ' ಎಂದೂ ಕರೆಯಲಾಗುತ್ತದೆ.

ಕಸ, ದೂಳು, ಹೊಗೆ, ಅತಿಯಾದ ಬೆಳಕಿನ ಕಿರಣಗಳಿಗೆ ಕಣ್ಣುಗಳನ್ನು ತೆರೆಯಬಾರದು. ಕಣ್ಣುಗಳನ್ನು ಖಡಾಖಂಡಿತವಾಗಿ ಉಜ್ಜಲೇಬಾರದು. ಇದನ್ನು ನಿರ್ಲಕ್ಷ್ಯವಹಿಸಿದರೆ ಅಂಧತ್ವ ಉಂಟಾಗುತ್ತದೆ. ರವೆಗಣ್ಣು ರೋಗದ ಮೇಲ್ಕಾಣಿಸಿದ ಲಕ್ಷಣಗಳು ಕಂಡುಬಂದಾಗ ಕಾಡಿಗೆ ಹಚ್ಚುವ ಸಾಧನವನ್ನು ಈ ಸೋಂಕಿನಿಂದ ಗುಣವಾಗುವವರೆಗೆ ಬಳಸದೇ ಇರುವುದು ಉತ್ತಮ. ಕರವಸ್ತ್ರ, ಟವೆಲ್ ಬೇರೆಯವರಿಗೆ ಕೊಡಬಾರದು. ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಸ್ವಚ್ಛವಾದ ನೀರಿನಿಂದ ಕಣ್ಣುಗಳನ್ನು ತೊಳೆದುಕೊಳ್ಳಬೇಕು. ಕನ್ನಡಕ ಬಳಸುವುದು ಅತ್ಯುತ್ತಮ. ಅಂತೆಯೇ ಈ ರೀತಿಯ ಲಕ್ಷಣಗಳು ಕಂಡುಬಂದರೆ ನೇತ್ರ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯತಕ್ಕದ್ದು.

 ಕಂಜೆಕ್ಟಿವೈಟಿಸ್ ಸೋಂಕು

ಕಂಜೆಕ್ಟಿವೈಟಿಸ್ ಸೋಂಕು

ರವೆಗಣ್ಣು ರೋಗ ಉಂಟಾದ ಸಂದರ್ಭದಲ್ಲಿ ಕಣ್ಣಿಗೆ ಸೋಂಕು ತಗುಲಿದಾಗ ಸಕಾಲಿಕವಾಗಿ ವೈದ್ಯರ ಉಪಚಾರ ದೊರೆಯದಿದ್ದಲ್ಲಿ ಅಥವಾ ಚಿಕಿತ್ಸೆ ಪೂರ್ಣ ಪ್ರಮಾಣದಲ್ಲಿ ಪಡೆಯದೇ ಇದ್ದಲ್ಲಿ ಉಲ್ಬಣಗೊಳ್ಳುವ ರೋಗವನ್ನು 'ಟ್ರಿಚಿಯಾಸಿಸ್' ಎಂದು ಕರೆಯಲಾಗುತ್ತದೆ. ಆಗ ಕಣ್ಣಿನ ರೆಪ್ಪೆ ಭಾರವಾಗುತ್ತದೆ. ಭಾರ ಹೆಚ್ಚಾದ ರೆಪ್ಪೆ ಒಳಭಾಗಕ್ಕೆ ತಿರುಚಿಕೊಳ್ಳುತ್ತದೆ. ತಿರುಚಿಕೊಂಡ ರೆಪ್ಪೆಯ ರೋಮಗಳು ಕಾರ್ನಿಯಾ ಪಟಕ್ಕೆ ಉಜ್ಜುತ್ತವೆ. ಆಗ ಕಣ್ಣು ಉದ್ರೇಕಕ್ಕೆ ಒಳಗಾಗುತ್ತದೆ. ಕಣ್ಣಿನಿಂದ ನೀರು ಹರಿಯುತ್ತದೆ. ಇದರಿಂದ ಸಹ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಅತ್ಯಂತ ಹೆಚ್ಚು ಇದೆ. ಆದ್ದರಿಂದ ತಕ್ಷಣವೇ ನೇತ್ರ ತಜ್ಞವೈದ್ಯರನ್ನು ಸಂಪರ್ಕಿಸಲೇಬೇಕು.

ಕಂಜೆಕ್ಟಿವೈಟಿಸ್ ಸೋಂಕು ರೋಗ: ಕಣ್ಣುಗಳು ಈ ರೀತಿಯ ಸೋಂಕಿಗೆ ಒಳಗಾದರೆ ಆರಂಭದಲ್ಲಿ ಉರಿ ಕಂಡುಬರುತ್ತದೆ. ಕಣ್ಣು ರೆಪ್ಪೆಗಳಲ್ಲಿ ಬಾವು ಕಾಣಿಸುತ್ತದೆ. ನೀರು ಅಥವಾ ಲೋಳೆ ಹರಿದುಬರುತ್ತದೆ. ಕಣ್ಣುರಿ ಆರಂಭವಾದ ನಾಲ್ಕೇ ತಾಸಿನಲ್ಲಿಯೇ ರೋಗ ಉಲ್ಬಣಗೊಳ್ಳುತ್ತದೆ. ಕಣ್ಣುಗಳನ್ನು ತೆರೆಯಲು ಆಗುವುದಿಲ್ಲ. ಕಷ್ಟವಾಗುತ್ತದೆ. ಆರಂಭದಲ್ಲಿ ರವೆಗಣ್ಣು ರೋಗದ ಲಕ್ಷಣದಂತೆ ಕಂಡುಬಂದರೂ ಅದು ರವೆಗಣ್ಣು ರೋಗವಾಗಿರುವುದಿಲ್ಲ. ಇದು ವೈರೆಸ್ ಕ್ರಿಮಿಗಳಿಂದ ಬರುವ ರೋಗ. ಕಣ್ಣಿನ ಮೇಲ್ಭಾಗದ ತೆಳುವಾದ ಬಿಳಿಪೊರೆಯ ಪದರಕ್ಕೆ ಸೋಂಕು ತಗಲುತ್ತದೆ. ಹಳದಿಮಿಶ್ರಿತ ಬಿಳಿಯಾದ ದ್ರವ ಕಣ್ಣುಗಳಿಂದ ಹೊರಬರುತ್ತದೆ. ಅದನ್ನು ಸೋಂಕುಭರಿತ ಪಿಚ್ಚು ಎಂದು ಕರೆಯಲಾಗುತ್ತದೆ. ಇದು ಒಬ್ಬರಿಂದ ಒಬ್ಬರಿಗೆ ಹರಡುವ ರೋಗ. ಇದಕ್ಕೆ ಸಾಂಕ್ರಾಮಿಕ ಎಂದು ಕರೆಯಲಾಗುತ್ತದೆ.

 ಕಾರ್ನಿಯಲ್ ಅಂಧತ್ವ ಮತ್ತು ನೇತ್ರದಾನ

ಕಾರ್ನಿಯಲ್ ಅಂಧತ್ವ ಮತ್ತು ನೇತ್ರದಾನ

ಕಾರ್ನಿಯಲ್ ಅಂಧತ್ವ ಎಂದರೆ ಕಣ್ಣಿಗೆ ಹೂವು ಬಂದಿದೆ ಎನ್ನುವುದು ವಾಡಿಕೆ ಮಾತು. ಕಣ್ಣಿನ ಕಪ್ಪು ಗುಡ್ಡೆಯ ಭಾಗ ಬಿಳಿಯಾಗುತ್ತದೆ. ಪಾರದರ್ಶಕ ಪಟಲಕ್ಕೆ ವೃಣವಾದರೆ ಅಥವಾ ಪಟಲಕ್ಕೆ ವ್ಯಾಧಿಯುಂಟಾದರೆ ಅದು ತನ್ನ ಪಾರದರ್ಶಕ ಶಕ್ತಿ ಕಳೆದುಕೊಂಡು ಬೆಳ್ಳಗಾಗುತ್ತದೆ. ಕಣ್ಣಿನ ಕಪ್ಪು ಭಾಗದ ಮೇಲೆ ಬೆಳ್ಳಗಾಗುವುದನ್ನೇ ಹೂವು ಬಿದ್ದಿದೆ ಎಂದು ಕರೆಯಲಾಗುತ್ತದೆ. ಕಾರ್ನಿಯಲ್ ಅಂಧತ್ವಕ್ಕೆ ಒಳಗಾದ ಅಪಾರದರ್ಶಕವಾದ ಭಾಗವನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆಗೆಯಲಾಗುತ್ತದೆ.

ಮೃತ ವ್ಯಕ್ತಿಗಳು ಮಾಡುವ ನೇತ್ರದಾನದಿಂದ ಪಡೆದ ಕಾರ್ನಿಯಾ ಭಾಗವನ್ನು ಕಸಿ ಮಾಡುವುದರ ಮೂಲಕ ಕಾರ್ನಿಯಲ್ ಅಂಧತ್ವವನ್ನು ನಿವಾರಣೆ ಮಾಡಲು ಸಾಧ್ಯ. ಕಾರ್ನಿಯಲ್ ಅಂಧತ್ವಕ್ಕೆ ವಿಟಮಿನ್ 'ಎ' ಕೊರತೆ, ವಿವಿಧ ಕಾರಣಗಳಿಂದ ಉಂಟಾದ ಗಾಯಗಳ ದುಷ್ಪರಿಣಾಮ, ಆಮ್ಲ ಮತ್ತು ಕ್ಷಾರಗಳಿಂದ ಉಂಟಾಗುವ ಸುಟ್ಟ ಗಾಯಗಳು. ಸೋಂಕು ಅಥವಾ ಶಸ್ತ್ರ ಚಿಕಿತ್ಸೆಯ ನಂತರದಲ್ಲಿ ಆಗುವ ಪರಿಣಾಮಗಳು, ಕಣ್ಣು ಕೆಂಪಗಾಗುವುದು, ಕಣ್ಣು ಒಣಗಿರುವುದು, ಕಣ್ಣು ನೋವು, ಮಂಜಾದ ದೃಷ್ಟಿ, ಕಣ್ಣುಗಳಲ್ಲಿ ನೀರು ತುಂಬಿಕೊಳ್ಳುವುದು, ಕಣ್ಣುಗಳಲ್ಲಿ ಗೀರು ಗೀರು ಆಗುವುದು ಇದಕ್ಕೆಲ್ಲಾ ಚಿಕಿತ್ಸೆ ಇದೆ. ಆದ್ದರಿಂದ ದಯವಿಟ್ಟು ಸಾರ್ವಜನಿಕರು ನೇತ್ರದಾನವನ್ನು ಮಾಡುವ ಮೂಲಕ ಬೇರೆಯವರಿಗೆ ದೃಷ್ಟಿ ಕೊಟ್ಟ ಪುಣ್ಯದಲ್ಲಿ ಭಾಗಿಯಾಗುತ್ತೀರಿ ಎಂದು ನಾನು ಭಾವಿಸುತ್ತೇನೆ ಮತ್ತು ಆಶಿಸುತ್ತೇನೆ.

 ಕೋವಿಡ್ 19 ಕಾಲದಲ್ಲಿ ಕಣ್ಣಿನ ಸಂರಕ್ಷಣೆ ಹೇಗಿರಬೇಕು?

ಕೋವಿಡ್ 19 ಕಾಲದಲ್ಲಿ ಕಣ್ಣಿನ ಸಂರಕ್ಷಣೆ ಹೇಗಿರಬೇಕು?

ಮೇಲ್ಕಾಣಿಸಿದ ವಿಷಯಾಂಶಗಳಲ್ಲದೇ ಈಗ ಕೋವಿಡ್-19 ಸಂಕಷ್ಟ ಕಾಲ. ಈ ಸಂದರ್ಭದಲ್ಲಿ ಸಾರ್ವಜನಿಕರು ಅಶುದ್ಧ ಕೈಗಳನ್ನು ಬಳಸಿ ಕಣ್ಣನ್ನು ಮುಟ್ಟಿಕೊಳ್ಳುವುದು, ಮುಖವನ್ನು ನೀವಿಕೊಳ್ಳುವುದು ಮಾಡಬಾರದು. ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವಂತಹವರು ಪ್ರತಿ 20 ನಿಮಿಷಗಳಿಗೊಮ್ಮೆ ಕನಿಷ್ಠ 20 ಸೆಕೆಂಡುಗಳ ಕಾಲ ಕಣ್ಣು ಮುಚ್ಚುವುದು ಅಥವಾ ದೃಷ್ಟಿಯನ್ನು ಬೇರೆಕಡೆಗೆ ಹರಿಸುವ ಮೂಲಕ ಕಣ್ಣಿಗೆ ವಿಶ್ರಾಂತಿ ನೀಡುವುದು ಸೇರಿದಂತೆ ಪೋಷಕಾಂಶಯುಕ್ತ ಆಹಾರಗಳನ್ನು (ನ್ಯೂಟ್ರಿಷನ್ ಫುಡ್) ಸೇವಿಸುವುದು ಅತ್ಯಗತ್ಯವಿದೆ.

ಕಣ್ಣು ತುಂಬಾ ಸೂಕ್ಷ್ಮಾಂಗ. ನಮ್ಮ ಜೀವನದಲ್ಲಿ ನಡೆಯುವ ಘಟನೆಗಳು, ಜೀವನ ಶೈಲಿ ಮುಂತಾದವುಗಳು ಕಣ್ಣಿಗೆ ಮಾರಕ. ದೃಷ್ಟಿ ಇದೆ ಆದರೆ ಬಣ್ಣಗೇಡು. ಬಣ್ಣಗೇಡು ಅಂದರೆ ಯಾವುದೇ ಬಣ್ಣಗಳನ್ನು ಗುರುತಿಸಲಾಗದ ಸ್ಥಿತಿ. ಅಲರ್ಜಿಯಿಂದ ಕಣ್ಣಿನ ಸಮಸ್ಯೆಗಳು, ಸ್ಟೆಮ್ ‌ಸೆಲ್ ಮತ್ತು ದೃಷ್ಟಿಮಾಂದ್ಯತೆ. ಅಧಿಕ ರಕ್ತದೊತ್ತಡದಿಂದ ಕಣ್ಣಿನ ಮೇಲಾಗುವ ದುಷ್ಟಪರಿಣಾಮಗಳು, ಬ್ಯಾಕ್ರಿಯೋಸಿಸ್ಟೆಂಟಿಸ್ ರಕ್ತಹೀನತೆಯಿಂದ ಸಮಸ್ಯೆಗಳು. ಒಂದೇ ಎರಡೇ.... ಈ ಬಗ್ಗೆ ಹೇಳುತ್ತಾ ಹೊರಟರೆ ದೊಡ್ಡ ಕಥಾನಕವೇ ಇದೆ. ಆದಾಗ್ಯೂ ವಿಶ್ವ ದೃಷ್ಟಿ ದಿನದ ಅಂಗವಾಗಿ ಸಾಮಾನ್ಯವಾಗಿ ನಮ್ಮ ಆರೋಗ್ಯದ ನಿಯಂತ್ರಣದಲ್ಲಿ ಕಣ್ಣಿನ ದೃಷ್ಟಿಯ ಭರವಸೆಯನ್ನು ಮೂಡಿಸುವ ಪ್ರಯತ್ನವಾಗಿ ಈ ಲೇಖನ ಮೂಡಿಬಂದಿದೆ. ನಿಮಗೆ ಕಣ್ಣಿನ ಆರೋಗ್ಯದ ಬಗ್ಗೆ ಮಾರ್ಗದರ್ಶನ ಬೇಕಾದಲ್ಲಿ 944896208 ಇಲ್ಲಿಗೆ ಸಂಪರ್ಕಿಸಿರಿ.

ಲೇಖಕರು: ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು, ಜಿಲ್ಲಾ ನೇತ್ರ ಸಂಚಾರಿ ಘಟಕ, ಜಿಲ್ಲಾ ಆಸ್ಪತ್ರೆ, ಹಾವೇರಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+