ಸೀರೆಯ ಮೇಲೆ ಕನ್ನಡದ ರಂಗು ಚೆಲ್ಲಿದ ವೃಂದಾ ಶೇಖರ್

Posted By:
Subscribe to Oneindia Kannada
   ಈ ವಾರದ ಮಹಿಳಾ ಸಾಧಕಿ : ವೃಂದಾ ಚಂದ್ರಶೇಖರ್ |Women Achiever of the Week : Vrunda Shekhar |Oneindia Kannada

   ನೀರೆಗೆ ಸೀರೆಗಿಂತ ಚೆಂದದ ಉಡುಪು ಬೇರೆಯಿಲ್ಲ. ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದ ನಡುವಲ್ಲೂ ಭಾರತೀಯ ಸನಾತನ ಸಂಸ್ಕೃತಿಯನ್ನು ಬಿಂಬಿಸುವ ಸೀರೆಗಳು ತಮ್ಮ ಜನಪ್ರಿಯತೆಯನ್ನು, ಮಹತ್ವವನ್ನು ಇಂದಿಗೂ ಉಳಿಸಿಕೊಂಡಿವೆ. ಯಾವುದಾದರೊಂದು ಅದ್ಧೂರಿ ಸಮಾರಂಭವೆಂದರೆ ಅದಕ್ಕೆ ಇಂದಿಗೂ ಸೀರೆಯೇ ಭೂಷಣ ಎಂಬ ನಂಬಿಕೆ ನಮ್ಮದು.

   'ಶೈಕ್ಷಣಿಕ ದತ್ತು' ಎಂಬ ವಿನೂತನ ಯೋಜನೆಗೆ ನಾಂದಿ ಹಾಡಿದ 'ಮಿಂಚು'

   ಕಾಲಕ್ಕೆ ತಕ್ಕಂತೆ ಸೀರೆಯ ಗುಣಮಟ್ಟದಲ್ಲಿ, ವಿನ್ಯಾಸದಲ್ಲಿ ಹಲವು ಬದಲಾವಣೆಯಾಗಿವೆ. ಪಾರಂಪರಿಕ ಉಡುಪು ಸೀರೆ, ಫ್ಯಾಷನ್ ಲೋಕಕ್ಕೂ ಅಷ್ಟೇ ಸಮಬಲದ ಸ್ಪರ್ಧೆ ನೀಡಿದೆ. ಇಂಥ ಸೀರೆಯ ಮೂಲಕ ಕನ್ನಡ ಭಾಷೆಯ ಸೊಗಡನ್ನು, ಕಂಪನ್ನು ಪಸರಿಸುವ ಕೆಲಸವಾದರೆ ಹೇಗಿರುತ್ತದೆ? ಒಂದೆಡೆ ನಮ್ಮ ಸಾಂಪ್ರದಾಯಿಕ ಉಡುಪಿಗೂ ಮನ್ನಣೆ, ಇನ್ನೊಂದೆಡೆ ನಮ್ಮ ಶ್ರೀಮಂತ ಭಾಷೆಗೂ ಗೌರವ!

   ಹೌದು, ಇದೇ ಉದ್ದೇಶ ಇಟ್ಟುಕೊಂಡು ಕರ್ನಾಟಕದ ಹೆಮ್ಮೆಯ ಇಳಕಲ್ ಸೀರೆಗಳ ಮೇಲೆ ಕನ್ನಡ ಅಕ್ಷರಗಳನ್ನೂ, ಕವನಗಳನ್ನೂ, ಜಾನಪದ ಕಲೆಗಳನ್ನು ಮೂಡಿಸುವ ಪ್ರಯತ್ನವೊಂದು ಸದ್ದಿಲ್ಲದೆ ನಡೆಯುತ್ತಿದೆ. ಈ ವಿಭಿನ್ನ ಕಾರ್ಯಕ್ಕೆ ಮುನ್ನುಡಿ ಬರೆದವರು ಕರ್ನಾಟಕ ಜಾನಪದ ಅಕಾಡೆಮಿಯ ಮಾಜಿ ಕನ್ಸಲ್ಟಂಟ್ ವೃಂದಾ ಶೇಖರ್.

   ಕಲಿಕೆಯಲ್ಲೂ 'ವಾತ್ಸಲ್ಯ' ಅರಸುವ ಶಿವಮೊಗ್ಗದ ಶೈಲಾ ಹುಂಚದಕಟ್ಟೆ

   ಮೂಲತಃ ಶಿವಮೊಗ್ಗದ ವಿನೋಬಾ ನಗರದವರಾದ ವೃಂದಾ ಶೇಖರ್ ಮೂರು ದಶಕದೀಚೆಯೇ ಬೆಂಗಳೂರಿಗೆ ಬಂದು ನೆಲೆಕಂಡವರು. ಸದ್ಯಕ್ಕೆ ಚೆನ್ನೈನಲ್ಲಿ ವಾಸಿಸುತ್ತಿರುವ ಇವರು ಕಾರ್ಪೋರೇಟ್ ಕಂಪೆನಿಯ ಕೆಲಸವನ್ನು ಬಿಟ್ಟು ಕನ್ನಡಕ್ಕಾಗಿ ತಮ್ಮ ಸಮಯವನ್ನೆಲ್ಲ ಮೀಸಲಿಟ್ಟವರು. ಚಿಕ್ಕ ವಯಸ್ಸಿನಲ್ಲಿ ಕೆಲವರ್ಷಗಳ ಕಾಲ ವರಕವಿ ದ.ರಾ.ಬೇಂದ್ರೆಯವರೊಂದಿಗೆ ಕಳೆವ ಸನ್ನಿವೇಶ ಸಿಕ್ಕಿದ್ದು ಅವರ ಬದುಕಿನ ಅತ್ಯಮೂಲ್ಯ ಕ್ಷಣ.

   ವಿದೇಶದಲ್ಲೂ ಕನ್ನಡದ ಬೊಂಬೆಗಳ ಸೊಬಗು ತೋರಿದ ಅನುಪಮಾ ಹೊಸಕೆರೆ

   ಕನ್ನಡದ ಕಂಪನ್ನು ನೂರಾರು ಜನರಿಗೆ ಹರಡುವುದಕ್ಕೆ ಸೀರೆಗಿಂತ ಉತ್ತಮ ಮಾಧ್ಯಮ ಬೇರೆ ಯಾವುದಿದೆ ಎನ್ನುವ ವೃಂದಾ ಶೇಖರ್ ಅವರು 'ಒನ್ ಇಂಡಿಯಾ' ಕನ್ನಡಕ್ಕೆ ನೀಡಿದ ಸಂದರ್ಶನ ಇಲ್ಲಿದೆ.

   ಮನಸೆಳೆವ ಪಶ್ಚಿಮಘಟ್ಟದ ನಿಸರ್ಗ ವೈಭವ

   ಮನಸೆಳೆವ ಪಶ್ಚಿಮಘಟ್ಟದ ನಿಸರ್ಗ ವೈಭವ

   "ನಾನು ಹುಟ್ಟಿದ್ದು ಶಿವಮೊಗ್ಗದಲ್ಲಾದ್ರಿಂದ ಮಲೆನಾಡಿನ ನಿಸರ್ಗ ವೈಭವ ಸದಾ ನನ್ನ ಉಲ್ಲಾಸ ಬೀರ್ತಿತ್ತು. ಪಶ್ಚಿಮಘಟ್ಟದಲ್ಲಿರುವ ಲೆಕ್ಕವಿಲ್ಲದಷ್ಟು ಸುಂದರ ಹೂವುಗಳು, ಪಕ್ಷಿಗಳು ಇವೆಲ್ಲವುಗಳ ಬಗ್ಗೆ ಚಿಕ್ಕ ವಯಸ್ಸಿನಿಂದಲೂ ನಂಗೆ ಎಲ್ಲಿಲ್ಲದ ಆಸಕ್ತಿ. ಕಾರ್ಪೋರೇಟ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ನನಗೆ ಸೀರೆಯನ್ನು ಉಟ್ಟೇ ಗೊತ್ತಿರಲಿಲ್ಲ. ಆದರೆ ಮೊದಲ ಬಾರಿಗೆ ಸೀರೆ ಉಟ್ಟಾಗ ಯಾವುದೋ ಆಪ್ಯಾಯಮಾನ ಭಾವ ಮನಸ್ಸನ್ನು ತುಂಬಿಕೊಂಡಿತ್ತು. ನಮ್ಮ ಪಾರಂಪರಿಕ ಉಡುಪು ಸೀರೆಯ ಮೂಲಕ ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ಕೆಲಸ ಮಾಡುವ ಯೋಚನೆ ಮೊಟ್ಟಮೊದಲ ಬಾರಿಗೆ ಮೂಡಿದ್ದು ಆಗಲೇ"

   ಸಾಂಪ್ರದಾಯಿಕ ಸೀರೆಗಳಿಗೆ ಕನ್ನಡದ ಒನಪು

   ಸಾಂಪ್ರದಾಯಿಕ ಸೀರೆಗಳಿಗೆ ಕನ್ನಡದ ಒನಪು

   "ಕರ್ನಾಟಕದ ಹೆಮ್ಮೆಯ ಇಳಕಲ್ ಸೀರೆ, ಮೋಳಕಾಲ್ಮೂರು ಸೀರೆ, ಖಾದಿ ಸೀರೆಗಳು ಮತ್ತೊಮ್ಮೆ ತಮ್ಮ ಬೇಡಿಕೆಗಳನ್ನು ಪಡೆದುಕೊಳ್ಳುತ್ತಿರುವ ಕಾಲದಲ್ಲಿ ಇವುಳ ಮೇಲೆ ಕನ್ನಡ ಅಕ್ಷರಗಳನ್ನು ಮೂಡಿಸಿ, ಕನ್ನಡ ಪ್ರೇಮವನ್ನೂ, ಅಭಿಮಾನವನ್ನೂ, ಕಾಳಜಿಯನ್ನೂ ಪ್ರಕಟಪಡಿಸಬಾರದೇಕೆ ಎನ್ನಿಸುವುದಕ್ಕೆ ಶುರುವಾಯ್ತು. ಸಂಧ್ಯಾ ಪ್ರಕಾಶ್ ಅವರ ಅರಳೀಕಟ್ಟೆ ಮತ್ತು ವೃಂದಾ ಶೇಖರ್ ಅವರ ಬ್ಲೌಸ್ ಪ್ಲೀಸ್ ತಂಡಗಳು ಕನ್ನಡದ ಕೈಂಕರ್ಯಕ್ಕೆ ನಾಂದಿಹಾಡಿದೆವು. ಸೀರೆಯ ಮೇಲೆ ಕೇವಲ ಕನ್ನಡ ಅಕ್ಷರಗಳನ್ನು, ಕವನಗಳನ್ನಷ್ಟೇ ಅಲ್ಲದೆ, ಕರ್ನಾಟಕದ ಮಣ್ಣಿನ ಸೊಗಡನ್ನು ಪ್ರತಿಬಿಂಬಿಸುವ ಎಲ್ಲವುಗಳ ಅಚ್ಚು ಮೂಡಿಸುವ ಉದ್ದೇಶ ನಮ್ಮದು. ಈ ಕೆಲಸದ ಮೊದಲ ಹೆಜ್ಜೆ ಈಗಷ್ಟೇ ಮೂಡುತ್ತಿದೆಯಷ್ಟೆ! ಈಗಾಗಲೇ ಕನ್ನಡದ ಕವನಗಳನ್ನು, ಅಕ್ಷರಗಳನ್ನೂ ಸೀರೆಗಳ ಮೇಲೆ ಮೂಡಿಸಿದ್ದೇವೆ. ಮುಂದಿನ ಹೆಜ್ಜೆಯಲ್ಲಿ ಗಂಡಭೇರುಂಡ, ಪಶ್ಚಿಮಘಟ್ಟದ ಪಕ್ಷಿಗಳು, ಹೂವುಗಳನ್ನು ಸೀರೆಯ ಮೇಲೆ ಅಚ್ಚುಹಾಕಿಸಿ, ಕನ್ನಡಿಗರಿಗೇ ಗೊತ್ತಿರದ ಕರ್ನಾಟಕದ ಹಲವು ಸಂಗತಿಗಳನ್ನು ಪರಿಚಯಿಸುವ ಪ್ರಯತ್ನ ನಡೆಯಲಿದೆ."

   ಮಾತೃಭಾಷೆಯ ಅಭಿಮಾನ ನಿರಂತರ

   ಮಾತೃಭಾಷೆಯ ಅಭಿಮಾನ ನಿರಂತರ

   "ಯಾವುದೇ ಕಾರ್ಪೋರೇಟ್ ಕಂಪೆನಿಯಲ್ಲಿ ದುಡಿಯಲಿ, ಎಷ್ಟೇ ಉನ್ನತ ಸ್ಥಾನಕ್ಕೇರಲಿ, ಎಷ್ಟೇ ಭಾಷೆ ಕಲಿಯಲಿ... ಆದರೆ ಮಾತೃಭಾಷೆಯ ಮೇಲಿನ ಅಭಿಮಾನ ನಿರಂತರ. ಅದಕ್ಕೆಂದೇ ಆ ಕೆಲಸವನ್ನೆಲ್ಲ ಬಿಟ್ಟು ಸರ್ಕಾರದ ಅಡಿಯಲ್ಲಿ ಬರುವ ಕರ್ನಾಟಕ ಜಾನಪದ ಅಕಾಡೆಮಿಯೊಂದಿಗೆ ಗುರುತಿಸಿಕೊಂಡೆ. ಅದರಿಂದಾಗಿ ಕನ್ನಡ ಜಾನಪದ ಕಲೆಯ ಔನ್ನತ್ಯ ಕ್ರಮೇಣ ಅರ್ಥವಾಗುವುದಕ್ಕೆ ಶುರುವಾಯ್ತು. ಕರ್ನಾಟಕದಲ್ಲಿರುವ ಸಾವಿರಾರು ಜಾನಪದ ಪ್ರಕಾರಗಳಲ್ಲಿ ಈಗ ಬಳಕೆಯಲ್ಲಿರುವುದು 30-40 ಅಷ್ಟೇ! ಅವನ್ನಾದರೂ ಉಳಿಸುವ ಪ್ರಯತ್ನ ನಡೆಯಲೇಬೇಕು. ಏಕೆಂದರೆ ಒಂದು ಕಲೆಯ ನಶಿಸಿದರೆ, ಆ ಸಂಸ್ಕೃತಿಯೇ ಸತ್ತಂತೆ. ಅದಕ್ಕೆಂದೇ ಸೀರೆಗಳ ಮೇಲೆ ಚನ್ನಪಟ್ಟಣದ ಬೊಂಬೆ, ಕರ್ನಾಟಕ ಜಾನಪದ ಕಲಾಪ್ರಕಾರಗಳ ಚಿತ್ರಗಳ ಅಚ್ಚು ಮೂಡಿಸುವ ಯತ್ನ ನಡೆಯುತ್ತಿದೆ."

   ಸೀರೆ ಮೂಲಕ ಕನ್ನಡದ ಕೈಂಕರ್ಯ

   ಸೀರೆ ಮೂಲಕ ಕನ್ನಡದ ಕೈಂಕರ್ಯ

   "ಕನ್ನಡದ ಕೈಂಕರ್ಯಕ್ಕೆ ಸೀರೆಯನ್ನೇ ಆಯ್ದುಕೊಂಡಿರುವುದಕ್ಕೆ ಕಾರಣವಿದೆ. ನಾವು ಕರ್ನಾಟಕದ ಸಾಂಪ್ರದಾಯಿಕ ಸೀರೆಗಳ ಮೇಲೆಯೇ ಈ ಅಚ್ಚುಹಾಕುವುದರಿಂದ ಆ ಸೀರೆಯನ್ನು ಜನರಿಗೆ ಪರಿಚಯಿಸಿದಂತಾಗುತ್ತದೆ. ಆ ಮೂಲಕ ಸಾಂಪ್ರದಾಯಿಕ ಶೈಲಿಯ ಸೀರೆಗಳಗೆ ಬೇಡಿಕೆ ಹುಟ್ಟುತ್ತದೆ. ಅದರ ಮೇಲೆ ಕನ್ನಡ ಅಕ್ಷರ ಮೂಡಿಸುವುದರಿಂದ ಕನ್ನಡ ಭಾಷೆ ಮತ್ತಷ್ಟು ಜನಕ್ಕೆ ಪರಿಚಯವಾಗುತ್ತದೆ. ಒಂದು ಪುಸ್ತಕವಾದರೆ, ಅದನ್ನು ಕೊಳ್ಳುವವರು, ಓದುವವರಿಗಷ್ಟೇ ತಲುಪುತ್ತದೆ. ಆದರೆ ಸೀರೆಯಾದರೆ ನೋಡುವವರನ್ನೆಲ್ಲ ಸೆಳೆಯುತ್ತದೆ. ಐದೂವರೆ ಮೀಟರ್ ನ ಒಂದು ಸೀರೆಯಲ್ಲಿ ಏನೇನನ್ನೆಲ್ಲ ಹೇಳಬಹುದಲ್ಲವೇ? ಹಾಗೆಯೇ ಸೀರೆಯ ಬ್ಲೌಸ್ ನ ಹಿಂಬದಿಯಲ್ಲೂ ಕನ್ನಡ ಜಾನಪದ ಚಿತ್ರ, ಕವನಗಳ ಅಚ್ಚು ಹಾಕಿಸುವುರಿಂದಲೂ ಹಲವರಿಗೆ ಕನ್ನಡವನ್ನೂ, ಕರ್ನಾಟಕ ಸಂಸ್ಕೃತಿಯನ್ನು ಪರಿಚಯಿಸಬಹುದು ಎಂಬುದು ನನ್ನ ಭಾವನೆ."

   ಫೇಸ್ ಬುಕ್ ನಿಂದಲೇ ಪ್ರಚಾರ

   ಫೇಸ್ ಬುಕ್ ನಿಂದಲೇ ಪ್ರಚಾರ

   "ಕಳೆದ ನವೆಂಬರ್ 1 ರಂದು ಕನ್ನಡ ಕವನಗಳನ್ನೊಳಗೊಂಡ ಸೀರೆಯೊಂದನ್ನು ಉಟ್ಟಿದ್ದಕ್ಕೆ, 500 ಕ್ಕೂ ಹೆಚ್ಚು ಜನ ನನ್ನ ಬಳಿ ಈ ಸೀರೆಯ ಕುರಿತು ವಿಚಾರಿಸಿದ್ದಾರೆ. ಕೊಳ್ಳುವ ಆಸ್ಥೆ ತೋರಿದ್ದಾರೆ! ಈ ಸೀರೆಗಳ ಕುರಿತು ಪ್ರಚಾರ ಮಾಡುವುದಕ್ಕೆ ನಾವು ಫೇಸ್ ಬುಕ್ ನಂಥ ಸಾಮಾಜಿಕ ಮಾಧ್ಯಮಗಳನ್ನೇ ಅವಲಂಬಿಸಿದ್ದೇವೆ. ಈ ಮೂಲಕವೇ ನಮಗೆ ಸಾಕಷ್ಟು ಬೆಂಬಲ ಸಿಕ್ಕುತ್ತಿದೆ."

   ಎಚ್ಚರಿಕೆಯೂ ಅಗತ್ಯ

   ಎಚ್ಚರಿಕೆಯೂ ಅಗತ್ಯ

   "ಕನ್ನಡ ಅನ್ನೋದು ಒಂದು ಭಂಡಾರ ಇದ್ದಹಾಗೆ. ಅವುಗಳಲ್ಲಿ ಎಲ್ಲವನ್ನೂ ನಾವು ಕೊಳ್ಳೋವುದಕ್ಕೆ ಆಗೋದಿಲ್ಲ. ಸೀರೆಗಳ ಮೇಲೆ ಅಚ್ಚು ಹಾಕುವಾಗ ನಾವು ಆಯ್ಕೆ ಮಾಡಿಕೊಳ್ಳುವ ಕವನವಾಗಲಿ, ಚಿತ್ರವಾಗಲೀ ಆಯಾ ಕವಿಗಾಗಲೀ, ಸಮುದಾಯಕ್ಕಾಗಲೀ ಮುಜುಗರವನ್ನುಂಟು ಮಾಡಬಾರದು. ಅದಕ್ಕೆಂದೇ ನಾವು ತೀರಾ ಎಚ್ಚರಿಕೆಯಿಂದಿರಬೇಕು. ನಮ್ಮ ಭಾಷೆ ಅನ್ನೋದು ಒಂದು ನಿಧಿ ಅನ್ನೋದನ್ನು ಎಂದಿಗೂ ನಾವು ಮರೆಯಬಾರದು."

   ಬೇಂದ್ರ ಅಜ್ಜ ಎಂದರೆ...

   ಬೇಂದ್ರ ಅಜ್ಜ ಎಂದರೆ...

   "ನಾನು ತುಂಬಾ ಚಿಕ್ಕವಳಿದ್ದಾಗ ವರಕವಿ ದ.ರಾ.ಬೇಂದ್ರೆಯವರೊಂದಿಗೆ ಬಹುಸಮಯ ಕಳೆದಿದ್ದೇನೆ. ಆದರೆ ನಾನು ತೀರಾ ಚಿಕ್ಕವಳಾಗಿದ್ದರಿಂದ ನನಗೆ ಅವೆಲ್ಲ ಸ್ಪಷ್ಟವಾಗಿ ನೆನಪಿಲ್ಲ. ಆದರೂ ಬೇಂದ್ರೆ ಅಜ್ಜ ಎಂದೊಡನೆ ಅವ್ಯಕ್ತ ಆಪ್ತ ಭಾವ ಹುಟ್ಟುತ್ತದೆ. ಆದ್ದರಿಂದ ಅವರ ಕೈಬರಹದ ಪದ್ಯಗಳನ್ನು ಸೀರೆಯ ಮೇಲೆ ಅಚ್ಚುಮೂಡಿಸುವ ಮಹದಾಸೆ ನನ್ನದು. ಅದಕ್ಕೆ ಅಗತ್ಯವಿರುವ ಕೆಲಸಗಳನ್ನು ಈಗಾಗಲೇ ಮಾಡುತ್ತಿದ್ದೇನೆ"

   ಕುಟುಂಬದ ಪ್ರೋತ್ಸಾಹ

   ಕುಟುಂಬದ ಪ್ರೋತ್ಸಾಹ

   "ನನ್ನ ಈ ಎಲ್ಲಾ ಕೆಲಸಗಳಿಗೂ ನಮ್ಮ ಮನೆಯಿಂದ ಸಂಪೂರ್ಣ ಬೆಂಬಲವಿದೆ. ಪತಿ ಶೇಖರ್, ಮಕ್ಕಳು, ತಂದೆ-ತಾಯಿ, ಬಂಧುಗಳೆಲ್ಲರ ಪೂರ್ಣ ಪ್ರೋತ್ಸಾಹದಿಂದಲೇ ನನ್ನ ಮನಸ್ಸು ಇಷ್ಟಪಡುವ ಕೆಲಸದಲ್ಲೇ ನಾನಿಂದು ತೊಡಗಿಕೊಂಡಿದ್ದೇನೆ. ಫೋಟೊಗ್ರಫಿ ಎಂದರೂ ನನಗಿಷ್ಟ. ಆ ಹವ್ಯಾಸ ಬೆಳೆಸುವುದಕ್ಕೂ ಕುಟುಂಬದ ಸಹಕಾರ ಸಾಕಷ್ಟಿದೆ. ಕನ್ನಡದ ಕೆಲಸ ಮಾಡುತ್ತಿದ್ದೇನೆ ಅನ್ನೋ ಹೆಮ್ಮೆ ನನಗಿದೆ. ಇದರಿಂದಾಗಿ ಕರ್ನಾಟಕದ ಸಾಂಪ್ರದಾಯಿಕ ಸೀರೆಗಳಿಗೆ ಬೇಡಿಕೆ ಹೆಚ್ಚಿದರೆ, ಸೀರೆ ಉತ್ಪಾದಕರಿಗೂ, ವ್ಯಾಪಾರಿಗಳಿಗೂ ಲಾಭ. ಜೊತೆ ಜೊತೆಯಲ್ಲೇ ಕನ್ನಡ ಭಾಷೆಗೂ ಪ್ರಚಾರ ಸಿಕ್ಕಂತಾಗುತ್ತದೆ."

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Vrunda Shekhar, who was a consultant of Karnataka Janapada Academy and a photographer is now involving her in a different work in which she is designing Kannada alphabets, Karnataka folk culture etc on Karnataka's traditional saree.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ