ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಯೋಗ ಎಂದರೆ ಜೀವನ ಮೌಲ್ಯ!" ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವನಿತಕ್ಕ

|
Google Oneindia Kannada News

Recommended Video

ಈ ವಾರದ ಮಹಿಳಾ ಸಾಧಕಿ : ವನಿತಕ್ಕ | ಯೋಗಾ ಟೀಚರ್ ಹಾಗು ಗೈಡ್ | Oneindia Kannada

ಬೆಂಗಳೂರಿನ ಗಿರಿನಗರದ 'ಯೋಗಶ್ರೀ'ಯ ಸಹೋದರಿ ವನಿತಾ ಅವರಿಗೆ 2019ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ತನ್ನಿಮಿತ್ತ ಮಹಿಳಾ ಸಾಧಕಿ ಮಾಲಿಕೆಯ ಈ ಲೇಖನ ಓದಿ...

ಯೋಗದ ಸಾಧನೆಯ ಮಹತ್ವ ಮತ್ತು ಮಹೋನ್ನತಿಯ ಅರಿವಿದ್ದರೂ ಅದನ್ನು ನಮ್ಮ ಜೀವನದ ಒಂದು ಪದ್ಧತಿ ಎಂದು ಒಪ್ಪಿಕೊಳ್ಳಲು ನಾವು ಹಿಂದೆ ಬಿದ್ದಿದ್ದೀವಾ? ಯೋಗ ಹೊಟ್ಟೆ ಕರಗಿಸುವ ವ್ಯಾಯಾಮವಷ್ಟೇ ಆಗದೆ, ಅದು ಬದುಕು ಬದಲಿಸುವ ಜೀವನ ಮೌಲ್ಯವಾದರೆ ಯೋಗಾಚರಣೆಯನ್ನು ನೋಡುವ ದೃಷ್ಟಿಕೋನವೇ ಬದಲಾದೀತು ಎಂಬುದು ಬೆಂಗಳೂರಿನ ಗಿರಿನಗರದ 'ಯೋಗಶ್ರೀ'ಯ ಸಹೋದರಿ ವನಿತಾ ಅವರ ಅಭಿಪ್ರಾಯ.

ಮಗುವಿಗಿಂತ ದೊಡ್ಡ ಯೋಗ ಶಿಕ್ಷಕ ಮತ್ತೊಬ್ಬರಿಲ್ಲಮಗುವಿಗಿಂತ ದೊಡ್ಡ ಯೋಗ ಶಿಕ್ಷಕ ಮತ್ತೊಬ್ಬರಿಲ್ಲ

ಕಳೆದ 45 ವರ್ಷಗಳಿಗಿಂತಲೂ ಹೆಚ್ಚು ಕಾಲ ಸಾಮಾಜಿಕ ಬದುಕಿನಲ್ಲಿ ತೊಡಗಿಕೊಂಡಿರುವ ಶಿವಮೊಗ್ಗದ, ಹೊಸನಗರ ಮೂಲದ ಸಹೋದರಿ ವನಿತಾ, ಅವರೆಲ್ಲ ಶಿಷ್ಯರಿಗೆ, ಬಂಧು, ಅಭಿಮಾನಿಗಳಿಗೆ ವನಿತಕ್ಕ ಎಂದೇ ಪರಿಚಿತರು. ಪ್ರತಿವ್ಯಕ್ತಿಯನ್ನೂ ಆಪ್ತ ಮನೋಭಾವದಲ್ಲೇ ನೋಡುವ, ಒಡನಾಡುವ, ಬದುಕಿನಲ್ಲಿ ಪ್ರತಿಕ್ಷಣ ಧನಾತ್ಮಕ ಚಿಂತನೆಯನ್ನೇ ನೆಲೆಗೊಳಿಸುವ, 'ಭಾರತ' ಎಂದೊಡನೆ ಅದಮ್ಯ ಉತ್ಸಾಹದಲ್ಲಿ ಕಣ್ಣರಳಿಸುವ, ಯೋಗಶ್ರೀ ಮೂಲಕ ಅಸಂಖ್ಯ ಜನರಿಗೆ ಭಾರತೀಯ ಸನಾತನ ಯೋಗಪದ್ಧತಿಯನ್ನು ಪರಿಚಯಿಸಿದ ವನಿತಕ್ಕ, ನಮ್ಮ ಈ ವಾರದ ಸಾಧಕಿ.

ಯೋಗ ಶಿಕ್ಷಕಿ ರೂಪಾ ಶಿವಮೊಗ್ಗ ಅವರ ವಿಶೇಷ ಸಂದರ್ಶನಯೋಗ ಶಿಕ್ಷಕಿ ರೂಪಾ ಶಿವಮೊಗ್ಗ ಅವರ ವಿಶೇಷ ಸಂದರ್ಶನ

ವಾಣಿಜ್ಯ ಪದವಿ, ಚರಿತ್ರೆ ಮತ್ತು ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಶಿಶು ಶಿಕ್ಷಣ ತರಬೇತಿ ಮತ್ತು ಮಕ್ಕಳ ಮನಃ ಶಾಸ್ತ್ರ ಇವರ ವಿದ್ಯಾರ್ಹತೆ. ಹೆಣ್ಣುಮಗಳೊಬ್ಬರು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾಳೆ ಎಂದರೆ ಅದನ್ನು ಯಾವುದೋ ಅಪರಾಧ ಎಂಬಂತೆ ನೋಡುವ ಕಾಲಘಟ್ಟದಲ್ಲಿ ಸಮಾಜ ಸೇವೆಗಾಗಿಯೇ ನನ್ನ ಬದುಕು ಎಂದು ಗಟ್ಟಿ ನಿರ್ಧಾರ ತಾಳಿದವರು ವನಿತಕ್ಕ. ಆ ಹಂತದಲ್ಲಿ ಎದುರಿಸಿದ ಸವಾಲುಗಳು ಅಸಂಖ್ಯ. ಆದರೂ ಯೋಗದ ತುಡಿತ ಅವರಲ್ಲಿ ವೈಯಕ್ತಿಕ ಬದುಕಿನ ವ್ಯಾಮೋಹವನ್ನು ಇಲ್ಲವಾಗಿಸಿತ್ತು.

ರಾಘವೇಂದ್ರ ಸ್ವಾಮೀಜಿ ಮಲ್ಲಾಡಿಹಳ್ಳಿ, ಅಜಿತ್ ಕುಮಾರ್, ಸ್ವಾಮಿ ಆತ್ಮಾನಂದಪುರಿ, ಬಿ ಕೆ ಎಸ್ ಅಯ್ಯಂಗಾರ್ ಅವರೆಲ್ಲರಿಂದ ಯೋಗಶಿಕ್ಷಣ ಪಡೆದ ವನಿತಕ್ಕ, ಯೋಗದ ಮೂಲಕ ವ್ಯಕ್ತಿಯ ಮಾನಸಿಕ ಬದಲಾವಣೆ, ಆ ಮೂಲಕ ಸಮಾಜದ ಪರಿವರ್ತನೆ ಸಾಧ್ಯ ಎಂಬುದನ್ನು ಕಂಡುಕೊಂಡವರು.

ನಿಯಮಿತ ಯೋಗ ಮಹಿಳೆಯ ಸೌಂದರ್ಯಕ್ಕೆ ರಾಮಬಾಣನಿಯಮಿತ ಯೋಗ ಮಹಿಳೆಯ ಸೌಂದರ್ಯಕ್ಕೆ ರಾಮಬಾಣ

ಯೋಗದ ಮಹತ್ವವನ್ನು ಮನಗಂಡು, ಪ್ರತಿವರ್ಷ ಜೂನ್ 21 ಅನ್ನು ವಿಶ್ವ ಯೋಗ ದಿನ ಎಂದು ಆಚರಿಸುತ್ತಿರುವ ಹೊತ್ತಿದು. ಬಹುಪಾಲು ಭಾರತೀಯರಿಗೆ ಈಗಲೂ ಯೋಗದ ಬಗ್ಗೆ ನಂಬಿಕೆ ಮೂಡಿಲ್ಲ ಎಂಬ ಸಣ್ಣ ವಿಷಾದವಿದ್ದರೂ, ಯೋಗ ಪ್ರತಿಯೊಬ್ಬರ ಜೀವನಧರ್ಮವಾಗಲಿ ಎಂದು ಹಾರೈಸಿ, ಒನ್ ಇಂಡಿಯಾಕ್ಕೆ 'ಯೋಗಸಿರಿ' ವನಿತಕ್ಕ ನೀಡಿದ ಸಂದರ್ಶನ ಇಲ್ಲಿದೆ.

ನಂಬಿಕೆ ಮೂಡಲಿ

ನಂಬಿಕೆ ಮೂಡಲಿ

"ಯೋಗಕ್ಕೆ ವಿಶ್ವಮಾನ್ಯತೆ ಸಿಕ್ಕಿದ್ದರೂ ಹಲವರಿಗೆ ಅದರ ಮಹತ್ವ ಇನ್ನೂ ಅರ್ಥವಾಗಿಲ್ಲ. ಅದಕ್ಕೆ ಕಾರಣ ನಂಬಿಕೆಯ ಕೊರತೆ. ನಮ್ಮ ಋಷಿಮುನಿಗಳು ಪರಿಚಯಿಸಿದ ಈ ಅನರ್ಘ್ಯ ಸಂಪತ್ತಿನ ಬಗ್ಗೆ ಹಲವರಲ್ಲಿ ನಂಬಿಕೆ ಇಲ್ಲ. ಆದರೆ ಇದರಲ್ಲಿ ಏನೋ ಇದೆ ಅನ್ನೋದು ವಿದೇಶಿಯರಿಗೆ ಅರ್ಥವಾಗಿದೆ. ಅದಕ್ಕೆಂದೇ ಅವರು ಬಾಳೆ ಎಲೆ ಊಟ, ಯೋಗಾಚರಣೆ ಎನ್ನುತ್ತ ನಿಷ್ಠೆಯಿಂದ ನಮ್ಮ ಪದ್ಧತಿಗಳನ್ನ ಅನುಸರಿಸುತ್ತಿದ್ದಾರೆ. ಯೋಗ ಪದ್ಧತಿಯ ಬಗ್ಗೆ ನಮ್ಮಲ್ಲೇ ನಂಬಿಕೆ ಬಾರದೆ, ಅದರ ಮಹತ್ವ ಅರ್ಥವಾಗುವುದಕ್ಕೆ, ಗೌರವ ಮೂಡುವುದಕ್ಕೆ ಸಾಧ್ಯವಿಲ್ಲ ಅನ್ನಿಸುತ್ತೆ."

ಸಮಯ ಸಿಕ್ಕೋಲ್ಲ ಎಂಬುದು ಸಬೂಬಷ್ಟೆ!

ಸಮಯ ಸಿಕ್ಕೋಲ್ಲ ಎಂಬುದು ಸಬೂಬಷ್ಟೆ!

"ಪ್ರತಿವ್ಯಕ್ತಿಯ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಬೆಳವಣಿಗೆಗೆ ಯೋಗ ಬೇಕೇ ಬೇಕು. ಈಗಿನ ಧಾವಂತದ ಬದುಕಿನಲ್ಲಿ ಯೋಗ ಮಾಡೊದಕ್ಕೆ ಸಮಯವೇ ಸಿಗೋಲ್ಲ ಎಂಬ ದೂರು ಹಲವರಿಂದ ಕೇಳಿದ್ದೇನೆ. ಆದರೆ ಇವೆಲ್ಲ ಒಂದು ನೆಪ ಅನ್ನಿಸುತ್ತೆ ನಂಗೆ. ಯಾಕಂದ್ರೆ ಪ್ರಧಾನಿ ನರೇಂದ್ರ ಮೋದಿಯವರೇ ಒಂದು ದಿನವೂ ತಪ್ಪಿಸದೆ ಯೋಗಾಚರಣೆ ಮಾಡ್ತಾರೆ. ಅವರಿಗಿಂತ ಬ್ಯಸಿ ಇರುವವರು ಯಾರಿದ್ದಾರೆ ಈ ದೇಶದಲ್ಲಿ? ಅವರಿಗೆ ಸಮಯ ಹೇಗೆ ದಕ್ಕುತ್ತೆ? ಆಗೋಲ್ಲ ಅಂದ್ಕೊಂಡ್ರೆ ಆಗೋಲ್ಲ. ಆದರೆ ನಿದ್ದೆ, ಊಟ, ಆಫೀಸ್ ಎನ್ನುತ್ತ ಎತ್ತಿಡುತ್ತೇವಲ್ಲ ಸಮಯವನ್ನ, ಅದರಲ್ಲಿ ಒಂದು ಪಾಲನ್ನು ಯೋಗಕ್ಕಾಗಿ ಎತ್ತಿಡುವುದಕ್ಕೆ ಸಾಧ್ಯವಿಲ್ಲವೇ? ಅದೂ ನಮ್ಮ ಉಪಯೋಗಕ್ಕಾಗೇ. ಬೆಳಗ್ಗೆ ಎದ್ದೊಡನೆ, ಅಯ್ಯೋ ಇನ್ನಷ್ಟು ಹೊತ್ತು ಮಲಗೋಣ ಅನ್ನುತ್ತೆ ಮರ್ಕಟ ಮನಸ್ಸು. ಇಲ್ಲ, ನಿಂಗೋಸ್ಕರವಾದ್ರೂ ಯೋಗ ಮಾಡು ಅನ್ನುತ್ತೆ ಇನ್ನೊಂದು ಮನಸ್ಸು. ಮರ್ಕಟ ಮನಸ್ಸನ್ನು ಗೆದ್ದು, ನಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳೋದೇ ಒಂದು ಸವಾಲು"

ಯೋಗದ ವಾಣಿಜ್ಯೀಕರಣ ಸಲ್ಲ!

ಯೋಗದ ವಾಣಿಜ್ಯೀಕರಣ ಸಲ್ಲ!

"ಯೋಗ ಇತ್ತೀಚಿನ ದಿನಗಳಲ್ಲಿ ವಾಣಿಜ್ಯೀಕರಣ ಆಗ್ತಾ ಇದೆ ಅನ್ನೋ ಮಾತು ಖಂಡಿತ ಸತ್ಯ. ಯಾವುದಾದರೂ ಒಂದಕ್ಕೆ ವ್ಯಾಪಕ ಮಹತ್ವ ಸಿಗ್ತಾ ಇದೆ ಅಂದಾಗ ಅವುಗಳ ದುರ್ಬಳಕೆಯೂ ನಡೆಯುತ್ತೆ, ಬೆಳೆ ಜೊತೆ ಕಳೆ ಅನ್ನೋ ಹಾಗೆ. ಹಾಗೆಯೇ ಯೋಗ ಕಲಿಯುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ ಅನ್ನೋದು ಅಷ್ಟೇ ಸಂತಸದ ವಿಚಾರ. ನಮ್ಮ ಯೋಗ ತರಬೇತಿ ಕೇಂದ್ರವಾದ 'ಯೋಗಶ್ರೀ' ಗೆ ಪ್ರತಿದಿನ ಏನಿಲ್ಲವೆಂದರೂ 900 ಜನ ಯೋಗ ಕಲಿಯುವುದಕ್ಕೆ ಬರುತ್ತಾರೆ. ಅದರಲ್ಲಿ ಹೆಚ್ಚಿನವರು ಮಹಿಳೆಯರು ಅನ್ನೋದು ನನಗೆ ಮತ್ತಷ್ಟು ಸಂತಸದ ವಿಚಾರ"

ಗುಣಮಟ್ಟದ ಶಿಕ್ಷಣ

ಗುಣಮಟ್ಟದ ಶಿಕ್ಷಣ

"ನಮ್ಮ ಮೊದಲ ಆದ್ಯತೆ ಗುಣಮಟ್ಟದ ಯೋಗಶಿಕ್ಷಣ. ನಮಗೆ ಸಂಖ್ಯೆ ಬೇಕಿಲ್ಲ. ತೀರಾ ಕಡಿಮೆ ಶುಲ್ಕದೊಂದಿಗೆ ಒಂದು ಆತ್ಮೀಯ ವಾತಾವರಣದಲ್ಲಿ ಯೋಗಕಲಿಕೆ ಇಲ್ಲಿ ಆರಂಭವಾಗುತ್ತದೆ. ಗುರು-ಶಿಷ್ಯರ ನಡುವಲ್ಲಿ ಆಪ್ತ ಬಾಂಧವ್ಯ ಏರ್ಪಡಿಸುವ ಕಾರ್ಯ ನಡೆಯುತ್ತದೆ. ಇಲ್ಲಿಗೆ ಬರುವ ಯೋಗಾರ್ಥಿಗಳಿಗೆ ಆಪ್ತ ಸಲಹೆ, ಅವರ ವೈಯಕ್ತಿಕ ಸಮಸ್ಯೆಗಳಿಗೆ ಆತ್ಮೀಯ ಸ್ಪಂದನೆ ನೀಡುತ್ತೇವೆ. ನಮ್ಮಲ್ಲಿ ಯೋಗ ಕಲಿತವರೇ ಮುಂದೆ ಸ್ವ ಇಚ್ಛೆಯಿಂದ ಇಲ್ಲಿ ಯೋಗಶಿಕ್ಷಕರಾಗುತ್ತಾರೆ. ಪ್ರಸ್ತುತ ಇಲ್ಲಿ 30 ಯೋಗಶಿಕ್ಷಕರಿದ್ದಾರೆ"

ಹೆಣ್ಣು ಮಕ್ಕಳಿಗೆ ವೇದ ಪಾಠ

ಹೆಣ್ಣು ಮಕ್ಕಳಿಗೆ ವೇದ ಪಾಠ

"ಇಲ್ಲಿ ಯೋಗ ಕಲಿಸುವಾಗ ಒಂದೊಂದು ಆಸನಕ್ಕೂ ಬಳಸುವ ಮಂತ್ರದ ಬದಲಾಗಿ, ದೇಶಭಕ್ತಿಗೀತೆಯ ಸಾಲುಗಳನ್ನು ಉಚ್ಚರಿಸುತ್ತೇವೆ. ಆ ಮೂಲಕ ದೇಶಭಕ್ತಿ ಗೀತೆಗಳ ಪರಿಚಯ ಮತ್ತು ದೇಶಭಕ್ತಿಗೆ ಪ್ರೇರಣೆ ಸಿಗಲಿ ಎಂಬುದು ನಮ್ಮ ಉದ್ದೇಶ. ಧೀಶಕ್ತಿ ಎಂಬ ಮಹಿಳಾ ಸಂಘವೊಂದನ್ನೂ ಆರಂಭಿಸುವ ಯೋಚನೆಯಲ್ಲದ್ದೇವೆ. ಈ ಸಂಘ ಯಾವುದೇ ಕಿಟ್ಟಿ ಪಾರ್ಟಿ, ಹಾಳು ಹರಟೆಗಳನ್ನೆಲ್ಲ ಮೀರಿ, ಸಾಮಾಜಿಕ ಚಿಂತನೆ, ದೇಶಭಕ್ತಿಯ ವಿಚಾರಗಳ ಅಭಿವ್ಯಕ್ತಿಯ ವೇದಿಕೆಯಾಗಬೇಕು ಎಂಬುದು ನಮ್ಮ ಇಂಗಿತ. ಯೋಗವಷ್ಟೆ ಅಲ್ಲದೆ ಹೆಣ್ಣು ಮಕ್ಕಳಿಗೆ ವೇದಾಧ್ಯನ ಮಾಡಿಸುವ ಕೆಲಸವನ್ನೂ ಯೋಗಶ್ರೀ ಮಾಡುತ್ತಿದೆ. ಖ್ಯಾತ ವಿದ್ವಾನ್ ಗಳೇ ಪಾಠ ಹೇಳುತ್ತಾರೆ. ಹೆಣ್ಣುಮಕ್ಕಳು ವೇದ ಕಲಿಯಬೇಕು ಎಂಬುದು ನನ್ನ ಯಾವತ್ತಿನ ಕನಸಾಗಿತ್ತು. ಅದು ಈಗ ಈಡೇರುತ್ತಿದೆ"

ಯೋಧ ನಿಧಿ ಸಮರ್ಪಣೆ

ಯೋಧ ನಿಧಿ ಸಮರ್ಪಣೆ

"ಗಡಿಯಲ್ಲಿ ಹೋರಾಡಿ ಮಡಿದ ಯೋಧರ ಕುಟುಂಬವನ್ನು ಸಂದರ್ಶಿಸಿ, ಅವರಿಗೆ 'ಯೋಧ ನಿಧಿ' ಎಂಬ ಹೆಸರಿನಲ್ಲಿ ಗೌರವ ಸಮರ್ಪಿಸುವ ರೂಢಿಯನ್ನೂ ಯೋಗಶ್ರೀ ಬೆಳೆಸಿಕೊಂಡಿದೆ. ಇದರೊಂದಿಗೆ ಪ್ರತಿವರ್ಷ ಯೋಗದಿನಾಚರಣೆ, ರಥಸಪ್ತಮಿ ಆಚರಣೆಯನ್ನೂ ಸಂಭ್ರಮದಿಂದ ಮಾಡುತ್ತೇವೆ."

ಯೋಗದಿಂದ ಕ್ಯಾನ್ಸರ್ ಗುಣವಾಯ್ತು!

ಯೋಗದಿಂದ ಕ್ಯಾನ್ಸರ್ ಗುಣವಾಯ್ತು!

"ಯೋಗದ ಮಹತ್ವವೇನು ಅಂತ ಯಾರಾದ್ರೂ ಪ್ರಶ್ನಿಸಿದರೆ ನನಗೆ ಹಲವು ಘಟನೆಗಳು ನೆನಪಾಗುತ್ತವೆ. ಕಳೆದ 25 ಕ್ಕೂ ಹೆಚ್ಚು ವರ್ಷದ ಹಿಂದಿನ ಘಟನೆ. 'ನನಗೆ ರಕ್ತಕ್ಯಾನ್ಸರ್ ಎಂದು ಡಾಕ್ಟರ್ ಹೇಳಿದ್ದಾರೆ. ರೋಗ ನಾಲ್ಕನೇ ಹಂತದಲ್ಲಿದೆಯಂತೆ. ಇನ್ನು ಆರೇ ತಿಂಗಳು ಬದುಕೋದಂತೆ. ದುಬಾರಿ ಚಿಕಿತ್ಸೆಗೆಲ್ಲ ಹಣವಿಲ್ಲ. ಏನು ಮಾಡಲಿ ?'ಅಂತ ತುಮಕೂರು ಸಮೀಪದ ಮಹಿಳೆಯೊಬ್ಬರು ಬಂದು ಕೇಳಿದ್ದರು. ಅವರ ಮುಖದಲ್ಲಿ ಅಸಹಾಯಕತೆಯ ನೋವು ಢಾಳಾಗಿತ್ತು. ಆಗ ನನಗೂ ಯೋಗದ ಬಗ್ಗೆ ಹೆಚ್ಚೇನೂ ಗೊತ್ತಿರಲಿಲ್ಲ.

ಆದರೂ ಆಕೆಗೆ ಒಂದಷ್ಟು ಸಮಾಧಾನ ಮಾಡಬೇಕಿತ್ತು. ಅದಕ್ಕೆ, ನಾನು ನಿಮಗೆ ಕೆಲವೊಂದು ಆಸನಗಳನ್ನ ಹೇಳಿಕೊಡ್ತೀನಿ. ಅದನ್ನು ಒಂದು ದಿನವೂ ತಪ್ಪದೆ, ಶ್ರದ್ಧೆಯಿಂದ ಮಾಡಿ ಎಂದೆ. ಆಕೆ ತಲೆಯಲ್ಲಾಡಿಸಿದರು. ಹೇಳಿಕೊಟ್ಟ ಆಸನಗಳನ್ನೆಲ್ಲ ಚಾಚೂ ತಪ್ಪದೆ ಮಾಡಿದರು. ವಿದ್ಯಾವಂತೆಯ ಅಲ್ಲದೆ ಆಕೆ ಕೊನೆಗೆ ಯೋಗಶಿಕ್ಷಕಿಯಾಗಿ ಹಲವರಿಗೆ ಯೋಗ ಕಲಿಸಿಕೊಟ್ಟರು! ಇಪ್ಪತೈದು ವರ್ಷದ ಹಿಂದೆ ಇನ್ನಾರೇ ತಿಂಗಳು ಬದುಕೋದು ಎಂದಿದ್ದ ಮಹಿಳೆ ಇಂದಿಗೂ ಗುಂಡುಕಲ್ಲಿನ ಹಾಗೆ ಬದುಕಿದ್ದಾರೆ, ನಮ್ಮ ಕಣ್ಮುಂದೆ!"

ವ್ಯಾಮೋಹ ಮರೆಯಾಗಲಿ

ವ್ಯಾಮೋಹ ಮರೆಯಾಗಲಿ

"ಒಬ್ಬ ಮಹಿಳೆಯಾಗಿ ಯೋಗದ ಮಹತ್ವವನ್ನು ನಾನು ಚೆನ್ನಾಗಿ ಅರಿತಿದ್ದೇನೆ. ಎಲ್ಲಾ ಮಹಿಳೆಯರೂ ಅದರ ಫಲಾನುಭವಿಗಳಾಗಬೇಕು ಅನ್ನೋದು ನನ್ನ ಆಸೆ. ಸಮಯ ಸಿಕ್ಕೋಲ್ಲ ಎಂಬೆಲ್ಲ ಸಬೂಬು ಬಿಟ್ಟು ಸಂಕಲ್ಪಶಕ್ತಿ ಬೆಳೆಸಿಕೊಂಡರೆ ಖಂಡಿತ ಬದುಕು ಬದಲಾಗುತ್ತದೆ. ಕೇವಲ ಹೊಟ್ಟೆ ಕರಗಿಸುವ ವ್ಯಾಯಾಮ ಎಂದುಕೊಳ್ಳದೆ ಯೋಗವನ್ನು ಒಂದು ಜೀವನ ಮೌಲ್ಯ ಎಂದುಕೊಳ್ಳಿ, ಕುಟುಂಬವೂ ಅದರಿಂದ ನೆಮ್ಮದಿಯಿಂದ ಇರುತ್ತೆ. ನಿಮ್ಮೊಡನೆ ಬದುಕುವವರನ್ನು, ಸಂಗಾತಿಯನ್ನು ಪ್ರತಿಸ್ಪರ್ಧಿ ಎಂಬಂತೆ ನೋಡದೆ ಸಹಬಾಳ್ವೆಯಿಂದ ಬದುಕುವ ಹಾದಿ ಕಾಣುತ್ತೆ. ಅಹಂಕಾರ, ವ್ಯಾಮೋಹ ಮರೆಯಾಗುತ್ತೆ."

English summary
Yogashree one of the projects of Hindu Seva pratishtana has been offering training in yoga and treatment of common ailments with home remedies for the last 25 years. Every day around 500 people learn and practice Yoga here. Vanithakka is the spearhead and inspiration for all current activities of YOGASHREE. She is the woman achiever of the week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X