ರೈನ್‌ಬೋ ಡ್ರೈವ್ ಲೇಔಟ್ ನೀರಿನಲ್ಲಿ ಮುಳುಗಡೆ ಆಗುತ್ತಿರುವುದಕ್ಕೆ ಏನು ಕಾರಣ?

ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿರುವ ರೈನ್‌ಬೋ ಡ್ರೈವ್ ಲೇಔಟ್ ರಾಷ್ಟ್ರಾದ್ಯಂತ ಸುದ್ದಿಯಲ್ಲಿದೆ. ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ತತ್ತರಿಸಿರುವ ನಗರ ಪ್ರದೇಶಗಳಲ್ಲಿ ರೈನ್‌ಬೋ ಲೇಔಟ್ ಪ್ರಮುಖವಾದುದು.

ರೈನ್‌ಬೋ ಡ್ರೈವ್ ಬಡಾವಣೆಗೆ ಈಗ ಹೋಗಿ ಕಾಲಿಟ್ಟರೂ ಸೊಂಟದೆತ್ತರಕ್ಕೆ ನೀರು ನಿಂತಿರುವ ದೃಶ್ಯವನ್ನು ಕಾಣಬಹುದು. ಅದರಲ್ಲೂ ನಿನ್ನೆ ಭಾನುವಾರ ರಾತ್ರಿ ಮಳೆಯ ಬಳಿಕ ಇಡೀ ರೈನ್‌ಬೋ ಡ್ರೈವ್ ಬಡಾವಣೆ ಯಾವುದೋ ಕೆರೆ ಎಂಬಂತೆ ಭಾಸವಾಗಿತ್ತು.

ರೈನ್‌ಬೋ ಲೇಔಟ್ ಸರ್ಜಾಪುರ ರಸ್ತೆಯಲ್ಲಿರುವ ಒಂದು ಬಡಾವಣೆ. ಪ್ರತಿಷ್ಠಿತರೇ ಹೆಚ್ಚಿರುವ ಪ್ರದೇಶ. ಸುಮಾರು 350 ಮನೆಗಳಿರುವ ಲೇಔಟ್. ಆದರೆ, ಇಲ್ಲಿ ಪ್ರವಾಹ ಪರಿಸ್ಥಿತಿ ಆ ಶಿವನಿಗೇ ಪ್ರೀತಿ.

ಬೆಂಗಳೂರಿನಲ್ಲಿ ಈ ವರ್ಷ ವಿಪರೀತ ಮಳೆಯಾಗುತ್ತಿದೆ. ಈ ಕಾರಣದಿಂದ ಪ್ರವಾಹ ಪರಿಸ್ಥಿತಿ ಬಂದಿರಬಹುದು ಎಂದು ಸಹಜವಾಗಿ ಅನಿಸಬಹುದು. ಆದರೆ, ರೈನ್‌ಬೋ ಲೇಔಟ್ ಹಾಗೂ ಕೆಲ ಪ್ರದೇಶಗಳಲ್ಲಿ ಪ್ರತೀ ಬಾರಿ ಮಳೆ ಬಂದಾಗಲೂ ಅದೇ ಗೋಳು. ನೀರು ನಿಲ್ಲುವ ಮಟ್ಟದಲ್ಲಿ ಮಾತ್ರ ವ್ಯತ್ಯಾಸ. ಆದರೆ, ನೀರು ನಿಲ್ಲುವುದಂತೂ ಖಚಿತವೇ. ಸರ್ಜಾಪುರದ ಹೊರವರ್ತುಲ ರಸ್ತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಯಾಕಿಷ್ಟು ನೀರು ನಿಲ್ಲುತ್ತದೆ?

ಭತ್ತದ ಜಮೀನು

ಭತ್ತದ ಜಮೀನು

ರೈನ್‌ಬೋ ಲೇಔಟ್ ಸುಮಾರು ಎರಡು ದಶಕಗಳ ಹಿಂದೆ ನಿರ್ಮಾಣವಾದ ಲೇಔಟ್. ಸಮೀಪದಲ್ಲೇ ಐಟಿ ಕಂಪನಿಗಳು. ಸುಮಾರು 35 ಎಕರೆ ಪ್ರದೇಶದಲ್ಲಿ ಬಡಾವಣೆ ಅಭಿವೃದ್ಧಿ ಮಾಡಲಾಗಿದೆ. ಹಿಂದೆ ಇದು ಭತ್ತದ ಜಮೀನಾಗಿತ್ತು ಎಂದು ಹೇಳಲಾಗುತ್ತದೆ.

ಈ ಬಡಾವಣೆ ಸುತ್ತಮುತ್ತ ಮೂರು ಕೆರೆಗಳಿವೆ. ಜುನ್ನಸಂದ್ರ ಕೆರೆ, ಹಾಲನಾಯಕನಹಳ್ಳಿ ಕೆರೆ ಮತ್ತು ಸೌಲ ಕೆರೆ ಇದೆ. ಜುನ್ನಸಂದ್ರ ಕರೆ ಬಳಿಯೇ ರೈನ್‌ಬೋ ಡ್ರೈವ್ ಲೇಔಟ್ ಇರುವುದು. ಬಿಜೆಪಿ ನಾಯಕ ಅರವಿಂದ್ ಲಿಂಬಾವಳಿ ಪ್ರತಿನಿಧಿಸುವ ಮಹದೇವಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ.

ಕಳೆದ ಏಳೆಂಟು ವರ್ಷಗಳಿಂದಲೂ ಮಳೆ ಬಂದರೆ ಈ ಪ್ರದೇಶಗಳಲ್ಲಿ ನೀರು ನಿಲ್ಲುವುದು ಇದ್ದೇ ಇದೆ. ಆದರೂ ಕೂಡ ಶಾಸಕರಾಗಲೀ, ಬಿಬಿಎಂಪಿ ಅಧಿಕಾರಿಗಳಾಗಲೀ ಯಾವುದೇ ಕ್ರಮ ಕೈಗೊಳ್ಳದೇ ಕೂತ ಪರಿಣಾಮವೇ ಇವತ್ತು ಇಡೀ ಪ್ರದೇಶವೇ ಕೆರೆಯಂತಾಗಿರುವುದು ಎನ್ನುತ್ತಾರೆ ಇಲ್ಲಿನ ಸ್ಥಳೀಯರು.

ಏನು ಸಮಸ್ಯೆ?

ಏನು ಸಮಸ್ಯೆ?

ಹಾಲನಾಯಕನಹಳ್ಳಿ ಕೆರೆ ಮತ್ತು ಜುನ್ನಸಂದ್ರದ ಕರೆಗಳು ತುಂಬಿ ಹೊರಹೋಗುವ ಹೆಚ್ಚುವರಿ ನೀರು ಹರಿದುಹೋಗಲು ಕಾಲುವೆಗಳನ್ನು ಹಿಂದೆ ಮಾಡಲಾಗಿತ್ತು. ಆದರೆ, ಈ ರಾಜಕಾಲುವೆಯನ್ನು ಬರಬರುತ್ತಾ ಒತ್ತುವರಿ ಮಾಡಲಾಗಿದೆ. ಕೆಲ ಖಾಸಗಿ ಬಿಲ್ಡರ್‌ಗಳು ರಾಜಕಾಲುವೆಯ ಹೆಚ್ಚಿನ ಭಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆನ್ನಲಾಗಿದೆ. ಇದರಿಂದಾಗಿ ಸರಾಗವಾಗಿ ನೀರು ಹೋಗಲು ಸಾಧ್ಯವಾಗದೇ ವಸತಿ ಪ್ರದೇಶಗಳಿಗೆ ನೀರು ನುಗ್ಗುತ್ತದೆ.

ಹಾಗೆಯೇ, ಜುನ್ನಸಂದ್ರದಿಂದ ಹೆಚ್ಚುವರಿ ನೀರು ರಾಜಕಾಲುವೆ ಮೂಲಕ ಸಾವುಲ್ ಕೆರೆ ತಲುಪಬೇಕು. ಅದರೆ, ಜುನ್ನಸಂದ್ರದ ಬಳಿಯೇ ಕಾಲುವೆ ಹರಕುಮುರುಕುಗೊಂಡು ಕೊನೆಗೆ ರೈನ್‌ಬೋ ಡ್ರೈವ್ ಲೇಔಟ್ ಬಳಿ ನಿಂತುಹೋಗುತ್ತದೆ. ಅಲ್ಲಿಂದ ಸಾವುಲ್ ಕೆರೆಗೆ ಸಂಪರ್ಕ ಮಾಡುವ ರಾಜಕಾಲುವೆಯೇ ನಾಪತ್ತೆಯಾಗಿ ಹೋಗಿದೆ.

ಇನ್ನೊಂದೆಡೆ ಹಾಲನಾಯಕನಹಳ್ಳಿ ಕೆರೆಯ ವಿಚಾರದಲ್ಲೂ ಇದೇ ಹಣೆಬರಹ. ಹಾಲನಾಯಕನಹಳ್ಳಿ ಮತ್ತು ಜುನ್ನಸಂದ್ರದ ಕೆರೆಗಳಿಂದ ಕೋಡಿಬಿದ್ದು ಹೊರಬರುವ ನೀರು ಸಾವುಲ್ ಕೆರೆ ತಲುಪಲು ಸಾಧ್ಯವಾಗದೇ ರೈನ್‌ಬೋ ಲೇಟ್ ಇತ್ಯಾದಿ ಪ್ರದೇಶಗಳನ್ನು ಆವರಿಸಿಕೊಳ್ಳುವುದು ಸಹಜವಾಗಿ ಆಗುತ್ತಿದೆ.

ಯದ್ವಾತದ್ವಾ ಬೆಳವಣಿಗೆ

ಯದ್ವಾತದ್ವಾ ಬೆಳವಣಿಗೆ

ಬೆಂಗಳೂರಿನಲ್ಲಿ ಐಟಿ ಬೂಮ್ ಶುರುವಾಗುತ್ತಿದ್ದಂತೆಯೇ ರಿಯಲ್ ಎಸ್ಟೇಟ್ ಜೋರಾಯಿತು. ಸಿಕ್ಕ ಸಿಕ್ಕ ಜಮೀನಿನಲ್ಲಿ ಲೇಔಟ್‌ಗಳು ತಲೆ ಎತ್ತಿದವು. ಖಾಸಗಿ ಬಿಲ್ಡರ್‌ಗಳು ಕೃಷಿ ಜಮೀನುಗಳನ್ನು ಬಡಾವಣೆ ಮಾಡಿದರು. ಬತ್ತಿಹೋದ ಕೆರೆಗಳೂ ಲೇಔಟ್‌ಗಳಾದವು. ಕಾಲುವೆ ಪ್ರದೇಶಗಳನ್ನೂ ಒತ್ತುವರಿ ಮಾಡಿಕೊಂಡು ಮನೆಗಳನ್ನು ಕಟ್ಟಲಾಯಿತು. ಬಿಬಿಎಂಪಿ ಅಧಿಕಾರಿಗಳು ಕಂಡೂ ಕಾಣದಂತೆ ಎಲ್ಲದಕ್ಕೂ ಪರೋಕ್ಷ ಅನುಮತಿ ನೀಡಿದರು.

ಒಂದು ವರದಿ ಪ್ರಕಾರ ಬೆಂಗಳೂರಿನಲ್ಲಿದ್ದ ರಾಜಕಾಲುವೆಗಳಲ್ಲಿ ಶೇ. 8 ಮಾತ್ರ ಮುಕ್ತವಾಗಿ ಉಳಿದಿವೆ. ಶೇ. 60ರಷ್ಟು ಕಾಲುವೆಗಳು ನಾಪತ್ತೆಯಾಗಿವೆ. ಉಳಿದವು ಎತ್ತ ಇದೆ ಎಂದು ಹುಡುಕುವುದೇ ಕಷ್ಟವಾಗಿದೆ.

ಹಾಗೆಯೇ, ಬೆಂಗಳೂರಿನ ಬಹುತೇಕ ಕೆರೆಗಳಿಗೆ ರಾಜಕಾಲುವೆಗಳು ಸಂಪರ್ಕ ಹೊಂದಿಲ್ಲದಿರುವುದು ಕಂಡುಬಂದಿದೆ. ಮಳೆ ನೀರು ಹೋಗಬೇಕಾದ ರಾಜಕಾಲುವೆಗಳಲ್ಲಿ ಕೊಳಚೆ ನೀರು ಮಾತ್ರ ಹರಿಯುತ್ತದೆ.

ಪರಿಹಾರ ಏನು?

ಪರಿಹಾರ ಏನು?

ರೈನ್‌ಬೋ ಲೇಔಟ್‌ನಲ್ಲಿ ರಾಜಕಾಲುವೆ ಒತ್ತುವರಿಯನ್ನು ತೆರವುಗೊಳಿಸುವುದು ಒಂದು ಆಯಾಮದ ಕ್ರಮವಾದರೆ, ಈ ಸಮಸ್ಯೆಗೆ ಖಾಯಂ ಪರಿಹಾರಕ್ಕಾಗಿ ಬಿಬಿಎಂಪಿ ವಿಭಿನ್ನ ರೀತಿಯಲ್ಲಿ ಯೋಚಿಸಬೇಕು ಎನ್ನುತ್ತಾರೆ ತಜ್ಞರು.

ಮೊದಲಿಗೆ ಹಾಲನಾಯನಕನಹಳ್ಳಿ ಮತ್ತು ಜುನ್ನಸಂದ್ರ ಕೆರೆಗಳ ಹೂಳೆತ್ತುವ ಕೆಲಸ ಮಾಡಬೇಕು. ಬೇಸಿಗೆ ಕಾಲದಲ್ಲಿ ಇದು ಸಾಧ್ಯ. ಮತ್ತು ಹಾಲನಾಯಕನಹಳ್ಳಿ ಕೆರೆಯ ಸ್ಲೂಸ್ ಗೇಟ್‌ಗಳನ್ನು ಅಗತ್ಯ ಬಿದ್ದಾಗ ತೆರೆಯಬೇಕು. ಜುನ್ನಸಂದ್ರ ರಸ್ತೆಯಲ್ಲಿ ಮಳೆನೀರು ಹರಿದುಹೋಗಲು ಕಾಲುವೆ ನಿರ್ಮಾಣವಾಗಬೇಕು. ರೈನ್‌ಬೋ ಡ್ರೈವ್ ಲೇಔಟ್‌ನ ಪಶ್ಚಿಮ ಮತ್ತು ಪೂರ್ವ ಭಾಗಗಳಲ್ಲೂ ಕಾಲುವೆಗಳನ್ನು ನಿರ್ಮಾಣ ಮಾಡಿ ನೀರು ಲೇಔಟ್ ದಾಟಿ ಹೋಗುವಂತೆ ನೋಡಿಕೊಳ್ಳಬೇಕು. ಆಗ ಈ ಸಮಸ್ಯೆಗೆ ಏನಾದರೂ ಪರಿಹಾರ ಸಿಗಬಹುದು.

ಇದು ಕೇವಲ ರೈನ್‌ಬೋ ಲೇಔಟ್‌ನ ಸಮಸ್ಯೆ ಮಾತ್ರವಲ್ಲ ಬಹುತೇಕ ಬೆಂಗಳೂರಿನಲ್ಲಿ ಇರುವ ಸಮಸ್ಯೆ. ಬಿಬಿಎಂಪಿ ಇಡೀ ನಗರದ ಸರ್ವೇಕ್ಷಣೆ ನಡೆಸಿ ಮಳೆ ನೀರು ಸಮರ್ಪಕವಾಗಿ ಸಾಗುವಂತೆ ಮತ್ತು ಕೆರೆ ಕಟ್ಟೆಗಳು ಇರುವ ಜಾಗದಲ್ಲಿ ನೀರು ಹರಿಯಲು ಸರಿಯಾದ ಕಾಲುವೆಗಳನ್ನು ಮಾಡುವುದಕ್ಕೆ ಸಮಗ್ರ ಯೋಜನೆ ಹಮ್ಮಿಕೊಳ್ಳಬೇಕು. ಬಿಬಿಎಂಪಿಯಲ್ಲಿ ಇಂಥ ಸಮಗ್ರ ಯೋಜನೆಗಳು ಇವೆ. ಆದರೆ, ಇಚ್ಛಾ ಶಕ್ತಿ ಕೊರತೆಯಿಂದ ಮತ್ತು ರಾಜಕೀಯ ಸ್ವಾರ್ಥ ಹಾಗು ಅಧಿಕಾರಿಗಳ ಸ್ವಾರ್ಥದಿಂದ ಇದು ಅನುಷ್ಠಾನವಾಗದೇ ಉಳಿದಿರುವುದು ಮಾತ್ರ ಸತ್ಯ.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+