ದೀರ್ಘಕಾಲ ಮಾಸ್ಕ್ ಧರಿಸುತ್ತಿರಾ? ಹಾಗಾದರೆ ಇದರ ಬಗ್ಗೆ ನೀವು ಯೋಚಿಸಲೇಬೇಕು...
ಕೊರೊನಾ ಸೋಂಕಿನಿಂದ ದೂರವುಳಿಯಲು ಮಾಸ್ಕ್ ಧರಿಸುವುದು ಕಡ್ಡಾಯ. ಹೊರಗೆ ಹೋಗುವವರು ದಿನವಿಡೀ ಮಾಸ್ಕ್ ಧರಿಸುವ ಅನಿವಾರ್ಯವೂ ಇರುತ್ತದೆ. ಆದರೆ ಹೀಗೆ ದೀರ್ಘಾವಧಿ ಮಾಸ್ಕ್ ಧರಿಸುವುದರಿಂದ ಬಾಯಿಯ ಆರೋಗ್ಯ ಹದಗೆಡುವುದು ಖಚಿತ ಎಂದು ಹೇಳುತ್ತಿದ್ದಾರೆ ದಂತ ವೈದ್ಯರು. ಜನರು ಮಾಸ್ಕ್ ಧರಿಸುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ಪಾಲಿಸದೇ ಇದ್ದರೆ ಬಾಯಿಯ ಆರೋಗ್ಯಕ್ಕೆ ಧಕ್ಕೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮಾಸ್ಕ್ ಧರಿಸುವ ಸಂಬಂಧ ಡಾ. ಎ. ರಾಮಚಂದ್ರನ್ ಡಯಾಬಿಟಿಸ್ ಆಸ್ಪತ್ರೆಯ ನಿರ್ದೇಶಕರಾದ ವನಿತಾ ರಾಮಚಂದ್ರನ್ ಅವರು "ಹಿಂದೂ" ಪತ್ರಿಕೆಯೊಂದಿಗೆ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಮಾಸ್ಕ್ ಧರಿಸುವುದರಿಂದ ಬಾಯಿಯ ಆರೋಗ್ಯಕ್ಕೆ ಹೇಗೆ ತೊಂದರೆಯಾಗಬಹುದು? ಅದನ್ನು ಹೇಗೆ ನಿವಾರಣೆ ಮಾಡಿಕೊಳ್ಳಬಹುದು ಎಂಬ ಸಲಹೆಯನ್ನೂ ನೀಡಿದ್ದಾರೆ. ಮುಂದೆ ಓದಿ...

ನಿರ್ಜಲೀಕರಣ, ಬಾಯಿ ಒಣಗುವಿಕೆ ಸಮಸ್ಯೆ
ದೀರ್ಘ ಅವಧಿಯವರೆಗೆ ಮಾಸ್ಕ್ ಧರಿಸುವವರಿಗೆ ಬಾಯಿಯ ಆರೋಗ್ಯದಲ್ಲಿ ಸಮಸ್ಯೆ ಕಾಣಬಹುದು. ಆದರೆ ಮಾಸ್ಕ್ ಧರಿಸುವುದು ಅನಿವಾರ್ಯವಾಗಿದೆ. ಈಗ ಡಬಲ್ ಮಾಸ್ಕ್‌ಗಳನ್ನು ಧರಿಸಲು ಸೂಚಿಸಲಾಗುತ್ತಿದೆ. ಆದರೆ ದೀರ್ಘಾವಧಿ ಮಾಸ್ಕ್ ಧರಿಸುವುದರಿಂದ ನಿರ್ಜಲೀಕರಣ ಹಾಗೂ ಬಾಯಿ ಒಣಗುವಿಕೆ ಸಮಸ್ಯೆ ಉಂಟಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ಬಾಯಿ ದುರ್ವಾಸನೆ ಬರುತ್ತದೆ
ಹೆಚ್ಚು ಅವಧಿ ಮಾಸ್ಕ್ ಧರಿಸುವುದು ಬಾಯಿಯ ಶುಷ್ಕತೆಗೆ ಕಾರಣವಾಗಬಹುದು. ಮಾಸ್ಕ್ ಧರಿಸಿದ ನಂತರ ಸಮಯ ತೆಗೆದುಕೊಳ್ಳದೇ ಸಾಕಷ್ಟು ನೀರು ಕುಡಿಯದೇ ಇರುವುದು ಒಂದು ಸಮಸ್ಯೆ. ಇದು ಬಾಯಿಯಲ್ಲಿನ ಸೂಕ್ಷ್ಮಜೀವಿಗಳ ಹೆಚ್ಚಳಕ್ಕೆ ಕಾರಣವಾಗಿ ಬಾಯಿಯ ದುರ್ವಾಸನೆ ಸಮಸ್ಯೆ ಸೃಷ್ಟಿಸುತ್ತದೆ.
"ಎರಡು ವರ್ಷದ ಹಿಂದೆ ನಮ್ಮ ಸಂಸ್ಥೆಯಲ್ಲಿ ಬಾಯಿಯ ದುರ್ವಾಸನೆ ಕುರಿತು ಅಧ್ಯಯನ ನಡೆಸಲಾಗಿತ್ತು. ದೀರ್ಘಾವಧಿ ಬಾಯಿ ಮುಚ್ಚಿಕೊಂಡೇ ಇರುವ ಜನರಲ್ಲಿ ಹಾಗೂ ಎಂಜಿಲನ್ನು ನುಂಗದೇ ಇದ್ದ ಜನರಲ್ಲಿ ಈ ಸಮಸ್ಯೆ ಅತಿ ಹೆಚ್ಚಾಗಿ ಕಂಡುಬಂದಿತ್ತು. ಐಸಿಯುನಲ್ಲಿ ಹೆಚ್ಚು ಅವಧಿ ಇರುವ ಜನರಲ್ಲಿಯೂ ಈ ಸಮಸ್ಯೆ ಕಂಡುಬಂದಿತ್ತು" ಎಂದು ಮದ್ರಾಸ್‌ನ ಡೆಂಟಲ್ ಕಾಲೇಜು ಪ್ರಾಂಶುಪಾಲರಾದ ಜಿ. ವಿಮಲಾ ಹೇಳುತ್ತಾರೆ.

ಹಲ್ಲಿನ ಸಮಸ್ಯೆಗೆ ಎಡೆ ಮಾಡಿಕೊಡುತ್ತದೆ
ಬಾಯಿಯ ದುರ್ವಾಸನೆ ಮುಂದೆ ದೊಡ್ಡ ರೂಪ ತಾಳಬಹುದು. ಬಾಯಿಯ ಆರೋಗ್ಯ ಸಮಸ್ಯೆಗಳಾದ ಹುಳುಕು ಹಲ್ಲು, ಒಸಡಿನ ತೊಂದರೆಗೂ ಕಾರಣವಾಗಬಹುದು. ಮಾಸ್ಕ್ ಧರಿಸುವುದರಿಂದ ಆಗುವ ತೊಂದರೆ ಕುರಿತು ಅಧ್ಯಯನ ನಡೆಯುವ ಅವಶ್ಯಕತೆಯಿದೆ. ಆದರೆ ಈಗ ಮಾಸ್ಕ್ ಧರಿಸದೇ ಇರುವುದು ಅಪಾಯಕಾರಿಯಾದ್ದರಿಂದ ಇದಕ್ಕಿರುವ ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ ಎಂದು ತಿಳಿಸಿದರು. ಕೊರೊನಾ ಸೋಂಕಿನ ಅವಧಿಯಲ್ಲಿ ಎಷ್ಟು ಜನರು ಹಲ್ಲಿನ ಸಮಸ್ಯೆಗೆ ತುತ್ತಾಗಿದ್ದಾರೆ ಎಂಬ ಕುರಿತು ಬ್ರೆಜಿಲ್‌ನಲ್ಲಿ ದಂತವೈದ್ಯರ ತಂಡ ಸಮೀಕ್ಷೆ ಮಾಡಿದ್ದಾಗಿಯೂ ಹೇಳಿದ್ದಾರೆ.

ಈ ಸಮಸ್ಯೆಗೆ ಏನು ಮಾಡಬೇಕು?
"ಕಮ್ಯುನಿಟಿ ಅಂಡ್ ಪ್ರಿವೆಂಟಿವ್ ಡೆಂಟಿಸ್ಟ್ರಿ" ನಿಯತಕಾಲಿಕೆಯಲ್ಲಿ ಅಧ್ಯಯನ ಪ್ರಕಟಗೊಂಡಿದ್ದು, ಮಾಸ್ಕ್ ಧರಿಸುವುದರಿಂದ ಬಾಯಿಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಈ ಅಧ್ಯಯನ ಒತ್ತಿ ಹೇಳಿದೆ.
ಮಾಸ್ಕ್ ಧರಿಸುವುದರಿಂದ ಸರಿಯಾಗಿ ಹಲ್ಲುಜ್ಜುವ ಅಭ್ಯಾಸವೂ ತಗ್ಗಿದೆ. ಬಾಯಿಯ ದುರ್ವಾಸನೆ ಹೆಚ್ಚಳಕ್ಕೆ ಇದು ಕಾರಣವಾಗಿ. ಹಲ್ಲುಗಳ ಬಣ್ಣ ಬದಲಾದರೂ ಮಾಸ್ಕ್ ಧರಿಸುವುದರಿಂದ ಅದು ಕಾಣುವುದಿಲ್ಲ ಎಂದು ಅದರೆಡೆ ನಿರ್ಲಕ್ಷ್ಯ ಮಾಡುತ್ತಿರುವವರು ಹೆಚ್ಚಿದ್ದಾರೆ ಎಂದು ಅಧ್ಯಯನ ಉಲ್ಲೇಖಿಸಿದೆ.ಇದಕ್ಕಿರುವ ಪರಿಹಾರವೆಂದರೆ, ಹೆಚ್ಚಾಗಿ ನೀರು ಕುಡಿಯುವುದು. ಮೂಗಿನಿಂದಲೇ ಉಸಿರಾಡಿ. ಬಟ್ಟೆ ಮಾಸ್ಕ್ ಧರಿಸಿದರೆ ದಿನವೂ ಅದನ್ನು ಒಗೆದು ಧರಿಸಿ. ಮಾಸ್ಕ್ ಧಾರಣೆಯಿಂದ ಚರ್ಮ ಸಮಸ್ಯೆ, ಮೊಡವೆ ಆಗದಂತೆ ಎಚ್ಚರವಹಿಸಿ ಎಂದು ಸಲಹೆ ನೀಡಲಾಗಿದೆ.











Click it and Unblock the Notifications