ಕಾಂಗ್ರೆಸ್ ಬುಡ ಅಲ್ಲಾಡಿಸುತ್ತಿರುವ ಮುಂದಿನ ಸಿಎಂ, ಸಿದ್ದರಾಮೋತ್ಸವ
ಕೂಸು ಹುಟ್ಟುವ ಮುನ್ನಲೇ ಕುಲಾವಿ ಎನ್ನುವ ಹಾಗೇ ರಾಜ್ಯ ಕಾಂಗ್ರೆಸ್ಸಿನಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಚರ್ಚೆ ಅವಶ್ಯಕತೆಗಿಂತ ಹೆಚ್ಚು ಚಾಲ್ತಿಯಲ್ಲಿದೆ. ಇನ್ನೊಂದು ಕಡೆ, ದಾವಣಗೆರೆಯಲ್ಲಿ ಆಯೋಜಿಸಲಾಗುತ್ತಿರುವ ಸಿದ್ದರಾಮೋತ್ಸವ.
ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಂದಿನ ಸಿಎಂ ಯಾರು ಎನ್ನುವುದು ನಿಶ್ಚಯವಾಗುವುದಾದರೂ, ಮುಖ್ಯಮಂತ್ರಿ ಚರ್ಚೆಯನ್ನು ಉದ್ದೇಶಪೂರ್ವಕವಾಗಿಯೇ ಹರಿಯ ಬಿಡಲಾಗುತ್ತಿದೆ ಎನ್ನುವುದು ಕಾಂಗ್ರೆಸ್ ಆಪ್ತ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.
ಸಾರ್ವಜನಿಕವಾಗಿ ತಮ್ಮ ನಡುವಿನ ಅಂತರವನ್ನು ಕಮ್ಮಿ ಮಾಡಿಕೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಯತ್ನಿಸುತ್ತಿದ್ದರೂ ಅದು ಫಲಕಾರಿಯಾಗುತ್ತಿಲ್ಲ.
ವ್ಯಕ್ತಿಗಿಂತ ಪಕ್ಷ ಮುಖ್ಯ ಎನ್ನುವ ಮಾತನ್ನು ಡಿಕೆಶಿ ಪದೇಪದೇ ಹೇಳುತ್ತಿದ್ದರೂ, ಕೆಪಿಸಿಸಿಯ ಬಣ ರಾಜಕೀಯ ದಿನಕ್ಕೊಂದು ಹೊಸ ತಿರುವನ್ನು ಪಡೆಯುತ್ತಿದೆ. ಇದರ ಜೊತೆಗೆ, ಮುಖ್ಯಮಂತ್ರಿ ಆಕಾಂಕ್ಷಿಗಳ ಪಟ್ಟಿ ಕೂಡಾ ಬೆಳೆಯುತ್ತಿರುವುದು ಕಾಂಗ್ರೆಸ್ಸಿಗೆ ಶುಭ ಸೂಚಕವಲ್ಲ ಎನ್ನುವುದು ಕಾರ್ಯಕರ್ತರ ಅಂಬೋಣ.

ಆಗಸ್ಟ್ ಮೂರರಂದು ದಾವಣಗೆರೆಯಲ್ಲಿ ಸಿದ್ದರಾಮೋತ್ಸವ
ಸಿದ್ದರಾಮಯ್ಯನವರ ಆಪ್ತರು ದಾವಣಗೆರೆಯಲ್ಲಿ ಆಗಸ್ಟ್ ಮೂರರಂದು ಅವರ 75ನೇ ಹುಟ್ಟುಹಬ್ಬದ ಪ್ರಯುಕ್ತ ಭಾರಿ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ ಸಭೆಯೂ ನಡೆಸಲಾಗಿತ್ತು. ಆ ಸಭೆಯಲ್ಲಿ ಪೂರ್ವನಿಗದಿತ ಕಾರ್ಯಕ್ರಮ ಎನ್ನುವ ಕಾರಣದಿಂದಾಗಿ ಡಿ.ಕೆ.ಶಿವಕುಮಾರ್ ಗೈರಾಗಿದ್ದರು. ಈ ಕಾರ್ಯಕ್ರಮದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಡಿಕೆಶಿ ಮತ್ತವರ ಸಹೋದರ ಡಿ.ಕೆ.ಸುರೇಶ್ ಉತ್ತರಿಸಿದ ರೀತಿ ಅಸಮಾಧಾನವನ್ನು ಹೊರಹಾಕಿದ ರೀತಿಯಲ್ಲಿತ್ತು ಎನ್ನುವುದು ಅತ್ಯಂತ ಸ್ಪಷ್ಟ.

ಯಾವುದೇ ವ್ಯಕ್ತಿಗೆ 75ನೇ ಹುಟ್ಟುಹಬ್ಬ ಎನ್ನುವುದು ವಿಶೇಷ
ಸಿದ್ದರಾಮಯ್ಯನವರ ಬಣ/ಆಪ್ತರು ಹೇಳುವ ಹಾಗೇ ಯಾವುದೇ ವ್ಯಕ್ತಿಗೆ 75ನೇ ಹುಟ್ಟುಹಬ್ಬ ಎನ್ನುವುದು ವಿಶೇಷ. ಮೇಲ್ನೋಟಕ್ಕೆ ಇದು ಒಪ್ಪಿಕೊಳ್ಳುವ ಮಾತಾಗಿದ್ದರೂ, ಚುನಾವಣಾ ವರ್ಷದಲ್ಲಿ ಅದರ ಹಿಂದಿನ ರಾಜಕೀಯ ವಾಸನೆ, ಇನ್ನೊಂದು ಬಣಕ್ಕೆ ಸಹಿಸಲಾಗುತ್ತಿಲ್ಲ. ಯಾಕೆಂದರೆ ಅದು ಸಿದ್ದರಾಮಯ್ಯನವರ ಬಲ ಪ್ರದರ್ಶನವಾಗುವುದಂತೂ ಹೌದು. ಜೊತೆಗೆ, ರಾಹುಲ್ ಗಾಂಧಿ ಕೂಡಾ ಕಾರ್ಯಕ್ರಮಕ್ಕೆ ಬರುವ ಸುದ್ದಿ ಇರುವುದರಿಂದ, ಅಧಿಕಾರಕ್ಕೆ ಕಾಂಗ್ರೆಸ್ ಬಂದಿದ್ದೇ ಆದಲ್ಲಿ, ಆ ಕಾರ್ಯಕ್ರಮ ಸ್ಪಷ್ಟವಾಗಿ ಸಿದ್ದರಾಮಯ್ಯ ಬಣಕ್ಕೆ ಬಲ ತುಂಬುತ್ತದೆ. ಇದೇ, ಇನ್ನೊಂದು ಬಣಕ್ಕೆ ಆಗುತ್ತಿರುವ ಕಸಿವಿಸಿ.

ಚಾಮರಾಜಪೇಟೆಯ ಶಾಸಕ ಜಮೀರ್ ಅಹ್ಮದ್ ಖಾನ್
ಚಾಮರಾಜಪೇಟೆಯ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಕೆಪಿಸಿಸಿ ಅಧ್ಯಕ್ಷರ ಮಾತಿಗೆ ಚಿಕ್ಕಾಸಿನ ಬೆಲೆಯನ್ನೂ ನೀಡದೇ ಸಿದ್ದರಾಮಯ್ಯ ಮುಂದಿನ ಸಿಎಂ ಎನ್ನುವ ಮಾತನ್ನು ಪದೇಪದೇ ಹೇಳುತ್ತಿದ್ದಾರೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಜಮೀರ್ ಹೇಳುತ್ತಿದ್ದರೂ, ಕಾಂಗ್ರೆಸ್ ವಲಯದಲ್ಲಿ ಇದು ಬೇರೆ ಸಂದೇಶವನ್ನು ರವಾನಿಸುತ್ತಿದೆ. ಕಾಂಗ್ರೆಸ್ ಮುಖಂಡರಿಗೆ ಜಮೀರ್ ಹೇಳಿಕೆಗೆ ಉತ್ತರಿಸುವ ಅನಿವಾರ್ಯತೆ ಎದುರಾಗುತ್ತಿದೆ.

ಕಾಂಗ್ರೆಸ್ ಬುಡ ಅಲ್ಲಾಡಿಸುತ್ತಿರುವ ಮುಂದಿನ ಸಿಎಂ, ಸಿದ್ದರಾಮೋತ್ಸವ
ಜಮೀರ್ ಯಾಕಾಗಿ ಈ ಮಾತನ್ನು ಹೇಳುತ್ತಿದ್ದಾರೆ, ಸಿದ್ದರಾಮಯ್ಯನವರ ಮೇಲಿನ ಅತಿಯಾದ ಅಭಿಮಾನವೋ ಅಥವಾ ಯಾರಾದರೂ ಇವರ ಬಾಯಿಯಿಂದ ಈ ಮಾತನ್ನು ಹೇಳಿಸುತ್ತಿದ್ದಾರೋ ಎನ್ನುವುದು ಇಲ್ಲಿ ಎದುರಾಗುವ ಪ್ರಶ್ನೆ. ಒಟ್ಟಿನಲ್ಲಿ ಮುಂದಿನ ಮುಖ್ಯಮಂತ್ರಿ ಮತ್ತು ಸಿದ್ದರಾಮೋತ್ಸವ ಪಕ್ಷದಲ್ಲಿ ಒಗ್ಗಟ್ಟಿನ ಗಾಳಿಯನ್ನು ಬೀಸುತ್ತಿಲ್ಲ. ಕಾಂಗ್ರೆಸ್ಸಿನ ವಿದ್ಯಮಾನಗಳು ವಿರೋಧ ಪಕ್ಷಗಳಿಗೆ ವೃಥಾ ಆಹಾರವಾಗುತ್ತಿದೆ. ಇದು ಒಳ್ಳೆಯದಕ್ಕೋ, ಕೆಟ್ಟದಕ್ಕೋ ಮುಂದಿನ ಚುನಾವಣೆಯಲ್ಲಿ ಉತ್ತರ ದೊರಕಲಿದೆ.












Click it and Unblock the Notifications