• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವ ಸೋರಿಯಾಸಿಸ್ ದಿನ 2021: ಲಕ್ಷಣಗಳು, ಚಿಕಿತ್ಸೆ ಬಗ್ಗೆ ಮಾಹಿತಿ

|
Google Oneindia Kannada News

ಇಂದು ವಿಶ್ವ ಸೋರಿಯಾಸಿಸ್ ದಿನ, ಸೋರಿಯಾಸಿಸ್ ಎಂದರೇನು, ಅದರ ಲಕ್ಷಣಗಳೇನು, ರೋಗ ಹೇಗೆ ಹರಡುತ್ತದೆ ಎಂಬುದನ್ನು ತಿಳಿಯೋಣ.

ಸೋರಿಯಾಸಿಸ್‌ ಕಾಯಿಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ಅನುವಂಶಿಕ, ಮಾನಸಿಕ ಒತ್ತಡಗಳು, ಅಲರ್ಜಿಗಳು, ಸೋಂಕುಗಳು, ಹವಾಮಾನದ ವೈಪರೀತ್ಯಗಳು ಮತ್ತು ಕೆಲವು ಔಷಧಿಗಳು ಈ ಕಾಯಿಲೆಯನ್ನು ಪ್ರಚೋದಿಸುತ್ತವೆ.

ಆದರೆ ಇದು ಅಂಟು ಕಾಯಿಲೆಯಲ್ಲ. ಈ ರೋಗದಲ್ಲಿ ಚರ್ಮದ ಮೇಲೆ ಅಲ್ಲಲ್ಲಿ ನಿರ್ದಿಷ್ಟ ಅಂಚು ಹೊಂದಿದ, ಕೆಂಪು ಕಲೆಗಳ ಮೇಲೆ ಬೆಳ್ಳಿಯಂತಹ ದಪ್ಪ ಚಕ್ಕೆಗಳು ಶೇಖರಣೆಯಾಗಿ ಉಬ್ಬಿದಂತೆ ಕಾಣುತ್ತವೆ. ಅಪರೂಪವಾಗಿ ತುರಿಕೆ ಕಂಡು ಬರಬಹುದು.

ವಿಶ್ವ ಸೋರಿಯಾಸಿಸ್ ಒಕ್ಕೂಟದ ಪ್ರಕಾರ, ಪ್ರಪಂಚದಾದ್ಯಂತ 125 ಮಿಲಿಯನ್ ಜನರು, ಅಂದರೆ ಒಟ್ಟು ಜನಸಂಖ್ಯೆಯ ಶೇಕಡಾ 2 ರಿಂದ 3 ರಷ್ಟು ಜನರು ಈ ರೋಗದಿಂದ ಬಳಲುತ್ತಿದ್ದಾರೆ. ಅಂಥ ಜನರನ್ನು ಗುರುತಿಸಲು ಮತ್ತು ಈ ಬಗ್ಗೆ ಜಾಗೃತಿ ಮೂಡಿಸಲು, ಪ್ರತಿ ವರ್ಷ ಅಕ್ಟೋಬರ್ 29 ರಂದು ವಿಶ್ವ ಸೋರಿಯಾಸಿಸ್ ದಿನವನ್ನಾಗಿ ಆಚರಿಸಲಾಗುತ್ತದೆ.

ಈ ಮಚ್ಚೆಗಳು ಹಲವು ಮಿ.ಮೀ. ಗಳಿಂದ ಕೆಲವು ಸೆಂ.ಮೀ ಗಳವರೆಗೂ ಹರಡಬಹುದಾಗಿದ್ದು, ಕೆಲವರಲ್ಲಿ ಒಂದೆರಡು ಮಾತ್ರವಿದ್ದು ಮತ್ತೆ ಕೆಲವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಬಹುದು. ಈ ರೀತಿಯ ಮಚ್ಚೆಗಳು ದೇಹದ ಯಾವುದೇ ಭಾಗದಲ್ಲಿ ಬರಬಹುದಾದರೂ, ತಲೆ, ಮಂಡಿ, ಮೊಳಕೈ ಮತ್ತು ಬೆನ್ನಿನ ಮೇಲೆ ಹೆಚ್ಚು ಕಾಣಿಸಿಕೊಳ್ಳುತ್ತವೆ.

ಕೆಲವು ರೋಗ ಪೀಡಿತರಲ್ಲಿ, ಉಗುರುಗಳೂ ಈ ರೋಗಕ್ಕೆ ತುತ್ತಾಗಿ ಉಗುರುಗಳು ದಪ್ಪವಾಗಿ, ಬಣ್ಣ ಮಾಸಬಹುದು ಅಥವಾ ಕಂದು/ಕಪ್ಪು ಬಣ್ಣಕ್ಕೆ ತಿರುಗಬಹುದು. ಉಗುರಿನ ಮೇಲ್ಮೈ ನಲ್ಲಿ ಸಣ್ಣ ಸಣ್ಣ ತಗ್ಗುಗಳು ಕಾಣಿಸಿಕೊಳ್ಳಬಹುದು.

ರೋಗ ಹರಡುವುದು ಹೇಗೆ?
ಪ್ರತಿರಕ್ಷಣಾ ವ್ಯವಸ್ಥೆಯು ಅತಿಯಾಗಿ ಸಕ್ರಿಯವಾಗಿದ್ದಾಗ ಮತ್ತು ಆರೋಗ್ಯಕರ ಚರ್ಮದ ಅಂಗಾಂಶದ ಮೇಲೆ ದಾಳಿ ನಡೆಸಿದಾಗ ಸೋರಿಯಾಸಿಸ್​ ಉಂಟಾಗುತ್ತದೆ. ಈ ಪ್ರಕ್ರಿಯೆ ಉರಿಯೂತವನ್ನುಂಟು ಮಾಡುವುದರ ಜತೆಗೆ ಚರ್ಮದ ಕೋಶಗಳ ಬೆಳವಣಿಗೆಯನ್ನು ವೇಗಗೊಳಿಸುತ್ತದೆ. ಇದರಿಂದಾಗಿ ಚರ್ಮ ತುರಿಕೆ, ನೋವು ಉಂಟಾಗುತ್ತದೆ. ಇದು ಇಡೀ ದೇಹವನ್ನೇ ಆವರಿಸುತ್ತದೆ. ಸಾಮಾನ್ಯವಾಗಿ ನೆತ್ತಿ, ಮೊಣಕಾಲು, ಬೆನ್ನು, ಮೊಣಕೈ ಮೇಲೆ ಕಾಣಿಸಿಕೊಳ್ಳುತ್ತದೆ. ಆದರೆ, ಇವು ತುರಿಕೆಯುಂಟು ಮಾಡುತ್ತದೆಯೇ ವಿನಃ, ನೋವನ್ನುಂಟು ಮಾಡುವುದಿಲ್ಲ ಎನ್ನುತ್ತಾರೆ ಕೆಲವರು.

ಸೋರಿಯಾಸಿಸ್ ಬಗ್ಗೆ ನೀವು ತಿಳಿಯಲೇಬೇಕಾದ ಸಂಗತಿಗಳು:
*ರೋಗಿಗಳಿಗೆ ಯಾವುದೇ ಆಹಾರದ ಪಥ್ಯ ಬೇಕಾಗಿಲ್ಲ. ಆದರೆ ಸಿಪ್ಪೆಗಳ ಮೂಲಕ ಪ್ರೋಟೀನ್‌ಗಳು ಕಳೆದು ಹೋಗುವುದರಿಂದ ಸಮತೋಲನವಾದ ಆಹಾರದ ಅಗತ್ಯ
* ಸೋರಿಯಾಸಿಸ್‌ ಕಾಯಿಲೆಯಿಂದ ಕ್ಯಾನ್ಸರ್‌ ಬರುವುದಿಲ್ಲ.
*ಸೋರಿಯಾಸಿಸ್‌ ಪೀಡಿತರು ಭಾವೋದ್ವೇಗಕ್ಕೆ ಒಳಗಾಗಬಾರದು. ಏಕೆಂದರೆ ಉದ್ವೇಗದಿಂದ ಕಾಯಿಲೆ ಉಲ್ಬಣಗೊಳ್ಳುತ್ತದೆ.
*ಹಲವು ನಕಲಿ ವೈದ್ಯರು ಸೋರಿಯಾಸಿಸ್‌ ಪೀಡಿತರನ್ನು ಶೋಷಣೆ ಮಾಡುತ್ತಿದ್ದು, ಇಂತಹವರ ಬಗ್ಗೆ ಎಚ್ಚರಿಕೆ ವಹಿಸಬೇಕು.
*ಸೋರಿಯಾಸಿಸ್‌ ಅಂಟು ಕಾಯಿಲೆ ಅಲ್ಲ. ಆದುದರಿಂದ ಇವರನ್ನು ತಾತ್ಸಾರ ಮಾಡಬೇಡಿ ಅಥವಾ ದೂರವಿಡಬೇಡಿ.
*ಸೋರಿಯಾಸಿಸ್‌ ಕಾಯಿಲೆ ರೋಗಿಯಿಂದ ಮಕ್ಕಳಿಗೆ ಅನುವಂಶಿಕವಾಗಿ ಹರಡುವ ಸಾಧ್ಯತೆ ತುಂಬಾ ಕಡಿಮೆ

ಉರಿಯೂತ ಹೆಚ್ಚು: ಸೋರಿಯಾಸಿಸ್ ದೀರ್ಘಕಾಲದ ಸ್ವಯಂ ನಿರೋಧಕ ಕಾಯಿಲೆಯಾಗಿದ್ದು ಅದು ಉರಿಯೂತವನ್ನು ಉಂಟುಮಾಡುತ್ತದೆ. ಇದು ಇತರೆ ರೋಗಗಳ ಉಲ್ಬಣಕ್ಕೆ ಕಾರಣವಾಗುತ್ತದೆ. ಉರಿಯೂತ ಕಾಣಿಸಿಕೊಳ್ಳುತ್ತಿದ್ದಂತೆಯೇ ನುರಿತ ವೈದ್ಯರನ್ನು ಸಂಪರ್ಕಿಸಬೇಕು.

ಇತರೆ ರೋಗಗಳಿಗೆ ಅನುವು ಮಾಡಿಕೊಡುತ್ತದೆ: ಸಾಮಾನ್ಯವಾಗಿ ಸೋರಿಯಾಸಿಸ್ ರೋಗದಿಂದಾಗಿ, ಸಂಧಿವಾತ, ಕೀಲುಗಳ ನೋವು, ಮೃದುತ್ವಕ್ಕೆ ಕಾರಣವಾಗುತ್ತದೆ. ಅಲ್ಲದೇ, ಹೃದಯಾಘಾತ, ಪಾರ್ಶ್ವವಾಯು, ಶುಗರ್​​, ಕರುಳು ಸಂಬಂಧಿತ ಕಾಯಿಲೆಗಳು, ಸ್ಥೂಲಕಾಯ, ಶ್ವಾಸಕೋಶ, ಮೆಟಾಬಾಲಿಕ್ ಸಿಂಡ್ರೋಮ್​, ಮೂತ್ರಪಿಂಡ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಚಿಕಿತ್ಸೆ ಏನು?: ಸೋರಿಯಾಸಿಸ್‌ ಕಾಯಿಲೆಗೆ ಸ್ಪಷ್ಟ ಹಾಗೂ ಖಚಿತ ಔಷಧ ಲಭ್ಯವಿರುವುದಿಲ್ಲ. ಆದರೆ ಲಭ್ಯವಿರುವ ಔಷಧಗಳಿಂದ ಕಾಯಿಲೆಯನ್ನು ಸಂಪೂರ್ಣ ಹತೋಟಿಯಲ್ಲಿಡಲು ಸಾಧ್ಯವಿದೆ. ಚರ್ಮದ ಮೇಲಿನ ಹುರುಪಿಗೆ ಸಾಮಾನ್ಯವಾಗಿ ದೊರೆಯುವ ಕೊಬ್ಬರಿ ಎಣ್ಣೆ ಅಥವಾ ಇತರೆ ಸೂಕ್ತ ಎಣ್ಣೆಗಳನ್ನು ಸವರಿದರೆ ತಾತ್ಕಾಲಿಕ ಉಪಶಮನ ಸಿಗುತ್ತದೆ.

ಸೋರಿಯಾಸಿಸ್​​ಗೆ ಬಯೋಲಾಜಿಕ್ಸ್​ನಂತಹ ಸುಧಾರಿತ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ರೋಗವನ್ನು ಆರಂಭದಲ್ಲಿಯೇ ತಡೆಗಟ್ಟಬಹುದು. ಮನೆಯಲ್ಲಿ ತಯಾರಿಸಿದ ಔಷಧಿ ಬಳಸುವ ಮುನ್ನ ತಜ್ಞರನ್ನು ಸಂಪರ್ಕಿಸಿದರೆ ಶೀಘ್ರ ಗುಣಮುಖರಾಗುತ್ತೀರಿ.

ಈ ರೋಗದ ಮತ್ತೊಂದು ದೀರ್ಘಕಾಲೀನ ಪರಿಣಾಮವೆಂದರೆ, ವ್ಯಕ್ತಿಯ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ. ಮುಖ, ಕೈಗಳ ಮೇಲೆ ಸೋರಿಯಾಸಿಸ್ ಕಾಣಿಸಿಕೊಳ್ಳುವುದರಿಂದ ಜನರು ಅವರನ್ನು ನಿರ್ಲಕ್ಷ್ಯಿಸಬಹುದು ಅಥವಾ ಸಂಬಂಧಗಳಿಂದ ದೂರವಾಗಬಹುದು. ಈ ಬೆಳವಣಿಗೆಯು ಅವರನ್ನು ಮಾನಸಿಕ ಖಿನ್ನತೆಗೆ ದೂಡುತ್ತದೆ.

English summary
Every year, World Psoriasis Day is marked on 29 October to raise awareness about the medical condition and its effects. About 125 million people globally are affected by psoriasis or psoriatic arthritis, an autoimmune condition that results in the rapid build-up of skin cells, which can also lead to severe comorbidities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X