ಚಿಂವ್ ಚಿಂವ್ ಗುಬ್ಬಚ್ಚಿ ಎಲ್ಲಿ ಹೋದೆ...
ಗುಬ್ಬಚ್ಚಿಗಳಿಲ್ಲದ ಮನೆ ಇಲ್ಲ ಎಂಬ ಮಾತು ದಶಕಗಳ ಹಿಂದಿನವರೆಗೂ ಚಾಲ್ತಿಯಲ್ಲಿತ್ತು. ಪ್ರತಿ ಮನೆಯಂಗಳದಲ್ಲಿ, ಪೇಟೆ ಬೀದಿಯ ಅಂಗಡಿಗಳ ಮುಂಭಾಗದಲ್ಲಿ ಗುಬ್ಬಚ್ಚಿಗಳ ಚಿಲಿಪಿಲಿ ಕೇಳುತ್ತಲೇ ಇತ್ತು. ಆದರೆ, ಮನೆಯ ಸದಸ್ಯರಂತೆಯೇ ಹಾರಾಡಿಕೊಂಡು, ಚಿಲಿಪಿಲಿ ಎನ್ನುತ್ತಿದ್ದ ಪುಟ್ಟ ಪುಟ್ಟ ಗುಬ್ಬಚ್ಚಿಗಳು ಇಂದಿನ ಮಕ್ಕಳಿಗೆ ಸಿಂಹ, ಹುಲಿ ಎಂದು ಚಿತ್ರಗಳನ್ನು ತೋರಿಸುವ ಸಾಲಿಗೆ ಸೇರಿರುವುದು ಬೇಸರದ ಸಂಗತಿಯಾಗಿದೆ. ಇಂದು ವಿಶ್ವ ಗುಬ್ಬಚ್ಚಿ ದಿನ. ಈ ನೆಪದಲ್ಲೊಂದು ಲೇಖನ ಇಲ್ಲಿದೆ...
ದೇಶದಲ್ಲಿವೆ ಐದು ಜಾತಿಯ ಗುಬ್ಬಿಗಳು
ಗುಬ್ಬಚ್ಚಿ/ ಗುಬ್ಬಿ (ಪಾಸರ್ ಡೊಮೆಸ್ಟಿಕಸ್) ವಿಶ್ವದೆಲ್ಲೆಡೆ ಕಂಡುಬರುವ ಪಾಸರೀಡೆ ಕುಟುಂಬಕ್ಕೆ ಸೇರಿದ ಪಕ್ಷಿ. ಚಿಕ್ಕ ಕೀಟಗಳು ಹಾಗೂ ಕಾಳುಗಳು ಇದರ ಆಹಾರ. ಈವರೆಗೆ ವಿಶ್ವದಲ್ಲಿ 26 ವಿವಿಧ ಜಾತಿಯ ಗುಬ್ಬಿಗಳನ್ನು ಗುರುತಿಸಿದ್ದು, ಇದರಲ್ಲಿ ನಮ್ಮ ದೇಶದಲ್ಲಿ ಪಾಸರ್ ಡೊಮೆಸ್ಟಿಕಸ್, ಪಾಸರ್ ಹಿಸ್ಪಾನಿಯೊಲೆನ್ಸಸ್, ಪಾಸರ್ ಪೈರೊನಾಟಸ್, ಪಾಸರ್ ರುಟಿಲನ್ಸ್, ಪಾಸರ್ ಮೊಂಟನಸ್ ಎಂಬ 5 ವಿಭಿನ್ನ ಜಾತಿಯ ಗುಬ್ಬಿಗಳನ್ನು ಕಾಣಬಹುದು.
ಇದರಲ್ಲಿ ಮನೆಗುಬ್ಬಿ ಸರ್ವವ್ಯಾಪಿ. ಇದರ ಜೀವಿತಾವಧಿ 3 ವರ್ಷ. ಪರಿಸರ ನಾಶ ಮತ್ತು (ಆಧುನಿಕ ಕಾಂಕ್ರೀಟ್ ಕಟ್ಟಡಗಳು ಗೂಡು ನಿರ್ಮಿಸಲು ಸೂಕ್ತವಲ್ಲ) ಗೂಡುಕಟ್ಟುವ ತಾಣಗಳ ನಾಶದಿಂದ, ಮೊಬೈಲ್ ಟವರ್, ಅವು ಹೊರಸೂಸುವ ತರಂಗಗಳು, ಶಬ್ದಮಾಲಿನ್ಯ, ಸೂಕ್ಷ್ಮ ಮಾಲಿನ್ಯ ಮತ್ತು ಮಿತಿಮೀರಿದ ಕೀಟನಾಶಕದ ಬಳಕೆಯಿಂದ ಗುಬ್ಬಿಯ ಸಂತತಿಯು ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಕ್ಷೀಣಿಸುತ್ತಿದೆ. ಒಂದು ಕಾಲದಲ್ಲಿ ಪಟ್ಟಣಗಳಲ್ಲಿ ಮಾತ್ರ ಕಾಂಕ್ರೀಟ್ ಕಟ್ಟಡಗಳ ನಿರ್ಮಾಣ ಸಾಮಾನ್ಯವಾಗಿತ್ತು. ಆದರೆ, ಇತ್ತೀಚೆಗೆ ಹಳ್ಳಿಗಳು ಇದಕ್ಕೆ ಹೊರತಾಗಿಲ್ಲ. ಪಟ್ಟಣವಿರಲಿ, ಹಳ್ಳಿಯಾಗಲಿ ಹಂಚಿನ ಹಾಗೂ ಸಾಂಪ್ರದಾಯಿಕ ಮಡಿಗೆ ಮನೆಯ ಪ್ರಾಂಗಣಗಳಲ್ಲಿ ಗುಬ್ಬಿಗಳು ಗೂಡುಕಟ್ಟಿ ಸಂಸಾರ ನಡೆಸುವುದು ಸಾಮಾನ್ಯವಾಗಿತ್ತು.

ಆಧುನಿಕತೆಗೆ ತಕ್ಕಂತೆ ಮಾನವ ಮನೆ ನಿರ್ಮಾಣಕ್ಕೆ ಬಳಸುವ ಕಚ್ಛಾವಸ್ತು ಮತ್ತು ವಿನ್ಯಾಸಗಳು ಗುಬ್ಬಿಗಳು ಗೂಡು ನಿರ್ಮಿಸಲು ಪೂರಕವಾಗದಿರುವುದು ಕೂಡಾ ಸಂತತಿ ಕ್ಷೀಣಿಸಲು ಒಂದು ಕಾರಣವಾಗಿದೆ ಎನ್ನುತ್ತಾರೆ ವೈಲ್ಡ್ ಲೈಫ್ ವೆಲ್ ಫೇರ್ ಸೊಸೈಟಿಯ ಜೀವವೈವಿಧ್ಯ ಸಂಶೋಧಕ ಮಂಜುನಾಥ ನಾಯಕ.
ಸಂತತಿ ಕ್ಷೀಣಿಸಲು ಕಾರಣವೇನು?
ಹಿಂದಿನ ದಿನಗಳಲ್ಲಿ ಧಾನ್ಯಗಳನ್ನು ಅಂಗಡಿ/ ಸಂತೆಯಿಂದ ತಂದು ಮರದಿಂದ ಸ್ವಚ್ಛಗೊಳಿಸುವಾಗ ಕಾಳುಗಳನ್ನು ಮನೆ ಅಂಗಳದಲ್ಲಿ ಗುಬ್ಬಿಗೋಸ್ಕರವೇ ಚೆಲ್ಲುತ್ತಿದ್ದರು. ಇದರಿಂದ ಗುಬ್ಬಿಗಳಿಗೆ ಹೇರಳವಾಗಿ ಆಹಾರ ಸಿಗುತ್ತಿತ್ತು. ಬದಲಾದ ಆಧುನಿಕ ಜೀವನ ಶೈಲಿಯಿಂದಲೂ, ಸೀಸ ಮಿಶ್ರಿತ ಪೆಟ್ರೋಲ್ ಬಳಕೆ, ಮೊಬೈಲ್ ಗೋಪುರದಿಂದ ಹೊರಸೂಸುವ ವಿದ್ಯುತ್ ಕಾಂತೀಯ ಸೂಕ್ಷ್ಮ ತರಂಗಗಳಿಂದ ಮೊಟ್ಟೆಯಿಂದ ಮರಿಯಾಗುವ ಪ್ರಕ್ರಿಯೆಗೆ ತೊಂದರೆ, ಮಿತಿಮೀರಿದ ಶಬ್ದಮಾಲಿನ್ಯದಿಂದಾಗಿ ಸಹ ಗುಬ್ಬಿಗಳ ಸಂಖ್ಯೆ ಕ್ಷೀಣಿಸಲು ಕಾರಣವೆನ್ನಬಹುದು. ಮನೆಗುಬ್ಬಿಗಳು ಪರಿಸರದ ನಿರಂತರ ಅವನತಿ/ ವಿಘಟನೆಯ ಸೂಚಕಗಳಾಗಿವೆ ಎಂದು ಅವರು ಹೇಳುತ್ತಾರೆ.

ವಿಶ್ವ ಗುಬ್ಬಚ್ಚಿ ದಿನ ಆಚರಣೆ
'ಕಣ್ಮರೆಯಾಗುತ್ತಿರುವ ಈ ಗುಬ್ಬಚ್ಚಿಗಳನ್ನು ರಕ್ಷಣೆ ಮಾಡುವ ಸಲುವಾಗಿ ನೇಚರ್ ಫಾರ್ ಎವರ್ ಸೊಸೈಟಿಯ ಸಂಸ್ಥಾಪಕ ಮೊಹ್ಮದ್ ದಿಲಾವರ್ ಮತ್ತು ಎಕೊ- ಸಿಸ್ ಆಕ್ಷನ್ ಫೌಂಡೇಷನ್ ಫ್ರಾನ್ಸ್ ಸಂಸ್ಥೆಗಳ ಸಹಯೋಗದೊಂದಿಗೆ ಪ್ರತಿವರ್ಷ ಮಾರ್ಚ್ 20ರಂದು ವಿಶ್ವ ಗುಬ್ಬಚ್ಚಿ ದಿನವನ್ನು ಆಚರಿಸಲಾಗುತ್ತದೆ. 2010ರಿಂದ ವಿಶ್ವದ ವಿವಿಧ ದೇಶಗಳಲ್ಲಿ ಈ ಆಚರಣೆ ಪ್ರಾರಂಭವಾಯಿತು. ಪ್ರಕೃತಿ ಸಂರಕ್ಷಣೆಯ ಅಂತರರಾಷ್ಟ್ರೀಯ ಸಂಘಟನೆಯ (ಐಯುಸಿಎನ್) ವರದಿಯ ಪ್ರಕಾರ, 25 ವರ್ಷಗಳಲ್ಲಿ ಗುಬ್ಬಿಗಳ ಸಂತತಿಯು ಶೇ 71ರಷ್ಟು ಕುಸಿದಿದೆ. ಈ ಸಂತತಿಯ ಬಗ್ಗೆ ಅರಿವು ಮೂಡಿಸಲು ಮತ್ತು ಸಂರಕ್ಷಿಸಲು ಗುಬ್ಬಚ್ಚಿಯನ್ನು 2012ರಲ್ಲಿ ದೆಹಲಿಯ ರಾಜ್ಯ ಪಕ್ಷಿಯಾಗಿ ಘೋಷಿಸಲಾಯಿತು. ಇತ್ತೀಚಿಗೆ ಬಿಹಾರ ರಾಜ್ಯವು ಕೂಡ ಗುಬ್ಬಚ್ಚಿಯನ್ನು ರಾಜ್ಯಪಕ್ಷಿಯಾಗಿ ಘೋಷಿಸಿತು' ಎಂದು ಅವರ ವಿವರಿಸಿದರು.
ಗುಬ್ಬಿಗಳ ಸಂರಕ್ಷಣೆ ಹೇಗೆ?
ಗುಬ್ಬಿಗಳು ಮಾನವರ ನಿಕಟ ಸಂಬಂಧಿ. ಅವುಗಳಿಗೆ ವಾಸಿಸಲು ಅನುಕೂಲವಾಗುವಂತೆ ಮನೆಯ ಸುತ್ತಮುತ್ತ ಮರಗಳನ್ನು ಬೆಳೆಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಬೆಳೆದಿರುವ ಗಿಡಗಳ ರೆಂಬೆಗಳಿಗೆ ನೀರು ತುಂಬಿದ ಮಡಿಕೆಗಳನ್ನು ನೇತು ಹಾಕುವುದು, ತಾರಸಿಗಳ ಮೇಲೆ ನೀರು ತುಂಬಿದ ಮಡಿಕೆಗಳನ್ನು ಇಡುವ ಮೂಲಕ ಬೇಸಿಗೆಯಲ್ಲಿ ಅವುಗಳಿಗೆ ದಣಿವಾರಿಸಿಕೊಳ್ಳಲು ಅನುಕೂಲ ಮಾಡಿಕೊಡಬೇಕು. ಗುಬ್ಬಿಗಳು ಮನೆಯಲ್ಲಿ ಗೂಡು ನಿರ್ಮಿಸುವುದು ಸಾಮಾನ್ಯ. ಅದನ್ನು ಅಪಶಕುನವೆಂದು ಗೂಡು ನಾಶ ಮಾಡಬಾರದು ಎನ್ನುವುದು ಮಂಜುನಾಥ ನಾಯಕ ಅವರ ಕಳಕಳಿ.

ಪ್ರತಿ ವನ್ಯಜೀವಿಗಳು ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಪರಿಸರ ಹಾಗೂ ವನ್ಯಜೀವಿ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಮಳೆ ತರುವಲ್ಲಿ ಹಾಗೂ ಮಳೆ ನೀರು ಇಂಗಿಸಲು ಅರಣ್ಯಗಳು ಬಹುಮುಖ್ಯ. ಅರಣ್ಯವೃದ್ಧಿಯಲ್ಲಿ ಪಕ್ಷಿ ಸಂಕುಲ ಪ್ರಮುಖ ಪಾತ್ರ ವಹಿಸುತ್ತವೆ. ಅವುಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಅವರು ಕರೆ ನೀಡುತ್ತಾರೆ.
-
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ












Click it and Unblock the Notifications