ಕೆಲವರು ಕ್ಯಾಕಿ ಹೊಡೆಯಬಹುದು, ಕ್ಯಾಕರಿಸಿ ಉಗಿಯಲೂಬಹುದು!

By: ಯಶೋಧರ ಪಟಕೂಟ
Subscribe to Oneindia Kannada

ಒಂದಾನೊಂದು ಕಾಲವಿತ್ತು. ಕೆಲ ರಾಜಕೀಯ ನಾಯಕರ ಪ್ರಖರ, ವಿದ್ವತ್ತಿನಿಂದ ಕೂಡಿ ಭಾಷಣ ಕೇಳಲು ಸುತ್ತಲಿನ ಹಳ್ಳಿಗಳಿಂತ ಬಂಡಿ ಮಾಡಿಕೊಂಡು, ಬುತ್ತಿ ಕಟ್ಟಿಕೊಂಡು, ಸಂಸಾರ ಸಮೇತರಾಗಿ ಬರುತ್ತಿದ್ದರು. ಆ ರೀತಿಯ ಮಾತಿನ ಮೋಡಿಯನ್ನು ಆ ನಾಯಕರು ಕಟ್ಟಿಕೊಡುತ್ತಿದ್ದರು.

ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ, ರಾಮ್ ಮನೋಹರ ಲೋಹಿಯಾ, ಎಪಿಜೆ ಅಬ್ದುಲ್ ಕಲಾಂ, ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ, ಜಾರ್ಜ್ ಫರ್ನಾಂಡಿಸ್, ರಾಮಕೃಷ್ಣ ಹೆಗಡೆ, ರಾಜೀವ್ ಗಾಂಧಿ.... ಮುಂತಾದವರು ಆಕರ್ಷಣೆಯೇ ಅವರ ಮಾತಾಗಿತ್ತು.

ಮಿರ್ಚಿ ಬಜ್ಜಿ, ಗಿರ್ಮಿಟ್ ರುಚಿಗೆ ಮಾರುಹೋದ ರಾಹುಲ್ ಗಾಂಧಿ

ಸಾರ್ವಜನಿಕ ಸಭೆಯಲ್ಲಾಗಲಿ, ಸಂಸತ್ತಿನಲ್ಲಾಗಲಿ, ವಿಧಾನಸಭೆಯಲ್ಲಾಗಲಿ ಅಥವಾ ಖಾಸಗಿ ಸಮಾರಂಭದಲ್ಲಾಗಲಿ ತಮ್ಮ ವಾಗ್ಝರಿಯನ್ನು ಹರಿಸಿ ಕೇಳುಗರನ್ನು ಮಂತ್ರಮುಗ್ಧರನ್ನಾಗಿ ಮಾಡುತ್ತಿದ್ದರು. ಅವರ ಬೆಂಬಲಿಗರಷ್ಟೇ ಏಕೆ, ವಿರೋಧಿಗಳು ಕೂಡ ತಲೆದೂಗುವಂತೆ ಅವರ ಮಾತಿನಲ್ಲಿ ಆವೇಗ, ಆಬಗೆ ಸಿದ್ಧತೆ ಇರುತ್ತಿತ್ತು.

Where all the political orators have gone

ಒಂದೆರಡು ದಶಕಗಳ ಹಿಂದೆ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಅಂತಹ ವಾಕ್ಪಟುತ್ವವನ್ನು ಹೊಂದಿದ್ದರು. ಅವರು ಅಸ್ಖಲಿತ ಹಿಂದಿಯಲ್ಲಿ, ಅಲ್ಲಲ್ಲಿ ಕವನವನ್ನು ಹೇಳುತ್ತ, ಮಾತನಾಡುತ್ತಿದ್ದರೆ ವಿರೋಧಿಗಳು ಕೂಡ ಬಾಯಿಮುಚ್ಚಿಕೊಂಡು ಕೇಳುತ್ತಿದ್ದರು. ಅಧಿಕಾರ ತ್ಯಜಿಸುವಾಗ ಆಡಿದ ಭಾಷಣ ಅದ್ಭುತ ಉದಾಹರಣೆ.

ಈಗ ಅಂತಹ ಮಾತುಗಾರರು ಯಾರಿದ್ದಾರೆ? ಒಂದು ಮಟ್ಟಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಪ್ರಧಾನಿಯಾದ ಆರಂಭದಲ್ಲಿ ಅಂತಹ ಝಲಕನ್ನು ತೋರಿಸಿದ್ದಾರೆ. ಕನಿಷ್ಠಪಕ್ಷ ವಾಜಪೇಯಿಯವರ ನಂತರ ಒಬ್ಬರಾದರೂ ಮನಸೆಳೆಯುವಂಥ ಮಾತುಗಳನ್ನು ಆಡುವವರಿದ್ದಾರೆ ಎಂಬಂತಹ ವಾತಾವರಣವನ್ನು ಸೃಷ್ಟಿಸಿದ್ದರು.

Where all the political orators have gone

ವಿಷಾದನೀಯ ಸಂಗತಿಯೆಂದರೆ, ಈಗ ಅವರ ಭಾಷಣಗಳು ಕೂಡ ಅಲ್ಲಲ್ಲಿ ಬೋರು ಹೊಡೆಸಲು ಆರಂಭಿಸಿವೆ. ಕರ್ನಾಟಕದಲ್ಲಿ ಬಂದರೂ ಅದೇ ಮಾತು, ಗುಜರಾತಿನಲ್ಲಿ ಭಾಷಣ ಬಿಗಿದರೂ ಅದೇ ಧಾಟಿಯದ್ದು, ಓಮಾನ್, ಅಬುಧಾಬಿ, ಕತಾರ್ ಹೋದರೂ ಅಂತಹುದೇ ವಾಗ್ಝರಿ! ಯಾಕೆ ಹೀಗೆ?

'ಮೋದಿ ಕರ್ನಾಟಕಕ್ಕೆ ಬಂದಾಗ ಪಕ್ಕದಲ್ಲಿ ಯಾರಿದ್ದಾರೆ ನೋಡಲಿ'

ಇನ್ನು ಅವರ ಸರಿಸಮನಾಗಿ ರಾಜಕೀಯ ಅಂಗಳದಲ್ಲಿ ಹೋರಾಟ ನಡೆಸುತ್ತಿರುವ ರಾಹುಲ್ ಗಾಂಧಿಯವರ ಮಾತುಗಳು, ಟೇಪ್ ರೆಕಾರ್ಡರ್ ಹಾಕಿದಂತೆ ಭಾಸವಾಗುತ್ತಿದೆ. ಅದೇ ಗುಜರಾತ್, ಅದೇ ಸಂಸತ್ ಭಾಷಣ, ಅದೇ ರಿಯರ್ ಮಿರರ್ ವ್ಯಾಖ್ಯಾನ, ಅದೇ ಸಿದ್ದರಾಮಯ್ಯನವರ ಗುಣಗಾನ, ಅದೇ ಯಡಿಯೂರಪ್ಪನವರ ಅವಹೇಳನ!

ಸಿದ್ದರಾಮಯ್ಯಜಿ ಗಾಡಿಯನ್ನು ಮುಂದೆ ನೋಡಿಕೊಂಡು ಓಡಿಸುತ್ತಾರೆ. ಆದರೆ, ಮೋದಿಜಿ ಗಾಡಿಯನ್ನು ರಿಯರ್ ಮಿರರ್ ನಲ್ಲಿ ನೋಡಿಕೊಂಡು ಓಡಿಸುತ್ತಾರೆ. ತೆಂಡೂಲ್ಕರ್ ಮುಂದೆ ನೋಡಿಕೊಂಡು ಬ್ಯಾಟಿಂಗ್ ಮಾಡುತ್ತಾರೆ, ಆದರೆ ಮೋದಿಯವರು ವಿಕೆಟ್ ಕೀಪರ್ ನನ್ನು ನೋಡಿಕೊಂಡು ಬ್ಯಾಟಿಂಗ್ ಮಾಡುತ್ತಾರೆ!

ಚಿತ್ರಗಳು : ಮಿರ್ಚಿ ಬಜ್ಜಿ ಗಿರ್ ಮಿಟ್ ತಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್

Where all the political orators have gone

ಎಷ್ಟು ಭಾಷಣದಲ್ಲಿ ಇದೇ ಮಾತನ್ನು ಕೇಳುವುದು. ಸಾರ್, ಇದು ಇಂಟರ್ನೆಟ್ ಜಮಾನಾ. ಹೊಸಪೇಟೆಯಲ್ಲಿ ಮಾಡಿದ ಭಾಷಣವನ್ನು ದೇವದುರ್ಗದ ಜನ ಇಂಟರ್ನೆಟ್ಟಿನಲ್ಲಿ, ಟಿವಿಯಲ್ಲಿ ಆಗಲೇ ಆಲಿಸಿಬಿಟ್ಟಿರುತ್ತಾರೆ. ಅವರಿಗೆ ಅದೇ ಮಾತನ್ನು, ಅದೇ ಧಾಟಿಯಲ್ಲಿ ಹೇಳಿದರೆ, ಕೆಲವರು ಕ್ಯಾಕಿ ಹೊಡೆಯಬಹುದು, ಕೆಲವರು ಕ್ಯಾಕರಿಸಿಯೂ ಉಗಿಯಬಹುದು.

ಮೋದಿ ಮಾತುಗಳಲ್ಲಿ ಅಲ್ಲಲ್ಲಿ ಚಪ್ಪಾಳೆ ಗಿಟ್ಟಿಸುವಂಥ ಡೈಲಾಗ್ ಗಳು ಬರುತ್ತಿರುತ್ತವೆ, ಎದ್ದುಬಿದ್ದು ನಗುವಂಥ ಹಾಸ್ಯ ಪ್ರಸಂಗಗಳು ಬರುತ್ತಿರುತ್ತವೆ, ಹಾಸ್ಯಪ್ರಜ್ಞೆಯೂ ಇರುತ್ತದೆ, ಭ್ರಷ್ಟಾಚಾರದ ವಿರುದ್ಧ ಹೋರಾಡೋಣ ಎಂಬಂಥ ಘೋಷಣೆಗಳಿರುತ್ತವೆ, ಅಲ್ಲಲ್ಲಿ ವಿಡಂಬನೆಗಳೂ ಇರುತ್ತವೆ. ಹಾಗೆಯೇ, ಹಲವಾರು ಭಾಷಣಗಳಲ್ಲಿ ಏಕತಾನತೆಯೂ ಇರುತ್ತದೆ.

ಸಾರ್ವಜನಿಕ ಸಮಾರಂಭಗಳಲ್ಲಿ ಮೂರ್ನಾಲ್ಕು ಲಕ್ಷ ಸೇರಿದ್ದಾರೆಂದರೆ, ಅವರು ತಾವಾಗಿಯೇ ಬಂದಿರುವುದಿಲ್ಲ. ಅವರಿಗೆ ಹಣದ ಆಮಿಷ ತೋರಿಸಿ, ಊಟ ಉಪಚಾರದ ಆಸೆ ಹುಟ್ಟಿಸಿ, ಸರಕಾರಿ ಬಸ್ಸುಗಳನ್ನು ಎರವಲು ಪಡೆದುಕೊಂಡು, ಸಾಕಷ್ಟು ಹಣ ಖರ್ಚು ಮಾಡಿ ಸಮಾವೇಷಗಳಿಗೆ ಕರೆದು, ಅಲ್ಲ ಎಳೆದು ತಂದಿರುತ್ತಾರೆ. ಜನರನ್ನು ಕರೆತಂದಿರದಿದ್ದರೆ ಎರಡನೇ ಸಾಲಿನ ನಾಯಕರು ಬೈಗುಳವನ್ನೂ ತಿಂದಿರುತ್ತಾರೆ.

ಹಿಂದೆ, ಇಂದಿರಾ ಗಾಂಧಿಯವರಿಗೆ ಶಾರದಾ ಪ್ರಸಾದ್ ಅಂಥವರು ಭಾಷಣ ರೆಡಿ ಮಾಡಿಕೊಡುತ್ತಿದ್ದರು, ನರೇಂದ್ರ ಮೋದಿಯವರಿಗೆ ಕೂಡ ಭಾಷಣ ಸಿದ್ಧ ಮಾಡಿಕೊಡುವಂಥ ತಂಡವೇ ಇದೆ. ಆದರೆ, ಇಂದಿನ ಕೆಲ ರಾಷ್ಟ್ರೀಯ ನಾಯಕರ ಮಾತು ಕೇಳುತ್ತಿದ್ದರೆ, ಭಾಷಣ ಸಿದ್ಧ ಮಾಡಿಕೊಡುವಂಥವರು ಇದ್ದಾರೋ ಇಲ್ಲವೋ ಅನುಮಾನ ಬರುವಂತೆ ಇರುತ್ತದೆ.

Where all the political orators have gone

ಕೇಳುಗರಲ್ಲಿ ವಿರೋಧ ಪಕ್ಷದವರ ಬಗ್ಗೆ ಅಸಹ್ಯ ಹುಟ್ಟಿಸಿ, ಅವರಲ್ಲಿ ಕ್ರೋಧಾಗ್ನಿ ಉರಿಯುವಂತೆ ಮಾಡಿ, ಆಕ್ರೋಶಭರಿತರಾಗಿ ಅವರ ಜನ್ಮವನ್ನೆಲ್ಲ ಜಾಲಾಡಿ, ಅವರ ಹೀನಕೃತ್ಯಗಳನ್ನೆಲ್ಲ ಹೋದಲ್ಲೆಲ್ಲ ಬಯಲಿಗೆಳೆದು, ಅವರಿಗಿಂತ ನಾವೇ ಉತ್ತಮರು ಎಂದು ಮನವರಿಕೆ ಮಾಡುವ ಹೊತ್ತಿಗೆ, ಇವರಿಗಿಂತ ಅವರೇ ಉತ್ತಮರು ಎನ್ನುವಂತಾಗಿರುತ್ತದೆ ಕೇಳುಗರಿಗೆ!

ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿರುವುದರಿಂದ, ಹಾಡಿದ್ದೇ ಹಾಡುವುದನ್ನು ಬಿಟ್ಟು ಬೇರೇನೂ ಇರುವುದಿಲ್ಲ. ಇಂಥದೇ ಮಾತುಗಳನ್ನು ಆಡಿದರೆ ಮಾಧ್ಯಮದಲ್ಲಿ ಸುದ್ದಿಯಾಗುತ್ತದೆ ಎಂಬಂತಹ ಧೋರಣೆಯೂ ಇದಕ್ಕೆ ಕಾರಣವಿರಬಹುದು. ಅಸಹ್ಯ ಹುಟ್ಟಿಸುವಂಥ ಟೀಕೆ, ಕೆಸರಲ್ಲಿ ಕಲ್ಲು ಎಸೆಯುವಂಥ ಮಾತುಗಳು ಭಾಷಣದ ರಸಾಸ್ವಾದವನ್ನೇ ಮರೆಮಾಚುತ್ತಿವೆ.

ಹೌದು ನಾನು ತಪ್ಪು ಮಾಡಿದ್ದೇನೆ. ಇನ್ನು ಮುಂದೆ ಇಂಥ ತಪ್ಪು ಮಾಡಲ್ಲ ಅಂತ ಒಬ್ಬನಾದರೂ ಎದೆ ತಟ್ಟಿಕೊಂಡು ಹೇಳಲಿ ನೋಡೋಣ. ನಾಲ್ಕು ವೋಟುಗಳಾದರೂ ಹೆಚ್ಚಿಗೆ ಬೀಳುತ್ತವೆ. ಅವರ ಭಾಷಣಗಳಲ್ಲಿ ಸತ್ಯ ಸತ್ತು ಹೋಗಿರುತ್ತದೆ, ಪ್ರಾಮಾಣಿಕತೆ ನೆಗೆದುಬಿದ್ದು ಹೋಗಿರುತ್ತದೆ. ಅಬ್ಬರದ ಭಾಷಣಗಳಲ್ಲಿ ಆತ್ಮಸಾಕ್ಷಿಗಂತೂ ಜಾಗವೂ ಇಲ್ಲ!

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Where all the political orators have gone? Why are we hearing the same, stale election speeches everywhere? Why politicians come prepared to address the public gathering?

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ