ವ್ಯಕ್ತಿಚಿತ್ರ: ಕರ್ನಾಟಕದ ಹೊಸ ಸಿಜೆಐ ರಿತುರಾಜ್ ಅವಸ್ಥಿ
ಅಲಹಾಬಾದ್ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಇಂದು(ಅ.11) ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ನೂತನ ಸಿಜೆಐ ರಿತುರಾಜ್ ಅವಸ್ಥಿ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಭಾರತದ ಸಂವಿಧಾನದ ಪರಿಚ್ಛೇದ 217ರ ಷರತ್ತು (1) ಮೂಲಕ ನೀಡಲಾದ ಅಧಿಕಾರಗಳನ್ನು ಚಲಾಯಿಸುವಾಗ, ರಾಷ್ಟ್ರಪತಿಗಳು ಅಲಹಾಬಾದ್ ಹೈಕೋರ್ಟ್‌ನ ನ್ಯಾಯಾಧೀಶರಾದ ನ್ಯಾಯಮೂರ್ತಿ ರಿತುರಾಜ್ ಅವಸ್ಥಿಯವರನ್ನು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಿದ್ದಾರೆ.
ಕೇಂದ್ರ ಸರ್ಕಾರ ರಿತುರಾಜ್ ಅವಸ್ಥಿರನ್ನು ಕರ್ನಾಟಕದ ನ್ಯಾಯಮೂರ್ತಿಯನ್ನಾಗಿ ನೇಮಿಸಿ ಶನಿವಾರ ಅಧಿಸೂಚನೆ ಹೊರಡಿಸಿತ್ತು. ಹಿರಿಯ ನ್ಯಾಯಮೂರ್ತಿಗಳಾಗಿದ್ದ ಎಂಟು ಮಂದಿಗೆ ಮುಖ್ಯ ನ್ಯಾಯಮೂರ್ತಿಗಳಾಗಿ ಪದೋನ್ನತಿ ನೀಡಲಾಗಿದ್ದು ಅವರಲ್ಲಿ ಅವಸ್ಥಿ ಕೂಡ ಒಬ್ಬರಾಗಿದ್ದಾರೆ.

ನ್ಯಾ. ಅವಸ್ಥಿ ಬಗ್ಗೆ ಸಂಕ್ಷಿಪ್ತ ವಿವರ:
1960ರಲ್ಲಿ ಅವಸ್ಥಿ ಅವರು ಜನಿಸಿದರು. 1986ರಲ್ಲಿ ಲಕ್ನೋ ವಿಶ್ವವಿದ್ಯಾಲಯದಲ್ಲಿ ಕಾನೂನು ಪಡೆದರು. ಬಳಿಕ 1987ರಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದರು. ಅಲಾಹಾಬಾದ್ ಹೈಕೋರ್ಟ್ ಲಕ್ನೋಪೀಠದ ನ್ಯಾಯಮೂರ್ತಿಯಾಗಿ ಹಲವು ವರ್ಷ ಕರ್ತವ್ಯ ನಿರ್ವಹಿಸಿದರು. ಈ ಅವಧಿಯಲ್ಲಿ ನ್ಯಾ. ಅವಸ್ಥಿ ಅವರು ಶಿಕ್ಷಣ, ಸಿವಿಲ್ ವಿಚಾರಗಳಲ್ಲಿ ಹಲವು ಮಹತ್ವದ ಪ್ರಕರಣಗಳನ್ನು ನಿರ್ವಹಿಸಿದ್ದಾರೆ.
ರಿತುರಾಜ್ ಅವಸ್ಥಿ ಲಕ್ನೋದಲ್ಲಿ ಈ ಮೊದಲು ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಸೇವೆ ಸಲ್ಲಿಸುತ್ತಿದ್ದರು. 2009ರಲ್ಲಿ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದರು. 2010ರಲ್ಲಿ ಖಾಯಂ ನ್ಯಾಯಮೂರ್ತಿಯಾಗಿ ವೃತ್ತಿ ಮುಂದುವರೆಸಿದರು. 2022ರ ಜುಲೈ 02 ರ ತನಕ ನ್ಯಾಯಮೂರ್ತಿಯಾಗಿ ಅವಧಿ ಹೊಂದಿದ್ದಾರೆ.
ನ್ಯಾ., ಎ ಎಸ್ ಓಕಾ ಪದೋನ್ನತಿ:
ಈ ಹಿಂದೆ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ನ್ಯಾ., ಎ ಎಸ್ ಓಕಾ ಅವರು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದರು. ಆ ಬಳಿಕ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳಾಗಿ ಸತೀಶ್ ಚಂದ್ರ ಶರ್ಮಾ ನೇಮಕವಾಗಿದ್ದರು. ಸತೀಶ್ ಚಂದ್ರ ಶರ್ಮಾ ಅವರನ್ನು ತೆಲಂಗಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲಾಗಿದೆ.
ಸೆಪ್ಟೆಂಬರ್ 16ರಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದಲ್ಲಿ ನಡೆದ ಕೊಲಿಜಿಯಂ ಸಭೆಯಲ್ಲಿ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ರಿತು ರಾಜ್ ಅವಸ್ಥಿ ಅವರ ನೇಮಕಾತಿಯೂ ಸೇರಿದಂತೆ ದೇಶಾದ್ಯಂತ ವಿವಿಧ 13 ಹೈಕೋರ್ಟ್‌ಗಳಿಗೆ ಮುಖ್ಯ ನ್ಯಾಯಮೂರ್ತಿಗಳನ್ನು ನೇಮಕ ಮಾಡಿ ಕೇಂದ್ರ ಸರ್ಕಾರವು ಅಧಿಸೂಚನೆ ಹೊರಡಿಸಿತ್ತು.
ಐವರು ಮುಖ್ಯ ನ್ಯಾಯಮೂರ್ತಿಗಳನ್ನು ಒಂದು ಹೈಕೋರ್ಟ್‌ನಿಂದ ಮತ್ತೊಂದು ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಗಿದ್ದು, ಎಂಟು ಹೈಕೋರ್ಟ್‌ಗಳಿಗೆ ಹಿರಿಯ ನ್ಯಾಯಮೂರ್ತಿಗಳಾಗಿದ್ದವರನ್ನು ಮುಖ್ಯ ನ್ಯಾಯಮೂರ್ತಿಗಳಾಗಿ ಪದನೋನ್ನತಿ ನೀಡಲಾಗಿದೆ.












Click it and Unblock the Notifications