• search
For Quick Alerts
ALLOW NOTIFICATIONS  
For Daily Alerts

  ವನವಾಸಿಗಳ ಬದುಕಲ್ಲಿ ಬೆಳಕು ತಂದ ದಾಂಡೇಲಿಯ ಕೌಸಲ್ಯ ರವೀಂದ್ರ

  |

  ಮೂಲಸೌಕರ್ಯದ ಕತೆ ಒತ್ತಟ್ಟಿಗಿರಲಿ, ಬದುಕಲು ಅಗತ್ಯವಾದ ಸಾಮಾನ್ಯ ಶಿಕ್ಷಣವೂ ಇಲ್ಲದೆ, ಜಗತ್ತಿನ ಯಾವ ಆಗುಹೋಗುಗಳ ಪರಿಚಯವೂ ಇಲ್ಲದೆ, ಕಾಡಿನ ನಡುವಲ್ಲಿ ಅಜ್ಞಾತವಾಗಿಯೇ ಬದುಕುತ್ತಿರುವ ಸಮುದಾಯವೊಂದಿದೆ ಎಂಬುದು ನಮ್ಮಲ್ಲಿ ಹಲವರ ಊಹೆಗೂ ನಿಲುಕದ ಸಂಗತಿಯಾಗಿರಬಹುದು. ಈ ವನವಾಸಿಗಳನ್ನು ಮುಖ್ಯವಾಹಿನಿಗೆ ತರುವ ಕೆಲಸವೆಂದರೆ ಸಾಹಸವೇ. ಆ ಸಾಹಸದ ಕೆಲಸವನ್ನೂ ಸವಾಲಾಗಿ ಸ್ವೀಕರಿಸಿ ತಮ್ಮ 27 ವರ್ಷಗಳ ಸೇವಾ ಬದುಕನ್ನು ವನವಾಸಿಗಳ ಕಲ್ಯಾಣಕ್ಕಾಗಿ ಮೀಸಲಿಟ್ಟ ದಾಂಡೇಲಿಯ ಕೌಸಲ್ಯ ರವೀಂದ್ರ ನಮ್ಮ ಈ ವಾರದ ಸಾಧಕಿ.

  ಮೂಲತಃ ಮಂಡ್ಯ ಜಿಲ್ಲೆಯ ಪಾಂಡವಪುರದವರಾದ ಕೌಸಲ್ಯ ಅವರು 1990 ರಲ್ಲಿ ಹಿಂದು ಸೇವಾ ಪ್ರತಿಷ್ಠಾನದ ಮೂಲಕ ಸೇವಾ ಬದುಕಿಗೆ ಕಾಲಿಟ್ಟವರು. ಓದಿದ್ದು ಎಸ್ ಎಸ್ ಎಲ್ ಸಿಯವರೆಗೆ ಮಾತ್ರವೇ ಆದರೂ ನಂತರದ ಸುದೀರ್ಘ ಸೇವಾ ಬದುಕು ಅವರಿಗೆ ಬದುಕಿನ ಸಾಕಷ್ಟು ಮಜಲುಗಳನ್ನು ಪರಿಚಯಿಸಿತು.

  ಕ್ಯಾನ್ಸರ್ ಎಂಬ ಯಮನಿಗೆ ಸೆಡ್ಡು ಹೊಡೆದ ಗಟ್ಟಿಗಿತ್ತಿ ಶಿವಮೊಗ್ಗದ ಶ್ರುತಿ

  ಹಿಂದು ಸೇವಾ ಪ್ರತಿಷ್ಠಾನದ ಹಲವು ಸೇವಾ ಯೋಜನೆಗಳಲ್ಲೊಂದಾದ ವನವಾಸಿ ಕಲ್ಯಾಣದ ಮಹಿಳಾ ವಿಭಾಗದ ದಕ್ಷಿಣ ಭಾರತದ ಜವಾಬ್ದಾರಿಯನ್ನು ಹೊತ್ತ ಕೌಸಲ್ಯ ಅವರು ದಾಂಡೇಲಿಯಲ್ಲಿರುವ ವನವಾಸಿ ಹೆಣ್ಣು ಮಕ್ಕಳ ಹಾಸ್ಟೆಲ್ ಬಳಿಯಲ್ಲೇ ವಾಸವಿದ್ದಾರೆ.

  ಅವರ ಬದುಕಿನ 27x7 ಸೇವೆ ವನವಾಸಿಗಳ ಕಲ್ಯಾಣಕ್ಕೆಂದೇ ಮೀಸಲು. ಕೂಪಮಂಡೂಕಗಳಂತೆ ಕಾಡಿನಲ್ಲಿ ಬದುಕುತ್ತಿದ್ದ ವನವಾಸಿಗಳಲ್ಲಿ ಹೊರಪ್ರಪಂಚದ ಕುರಿತು ಅತ್ಯಗತ್ಯ ಜ್ಞಾನವನ್ನು ಬೆಳೆಸುವಲ್ಲಿ, ಅವರು ವಾಸಿಸುತ್ತಿರುವ ಪ್ರದೇಶಗಳಿಗೆ ಮೂಲಸೌಕರ್ಯ ಒದಗಿಸುವಲ್ಲಿ, ಅವರಲ್ಲಿ ಶಿಕ್ಷಣ, ಸ್ವಾವಲಂಬನೆಯ ಕುರಿತು ಅರಿವು ಮೂಡಿಸುವಲ್ಲಿ ತಾವು ಎದುರಿಸಿದ ಸವಾಲುಗಳನ್ನು ಅವರು ಒನ್ ಇಂಡಿಯಾ ಕನ್ನಡದೊಂದಿಗೆ ಹಂಚಿಕೊಂಡಿದ್ದು ಹೀಗೆ...

  ಸವಾಲಿನ ಮೊದಲ ದಿನಗಳು

  ಸವಾಲಿನ ಮೊದಲ ದಿನಗಳು

  1990 ರಲ್ಲಿ ಹಿಂದು ಸೇವಾ ಪ್ರತಿಷ್ಠಾನದ ಸೇವಾವ್ರತಿಯಾಗಿ ಸೇರಿದೆ. ತಿಪಟೂರಿನಲ್ಲಿ ಎರಡು ವರ್ಷ ತರಬೇತಿ ಪಡೆದ ನಂತರ ಉತ್ತರ ಕನ್ನಡ ಜಿಲ್ಲೆಯ ಗುಂಡೊಳ್ಳಿ ಎಂಬಲ್ಲಿ ಶಿಶುಮಂದಿರ ನಡೆಸುವುದಕ್ಕಾಗಿ ನನ್ನನ್ನು ಕಳಿಸಿದರು. ಎರಡು ವರ್ಷ ಅಲ್ಲೆ ಕೆಲಸ ಮಾಡಿದೆ. ನಂತರ ಧಾರವಾಡದ ಶಿವನಗರ ಎಂಬಲ್ಲಿಗೆ ಪಯಣ. ಶಿವನಗರಕ್ಕೆ ಹೋಲಿಸಿದರೆ ಗುಂಡೊಳ್ಳಿ ಸಾವಿರಪಾಲು ಬೇಕು. ಅಲ್ಲಿ ಇಷ್ಟರ ಮಟ್ಟಿಗೆ ಮೂಲಸೌಕರ್ಯದ ಕೊರತೆಯಾಗಲಿ, ಕುಡಿವ ನೀರಿನ ತಾಪತ್ರಯವಾಗಲಿ ಇರಲಿಲ್ಲ. ಆದರೆ ಇಲ್ಲಿನ ಜನರನ್ನು ಕಂಡು ವನವಾಸಿ ಬದುಕಿನ ನೈಜಚಿತ್ರಣ ಏನು ಎಂಬುದು ಅರಿವಾಯ್ತು. ಇಲ್ಲಿನ ಜನರಿಗೆ ಹೊರ ಪ್ರಪಂಚದ ಬಗ್ಗೆ ಏನೇನೂ ಗೊತ್ತಿರಲಿಲ್ಲ. ಈ ಊರಿಗೆ ನಾನು ಕಾಲಿರಿಸುತ್ತಿದ್ದಂತೆಯೇ ನನ್ನನ್ನು ಕಂಡು ಹೆದರಿ ಹೋಗುತ್ತಿದ್ದವರೇ ಹೆಚ್ಚು. ಹೀಗೆ ಓಡುವ ಜನರನ್ನೆಲ್ಲ ಒಂದೆಡೆ ಸೇರಿಸಿ, ಇಲ್ಲಿ ಯಾವುದೋ ಬದಲಾವಣೆ ತರುವುದಕ್ಕೆ ನನ್ನಿಂದ ಸಾಧ್ಯವಾ ಎಂಬ ಪ್ರಶ್ನೆಯನ್ನು ನಾನೇ ಹಲವು ಬಾರಿ ಕೇಳಿಕೊಳ್ಳುವಂಥ ಪರಿಸ್ಥಿತಿ ಹುಟ್ಟಿಕೊಂಡಿತ್ತು!

  ಯೋಗ, ಹೊಟ್ಟೆಕರಗಿಸುವ ವ್ಯಾಯಾಮವಷ್ಟೇ ಅಲ್ಲ, ಅದು ಜೀವನ ಮೌಲ್ಯ: ವನಿತಕ್ಕ

  ಕಲ್ಲನ್ನು ಶಿಲೆಯಾಗಿಸುವ ಪ್ರಯತ್ನ

  ಕಲ್ಲನ್ನು ಶಿಲೆಯಾಗಿಸುವ ಪ್ರಯತ್ನ

  ಇಲ್ಲಿನ ಜನರು ನನ್ನನ್ನು ಕಂಡೊಡನೆ ಓಡುತ್ತಿದ್ದವರು. ಇಂಥವರ ಬಳಿ ಹೋಗಿ ನಿಮ್ಮ ಮಗುವನ್ನು ಶಿಶುಮಂದಿರಕ್ಕೆ ಕಳಿಸಿ ಎಂದು ಕೇಳುವುದು ಹೇಗೆ? ಅಂತೂ ಇಂತು ಕರೆದುಕೊಂಡು ಬಂದರೂ, ಮನೆಯಲ್ಲಿ ದನ ಮೇಯಿಸುವುದಕ್ಕೆ ಜನರಿಲ್ಲ ಎಂದು ತಂದೆ-ತಅಯಿಗಳೇ ಬಂದು ಮಕ್ಕಳನ್ನು ವಾಪಸ್ ಕರೆದುಕೊಂಡು ಹೋಗಿಬಿಡುತ್ತಿದ್ದರು. ಇಂಥವರಿಗೆಲ್ಲ ಶಿಕ್ಷಣದ ಮಹತ್ವವನ್ನು ತಿಳಿಸುವುದು ಹರಸಾಹಸವೇ ಆಗಿತ್ತು. ಆದರೆ ದಿನ ಕಳೆಯುತ್ತ ಅವರಿಗೆಲ್ಲ ನಮ್ಮ ಮೇಲೆ ನಂಬಿಕೆ ಮೂಡುವುದಕ್ಕೆ ಶುರುವಾಯ್ತು. ಎಲ್ಲರೂ ಸೇರಿ ಮೂಲಸೌಕರ್ಯಕ್ಕಾಗಿ ಹೋರಾಡುವುದಕ್ಕೆ ಅಣಿಯಾದರು, ತಮ್ಮ ಮಕ್ಕಳಿಗೆ ಶಿಕ್ಷಣ ಕಲಿಸುವ ಅಗತ್ಯವನ್ನು ಮನಗಂಡರು.

  ದಟ್ಟ ಕಾಡಿನ ಗುಡಿಸಲಲ್ಲಿ ಬದುಕು!

  ದಟ್ಟ ಕಾಡಿನ ಗುಡಿಸಲಲ್ಲಿ ಬದುಕು!

  ದಟ್ಟ ಕಾಡಿನಲ್ಲಿ ಬದುಕುತ್ತಿದ್ದ ಅವರೆಲ್ಲರ ಹಾಡಿಯ ಬಳಿಯಲ್ಲೇ ನಾನೂ ಗುಡಿಸಲು ಕಟ್ಟಿಕೊಂಡಿದ್ದೆ. ನನ್ನ ಪ್ರತಿ ಹೆಜ್ಜೆಯಲ್ಲೂ ಹಿಂದುಸೇವಾ ಪ್ರತಿಷ್ಠಾನದ ನೆರವಿದ್ದೇ ಇರುತ್ತಿತ್ತು. ಮೊದ ಮೊದಲು ಈ ಜನರನ್ನೆಲ್ಲ ನೋಡಿ ನನ್ನಿಂದ ಇವರನ್ನೆಲ್ಲ ಬದಲಾಯಿಸುವುದು ಸಾಧ್ಯವೇ ಇಲ್ಲ. ಸಾಕು ಸಹವಾಸ ಅನ್ನಿಸಿದರೂ, ಕ್ರಮೇಣ ಇವರ ಮುಗ್ಧತೆ, ಇವರು ಎದುರಿಸುತ್ತಿರುವ ಸಮಸ್ಯೆಗಳನ್ನು ಕಂಡು ಇವರನ್ನು ಬಿಟ್ಟು ಹೋಗುವುದು ಸರಿಯಲ್ಲ ಎಂದು ಆತ್ಮಸಾಕ್ಷಿ ಎಚ್ಚರಿಸುವುದಕ್ಕೆ ಶುರುಮಾಡಿತ್ತು. ಇಲ್ಲಿಯೇ ಉಳಿವ ಶಪಥ ಆಡಿದೆ. ನನ್ನ ಬದುಕನ್ನು ವನವಾಸಿಗಳ ಕಲ್ಯಾಣಕ್ಕೆಂದೇ ಮೀಸಲಿಡಬೇಕು ಎಂದು ನಿರ್ಧರಿಸಿದೆ.

  ಸ್ವಚ್ಛತೆಯ ಕುರಿತು ಮಹಿಳೆಯರಲ್ಲಿ ಅರಿವು ಮೂಡಿಸುವ ಯತ್ನ

  ಸ್ವಚ್ಛತೆಯ ಕುರಿತು ಮಹಿಳೆಯರಲ್ಲಿ ಅರಿವು ಮೂಡಿಸುವ ಯತ್ನ

  ಇಲ್ಲಿನ ಮಹಿಳೆಯರಿಗಾಗಲಿ, ಪುರುಷರಿಗಾಗಲಿ ಸ್ವಚ್ಛತೆಯ ಬಗ್ಗೆ ಅರಿವೇ ಇರಲಿಲ್ಲ. ಮಹಿಳೆಯರಿಗೆ ಋತುಸ್ರಾವದ ಸಮಯದಲ್ಲಿ ಹೇಗಿರಬೇಕು ಎಂಬಿತ್ಯಾದಿ ಯಾವ ಅರಿವೂ ಇರಲಿಲ್ಲ. ಅಷ್ಟೇ ಅಲ್ಲ, ಚಿಕ್ಕ ಚಿಕ್ಕ ಮನೆಗಳಲ್ಲಿ ಯಾವ ಮುಜುಗರವಿಲ್ಲದೆ ಪತಿ-ಪತ್ನಿಯರೂ ಹೇಗೆ ಬೇಕೋ ಹಾಗೆ ಇರುತ್ತಿದ್ದುದರಿಂದ ಆ ಎಲ್ಲ ಸನ್ನಿವೇಶಗಳೂ ಅವರ ಮಕ್ಕಳ ಮೇಲೆ ಪರಿಣಾಮ ಬೀರುತ್ತಿತ್ತು. ಇವನ್ನೆಲ್ಲ ನೋಡಿ ಮನಸ್ಸು ಕೊರಗುತ್ತಿತ್ತು. ನಂತರ ಅಲ್ಲಿನ ಮಹಿಳೆಯರನ್ನೆಲ್ಲ ಸೇರಿಸಿ ಆಗಾಗ ಸಭೆ ಆರಂಬಿಸುವ ಯೋಚನೆ ಬಂತು. ಅವರಿಗೆ ಸ್ವಚ್ಛತೆಯ ಅರಿವು ಮೂಡಿಸುವ ಜೊತೆಗೆ ಅವರೆಲ್ಲರ ನಡೆ ಮಕ್ಕಳ ಮನಸ್ಸಿನ ಮೇಲೆ ಎಂಥ ಪರಿಣಾಮ ಬೀರುತ್ತದೆ ಎಂಬುದನ್ನು ಹೇಳಿದಾಗ ಆ ಮಹಿಳೆಯರೆಲ್ಲ ಬಿಕ್ಕಿ ಬಿಕ್ಕಿ ಅತ್ತಿದ್ದ ದೃಶ್ಯ ನನಗಿನ್ನೂ ನೆನಪಿದೆ. ಈ ಸೂಕ್ಷ್ಮಗಳೆಲ್ಲ ತಮಗೆ ಗೊತ್ತೇ ಇರಲಿಲ್ಲ ಎಂಬ ಪಾಪಪ್ರಜ್ಞೆ ಅವರನ್ನು ಕಾಡತೊಡಗಿತ್ತು!

  ಉಳಿತಾಯದ ಕುರಿತು ಜ್ಞಾನ

  ಉಳಿತಾಯದ ಕುರಿತು ಜ್ಞಾನ

  ಆ ಜನರಿಗೆ ಸ್ವಂತ ಜಮೀನು ಎಂಬುದಿಲ್ಲ. ಪಶುಸಂಗೋಪನೆಯಷ್ಟೇ ಅವರ ಬದುಕು. ಅವರಿಗೆ ಪೌಷ್ಠಿಕ ಆಹಾರದ ಬಗ್ಗೆ ಗೊತ್ತಿರಲಿಲ್ಲ. ಪಶುಸಂಗೋಪನೆ ಮಾಡುತ್ತಿದ್ದರೂ ಆ ಹಾಲನ್ನು ತಾವು ಕುಡಿಯುತ್ತಿರಲಿಲ್ಲ. ಅದನ್ನು ಮಾರಿ ಬರುವ ದುಡ್ಡಲ್ಲೇ ಬದುಕೂ ಸಾಗಬೇಕಿತ್ತಲ್ಲ! ಅವರಿಗೆ ಪೌಷ್ಠಿಕ ಆಹಾರದ ಬಗ್ಗೆಯೂ ಒಂದಷ್ಟು ಅರಿವು ಮೂಡಿಸುವ ಕೆಲಸ ನಡೆಯಿತು. ನಂತರ ಬಂದ ಅಲ್ಪಸ್ವಲ್ಪ ಹಣವನ್ನೂ ತಕ್ಷಣವೇ ಖಾಲಿ ಆಡಿಬಿಡುವ ಅವರಿಗೆ ಉಳಿತಾಯದ ಮಾರ್ಗ ತಿಳಿದಿರಲಿಲ್ಲ. ನಂತರ ಸ್ವಸಹಾಯ ಸಂಘಗಳನ್ನು ಸ್ಥಾಪಿಸಿ ಆ ಮೂಲಕ ಅವರೆಲ್ಲ ವಾರಕ್ಕೆ ಕನಿಷ್ಠ 10 ರೂಪಾಯಿಯನ್ನಾದರೂ ಉಳಿಸುವಂತೆ ಮಾಡುವ ಕೆಲಸವೂ ನಡೆಯಿತು. ಇದು ಅವರನ್ನು ಆರ್ಥಿಕವಾಗಿ ಕೊಂಚಮಟ್ಟಿಗಾದರೂ ಸ್ವಾವಲಂಬಿಗಳನ್ನಾಗಿ ಮಾಡಿತು.

  ಅರಿವಾಯ್ತು ಶಿಕ್ಷಣದ ಮಹತ್ವ

  ಅರಿವಾಯ್ತು ಶಿಕ್ಷಣದ ಮಹತ್ವ

  ಅಲ್ಲಿನ ಜನರಿಗೆ ಕ್ರಮೇಣ ಶಿಕ್ಷಣದ ಮಹತ್ವ ಅರಿವಾಗುವುದಕ್ಕೆ ಶುರುವಾಯ್ತು. ಮೂಲಭೂತ ಸೌಲಭ್ಯಗಳಿಗಾಗಿ ಸರ್ಕಾರಿ ಕಚೇರಿಗಳನ್ನೆಲ್ಲ ಅಲೆಯುವಾಗ ತಾವೆಷ್ಟು ಅನಕ್ಷರಸ್ಥರು ಎಂಬ ಅರಿವು ಅವರಲ್ಲಿ ಮೂಡಿತು. ಆದ್ದರಿಂದಲೇ ತಮ್ಮ ಮಕ್ಕಳನ್ನು ಓದಿಸಲು ಮುಂದಾದರು. ಮೊದಲು ಒಂದಕ್ಷರವನ್ನೂ ಓದಿರದ ವನವಾಸಿಗಳಲ್ಲೇ ಈಗ ಬಿಎ, ಬಿಕಾಂ, ಬಿಎಸ್ಸಿ ಪದವಿ ಪಡೆದವರಿದ್ದಾರೆ. ಪೊಲೀಸ್ ಇಲಾಖೆ, ಮಿಲಿಟರಿಯಲ್ಲೂ ಕೆಲಸಮಾಡುತ್ತಿರುವವರಿದ್ದಾರೆ! ಸಂಪೂರ್ಣವಲ್ಲದಿದ್ದರೂ ಒಂದಷ್ಟಾದರೂ ಬದಲಾವಣೆಯ ಗಾಳಿ ಬೀಸಿದೆ. ಸದ್ಯಕ್ಕೆ ನಾನು ವಾಸವಿರುವ ಉತ್ತರ ಕನ್ನಡದ ದಾಂಡೇಲಿಯಲ್ಲಿರುವ ವನವಾಸಿ ಹೆಣ್ಣು ಮಕ್ಕಳ ಹಾಸ್ಟೇಲ್ ನಲ್ಲಿ 40-50 ಮಕ್ಕಳು ವಾಸವಿದ್ದಾರೆ! ಎಸ್ ಎಸ್ ಎಲ್ ಸಿಯ ನಂತರ ಅವರನ್ನು ಮೈಸೂರಿನ ಕುವೆಂಪುನಗರದಲ್ಲಿರುವ ಹಾಸ್ಟೇಲಿಗೆ ಕಳಿಸಿ, ಹೆಚ್ಚಿನ ಶಿಕ್ಷಣ ನೀಡಲಾಗುತ್ತಿದೆ.

  ಮದುವೆಯ ನಂತರವೂ ಸೇವೆಯ ಬದುಕು

  ಮದುವೆಯ ನಂತರವೂ ಸೇವೆಯ ಬದುಕು

  2000 ನೇ ಇಸವಿಯಲ್ಲಿ ರವೀಂದ್ರ ಅವರನ್ನು ಮದುವೆಯಾದೆ. ಆ ನಂತರವೂ ನಾನು ವನವಾಸಿ ಕಲ್ಯಾಣ ಕೆಲಸವನ್ನು ಬಿಡಲಿಲ್ಲ. ಹಿಂದು ಸೇವಾ ಪ್ರತಿಷ್ಠಾನದ ಶಿಕ್ಷಣ ಘಟಕದಲ್ಲಿದ್ದ ರವೀಂದ್ರ ಅವರು ನನ್ನ ಎಲ್ಲಾ ಸೇವಾ ಕಾರ್ಯಗಳಿಗೂ ಸದಾ ಬೆನ್ನೆಲುಬಾಗಿ ನಿಂತರು. ಇಬ್ಬರೂ ವನವಾಸಿ ಕಲ್ಯಾಣದ ಕೆಲಸವನ್ನು ಅಷ್ಟೇ ಆಸ್ಥೆಯಿಂದ ಮಾಡುತ್ತೇವೆ. ಒಬ್ಬ ಮಗನಿದ್ದಾನೆ. ಈ ಬದುಕು ನಮಗೆ ಸಂತೃಪ್ತಿಯ ಹಾದಿಯನ್ನು ತೋರಿಸಿಕೊಟ್ಟಿದೆ. ಹಿಂದು ಸೇವಾ ಪ್ರತಿಷ್ಠಾನದ ಪ್ರಕಾಶ್ ಜೀ ಕಾಮತ್ ಮತ್ತು ಶ್ರೀಧರ ಸಾಗರ್ ಮುಂತಾದ ಹಿರಿಯರು ಸದಾ ನನಗೆ ಮಾರ್ಗದರ್ಶಕರಾಗಿದ್ದಾರೆ. ಅವರೆಲ್ಲರ ಮಾರ್ಗದರ್ಶನದೊಂದಿಗೆ ಈ ಜನರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಇಂಗಿತ ನಮ್ಮದು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Here is a story of a woman who dedicates her whole life for the welfare of tribal people of Karnataka. Kousalya Ravindra, basically from Mandya district, and now serving as south India woman wing chief of tribal welfare project by Hindu Seva Pratistana. She is the woman achiever of the week.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more