ಪಾಕಿಸ್ತಾನ್ ವಶದಲ್ಲಿರುವ ಈ ಅಭಿನಂದನ್ ವರ್ತಮಾನ್ ಯಾರು?
ವಿಂಗ್ ಕಮ್ಯಾಂಡರ್ ಅಭಿನಂದನ್ ವರ್ತಮಾನ್ ಹೆಸರು ಈಗ ಕೋಟ್ಯಂತರ ಭಾರತೀಯರು ಸೇರಿದ ಹಾಗೆ ವಿಶ್ವದಾದ್ಯಂತ ಹರಿದಾಡುತ್ತಿದೆ. 34 ವರ್ಷದ ಅಭಿನಂದನ್ ಭಾರತೀಯ ವಾಯು ಸೇನೆಯ ವಿಂಗ್ ಕಮ್ಯಾಂಡರ್. ಭಾರತದ ಮಿಗ್ 21 ವಿಮಾನ ಪತನ ಆದಾಗ ಅದರಿಂದ ಹೇಗೋ ಪಾರಾದ ಅವರು ತಲುಪಿದ್ದು ಪಾಕ್ ಮಣ್ಣಿಗೆ. ಈಗ ಪಾಕಿಸ್ತಾನ ತನ್ನ ವಶದಲ್ಲಿ ಅವರನ್ನು ಇರಿಸಿಕೊಂಡಿದೆ.
ಭಾರತ ಮತ್ತು ಪಾಕಿಸ್ತಾನ ಮಧ್ಯದ ಗಡಿ ನಿಯಂತ್ರಣ ರೇಖೆಯನ್ನು ದಾಟಿ, ಪಾಕಿಸ್ತಾನದಲ್ಲಿರುನ ಬಾಲಾಕೋಟ್ ನಲ್ಲಿನ ಜೈಶ್-ಇ-ಮೊಹ್ಮದ್ ಕ್ಯಾಂಪ್ ನ ಭಾರತದ ವಾಯು ಸೇನೆ ಧ್ವಂಸ ಮಾಡಿದ ಮರು ದಿನವೇ ಅಭಿನಂದನ್ ಸಿಕ್ಕಿರುವ ವಿಡಿಯೋವನ್ನು ಪಾಕ್ ಅಪ್ ಲೋಡ್ ಮಾಡಿದೆ.
ಪಾಕ್ ವಶದಲ್ಲಿ ಅಭಿನಂದನ್ ಸುರಕ್ಷಿತವಾಗಿದ್ದಾರೆ, ನಿರಾತಂಕವಾಗಿದ್ದಾರೆ
ಪಾಕಿಸ್ತಾನದ ಸಶಸ್ತ್ರಪಡೆಯ ವಕ್ತಾರ ಮೇಜರ್ ಜನರಲ್ ಅಸೀಫ್ ಗಫೂರ್ ಹಂಚಿಕೊಂಡಿರುವ ಅಭಿನಂದನ್ ರ ಫೋಟೋ ವೈರಲ್ ಆಗಿದೆ. ಅಭಿನಂದನ್ ರನ್ನು ಸೇನೆ ನೈತಿಕತೆ ನಿಯಮಗಳ ಪ್ರಕಾರವೇ ನಡೆಸಿಕೊಳ್ಳುವುದಾಗಿ ಕೂಡ ಆತ ಹೇಳಿದ್ದಾರೆ.
2011ರಲ್ಲಿ ಅಭಿನಂದನ್ ಅವರು ಫ್ಲೈಟ್ ಲೆಫ್ಟಿನೆಂಟ್ ಆಗಿದ್ದರು. ಆಗ ಎನ್ ಡಿಟಿವಿ ಗುಡ್ ಟೈಮ್ಸ್ ನ ರಾಕಿ ಮತ್ತು ಮಯೂರ್ ಶೋನಲ್ಲಿ ಭಾಗವಹಿಸಿದ್ದ ಅವರು, ಯುದ್ಧ ವಿಮಾನದ ಪೈಲಟ್ ಗಳಿಗೆ ಟೀಮ್ ವರ್ಕ್ ಬಹಳ ಮುಖ್ಯ ಎಂದು ಹೇಳಿದ್ದರು. ನಾನು ಜೀವನದ ಜತೆಗೆ ಕೋ ಪೈಲಟ್ ಅನ್ನು ನಂಬ್ತೀನಿ. ಅದು ನಮ್ಮ ತರಬೇತಿ. ಮತ್ತು ಇದು ಕುರುಡು ನಂಬಿಕೆ. ಇದರಲ್ಲಿ ಎರಡು ಮಾರ್ಗಗಳಿಲ್ಲ ಎಂದಿದ್ದರು.
ಅಭಿನಂದನ್ ಅವರನ್ನು ವಾಪಸ್ ಕರೆತನ್ನಿ : ಟ್ವಿಟ್ಟಿಗರ ಒಕ್ಕೊರಲ ಕೂಗು
ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಅಭಿನಂದನ್ ಬಗ್ಗೆ ಅಧಿಕೃತವಾಗಿ ಗುರುತು, ಮಾಹಿತಿ ನೀಡಿಲ್ಲ. ಆದರೆ ಪ್ರಸಾರ ಖಾತೆ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು ಮಾಹಿತಿ ಟ್ವೀಟ್ ಮಾಡಿದ್ದಾರೆ.

ಕಾಟ್ರು ವೆಳಿಯಿಡೈ ಸಿನಿಮಾಗೆ ಕನ್ಸಲ್ಟೆಂಟ್ ಆಗಿದ್ದರು ಸಿಂಹಕುಟ್ಟಿ
ನಿವೃತ್ತ ಏರ್ ಮಾರ್ಷಲ್ ಸಿಂಹಕುಟ್ಟಿ ವರ್ತಮಾನ್ ಅವರ ಮಗ ಈ ಅಭಿನಂದನ್. ಅವರು ಈಗ ದಕ್ಷಿಣ ಭಾರತದ ಒಂದು ರಾಜ್ಯದಲ್ಲಿ ವಾಸವಿದ್ದಾರೆ. ವರ್ತಮಾನ್ ಅವರು ಕೊನೆಯದಾಗಿ ಈಸ್ಟರ್ನ್ ಏರ್ ಕಮ್ಯಾಂಡ್ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದವರು. ನಿರ್ದೇಶಕ ಮಣಿರತ್ನಂ ಅವರ ಕಾಟ್ರು ವೆಳಿಯಿಡೈ ಸಿನಿಮಾಗೆ ಕನ್ಸಲ್ಟೆಂಟ್ ಆಗಿ ಸಿಂಹಕುಟ್ಟಿ ಇದ್ದರು. ಕಾರ್ಗಿಲ್ ಯುದ್ಧದ ಹಿನ್ನೆಲೆಯಿದ್ದ ಅ ಸಿನಿಮಾದಲ್ಲಿ ಭಾರತದ ಪೈಲಟ್ ಪಾಕಿಸ್ತಾನದ ವಶಕ್ಕೆ ಸಿಕ್ಕಿಕೊಂಡು, ಆ ನಂತರ ತಪ್ಪಿಸಿಕೊಂಡು ಬರುವ ಕಥೆ ಇತ್ತು. ವರ್ತಮಾನ್ ಅವರಿಗೆ ಇಬ್ಬರು ಮಕ್ಕಳು. ಅಭಿನಂದನ್ ಹದಿನೈದು ವರ್ಷದ ಹಿಂದೆ ವಾಯುಸೇನೆ ಸೇರಿದ್ದಾರೆ. ಅವರ ಸೋದರ ಕೂಡ ಈಗ ವಾಯು ಸೇನೆಯಲ್ಲೇ ಸೇವೆ ಸಲ್ಲಿಸುತ್ತಿದ್ದಾರೆ.
ತಾನೇ ಕೆಲಸ ಮಾಡಿದ ಸಿನಿಮಾದ ಕತೆಯಂತೆ ಆಗಿದೆ ಮಗನ ಬದುಕು

ಪಾಕ್ ನಿಂದ ಎರಡು ವಿಡಿಯೋ ಬಿಡುಗಡೆ
ಪಾಕಿಸ್ತಾನವು ವಶಕ್ಕೆ ಪಡೆದಿರುವ ವಾಯುಸೇನೆ ಪೈಲಟ್ ಅಭಿನಂದನ್ ರ ಎರಡು ವಿಡಿಯೋ ಬಿಡುಗಡೆ ಮಾಡಿದೆ. ಆ ಪೈಕಿ ಒಂದರಲ್ಲಿ, ಅಭಿನಂದನ್ ರ ಕಣ್ಣಿಗೆ ಬಟ್ಟೆ ಕಟ್ಟಿದ್ದು, ಮುಖ ರಕ್ತಸಿಕ್ತ ಆಗಿರುವುದು ಕಂಡುಬರುತ್ತದೆ. ಮತ್ತೊಂದು ವಿಡಿಯೋದಲ್ಲಿ, ನಾನು ಯಾವುದೇ ಮಾಹಿತಿಯನ್ನು ಬಹಿರಂಗ ಮಾಡುವಂತಿಲ್ಲ. ಕ್ಷಮಿಸಿ ಎಂದಿದ್ದಾರೆ ಅಭಿನಂದನ್. ಎರಡೂ ವಿಡಿಯೋದಲ್ಲಿ ಕೆಲ ಪ್ರಾಥಮಿಕ ಪ್ರಶ್ನೆಗಳಿಗೆ ಯಾವುದೇ ಅಳುಕಿಲ್ಲದೆ, ಎಷ್ಟು ತಿಳಿಸಲು ಸಾಧ್ಯವೋ ಅಷ್ಟನ್ನು ಮಾತ್ರ ಉತ್ತರಿಸಿದ್ದಾರೆ. ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರಲ್ಲಿ, ನೀರು ಹರಿಯುತ್ತಿರುವ ಸ್ಥಳದ ಪಕ್ಕದಲ್ಲಿ ಬಿದ್ದಿದ್ದ ಅಭಿನಂದನ್ ರ ಮೇಲೆ ಸ್ಥಳೀಯರು ಹಲ್ಲೆ ಮಾಡುತ್ತಿರುವುದು ಹಾಗೂ ಆ ನಂತರ ಪಾಕಿಸ್ತಾನದ ಸೈನಿಕರು ಬಿಡಿಸಿಕೊಂಡು ಕರೆದೊಯ್ಯುವುದು ಕಂಡುಬರುತ್ತದೆ.
ಪೈಲೆಟ್ ನಾಪತ್ತೆ ಬಗ್ಗೆ ಪಾಕಿಸ್ತಾನ ನೀಡಿದ ಉತ್ತರವೇನು?

ಭಾರತದಿಂದ ಪ್ರಬಲವಾದ ಆಕ್ಷೇಪ
ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಉದ್ವಿಗ್ನ ಸ್ಥಿತಿ ಹಿನ್ನೆಲೆಯಲ್ಲಿ ವಿದೇಶಾಂಗ ವ್ಯವಹಾರಗಳ ಕಾರ್ಯಾಲಯದಿಂದ ಪಾಕಿಸ್ತಾನದ ತಾತ್ಕಾಲಿಕ ಹೈಕಮಿಷನರ್ ಸೈಯದ್ ಹೈದರ್ ಷಾರನ್ನು ಕರೆಸಿಕೊಂಡು, ಅಭಿನಂದನ್ ರನ್ನು ತಕ್ಷಣ ಹಾಗೂ ಸುರಕ್ಷಿತ ಬಿಡುಗಡೆ ಮಾಡುವಂತೆ ಒತ್ತಡ ಹಾಕಲಾಗಿದೆ. ಭಾರತದ ಸೇನಾಧಿಕಾರಿಗೆ ಯಾವುದೇ ತೊಂದರೆ ಮಾಡಬಾರದು ಎಂದು ಪಾಕಿಸ್ತಾನಕ್ಕೂ ಸ್ಪಷ್ಟವಾಗಿ ಹೇಳಲಾಗಿದೆ. ಇದರ ಜತೆಗೆ ಅಂತರರಾಷ್ಟ್ರೀಯ ಮಾನವಹಕ್ಕುಗಳ ಕಾನೂನು ಹಾಗೂ ಜಿನೀವಾ ಒಪ್ಪಂದ ಉಲ್ಲಂಘಿಸಿ, ಗಾಯಾಳು ಅಧಿಕಾರಿಯನ್ನು 'ಕೆಟ್ಟದಾಗಿ ತೋರಿಸಿದ್ದಕ್ಕೆ' ಭಾರತವು ಪ್ರಬಲ ಆಕ್ಷೇಪ ಕೂಡ ವ್ಯಕ್ತಪಡಿಸಿದೆ.

ಅಭಿನಂದನ್ ರ ತಂದೆ ಸಂದೇಶ
ಅಭಿನಂದನ್ ರ ತಂದೆ ಸಿಂಹಕುಟ್ಟಿ ಸಂದೇಶವೊಂದನ್ನು ನೀಡಿದ್ದು, ಸ್ನೇಹಿತರೇ ನಿಮ್ಮ ಕಾಳಜಿ ಹಾಗೂ ಹಾರೈಕೆಗೆ ಧನ್ಯವಾದಗಳು. ಆ ದೇವರ ಆಶೀರ್ವಾದಕ್ಕೆ ಧನ್ಯವಾದಗಳು; ಅಭಿ ಜೀವಂತ ಇದ್ದಾನೆ, ಯಾವುದೇ ಗಾಯಗಳಾಗಿಲ್ಲ, ಅವನಷ್ಟು ಧೈರ್ಯವಾಗಿ ಮಾತನಾಡಿರುವುದು ನೋಡಿದರೆ ಗಟ್ಟಿ ಮನಸ್ಸು ಇರುವುದು ಗೊತ್ತಾಗುತ್ತದೆ. ನಿಜವಾದ ಯೋಧ. ಅವನ ಬಗ್ಗೆ ನಮಗೆ ಹೆಮ್ಮೆ ಇದೆ. ನಿಮ್ಮೆಲ್ಲರ ಅಶೀರ್ವಾದದ ಹಸ್ತ ಅವನ ತಲೆಯ ಮೇಲಿದೆ ಎಂದು ನನಗೆ ಗೊತ್ತಿದೆ. ಅವನು ಸುರಕ್ಷಿತವಾಗಿ ಹಿಂತಿರುಗಲಿ ಎಂದು ಪ್ರಾರ್ಥಿಸೋಣ. ಅವನಿಗೆ ಹಿಂಸೆ ಮಾಡದಿರಲಿ ಎಂದು ಪ್ರಾರ್ಥಿಸುತ್ತೇನೆ. ದೈಹಿಕ ಹಾಗೂ ಮಾನಸಿಕವಾಗಿ ದೃಢವಾಗಿಯೇ ಸುರಕ್ಷಿತವಾಗಿ ವಾಪಸ್ ಮನೆಗೆ ಬರಲಿ. ಇಂಥ ಅಗತ್ಯ ಸಮಯದಲ್ಲಿ ನಮ್ಮ ಜತೆ ಇರುವುದಕ್ಕೆ ಧನ್ಯವಾದ. ನಿಮ್ಮ ಬೆಂಬಲ ಹಾಗೂ ಶಕ್ತಿಯೇ ನಮ್ಮ ಪಾಲಿಗೆ ಬಲ ಎಂದು ಹೇಳಿದ್ದಾರೆ.