ಕಣ್ಮರೆಯಾಗುತ್ತಿರುವ ಕಾಡು ಮಾವು: ಹಣ್ಣುಗಳ ರಾಜನ ಅಂತ್ಯಕ್ಕೆ ಕಾರಣವೇನು?
ಮಡಿಕೇರಿ, ಮಾರ್ಚ್ 26: ಈಗಾಗಲೇ ಮಲೆನಾಡಿನಲ್ಲಿ ಗಗನದೆತ್ತರಕ್ಕೆ ಬೆಳೆದು ನಿಂತ ಕಾಡುಮಾವಿನ ಮರಗಳನ್ನೇರಿ ಮಿಡಿಯನ್ನು ಕೊಯ್ದು ತಂದು ಉಪ್ಪಿನ ಕಾಯಿ ಹಾಕುವ ಭರಾಟೆ ನಡೆಯುತ್ತಿದೆ. ಆದರೆ ಮೊದಲಿಗೆ ಹೋಲಿಸಿದರೆ ಈಗ ಮರಗಳು ಎಲ್ಲೆಂದರಲ್ಲಿ ಕಾಣಸಿಗದ ಕಾರಣದಿಂದಾಗಿ ಮರಗಳನ್ನು ಉಳಿಸಿಕೊಂಡವರಿಗೆ ಮಾತ್ರ ಅದರ ರುಚಿ ಸವಿಯಲು ಸಾಧ್ಯವಾಗುತ್ತದೆ. ಇಲ್ಲದೆ ಹೋದರೆ ಹೆಮ್ಮರಗಳಲ್ಲಿ ಮಿಡಿ ಬೆಳೆದು ಹಣ್ಣಾಗುವ ತನಕ ಕಾದು ಹಣ್ಣಾದ ಬಳಿಕ ಮರದ ಅಡಿಯಲ್ಲಿ ಬಿದ್ದ ಹಣ್ಣುಗಳನ್ನು ಹೆಕ್ಕಿತಂದು ಅದರಿಂದ ವಿವಿಧ ಖಾದ್ಯಗಳನ್ನು ತಯಾರಿಸ ಬೇಕಾಗುತ್ತದೆ.
ಇವತ್ತು ಮಲೆನಾಡಿನ ಕಾಡುಗಳಲ್ಲಿ ಅದರಲ್ಲೂ ಕೊಡಗಿನ ಕಾಫಿ ತೋಟ, ದೇವರಕಾಡು ಹೀಗೆ ಅರಣ್ಯ ಪ್ರದೇಶದಲ್ಲಿ ಕಾಡು ಮಾವು ಹೆಮ್ಮರವಾಗಿ ಬೆಳೆದಿದ್ದು ಅದಕ್ಕೆ ಹತ್ತಿ ಮಿಡಿಯನ್ನು ಕೊಯ್ಯುವುದು ಸಾಧ್ಯವಾಗದ ಕೆಲಸವಾಗಿದೆ. ಹೀಗಾಗಿ ಸಣ್ಣಪುಟ್ಟ ಮರಗಳಿಂದ ಮಿಡಿಯನ್ನು ಕೊಯ್ದು ತಂದು ಉಪ್ಪಿನ ಕಾಯಿಗೆ ಬಳಸಲಾಗುತ್ತದೆ. ಉಳಿದಂತೆ ಹಣ್ಣಾಗುವ ತನಕ ಕಾಯುವುದು ಮಾಮೂಲಿಯಾಗಿದೆ.

ಕಾಡಿನಲ್ಲಿರುವ ಮಾವಿನ ಮರಗಳಲ್ಲಿ ಕಾಯಿ, ಹಣ್ಣು ಎಲ್ಲವೂ ವಿಭಿನ್ನವಾಗಿರುತ್ತವೆ. ಎಲ್ಲವೂ ಒಂದೇ ರೀತಿ ಇರದೆ ಒಂದೊಂದು ಮರದ ಹಣ್ಣು ಕೂಡ ಆಕಾರ, ಸುವಾಸನೆ ಎಲ್ಲದರಲ್ಲಿಯೂ ವಿಭಿನ್ನತೆಯನ್ನು ಹೊಂದಿರುವುದನ್ನು ಕಾಣಬಹುದಾಗಿದೆ. ಇನ್ನು ಹಣ್ಣಿನ ಪೈಕಿ ಕೆಲವು ಸಿಹಿಯಾಗಿದ್ದರೆ, ಇನ್ನು ಕೆಲವು ಹುಳಿಯಾಗಿರುತ್ತವೆ. ಹೀಗೆ ಹುಳಿಯಾಗಿರುವ ಮರದ ಮಿಡಿಗಳನ್ನು ಉಪ್ಪಿನಕಾಯಿ ಹಾಕಿದರೆ ರುಚಿಯಾಗಿರುತ್ತವೆ ಎನ್ನುವುದು ಕೆಲವರ ಅನುಭವದ ಮಾತು.
ಕೊಡಗಿನ ಮಟ್ಟಿಗೆ ಹೇಳುವುದಾದರೆ ಇಲ್ಲಿನ ಅರಣ್ಯ, ತೋಟ ಮತ್ತು ದೇವರಕಾಡುಗಳಲ್ಲಿ ಕಾಡು ಮಾವಿನ ಮರಗಳು ನೋಡಲು ಸಿಗುತ್ತವೆ. ಹಿಂದೆ ಏಲಕ್ಕಿ ತೋಟಗಳು ಹೆಚ್ಚಾಗಿದ್ದ ಕಾಲದಲ್ಲಿ ಮಾವಿನ ಮರಗಳು ಏಲಕ್ಕಿ ತೋಟದಲ್ಲಿ ಹೇರಳವಾಗಿದ್ದವು. ನಂತರ ಏಲಕ್ಕಿ ತೋಟಗಳು ಕಾಫಿತೋಟವಾಗಿ ಪರಿವರ್ತನೆಗೊಂಡ ನಂತರ ಮಾವಿನ ಮರಗಳು ನಾಶವಾಗಿವೆ. ಅದರಲ್ಲೂ ಕಾಫಿ ತೋಟದ ನಡುವೆ ಮರಗಳಿದ್ದರೂ ಪ್ರತಿವರ್ಷವೂ ಅವುಗಳ ಕೊಂಬೆಯನ್ನು ನೆರಳಿನ ಕಾರಣದಿಂದ ಕಡಿಯುವುದರಿಂದಾಗಿ ಮೊದಲಿನಂತೆ ಅವು ಫಲಬಿಡುತ್ತಿಲ್ಲ.
ಹಣ್ಣನ್ನು ಮಳೆಗಾಲಕ್ಕೆ ಸಂಗ್ರಹಿಸಿಡುವ ಮಲೆನಾಡಿಗರು
ಬಹಳಷ್ಟು ಜನಕ್ಕೆ ಕಾಡು ಮಾವಿನ ಬಗ್ಗೆ ಗೊತ್ತೇ ಇಲ್ಲ ಎನ್ನಬೇಕು. ಏಕೆಂದರೆ ಇವತ್ತು ಮಾರುಕಟ್ಟೆಗೆ ಬರುವ ಸೇಲಂ, ರತ್ನಗಿರಿ(ಆಲ್ಫನ್ಸ್), ಬಾದಾಮಿ, ರಸಪುರಿ, ಮಲಗೋವ, ಮಲ್ಲಿಕಾ, ಸೇಂದೂರಾ, ತೋತಾಪುರಿ, ಬಾಗನಪಲ್ಲಿ, ದಶೇರಿ, ಕಾಲಾಪ ಹಾಡ್, ಕೇಶರ್, ಸಕ್ಕರೆ ಗುತ್ತಿ, ಅಮ್ರಪಾಲಿ, ದಿಲ್ಪಸಂದ್ ಹೀಗೆ ಹತ್ತಾರು ಬಗೆಯ ಮಾವಿನ ಹಣ್ಣುಗಳನ್ನು ನೋಡಿದವರು ಕಾಡಿನಲ್ಲಿ ಸಿಗುವ ಹಣ್ಣನ್ನು ನೋಡಿದರೆ ಅಚ್ಚರಿ ಪಡುತ್ತಾರೆ. ಆದರೆ ಮಲೆನಾಡಿನವರಿಗೆ ಇವುಗಳು ಸಾಮಾನ್ಯವಾಗಿವೆ. ಅಷ್ಟೇ ಅಲ್ಲದೆ ಕಾಡುಮಾವಿನಿಂದ ತಯಾರಿಸುವ ಹಲವು ರೀತಿಯ ಖಾದ್ಯಗಳು ಬೇಸಿಗೆಯಲ್ಲಿ ತರಕಾರಿಯ ಸಮಸ್ಯೆಯನ್ನು ನೀಗಿಸುತ್ತವೆ.

ಇವತ್ತು ಮಾರುಕಟ್ಟೆಗೆ ಬರುವ ಬಗೆಬಗೆಯ ಮಾವಿನ ಹಣ್ಣುಗಳ ನಡುವೆ ಕಾಡುಮಾವಿಗೆ ಯಾವುದೇ ಸ್ಥಾನವಿಲ್ಲದಿದ್ದರೂ ಕಾಡುಗಳಲ್ಲಿ, ತೋಟಗಳಲ್ಲಿ ಪ್ರತಿ ವರ್ಷ ಫಸಲು ಬಿಟ್ಟು ಹಣ್ಣಾಗಿ ನೆಲಕ್ಕುರುಳುವುದು ನಡೆಯುತ್ತಲೇ ಇದೆ. ಈ ಪೈಕಿ ರುಚಿಕರವಾದ ಕೆಲವೇ ಕೆಲವು ಮರಗಳ ಹಣ್ಣುಗಳನ್ನು ಸಂಗ್ರಹಿಸಿ ತಂದು ನೇರವಾಗಿ ಸೇವಿಸುವುದು, ಅಡುಗೆಯಲ್ಲಿ ಬಳಸಲಾಗುತ್ತದೆ. ಅದರಲ್ಲೂ ಹಿಂದಿನ ಕಾಲದಲ್ಲಿ ಮಳೆಗಾಲಕ್ಕಾಗಿ ಈ ಹಣ್ಣುಗಳನ್ನು ಸಾಂಬಾರು ಪದಾರ್ಥಗಳಲ್ಲಿ ಬಳಕೆ ಮಾಡುವ ಸಲುವಾಗಿ ಭರಣಿ, ಮಣ್ಣಿನ ಮಡಿಕೆಯಲ್ಲಿ ಉಪ್ಪಿನೊಳಗೆ ಹಾಳಾಗದಂತೆ ಸಂಗ್ರಹಿಸಿಡುತ್ತಿದ್ದರು. ಇವತ್ತಿಗೂ ಸಂಗ್ರಹಿಸಿಡುವವರು ಇದ್ದಾರೆ.
ಅನಾಕಾರ್ಡಿಯೆಸಿಯೇ ಕುಟುಂಬವರ್ಗಕ್ಕೆ ಸೇರಿದ ಮರ
ಮದುವೆ ಸೇರಿದಂತೆ ಶುಭಸಮಾರಂಭಗಳಲ್ಲಿಯೂ ಇದನ್ನು ಬಳಸುವುದು ಕಂಡು ಬರುತ್ತದೆ. ಕಾಡು ಮಾವಿನ ಮಿಡಿ, ಹಣ್ಣು ಎಲ್ಲವೂ ಉಪಯೋಗಕ್ಕೆ ಬರುವುದರಿಂದ ಮಲೆನಾಡಿನವರಿಗೆ ಇದು ಅಚ್ಚುಮೆಚ್ಚಾಗಿದೆ. ಇತ್ತೀಚಿಗಿನ ದಿನಗಳಲ್ಲಿ ಕಾಡು ಮಾವಿನ ಮರಗಳು ನಾಶವಾಗುತ್ತಿವೆ. ಇನ್ನೊಂದೆಡೆ ಪರಿಸರದ ಮೇಲಾಗುತ್ತಿರುವ ಪರಿಣಾಮಗಳಿಂದಲೋ ಮೊದಲಿನಷ್ಟು ಫಸಲುಗಳು ಬರುತ್ತಿಲ್ಲ. ದನಿಯಾ, ಜೀರಿಗೆ ಹೀಗೆ ವಿವಿಧ ಸುವಾಸನೆಯಿಂದ ಕೂಡಿರುವ ಈ ಹಣ್ಣುಗಳು ರಾಸಾಯನಿಕ ಮುಕ್ತ ಮತ್ತು ಹೆಚ್ಚು ಜೀವಸತ್ವ ಹೊಂದಿದ ಹಣ್ಣುಗಳಾಗಿವೆ. ಇವು ಹೆಮ್ಮರವಾಗಿ ಬೆಳೆಯುವುದರಿಂದ ಕೊಯ್ಲು ಮಾಡುವುದು ಕಷ್ಟ ಹಣ್ಣು ಮಾಗಿ ನೆಲಕ್ಕೆ ಬಿದ್ದಾಗ ಅವುಗಳನ್ನು ಆಯ್ದು ತರಬೇಕಾಗುತ್ತದೆ.
ಕಾಡು ಮಾವಿನ ಹಣ್ಣುಗಳು ಮನುಷ್ಯರಿಗೆ ಎಷ್ಟು ಉಪಯೋಗಕ್ಕೆ ಬರುತ್ತದೆಯೋ ಅದಕ್ಕಿಂತ ಹೆಚ್ಚಾಗಿ ಇದನ್ನು ಪ್ರಾಣಿಪಕ್ಷಿಗಳು ಸೇವಿಸುತ್ತವೆ. ಹೀಗಾಗಿ ಅವುಗಳ ಹಸಿವು ನೀಗಿಸುವಲ್ಲಿಯೂ ಇದರ ಪಾತ್ರವಿದೆ. ಇದರ ತಳಿಗಳನ್ನು ಅಭಿವೃದ್ಧಿಗೊಳಿಸುವ ಪ್ರಯತ್ನಗಳು ನಡೆದಿದ್ದು ಇದರಲ್ಲಿ ಯಶಸ್ಸಿಯೂ ಆಗಿದ್ದಾರೆ. ಇದರ ಬಗ್ಗೆ ಹೇಳುವುದಾದರೆ ಇದು ಅನಾಕಾರ್ಡಿಯೆಸಿಯೇ ಕುಟುಂಬವರ್ಗಕ್ಕೆ ಸೇರಿದ್ದಾಗಿದೆ. ಸ್ವಾಭಾವಿಕವಾಗಿ ಕಾಡು, ನದಿ ತಟದ ಪ್ರದೇಶಗಳಲ್ಲಿ ಹುಲುಸಾಗಿ ಬೆಳೆಯುತ್ತದೆ. ಉಪ ಅರಣ್ಯ ಉತ್ಪನ್ನ ಎಂದರೆ ತಪ್ಪಾಗಲಾರದು ಬೃಹತ್ ಆಗಿ ಬೆಳೆಯುವ ಮರವಾಗಿದ್ದು, ಸುಮಾರು ಹತ್ತು ಸಾವಿರ ತನಕವೂ ಕಾಯಿಗಳನ್ನು ಬಿಡುತ್ತದೆ ಎನ್ನುವುದೇ ವಿಶೇಷ.
-
ನಿಮ್ಮ ಮನೆ ದಿಕ್ಕು ಸರಿಯೇ? ರಾಶಿ ಪ್ರಕಾರ ವಾಸ್ತು ಸೂಚನೆಗಳು ಇಲ್ಲಿವೆ -
ಸರ್ಕಾರಿ ಕಚೇರಿಗಳಲ್ಲಿ ಇನ್ಮುಂದೆ ಕರಿದ ತಿಂಡಿ, ಟೀ-ಕಾಫಿ ಬ್ಯಾನ್: ಸಿರಿಧಾನ್ಯಗಳಿಗೆ ಆದ್ಯತೆ ನೀಡುವಂತೆ ಆರೋಗ್ಯ ಇಲಾಖೆ ಸೂಚನೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್












Click it and Unblock the Notifications