Chamarajanagar Lok Sabha Constituency: ಕೈ-ಕಮಲ ನಡುವೆ ಸಮರ-ಗೆಲ್ಲೋರಾರು?, ಅಭ್ಯರ್ಥಿಗಳ ಪ್ಲಸ್-ಮೈನಸ್ ಅಂಶಗಳು ಇಲ್ಲಿವೆ
ಚಾಮರಾಜನಗರ, ಏಪ್ರಿಲ್, 16: ಲೋಕಾಭಾ ಚುನಾಚಣೆ ಕಣ ದಿನದಿಂದ ದಿನಕ್ಕೆ ಬೇಸಿಗೆ ಬಿಸಿಲಿನಂತೆ ರಂಗೇರುತ್ತಿದೆ. ಇನ್ನು ಚುನಾವಣೆಗೆ ಕೆಲವೇ ದಿನಗಳು ಮಾತ್ರ ಬಾಕಿಯಿದ್ದು, ಚಾಮರಾಜನಗರ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಇನ್ನು ಈ ಕ್ಷೇತ್ರದಲ್ಲಿ ಇರುವ ಜಾತಿ ಲೆಕ್ಕಾಚಾರ ಏನು.? ಒಟ್ಟು ಕ್ಷೇತ್ರಗಳ ವಿವರ ಹಾಗೂ ಮತದಾರರ ಸಂಪೂರ್ಣ ಮಾಹಿತಿ ಇಲ್ಲಿದೆ ಗಮನಿಸಿ.
ಹಳೇ ಮೈಸೂರು ಭಾಗದ ಜಾನಪದ ಕಲೆಗಳ ತವರೂರು, ಮಲೆ ಮಹದೇಶ್ವರ, ಬಿಳಿಗಿರಿರಂಗನಾಥ, ಹಿಮವದ್ ಗೋಪಾಲಸ್ವಾಮಿ ಪುಣ್ಯ ಕ್ಷೇತ್ರಗಳ ಜೊತೆಗೆ ನಾಡುನುಡಿಗಾಗಿ ಹೋರಡುವ ನೆಲ ಎನ್ನುವ ಕಿರೀಟವೂ ಚಾಮರಾಜನಗರಕ್ಕಿದೆ. ಮೋದಿ ಅಲೆ-ಸಿದ್ದರಾಮಯ್ಯ ಹವಾ ಎರಡರ ನಡುವೆ ಜಂಗಿಕುಸ್ತಿ ನಡೆಯುವುದರಿಂದ ಹೈವೊಲ್ಟೆಜ್ ಕ್ಷೇತ್ರಗಳಲ್ಲಿ ಒಂದಾಗಿದೆ.

ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ಎಸ್.ಬಾಲರಾಜು ಬಿಜೆಪಿ ಹಾಗೂ ಜಾತ್ಯತೀತ ಜನತಾದಳ ಮೈತ್ರಿ ಅಭ್ಯರ್ಥಿಯಾಗಿದ್ದು, ಕಾಂಗ್ರೆಸ್‌ನಿಂದ ಸಚಿವ ಎಚ್.ಸಿ.ಮಹಾದೇವಪ್ಪ ಪುತ್ರ ಸುನಿಲ್ ಬೋಸ್ ಕಣಕ್ಕಿಳಿದಿದ್ದಾರೆ. ಚಾಮರಾಜನಗರ ಲೋಕಸಭಾ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾದ ಕ್ಷೇತ್ರವಾಗಿದೆ.
ಕ್ಷೇತ್ರದಲ್ಲಿ ಬಿಜೆಪಿ ಓರ್ವ ಶಾಸಕನೂ ಇಲ್ಲದಿರುವುದು, ಸಿದ್ದರಾಮಯ್ಯ ವರುಣ ಕೂಡ ಕ್ಷೇತ್ರಕ್ಕೆ ಒಳಪಡುವುದು ಹಾಗೂ ಗ್ಯಾರಂಟಿಗಳ ಮಹಿಮೆಯಿಂದ ಕಾಂಗ್ರೆಸ್ ಗೆಲ್ಲಲ್ಲಿದೆ ಎಂಬುದು ಕೈ ಪಕ್ಷದ ವಿಶ್ವಾಸವಾದರೇ, ಮೋದಿ ನಾಮಬಲ ಹಾಗೂ ಬಾಲರಾಜು ಸಜ್ಜನ ರಾಜಕಾರಣಿ ಎಂಬ ದಿಸೆಯಲ್ಲಿ ಮತಗಳು ಸಿಕ್ಕು ಕಮಲ ಅರಳುವ ಲೆಕ್ಕಾಚಾರದಲ್ಲಿ ಬಿಜೆಪಿ ಪ್ರಚಾರದಲ್ಲಿ ತೊಡಗಿದೆ.
ಎರಡು ಪಕ್ಷಗಳಲ್ಲೂ ಲೆಕ್ಕಾಚಾರ: 2019ರ ಚುನಾವಣೆಯಲ್ಲಿ ಮೊದಲ ಬಾರಿಗೆ ಚಾಮರಾಜನಗರದಲ್ಲಿ ಕಮಲ ಅರಳಿತ್ತು. ಆ ಮೂಲಕ ಕಾಂಗ್ರೆಸ್ ಭದ್ರಕೋಟೆ ಅಂತಲೇ ಕರೆಯುತ್ತಿದ್ದ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿ ಕಮಲ ಅರಳಿಸಿತ್ತು. ಈಗ ಎರಡನೇ ಬಾರಿಗೆ ಕಮಲ ಅರಳಿಸುವ ಜೊತೆಗೆ ಸಿಎಂ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಬೇಕೆಂದು ಕಮಲ ಕಲಿಗಳು ಪಣ ತೊಟ್ಟಿದ್ದಾರೆ.
ಮತ್ತೊಂದೆಡೆ ಸಿದ್ದರಾಮಯ್ಯ ಆಪ್ತ ಹಾಗೂ ಪ್ರಭಾವಿ ಸಚಿವ ಎಚ್.ಸಿ.ಮಹಾದೇವಪ್ಪ ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸಿದ್ದಾರೆ. ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಅವರ ವರ್ಚಸ್ಸು, ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದಾಗಿ ಎಲ್ಲ ಸಮುದಾಯದ ಜನರು ಬೆಂಬಲ ನೀಡುವ ನಿರೀಕ್ಷೆ ಕಾಂಗ್ರೆಸ್ ಪಕ್ಷಕ್ಕಿದೆ.
ಗೆಲುವಿನ ವಿವರ: ಲೋಕಸಭಾ ಚುನಾವಣೆ ಫಲಿತಾಂಶ ಗಮನಿಸಿದರೇ ಚಾಮರಾಜನಗರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ ಎಂಬುದರಲ್ಲಿ ಎರಡು ಮಾತಿಲ್ಲ. ಬರೋಬ್ಬರಿ 10 ಬಾರಿ ಕಾಂಗ್ರೆಸ್ ಜಯಬೇರಿ ಬಾರಿಸಿದ್ದರೆ, 4 ಬಾರಿ ದಳ ಗೆದ್ದಿದೆ. ಇನ್ನು ಕಳೆದ ಬಾರಿಯಷ್ಟೇ ಕ್ಷೇತ್ರದಲ್ಲಿ ಕಮಲ ಅರಳಿದೆ.
ಯಾವ್ಯಾವ ಯಾವ ಪಕ್ಷ ಜಯಭೇರಿ?
1. 1962 - ಎಂ.ಎಸ್.ಸಿದ್ದಯ್ಯ- ಕಾಂಗ್ರೆಸ್
2. 1967 - ಎಂ.ಎಸ್.ಸಿದ್ದಯ್ಯ ಕಾಂಗ್ರೆಸ್
3. 1971 - ಎಂ.ಎಸ್.ಸಿದ್ದಯ್ಯ, ಕಾಂಗ್ರೆಸ್
4. 1977 - ಬಿ.ರಾಚಯ್ಯ, ಕಾಂಗ್ರೆಸ್
5. 1980 - ವಿ.ಶ್ರೀನಿವಾಸಪ್ರಸಾದ್, ಕಾಂಗ್ರೆಸ್
6. 1984 - ವಿ.ಶ್ರೀನಿವಾಸಪ್ರಸಾದ್- ಕಾಂಗ್ರೆಸ್
7. 1989 - ವಿ.ಶ್ರೀನಿವಾಸಪ್ರಸಾದ್- ಕಾಂಗ್ರೆಸ್
8. 1991 - ವಿ.ಶ್ರೀನಿವಾಸಪ್ರಸಾದ್, ಕಾಂಗ್ರೆಸ್
9. 1996 - ಎ.ಸಿದ್ದರಾಜು, ಜೆಡಿಎಸ್
10. 1998 - ಎ.ಸಿದ್ದರಾಜು, ಜೆಡಿಎಸ್
11. 1999 - ವಿ.ಶ್ರೀನಿವಾಸಪ್ರಸಾದ್, ಜೆಡಿಯು
12. 2004 - ಕಾಗಲವಾಡಿ ಶಿವಣ್ಣ, ಜೆಡಿಎಸ್
13. 2009 - ಆರ್.ಧ್ರುವನಾರಾಯಣ- ಕಾಂಗ್ರೆಸ್
14. 2014 - ಆರ್.ಧ್ರುವನಾರಾಯಣ - ಕಾಂಗ್ರೆಸ್
15. 2019 - ವಿ.ಶ್ರೀನಿವಾಸಪ್ರಸಾದ್ - ಬಿಜೆಪಿ
ಕ್ಷೇತ್ರದ ಜಾತಿವಾರು ಅಂದಾಜು ಲೆಕ್ಕಾಚಾರ
* ಎಸ್.ಸಿ - 4.60 ಲಕ್ಷ ಜನ
* ನಾಯಕ - 3.20 ಲಕ್ಷ.
* ಲಿಂಗಾಯತ - 4.20 ಲಕ್ಷ.
* ಉಪ್ಪಾರ - 1.80 ಲಕ್ಷ.
* ಕುರುಬ - 1.30 ಲಕ್ಷ.
* ಒಕ್ಕಲಿಗ - 1.80 ಲಕ್ಷ.
* ಮುಸ್ಲಿಂ - 90 ಸಾವಿರ.
* ಇತರೆ - 1.50 ಲಕ್ಷ
ಚಾಮರಾಜನಗರ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳು ಹಾಗೂ ಮೈಸೂರು ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳು ಸೇರಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಒಳಪಡಲಿದೆ.
ಚಾಮರಾಜನಗರ ಜಿಲ್ಲೆ ಕ್ಷೇತ್ರಗಳು
1. ಚಾಮರಾಜನಗರ
2. ಗುಂಡ್ಲುಪೇಟೆ
3. ಕೊಳ್ಳೇಗಾಲ
4. ಹನೂರು
ಮೈಸೂರು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು
1. ವರುಣ
2. ನಂಜನಗೂಡು
3. ಟಿ.ನರಸೀಪುರ
4. ಎಚ್.ಡಿ.ಕೋಟೆ
ಯಾವ್ಯಾವ ಪಕ್ಷ ಎಷ್ಟು ಶಾಸಕರನ್ನೊಳಗೊಂಡಿದೆ?
* ಕಾಂಗ್ರೆಸ್ - 7
* ಜೆಡಿಎಸ್ - 1
* ಬಿಜೆಪಿ 00
ಶಾಸಕರ ವಿವರ ಹೀಗಿದೆ
1.ಚಾಮರಾಜನಗರ - ಸಿ.ಪುಟ್ಟರಂಗಶೆಟ್ಟಿ (ಕಾಂಗ್ರೆಸ್)
2.ಗುಂಡ್ಲುಪೇಟೆ - ಗಣೇಶಪ್ರಸಾದ್( ಕಾಂಗ್ರೆಸ್)
3.ಕೊಳ್ಳೇಗಾಲ - ಎ.ಆರ್.ಕೃಷ್ಣಮೂರ್ತಿ ( ಕಾಂಗ್ರೆಸ್)
4.ಹನೂರು - ಎಂ.ಆರ್.ಮಂಜುನಾಥ್ ( ಜೆಡಿಎಸ್)
5.ವರುಣ - ಮುಖ್ಯಮಂತ್ರಿ ಸಿದ್ದರಾಮಯ್ಯ (ಕಾಂಗ್ರೆಸ್)
6.ಟಿ.ನರಸಿಪುರ - ಸಚಿವ ಎಚ್.ಸಿ.ಮಹಾದೇವಪ್ಪ ( ಕಾಂಗ್ರೆಸ್)
7.ನಂಜನಗೂಡು - ದರ್ಶನ್ ಧ್ರುವನಾರಾಯಣ( ಕಾಂಗ್ರೆಸ್)
8.ಎಚ್.ಡಿ.ಕೋಟೆ - ಅನಿಲ್ ಚಿಕ್ಕಮಾದು( ಕಾಂಗ್ರೆಸ್)
ಒಟ್ಟು ಮತದಾರರ ವಿವರ
ಜನವರಿ 22 ರವರೆಗಿನ ಅಂಕಿ ಅಂಶದ ಪ್ರಕಾರ 17,57,616 ಮಂದಿ ಮತದಾರರಿದ್ದು, ಪುರುಷರು- 4,27,067, ಮಹಿಳೆಯರು- 4,39,089, ಇತರೆ ಮತದಾರರು - 114 ಮಂದಿ ಇದ್ದಾರೆ. ಇನ್ನು ಒಟ್ಟು ಮತಗಟ್ಟೆಗಳ ಸಂಖ್ಯೆ 2,000 ಇವೆ ಎಂದು ತಿಳಿದುಬಂದಿದೆ.
ಕಣದಲ್ಲಿರುವ 14 ಅಭ್ಯರ್ಥಿಗಳು
* ಎಂ.ಕೃಷ್ಣಮೂರ್ತಿ (ಬಹುಜನ ಸಮಾಜ ಪಾರ್ಟಿ)
* ಎಸ್. ಬಾಲರಾಜು (ಭಾರತೀಯ ಜನತಾ ಪಾರ್ಟಿ)
* ಸುನೀಲ್ ಬೋಸ್ (ಇಂಡಿಯನ್ ನ್ಯಾಷನಲ್ ಕಾಂಗ್ರೆಸ್)
* ಸಿ.ಎಂ. ಕೃಷ್ಣ (ಡಾ. ಅಂಬೇಡ್ಕರ್ ಪೀಪಲ್ಸ್ ಪಾರ್ಟಿ)
* ನಿಂಗರಾಜು. ಎಸ್ (ಕರ್ನಾಟಕ ಜನತಾ ಪಕ್ಷ)
* ಪ್ರಸನ್ನ ಕುಮಾರ್. ಬಿ (ಕರ್ನಾಟಕ ಪ್ರಜಾ ಪಾರ್ಟಿ (ರೈತ ಪರ್ವ)
* ಕಂದಳ್ಳಿ ಮಹೇಶ್ (ಕರ್ನಾಟಕ ರಾಷ್ಟ್ರ ಸಮಿತಿ)
* ಸುಮ.ಎಸ್. (ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್ ಪಕ್ಷ)
ಇನ್ನು ಕದಂಬ ನಾ. ಅಂಬರೀಷ್ ಪಕ್ಷೇತರ, ನಿಂಗರಾಜು.ಜಿ ಪಕ್ಷೇತರ, ಪ್ರದೀಪ್ ಕುಮಾರ್.ಎಂ ಪಕ್ಷೇತರ, ಮಹದೇವಸ್ವಾಮಿ. ಬಿ.ಎಂ. ಪಕ್ಷೇತರ, ಜಿ.ಡಿ.ರಾಜಗೋಪಾಲ ಪಕ್ಷೇತರ, ಹೆಚ್.ಕೆ.ಸ್ವಾಮಿ ಪಕ್ಷೇತರರಾಗಿ ಸ್ಪರ್ಧೆಗಿಳಿದಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಮೈನಸ್
* ಕ್ಷೇತ್ರದ ಜನರಿಗೆ ಅಷ್ಟಾಗಿ ಪರಿಚಯ ಇಲ್ಲ.
* ಮೈತ್ರಿ ಅಭ್ಯರ್ಥಿಯು ಅನುಭವಿ ರಾಜಕಾರಣಿ ಹಾಗೂ ಸಜ್ಜನಿಕೆ ರಾಜಕಾರಣಿ ಎಂಬ ಜನರ ಅಭಿಮತ
* ಕ್ಷೇತ್ರದಲ್ಲಿ ಸ್ವಂತ ವರ್ಚಸ್ಸು ಕಡಿಮೆ
* ಹಿಂದುತ್ವ, ಮೋದಿ ಅಲೆ ನಡುವೆ ಸೆಣೆಸಬೇಕಾದ್ದ ಅನಿವಾರ್ಯತೆ
* ಸಚಿವರ ಪುತ್ರ ಎಂಬುದಷ್ಟೇ ಪರಿಚಯ ಹಿನ್ನೆಲೆ ಅಭ್ಯರ್ಥಿಗೆ ಜನ ಬೆಂಬಲ ಕಡಿಮೆ
ಸುನಿಲ್ ಬೋಸ್ ಮೈನಸ್ ಪ್ಲಸ್
* ಸಿಎಂ ಸಿದ್ದರಾಮಯ್ಯ ತವರಿನ ಕ್ಷೇತ್ರವಾದ ಹಿನ್ನೆಲೆ ಗೆಲ್ಲಿಸಲೇಬೇಕೆಂದು ಮುಖ್ಯಮಂತ್ರಿ ಪಣ
* ಕಾಂಗ್ರೆಸ್ ಗ್ಯಾರೆಂಟಿ ಯೋಜನೆ ಕೈ ಹಿಡಿಯೋ ಸಾಧ್ಯತೆ.
* ಶಾಸಕರಿಗೆ ಟಾಸ್ಕ್ ಕೊಟ್ಟು ಗೆಲ್ಲಿಸಿಕೊಡಬೇಕೆಂದು ಸಿದ್ದರಾಮಯ್ಯ ತಾಕೀತು ಮಾಡಿರುವುದು
* ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವುದು
* ಸಿಎಂ ತವರು ಕ್ಷೇತ್ರ
* ಲೋಕಸಭಾ ವ್ಯಾಪ್ತಿಯಲ್ಲಿ 7 ಮಂದಿ ಕಾಂಗ್ರೆಸ್ ಶಾಸಕರಿರುವುದು
* ಬಿಎಸ್ಪಿ ಸಂಘಟನೆಯಲ್ಲಿ ಹಿಂದೆ ಬಿದ್ದಿರುವುದರಿಂದ ಅದರ ಮತಗಳು ಕೈಗೆ ಬರುವ ನಿರೀಕ್ಷೆ
ಎಸ್.ಬಾಲರಾಜು ಮೈನಸ್
* ಕ್ಷೇತ್ರದಲ್ಲಿ ಓರ್ವನೂ ಬಿಜೆಪಿ ಶಾಸಕನಿಲ್ಲದಿರುವುದು
* ಪಕ್ಷದಲ್ಲೇ ಕೆಲ ವ್ಯಕ್ತಿಗಳಿಂದ ಒಂದಷ್ಟು ಮುನಿಸು
* ಮಾದಿಗ ಮತಗಳು ಈ ಬಾರಿ ಕಾಂಗ್ರೆಸ್‌ಗೆ ಹೋಗುವ ಭೀತಿ
* ಹಾಲಿ ಬಿಜೆಪಿ ಸಂಸದ ಶ್ರೀನಿವಾಸಪ್ರಸಾದ್ ಬೆಂಬಲಿಗರು ಕಾಂಗ್ರೆಸ್‌ಗೆ ಹೋಗಿರುವುದು
ಎಸ್ ಬಾಲರಾಜು ಪ್ಲಸ್
* ಸಜ್ಜನ ರಾಜಕಾರಣಿ, ಅನುಭವಿ, ಶಾಸಕನಾಗಿದ್ದ ವೇಳೆ ಮಾಡಿದ ಅಭಿವೃದ್ಧಿ ಕಾರ್ಯಗಳು
* ಜೆಡಿಎಸ್ ಜೊತೆ ಮೈತ್ರಿ ಹಿನ್ನೆಲೆ ಒಕ್ಕಲಿಗ ಮತಗಳ ಪ್ಲಸ್
* ಮೋದಿ ನಾಮಬಲ, ಯಡಿಯೂರಪ್ಪ ವರ್ಚಸ್ಸು ಕ್ಷೇತ್ರದಲ್ಲಿ ಹೆಚ್ಚು
* ಕಳೆದ ಬಾರಿ ಬಿಜೆಪಿ ಇಬ್ಬರು ಶಾಸಕರಿದ್ದರೂ ಜಯಿಸಿರುವುದರಿಂದ ಅಭ್ಯರ್ಥಿಗೆ ಆತ್ಮಬಲ
ಈ ಚುನಾವಣೆಯು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದ್ದರೂ ಬಿಎಸ್ಪಿಗೆ ಈ ಬಾರಿ ತನ್ನ ಶಕ್ತಿ ತೋರಬೇಕಾದ ಚುನಾವಣೆ ಇದಾಗಿದೆ. ಕಳೆದ ಬಾರಿ ಎನ್.ಮಹೇಶ್ ಬಿಎಸ್ಪಿ ಅಲ್ಲಿದ್ದರು, ಈಗ ಬಿಜೆಪಿಯಲ್ಲಿದ್ದಾರೆ. ವಿಧಾನಸಭಾ ಚುನಾವಣೆ ಸೋಲನ್ನು ಲೋಕಸಭಾ ಚುನಾವಣೆ ಗೆಲುವಿನ ಮೂಲಕ ತಮ್ಮ ಪುಟಿದೇಳುವ ಲೆಕ್ಕಾಚಾರದಲ್ಲಿದ್ದರೇ ಕಾಂಗ್ರೆಸ್‌ಗೆ ಮತ್ತೇ ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳುವ ಹಾಗೂ ಮುಖ್ಯಮಂತ್ರಿಗೆ ಪ್ರತಿಷ್ಠೆಯ ಚುನಾವಣೆ ಇದಾಗಿದೆ. ಕೆಲವೇ ದಿನಗಳಲ್ಲಿ ಅಭ್ಯರ್ಥಿಗಳ ಹಣೆಬರಹವನ್ನು ಮತದಾರ ಬರೆಯಲಿದ್ದು, ಯಾರಿಗೇ ಗಡಿಜಿಲ್ಲೆ ಕಿರೀಟ ಕಾದು ನೋಡಬೇಕಿದೆ.












Click it and Unblock the Notifications