ಬೆಂಗಳೂರಿನಲ್ಲಿ ಅಯ್ಯಯ್ಯೋ ಮಳೆ..! ಯಾಕಿಷ್ಟು ಜಲಪ್ರವಾಹ? ಏನು ಕಾರಣ?
ಬೆಂಗಳೂರಿನಲ್ಲಿ ಮಳೆ ಬಂದರೆ ಜನ ಅಯ್ಯೋ ಎಂದನ್ನಲು ಶುರು ಮಾಡಿ ಅದೆಷ್ಟು ವರ್ಷಗಳಾದವೋ. ಮಳೆ ಜೊತೆ ಸಂಭ್ರಮ ಬರಬೇಕು, ಆದರೆ, ಇಲ್ಲಿ ಜನರಿಗೆ ಆತಂಕ ಬರುತ್ತದೆ. ಈ ರೀತಿ ಅಯ್ಯೋ ಅನ್ನಲು ಕಾರಣ ಮಳೆ ಜೊತೆಗೆ ಬರುವ ಜಲಕಂಟಕ.
ಚೆನ್ನೈ, ಮುಂಬೈನಂಥ ಕರಾವಳಿ ನಗರಗಳಲ್ಲಾದರೆ ಮಳೆ ಬಂದರೆ ನೀರು ಹೋಗಲು ಜಾಗವಿಲ್ಲದೇ ಅನಿವಾರ್ಯವಾಗಿ ಪ್ರವಾಹ ಆಗುತ್ತದೆ. ಆದರೆ, ಬೆಂಗಳೂರಿನಂಥ ನಗರಗಳಿಗೆ ನೀರು ಹೋಗಲು ಯಾಕೆ ಸರಿಯಾದ ವ್ಯವಸ್ಥೆ ಸಾಧ್ಯವಾಗಿಲ್ಲ ಎಂಬುದು ಪ್ರಶ್ನೆ.
ಶತಮಾನಗಳ ಹಿಂದೆ ಬಹಳ ಮುಂದಾಲೋಚನೆಯಿಂದ ವ್ಯವಸ್ಥಿತವಾಗಿ ಬೆಂಗಳೂರು ನಗರಕ್ಕೆ ಕೆಂಪೇಗೌಡರು ಅಡಿಪಾಯ ಹಾಕಿದ್ದರು. ಆದರೆ ಈಗ ಬೆಂಗಳೂರು ಯಾವ ಸ್ಥಿತಿಯಲ್ಲಿದೆ? ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಸಿಕೊಳ್ಳುವ ಮತ್ತು ಸರಕಾರಕ್ಕೆ ಒಳ್ಳೆಯ ಅದಾಯ ತಂದುಕೊಡುವ ಬೆಂಗಳೂರಿಗೆ ಯಾಕಿಂಥ ಪರಿಸ್ಥಿತಿ?
ಬೆಂಗಳೂರಿನಲ್ಲಿ ಸ್ವಲ್ಪ ಮಳೆ ಬಂದರೂ ಹಲವು ಪ್ರದೇಶಗಳು ನೀರಿನಲ್ಲಿ ಮುಳುಗಿಹೋಗುತ್ತವೆ. ಬಹುತೇಕ ರಸ್ತೆಗಳು ಸಂಚಾರಕ್ಕೆ ಕಷ್ಟ ಎನಿಸುತ್ತವೆ. ಹಿಂದೆ ಹಲವು ಬಾರಿ ಜನರು ಮಳೆನೀರಿಗೆ ಬಲಿಯಾದ ಘಟನೆಗಳು ನಡೆದಿವೆ. ಈ ವರ್ಷ ಅದೃಷ್ಟಕ್ಕೆ ಅಂಥ ದುರ್ಘಟನೆ ಸಂಭವಿಸದೇ ಹೋದರೂ ಪ್ರಮುಖ ಪ್ರದೇಶಗಳು ನೀರಿನಿಂದ ಮುಳುಗಿಹೋಗಿದ್ದುಂಟು.

ಬೆಂಗಳೂರಿನಲ್ಲಿ ದಾಖಲೆ ಮಳೆ
ಬೆಂಗಳೂರಿನಲ್ಲಿ ವಾಡಿಕೆಯ ಮಳೆಗಿಂತ ಈ ಬಾರಿ ತೀರಾ ಹೆಚ್ಚು ಮಳೆ ಬಿದ್ದಿದೆ. ಭಾರತೀಯ ಹವಾಮಾನ ಇಲಾಖೆ ನೀಡಿದ ಮಾಹಿತಿ ಪ್ರಕಾರ, ಕಳೆದ ಆಗಸ್ಟ್ ತಿಂಗಳಲ್ಲಿ ಬೆಂಗಳೂರಿನಲ್ಲಿ 377 ಮಿಮೀ ಮಳೆಯಾಗಿದೆ. ಇದು ಬೆಂಗಳೂರಿನ ಇತಿಹಾಸದಲ್ಲೇ ಒಂದು ತಿಂಗಳಲ್ಲಿ ಸುರಿದ ಎರಡನೇ ಅತಿಹೆಚ್ಚು ಮಳೆಪ್ರಮಾಣವಾಗಿದೆ. 1998ರಲ್ಲಿ ಇಲ್ಲಿ 387.1 ಮಿಮೀ ಮಳೆಯಾಗಿದ್ದು ಈಗಲೂ ದಾಖಲೆಯಾಗಿದೆ. 2011 ಮತ್ತು 2017ರಲ್ಲಿ 250 ಮಿಮೀಗಿಂತಲೂ ಹೆಚ್ಚು ಮಳೆಯಾಗಿದ್ದು ಬಿಟ್ಟರೆ ಕಳೆದ 10 ವರ್ಷಗಳಿಂದ ಬೆಂಗಳೂರಿನಲ್ಲಿ ಆಗಸ್ಟ್ ತಿಂಗಳಲ್ಲಿ ಮಳೆ ಪ್ರಮಾಣ 200 ಮಿಮೀ ದಾಟಿಲ್ಲ.
ಈ ವರ್ಷ ಜೂನ್‌ನಿಂದ 3 ತಿಂಗಳಲ್ಲಿ ಬರೋಬ್ಬರಿ 769 ಮಿಮೀ ಮಳೆಯಾಗಿದೆ. ಸೆಪ್ಟೆಂಬರ್ ತಿಂಗಳಲ್ಲೂ ಇದು ಮುಂದುವರಿಯುತ್ತಿದೆ. ಇದೂ ಕೂಡ ಅಪರೂಪವೇ. ಬೆಂಗಳೂರಿನಲ್ಲಿ ಈ ಮೂರು ತಿಂಗಳ ಅವಧಿಯಲ್ಲಿ ಸರಾಸರಿಯಾಗಿ ಬೀಳುವ ಮಳೆ 425 ಮಿಮೀ ಮಾತ್ರ. ಈ ಬಾರಿ ಹೆಚ್ಚೂಕಡಿಮೆ ಎರಡು ಪಟ್ಟು ಹೆಚ್ಚು ಮಳೆಯಾಗಿದೆ.

ಬೆಂಗಳೂರಿನಲ್ಲಿ ಆಗಸ್ಟ್ ಮಳೆ ಇತಿಹಾಸ
2022, ಆಗಸ್ಟ್: 377 ಮಿಮೀ ಮಳೆ
2021, ಆಗಸ್ಟ್: 98.5 ಮಿಮೀ ಮಳೆ
2020, ಆಗಸ್ಟ್: 75.9 ಮಿಮೀ ಮಳೆ
2019, ಆಗಸ್ಟ್: 146.8 ಮಿಮೀ ಮಳೆ
2018, ಆಗಸ್ಟ್: 158.3 ಮಿಮೀ ಮಳೆ
2017, ಆಗಸ್ಟ್: 351.8 ಮಿಮೀ ಮಳೆ
2016, ಆಗಸ್ಟ್: 82.8 ಮಿಮೀ ಮಳೆ
2015, ಆಗಸ್ಟ್: 110 ಮಿಮೀ ಮಳೆ
2014, ಆಗಸ್ಟ್: 102.4 ಮಿಮೀ ಮಳೆ
2013, ಆಗಸ್ಟ್: 94.3 ಮಿಮೀ ಮಳೆ
2012 ಆಗಸ್ಟ್: 189.1 ಮಿಮೀ ಮಳೆ
2011 ಆಗಸ್ಟ್: 278.2 ಮಿಮೀ ಮಳೆ

ಐಟಿ ಪ್ರದೇಶಗಳಲ್ಲಿ ನೀರು
ಪ್ರತೀ ವರ್ಷವೂ ಬೆಂಗಳೂರಿನಲ್ಲಿ ಮಳೆಯಾದರೆ ಪ್ರವಾಹ ಪರಿಸ್ಥಿತಿ ಇದ್ದದ್ದೇ. ಈ ಬಾರಿ ರಾಷ್ಟ್ರೀಯ ಮಾಧ್ಯಮಗಳಲ್ಲೂ ಬೆಂಗಳೂರಿನ ಮಳೆ ಮತ್ತು ಪ್ರವಾಹ ಗಮನ ಸೆಳೆದಿದೆ. ಐಟಿ ಕಂಪನಿಗಳು ಹೆಚ್ಚಿರುವ ಪ್ರದೇಶಗಳು ಈ ಬಾರಿ ಕೆರೆಗಳಂತಾಗಿದ್ದು ಇದಕ್ಕೆ ಕಾರಣ.
ಸರ್ಜಾಪರದಲ್ಲಿರುವ ರೈನ್‌ಬೋ ಡ್ರೈವ್ ಲೇಔಟ್ ಹಾಗು ಸುತ್ತಮುತ್ತಲ ಪ್ರದೇಶಗಳು ಅಕ್ಷರಶಃ ಕೆರೆಗಳಾಗಿದ್ದವು. ಐಟಿ ಕಂಪನಿಗಳ ಕಾರಿಡಾರ್ ಎನ್ನಲಾದ ಹೊರವರ್ತುಲ ರಸ್ತೆ (ಒಆರ್‌ಆರ್) ಕೂಡ ಪ್ರವಾಹ ಪರಿಸ್ಥಿತಿಗೆ ನಲುಗಿ ಹೋಗಿದೆ. ಹೊರ ವರ್ತುಲ ರಸ್ತೆ ಕಂಪನಿಗಳ ಸಂಸ್ಥೆ ನೀಡಿರುವ ಮಾಹಿತಿ ಪ್ರಕಾರ, ಒಆರ್‌ಆರ್ ವ್ಯಾಪ್ತಿಯ ಐಟಿ ಕಂಪನಿಗಳು ಈ ಬಾರಿಯ ಮಳೆ ಮತ್ತು ಪ್ರವಾಹದಿಂದ 225 ಕೋಟಿ ರೂ ನಷ್ಟ ಅನುಭವಿಸಿವೆಯಂತೆ. ಇದರ ಮೂಲಕ ಬೆಂಗಳೂರಿನ ಆಡಳಿತಕ್ಕೂ ನಷ್ಟವಾದಂತೆಯೇ. ಇಷ್ಟು ಹಣವನ್ನು ವಿನಿಯೋಗಿಸಿ ಮೂಲಸೌಕರ್ಯವನ್ನು ವೃದ್ಧಿಸುವ ಆಲೋಚನೆ ಸರಕಾರಕ್ಕೆ ಬಾರದಾ?

ಬೆಂಗಳೂರಿಗೆ ಯಾಕೆ ಈ ಶಾಪ?
ಬೆಂಗಳೂರಿನಲ್ಲಿ ಮಳೆ ನೀರು ಹರಿದುಹೋಗಲು ರಾಜಾಕಾಲುವೆಗಳನ್ನು ಹಿಂದೆ ನಿರ್ಮಿಸಲಾಗಿತ್ತು. ಮಳೆ ನೀರು ಸಂಗ್ರಹಕ್ಕಾಗಿ ಕೆರೆ ಕಟ್ಟೆಗಳನ್ನು ಕಟ್ಟಲಾಗಿತ್ತು. ಆದರೆ ಬೆಂಗಳೂರು ಬೆಳೆದಂತೆಲ್ಲಾ ಜನರು ಈ ಪ್ರದೇಶಗಳನ್ನು ಅತಿಕ್ರಮಣ ಮಾಡಿದ್ದಾರೆ. ರಾಜಾಕಾಲುವೆಗಳು, ಕೆರೆ ಕಟ್ಟೆಗಳು ಈಗ ಲೇಔಟ್‌ಗಳಾಗಿವೆ. ಇದರ ಪರಿಣಾಮವೇ ನಾವೀಗ ಕಾಣುತ್ತಿರುವ ಜಲಪ್ರವಾಹ.
ಸಿಎಂ ಬಸವರಾಜ ಬೊಮ್ಮಾಯಿ ಕೂಡ ಬೆಂಗಳೂರಿನ ಈ ಸ್ಥಿತಿಗೆ ರಾಜಕಾಲುವೆ ಒತ್ತುವರಿಯೇ ಪ್ರಮುಖ ಕಾರಣ ಎಂದು ಹೇಳಿದರು. ರಾಜಕಾಲುವೆಯ ಒತ್ತುವರಿ ಪ್ರದೇಶಗಳನ್ನು ತೆರವುಗೊಳಿಸುವಂತೆ ಮುಖ್ಯಮಂತ್ರಿಗಳು ನಿರ್ದೇಶನ ನೀಡಿದ್ದಾರೆ. ಆದರೆ, ಬೆಂಗಳೂರಿನಲ್ಲಿ ಪ್ರತೀ ಬಾರಿ ಇಂಥ ಪರಿಸ್ಥಿತಿ ಬಂದಾಗಲೂ ಆಡಳಿತವರ್ಗದವರು ಹೇಳುವುದು ಇದನ್ನೇ. ಒತ್ತುವರಿ ತೆರವುಗೊಳಿಸುತ್ತೇವೆ, ಕೆರೆಗಳ ಹೂಳೆತ್ತುತ್ತೇವೆ ಎಂದು ಭರವಸೆ ನೀಡುತ್ತಾರೆ. ಆದರೆ, ತೆರವುಗೊಳಿಸುವುದು ಇರಲಿ, ಅಳಿದುಳಿದ ಕೆರೆಕಟ್ಟೆಗಳ ಒತ್ತುವರಿ ಆಗುವುದು ಮಾತ್ರ ಮುಂದುವರಿಯುತ್ತಲೇ ಇರುತ್ತದೆ.

ರೈನ್‌ಬೋ ಲೇಔಟ್ ದುರಂತ
ರೈನ್‌ಬೋ ಡ್ರೈವ್ ಬಡಾವಣೆ 20 ವರ್ಷಗಳ ಹಿಂದೆ ನಿರ್ಮಾಣವಾಗಿದೆ. ಇದೂ ಕೂಡ ರಾಜಕಾಲುವೆ ಒತ್ತುವರಿ ಮಾಡಿ ತಲೆ ಎತ್ತಿದ ಲೇಔಟ್ ಆಗಿದೆ. ದುರಂತ ಎಂದರೆ ಈ ಲೇಔಟ್ ಸುತ್ತಮುತ್ತ ಪ್ರದೇಶಗಳಲ್ಲಿ ಕಟ್ಟಡಗಳನ್ನು ಎತ್ತರಿಸಿ ಕಟ್ಟಲಾಗಿದೆ. ಪಕ್ಕದ ಜುನ್ನಸಂದ್ರ ಮತ್ತು ಹಾಲನಾಯಕನಹಳ್ಳಿ ಗ್ರಾಮಗಳಿಂದ ಮಳೆನೀರನ್ನು ರೈನ್‌ಬೋ ಡ್ರೈವ್ ಲೇಔಟ್‌ಗೆ ತಿರುಗಿಸಲಾಗಿದೆ. ಇಲ್ಲಿಂದ ಈ ನೀರು ಸರ್ಜಾಪುರ ಮುಖ್ಯರಸ್ತೆಯಲ್ಲಿರುವ ಚರಂಡಿಗೆ ಹರಿದುಹೋಗುತ್ತದೆ.
ಆದರೆ, ಮೊದಲೇ ತಗ್ಗು ಪ್ರದೇಶದಲ್ಲಿರುವ ರೈನ್‌ಬೋ ಡ್ರೈವ್ ಲೇಔಟ್‌ಗೆ ಹೆಚ್ಚುವರಿ ನೀರಿನ ಹರಿವನ್ನು ತಾಳಿಕೊಳ್ಳಲು ಆಗುತ್ತಿಲ್ಲ. ಇದನ್ನು ತಪ್ಪಿಸಬೇಕು ಎಂಬುದು ಇಲ್ಲಿನ ನಿವಾಸಿಗಳ ಆಗ್ರಹ.

ಅರವಿಂದ್ ಲಿಂಬಾಳಿ ಕ್ಷೇತ್ರ
ರೈನ್‌ಬೋ ಡ್ರೈವ್ ಲೇಔಟ್ ಪ್ರದೇಶವು ಅರವಿಂದ್ ಲಿಂಬಾವಳಿ ಪ್ರತಿನಿಧಿಸುವ ಮಹದೇವಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ರೈನ್‌ಬೋ ಡ್ರೈವ್ ಲೇಔಟ್‌ನಿಂದ ಸರ್ಜಾರಪುರ ಕಾಲುವೆಗೆ ಸಂಪರ್ಕ ಸಾಧಿಸಲು ಒಂದು ಚರಂಡಿಯನ್ನು ನಿರ್ಮಿಸಲು ಆದೇಶಿಸಿದ್ದಾರೆ. ಇನ್ನು, ಬಿಬಿಎಂಪಿ ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ ಅವರು ಇಲ್ಲಿನ ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವ ಜಾಗಗಳನ್ನು ತೆರವುಗೊಳಿಸಿ ನೆಲಸಮಗೊಳಿಸಲು ಕ್ರಮ ಕೈಗೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.
ಹೊರ ವರ್ತುಲ ರಸ್ತೆಯ ಸುತ್ತಮುತ್ತಲ ಪ್ರದೇಶಗಳೂ ಕೂಡ ಇದೇ ರೀತಿ ರಾಜಕಾಲುವೆ ಸ್ಥಳವನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿದಂಥವೇ ಆಗಿವೆ. ಇಲ್ಲಿನ ಹಲವು ಕಡೆ 30 ಅಡಿ ಇದ್ದ ರಾಜಕಾಲುವೆಗಳು ಕೇವಲ ನಾಲ್ಕದು ಅಡಿಗೆ ಕಿರಿದಾಗಿವೆ. ಹೀಗಾಗಿ, ಹೆಚ್ಚು ಮಳೆಯಾದಾಗ ನೀರು ಬಡಾವಣೆ ಪ್ರದೇಶಗಳಿಗೆ ನುಗ್ಗುತ್ತದೆ. ಔಟರ್ ರಿಂಗ್ ರೋಡ್‌ನಲ್ಲಿ ರಾಜಕಾಲುವೆ ಒತ್ತುವರಿ ಮಾಡಲಾದ 10 ಪ್ರದೇಶಗಳನ್ನು ಬಿಬಿಎಂಪಿ ಗುರುತಿಸಿದ್ದು, ಅದನ್ನು ತೆರವುಗೊಳಿಸಲು ಕ್ರಮಕ್ಕೆ ಮುಂದಾಗಿದೆ.
ಬಿಬಿಎಂಪಿಗೆ ಸಮಸ್ಯೆ ಏನೆಂದು ಗೊತ್ತಿದೆ. ಅದಕ್ಕೆ ಪರಿಹಾರ ಏನೆಂದು ಗೊತ್ತಿದೆ. ಆದರೆ, ಪರಿಹಾರಕ್ಕೆ ಕ್ರಮವನ್ನು ಜಾರಿಗೊಳಿಸುವ ಶಕ್ತಿ ಮತ್ತು ಪ್ರಾಮಾಣಿಕತೆ ಮಾತ್ರ ಇದ್ದಂತಿಲ್ಲ ಎಂಬುದು ನಿಜ. ಸರಕಾರದ ಖಜಾನೆ ತುಂಬುವ ಬೆಂಗಳೂರಿನ ಜನರು ಈಗ ಬಾಯಿ ಮುಚ್ಚಿಕೊಂಡು ಸುಮ್ಮನಿದ್ದರೆ ಈ ನಗರ ಮುಂಬರುವ ವರ್ಷಗಳಲ್ಲಿ ವಾಸಕ್ಕೆ ಯೋಗ್ಯ ಇಲ್ಲದ ಸ್ಥಳವಾಗಿ ಮಾರ್ಪಡುವುದು ನಿಶ್ಚಿತ.
(ಒನ್ಇಂಡಿಯಾ ಸುದ್ದಿ)












Click it and Unblock the Notifications