Valentines Day 2023: ಪ್ರೀತಿ ಗುಲಾಬಿ ಹೂವಿನಂತೆ, ಪ್ರೀತಿಸುವ ಮುನ್ನ ಎಚ್ಚರ
ಗುಲಾಬಿ ಹೂ ಕೋಮಲ ಅದನ್ನು ನಾವು ಹೇಗೆ ಕಾಪಾಡಿಕೊಳ್ಳುತ್ತೇವೆಯೋ ಅದೇ ರೀತಿ ಪ್ರೀತಿಯನ್ನು ಕಾಪಾಡಿಕೊಳ್ಳಬೇಕು. ಎಚ್ಚರ ತಪ್ಪಿದರೆ ಹೂ ಮುದುಡಿ ಹೋಗಲಿದೆ. ಇಲ್ಲಿ ಪ್ರೀತಿಯನ್ನು ಹೂವಿಗೆ ಹೋಲಿಸಬಹುದಾಗಿದೆ.
ಪ್ರೇಮಿಗಳ ದಿನಾಚರಣೆ ಬಂತೆಂದರೆ ಗುಲಾಬಿಗೆ ಎಲ್ಲಿಲ್ಲದ ಬೇಡಿಕೆ ಬಂದು ಬಿಡುತ್ತದೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಗುಲಾಬಿ ನೀಡಿ ಪ್ರೇಮ ನಿವೇದನೆ ಮಾಡುವುದು ಮಾಮೂಲಿಯಾಗಿದೆ. ಅದು ನಮ್ಮ ದೇಶದಲ್ಲಿ ಜನಪ್ರಿಯವಾಗುತ್ತಿದೆ. ಅದರಲ್ಲೂ ಹಲವರ ವಿರೋಧದ ನಡುವೆಯೂ ಪ್ರೇಮಿಗಳ ದಿನಾಚರಣೆ ನಡೆಯುತ್ತಿದ್ದು ಇದಕ್ಕೆ ಗುಲಾಬಿ ಹೂಗಳು ಸಾಕ್ಷಿಯಾಗುತ್ತಿವೆ.
ಪ್ರೇಮಿಗಳ ದಿನದಂದು ಗುಲಾಬಿ ಹೂವುಗಳಲ್ಲಿನ ಒಂದೊಂದು ಬಣ್ಣಕ್ಕೂ ಒಂದೊಂದು ರೀತಿಯ ಅರ್ಥವನ್ನು ಪ್ರೇಮಿಗಳು ಕಲ್ಪಿಸಿಕೊಳ್ಳುತ್ತಾರೆ. ಅದರಲ್ಲೂ ಪ್ರೇಮದ ಸಂಕೇತವಾಗಿರುವ ಕೆಂಪುಗುಲಾಬಿ ನೀಡಿದರೆ 'ನಾನು ನಿನ್ನನ್ನು ಪ್ರೀತಿಸುತ್ತೇನೆ' ಎಂದರ್ಥವಂತೆ. ಹಳದಿ ಬಣ್ಣದ ಗುಲಾಬಿ ನೀಡಿದರೆ ನಾನು ನಿನ್ನ ಸ್ನೇಹವನ್ನು ಬಯಸುತ್ತೇನೆಂದು, ಬಿಳಿ ಗುಲಾಬಿ ನಿರಂತರ ಸ್ನೇಹವನ್ನು ಬಯಸುವುದಾಗಿಯೂ, ತಿಳಿಗುಲಾಬಿ ಈಗಷ್ಟೇ ಮನಸ್ಸು ಅರಳುತ್ತಿದೆ ಎಂಬ ಅರ್ಥವನ್ನು ನೀಡುತ್ತದೆಯಂತೆ.
ಸಾಮಾನ್ಯವಾಗಿ ಗುಲಾಬಿ ಹೂವನ್ನು ಇಷ್ಟಪಡುವ ಹೆಣ್ಣುಮಕ್ಕಳು ಅದನ್ನು ಕೊಡುವ ಹುಡುಗನತ್ತಲೂ ಪ್ರೀತಿಯ ನೋಟ ಬೀರದಿರಲಾರರು. ಹಾಗೆಂದು ಗುಲಾಬಿಯನ್ನು ಕೊಡುವ ಎಲ್ಲ ಹುಡುಗರ ಮೇಲೆ ಪ್ರೀತಿ ಹುಟ್ಟಲೇ ಬೇಕೆಂದೆನೂ ಇಲ್ಲ. ಭಾರತದಲ್ಲಿ ಪ್ರೀತಿ ಪ್ರೇಮದ ವಿಚಾರದಲ್ಲಿ ತನ್ನದೇ ಆದ ಕಟ್ಟುಪಾಡುಗಳು, ಚೌಕಟ್ಟುಗಳಿವೆ. ಅದರೊಳಗೆ ಪ್ರೀತಿಗೆ ಪವಿತ್ರ ಸ್ಥಾನ ನೀಡಿ ಕುಟುಂಬದ ಚೌಕಟ್ಟಿನಲ್ಲಿ ಭದ್ರವಾಗಿಡಲಾಗಿದೆ.

ಬದುಕೇ ಪ್ರೇಮಲೋಕ ಎನ್ನುವ ಭ್ರಮೆ
ಯೌವನದ ದಿನಗಳಲ್ಲಿ ಯುವಕ ಮತ್ತು ಯುವತಿಯರ ನಡುವೆ ಪ್ರೇಮಾಂಕುರವಾಗುವುದು ಸಹಜ. ಹೀಗೆ ಹುಟ್ಟುವ ಪ್ರೇಮ ಒಂದಷ್ಟು ದಿನಗಳ ಕಾಲ ಪ್ರೇಮ ಬಂಧನದಲ್ಲಿ ಸಿಲುಕಿಸಿ ಪ್ರೇಮಿಗಳನ್ನಾಗಿಸಿ ಎಲ್ಲೆಂದರಲ್ಲಿ ಖುಷಿಯಾಗಿ ಅಡ್ಡಾಡುತ್ತಾ ತಮ್ಮ ಬದುಕೇ ಪ್ರೇಮಲೋಕ ಎಂಬ ಭ್ರಮೆಯನ್ನು ಹುಟ್ಟಿಸಿಬಿಡಬಹುದು. ಪ್ರೇಮಿಗಳಾಗಿ ಹೆಚ್ಚು ದಿನ ಉಳಿಯುವ ಹಾಗಿಲ್ಲ. ಬದುಕಿನಲ್ಲಿ ಮದುವೆ ಎಂಬ ಬಂಧನಕ್ಕೆ ಒಳಗಾಗಿ ದಾಂಪತ್ಯ ಬದುಕನ್ನು ಸಾಗಿಸಲೇ ಬೇಕು.

ಪ್ರೇಮಿಯಾಗಿರುವುದೇ ಜೀವನವಲ್ಲ
ಜೀವನದಲ್ಲಿ ಪ್ರೇಮಿಯಾಗಿರುವುದೇ ಜೀವನವಲ್ಲ. ಅದು ನಮ್ಮ ಬದುಕಿನಲ್ಲಿ ಬರುವ ಒಂದು ಘಟ್ಟವಷ್ಟೇ. ಅದನ್ನು ಎಲ್ಲರೂ ಇಷ್ಟಪಡಬೇಕೆಂದಿಲ್ಲ. ಸಾಮಾನ್ಯವಾಗಿ ಎಲ್ಲರೂ ಅಂದುಕೊಂಡಂತೆ ಪ್ರೇಮಿಸುವುದು, ಪ್ರೇಮಿಗಳಾಗಿರುವುದು ದಾಂಪತ್ಯ ಬದುಕಿನ ಮುನ್ನುಡಿಯಷ್ಟೆ. ಮುನ್ನುಡಿಯಾಚೆಗಿನ ಬದುಕಿನ ಪುಟಗಳನ್ನು ನಾವು ಒಂದೊಂದಾಗಿ ತೆರೆಯುತ್ತಾ ಹೋಗಬೇಕು. ಆ ಬದುಕನ್ನು ಹೇಗೆ ರೂಪಿಸಿಕೊಳ್ಳುತ್ತೇವೆ ಎನ್ನುವುದೇ ಬಹುಮುಖ್ಯವಾಗಿದೆ.

ಪ್ರೀತಿಗೆ ಗೌರವ ಮುಖ್ಯ
ಪ್ರೀತಿಯಲ್ಲಿ ಪ್ರಾಮಾಣಿಕತೆ, ನಂಬಿಕೆ, ಹೊಂದಾಣಿಕೆ, ಪರಸ್ಪರ ಅರಿತು ಬಾಳುವ ತಾಳ್ಮೆ ಇಲ್ಲದೆ ಹೋದರೆ ಯಾವ ಪ್ರೇಮಿಯೂ ಬದುಕನ್ನು ಸುಖಮಯವಾಗಿ ಸಾಗಿಸಲು ಸಾಧ್ಯವಾಗಲಾರದು. ಪ್ರೇಮಿಗಳಾಗಿದ್ದು ಹೋಟೆಲ್, ಪಾರ್ಕ್, ಸಿನಿಮಾ ಅಂಥ ಅಲೆಯುವುದರ ಬದಲು ಒಬ್ಬರನೊಬ್ಬರು ಅರಿಯುವ ಪ್ರಯತ್ನ ಮಾಡಬೇಕು. ಇಲ್ಲದೆ ಹೋದರೆ ಚಿಕ್ಕ ಚಿಕ್ಕ ವಿಚಾರಕ್ಕೂ ಮನಸ್ತಾಪ ಮಾಡಿಕೊಂಡು ಸುಂದರ ಬದುಕನ್ನೇ ಹಾಳು ಮಾಡಿಕೊಳ್ಳುವ ಪ್ರಮೇಯ ಬರದಿರದು.
ಒಬ್ಬರನೊಬ್ಬರು ಬಿಟ್ಟಿರಲಾರದಂತೆ ಪ್ರೀತಿಸಿ ಹೆತ್ತವರ ವಿರೋಧ ಕಟ್ಟಿಕೊಂಡು ಮದುವೆಯಾದವರು ದಾಂಪತ್ಯದ ಬದುಕನ್ನು ನಿಭಾಯಿಸಲಾರದೆ ದೂರವಾದ ನಿದರ್ಶನಗಳು ಸಾಕಷ್ಟಿವೆ. ಆದ್ದರಿಂದ ಪ್ರೀತಿಯನ್ನು ಸಮಯ ಕಳೆಯಲು ಮಾಡದೇ ಅದಕ್ಕೊಂದು ಗೌರವ ನೀಡುವುದು ಅಗತ್ಯ. ಪ್ರೀತಿಯಲ್ಲಿ ಹೃದಯಕ್ಕೆ ಮತ್ತು ಅದರ ಭಾವನೆಗಳಿಗೆ ಬೆಲೆಕೊಡಿ. ಮದುವೆಯಾಗಿ ಪ್ರಾಮಾಣಿಕ ಜೀವನ ಸಾಗಿಸುತ್ತೇವೆ ಎಂಬ ಗುರಿ ನಿಮ್ಮಲ್ಲಿರಲಿ ಅದನ್ನು ಹೊರತುಪಡಿಸಿ ಮದುವೆಗೆ ಮುನ್ನವೇ ಎಡವಿದರೆ ಬದುಕು ಮೂರಾಬಟ್ಟೆಯಾಗುವುದಂತು ಖಚಿತ.

ಹೂವನ್ನು ಪ್ರೀತಿಸು ಆದರೆ ಮುಟ್ಟಿ ಕೆಡಿಸಬೇಡ
ಗುಲಾಬಿ ಹೂ ಕೋಮಲ ಅದನ್ನು ನಾವು ಹೇಗೆ ಕಾಪಾಡಿಕೊಳ್ಳುತ್ತೇವೆಯೋ ಅದೇ ರೀತಿ ಪ್ರೀತಿಯನ್ನು ಕಾಪಾಡಿಕೊಳ್ಳಬೇಕು. ಎಚ್ಚರ ತಪ್ಪಿದರೆ ಹೂ ಮುದುಡಿಹೋಗಲಿದೆ. ಹೂವನ್ನು ಪ್ರೀತಿಸು ಆದರೆ ಮುಟ್ಟಿ ಕೆಡಿಸಬೇಡ ಎಂಬ ಮಾತಿದೆ. ಇಲ್ಲಿ ಪ್ರೀತಿಯನ್ನು ಹೂವಿಗೆ ಹೋಲಿಸಬಹುದಾಗಿದೆ. ಹೂವಿನಂತೆ ಮೃದುವಾಗಿರುವ ಪ್ರೀತಿಯನ್ನು ಕಾಪಾಡಿಕೊಂಡು ಅದಕ್ಕೊಂದು ಗೌರವ ಸಲ್ಲಿಸುವುದು ಪ್ರತಿ ಪ್ರೇಮಿಗಳ ಕರ್ತವ್ಯವಾಗಬೇಕು.
ಪ್ರೀತಿ ವಿಚಾರದಲ್ಲಿ ಗುಲಾಬಿ ಹೂವನ್ನು ಏಕೆ ಬಳಸಿಕೊಳ್ಳಲಾಗುತ್ತದೆ ಎಂಬುದನ್ನು ನೋಡಿದ್ದೇ ಆದರೆ ಮುಳ್ಳಿನ ಗಿಡದಲ್ಲಿ ಅರಳುವ ಹೂ ಮೃದುವಾಗಿಯೂ ಸೊಗಸಾಗಿಯೂ ಇರುತ್ತದೆ. ಆದರೆ ಮೈಮರೆತು ಕೈ ಹಾಕಿದರೆ ಗಿಡದ ಮೇಲಿರುವ ಮುಳ್ಳು ಚುಚ್ಚುತ್ತದೆ. ಹಾಗೆಯೇ ಪ್ರೇಮವೂ ಕೂಡ ಸುಖದ ಸುಪ್ಪತ್ತಿಗೆ ಅಲ್ಲ ಅದು ಮುಳ್ಳಿನ ಹಾದಿಯಾಗಿದ್ದು, ಅದನ್ನರಿತು ಮುನ್ನಡೆಯಲು ಪ್ರೇಮದ ಸಂಕೇತವಾಗಿ ಬಳಸಲಾಗುತ್ತಿದೆ ಎಂಬುದನ್ನು ಯಾರೂ ಮರೆಯಬಾರದು. ನಿಮ್ಮ ಪ್ರೀತಿ ಪ್ರಾಮಾಣಿಕವಾಗಿದ್ದರೆ ಅದು ಖಂಡಿತಾ ಗೆಲ್ಲುತ್ತದೆ.












Click it and Unblock the Notifications