Kannada: ಗ್ರಾಹಕ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಬಾತ್‌ರೂಂ ಕ್ಲೀನ್ ಮಾಡಲ್ಲ ಎಂದ ಸರ್ವೀಸ್ ಸ್ಟಾಫ್!
ಬೆಂಗಳೂರಿನಲ್ಲಿ ಪರಭಾಷಿಕರ ಹಾವಳಿ ಹೆಚ್ಚಾಗಿದೆ ಎಂದು ಕನ್ನಡಿಗರೇ ಬಾಯಿ ಬಡ್ಕೋತಿದಾರೆ. ಇಲ್ಲಿನ ಬಹುತೇಕ ಉದ್ಯೋಗಗಳು ಬೇರೆ ಭಾಷೆಯವರ ಪಾಲಾಗುತ್ತಿದೆ ಎಂಬ ದೂರು ಕೂಡ ಇದೆ. ಕನ್ನಡ ಕಲೀರಿ ಅಂದ್ರೆ ಮೂತಿ ತಿರುವುತ್ತಿದ್ದ ಮಂದಿ, ಇದೀಗ ಕನ್ನಡ ನೆಲದಲ್ಲೇ ಕನ್ನಡಕ್ಕೆ ಅವಮಾನ ಮಾಡುವ ಮಟ್ಟಕ್ಕೆ ತಲುಪಿದ್ದಾರೆ. ಅಚ್ಚರಿ ಎಂದರೆ ಗ್ರಾಹಕ ಕನ್ನಡ ಮಾತನಾಡಿದ ಎಂಬ ಕಾರಣಕ್ಕೆ ಬಾತ್‌ರೂಂ ಕ್ಲೀನಿಂಗ್ ಸರ್ವೀಸ್ ಅನ್ನೇ ತಿರಸ್ಕರಿಸುವ ಘಟನೆ ಬೆಳಕಿಗೆ ಬಂದಿದೆ. ಕನ್ನಡ ಮಾತನಾಡಿದ್ದಕ್ಕೆ ಖ್ಯಾತ ಕಂಪನಿಯ ಸಿಬ್ಬಂದಿ ಈ ರೀತಿ ಧಿಮಾಕು ತೋರಿಸಿದ್ದಾರೆ ಎಂದು ಸುದೀರ್ಘವಾಗಿ ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಈ ಘಟನೆ ಬಗ್ಗೆ ಬರೆದುಕೊಂಡಿರುವ ಕನ್ನಡಿಗ, ʼನಾನು ಅರ್ಬನ್ ಕಂಪನಿ ಮೂಲಕ ಬಾತ್‌ರೂಂ ಶುಚಿಗೊಳಿಸುವ ಸೇವೆಯನ್ನು ಬುಕ್ ಮಾಡಿದ್ದೆ. ಇದಕ್ಕಾಗಿ ಇಬ್ಬರು ಜನ ಕೂಡ ಬಂದರು. ನಾನು ಅವರಿಗೆ ಬಾತ್‌ರೂಂ ತೋರಿಸಿ ಸ್ವಚ್ಛಗೊಳಿಸಲು ಹೇಳಿದೆ. ಆಗ ಅವರಲ್ಲಿ ಒಬ್ಬರು ನನಗೆ ಅರ್ಥವಾಗದ ಯಾವುದೋ ಭಾಷೆಯಲ್ಲಿ ಮಾತನಾಡಲು ಶುರುಮಾಡಿದರು. ಆಗ ನಾನು ಕನ್ನಡದಲ್ಲಿ ಹೇಳುವಂತೆ ಕೇಳಿದೆ. ಆಗ ಇಬ್ಬರೂ ಕೂಡ ತಮ್ಮ ಭಾಷೆಗಳಲ್ಲೇ ಮಾತನಾಡಿದರು. ಇದಕ್ಕೆ ಕನ್ನಡ ಪ್ಲೀಸ್ ಎಂದೆʼ

ಕೊನೆಗೆ, ಅವರು ಕನ್ನಡ ಮಾತನಾಡುವ ಯಾರೋ ಒಬ್ಬರಿಗೆ ಕರೆ ಮಾಡಿ ನಾನು ಕನ್ನಡದಲ್ಲಿ ಮಾತ್ರ ಮಾತನಾಡುತ್ತಿದ್ದೇನೆ ಎಂದು ದೂರು ಕೊಟ್ಟರು. ನಾನು ಅವರೊಂದಿಗೆ ಮಾತನಾಡಿದೆ. ನಾನು ಸರ್ವೀಸ್ ಬುಕ್ ಮಾಡಿದ್ದೇನೆ. ಅವರಿಗೆ ಬಾತ್‌ರೂಂ ತೋರಿಸಿದೆ. ಅವರು ಅದನ್ನು ಸ್ವಚ್ಛಗೊಳಿಸಿ ಹೊರಡಬೇಕೇ ಹೊರತು ಇಲ್ಲಿ ಭಾಷೆ ಏಕೆ ಅಡ್ಡಿ? ಎಂದು ಕೇಳಿದೆ.
ಅಚ್ಚರಿ ಅಂದ್ರೆ ಕನ್ನಡ ಗೊತ್ತಿದ್ದ ಆ ವ್ಯಕ್ತಿ ಕೂಡ ಗ್ರಾಹಕರು ಕನ್ನಡದಲ್ಲಿ ಮಾತ್ರ ಮಾತನಾಡಿದರೆ ಕೆಲಸಗಾರರಿಗೆ ಕಷ್ಟ ಎಂದು ಫೋನ್‌ನಲ್ಲಿ ಹೇಳಿದ. ಆಗ ನಾನು, ನನ್ನ ಬಾತ್‌ರೂಂನಲ್ಲಿ ಅವರಿಗೆ ಕವಿತೆ ಬರೆಯಲು ಕೇಳಿಲ್ಲ, ಕ್ಲೀನ್ ಮಾಡಿ ಹೊರಡಲು ಏನ್ ಪ್ರಾಬ್ಲಂ? ಎಂದೆ. ಬಳಿಕ ಅವರು ಅರ್ಬನ್ ಕಂಪನಿಯ ಕಸ್ಟಮರ್ ಕೇರ್‌ಗೆ ಫೋನ್ ಮಾಡಿದ್ರು. ಅವರು ಕೂಡ ನನಗೆ ಕನ್ನಡ ಮಾತನಾಡಲು ಬರಲ್ಲ ಅಂದ್ರು. ನಾನು ಕೂಡಲೇ ಫೋನ್ ಕಟ್ ಮಾಡಿದೆ. ಬಳಿಕ ಅವರು ಬುಕಿಂಗ್ ಕ್ಯಾನ್ಸಲ್ ಮಾಡಿ ಹೊರಟೇ ಹೋದರು ಎಂದು ಕನ್ನಡದ ಗ್ರಾಹಕರು ತಮ್ಮ ಅನುಭವ ಹೇಳಿಕೊಂಡಿದ್ದಾರೆ.

ನನಗೆ ಇನ್ನೂ ಅರ್ಥವಾಗದ ಸಂಗತಿಯೆಂದರೆ, ಬಾತ್‌ರೂಂ ಕ್ಲೀನ್ ಮಾಡುವ ನೇರ ಸೇವೆಗೆ ಭಾಷೆ ಏಕೆ ಅಡ್ಡಿಯಾಗಬೇಕು? ಮತ್ತು ಸಂವಹನದ ಅಗತ್ಯವಿದ್ದರೆ, ಕರ್ನಾಟಕದಲ್ಲಿ ಕನ್ನಡ ಮೊದಲ ಆಯ್ಕೆಯಾಗಿರಬೇಕಲ್ಲವೇ? "ಸರ್, ಕ್ಲೀನ್ ಮಾಡಕ್ಕೆ ಭಾಷೆ ಯಾಕೆ ಬೇಕು? ಬಂದ ಕೆಲಸ ಮುಗಿಸಿಕೊಂಡು ಹೋಗಿ" ಎಂದು ಹೇಳಿದೆ. ಆದರೆ ಅವರ ವರ್ತನೆ ಕನ್ನಡ ಎಂಬ ಕಾರಣಕ್ಕೆ ತಿರಸ್ಕಾರದಿಂದ ಕೂಡಿತ್ತು ಎಂದಿದ್ದಾರೆ.
ಕರ್ನಾಟಕದಲ್ಲಿರುವ ನನ್ನ ಸ್ವಂತ ಮನೆಯಲ್ಲಿ ನಾನು ಕನ್ನಡ ಮಾತನಾಡುವ ಕಾರಣಕ್ಕೆ ನನಗೆ ಸರ್ವೀಸ್ ಕ್ಯಾನ್ಸಲ್ ಮಾಡ್ತಾರೆ ಅನ್ನೋದು ತುಂಬಾ ಬೇಸರದ ಸಂಗತಿ. ಎಲ್ಲ ಕನ್ನಡಿಗರು ನಮ್ಮ ನೆಲೆಯನ್ನು ಕಳೆದುಕೊಳ್ಳಬಾರದು. ಮುಂದಿನ ಹಾದಿ ತುಂಬಾ ಸವಾಲಿನಿಂದ ಕೂಡಿರುತ್ತದೆ. ಆದರೆ ನಾವು ಬಲವಾಗಿ ಉಳಿಯಬೇಕು ಎಂದು ಕರೆ ನೀಡಿದ್ದಾರೆ.
ಕ್ಷಮೆ ಕೇಳಿದ ಕಂಪನಿ
ಅರ್ಬನ್ ಕಂಪನಿಯನ್ನು ಟ್ಯಾಗ್ ಮಾಡಿರುವ ಕನ್ನಡಿಗ, ನೀವು ಇಲ್ಲಿ ಸೇವೆಗಳನ್ನು ನೀಡುತ್ತಿದ್ದರೆ, ನಮ್ಮ ಭಾಷೆ ಸೇರ್ಪಡೆ ಆದ್ಯತೆಯಾಗಿರಬೇಕಲ್ಲವೇ? ಎಂದು ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಅರ್ಬನ್ ಕಂಪನಿ, ನೀವು ಅನುಭವಿಸಿದ ಅನಾನುಕೂಲತೆಗಾಗಿ ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ. ಅರ್ಬನ್ ಕಂಪನಿಯಲ್ಲಿ ನಿಮ್ಮ ಅನುಕೂಲತೆ ಮತ್ತು ಸಂತೋಷವೇ ನಮ್ಮ ಮೊದಲ ಆದ್ಯತೆ. ಈ ಬಾರಿ ನಾವು ನಿಮ್ಮ ನಿರೀಕ್ಷೆಗಳಿಗೆ ಅನುಗುಣವಾಗಿ ಸೇವೆ ನೀಡಲು ಸಾಧ್ಯವಾಗದಿದ್ದಕ್ಕೆ ವಿಷಾದಿಸುತ್ತೇವೆ. ಭಾಷಾ ಸೇರ್ಪಡೆ ಮಹತ್ವವನ್ನು ನಾವು ಸಂಪೂರ್ಣವಾಗಿ ಅರಿತಿದ್ದೇವೆ. ನಿಮ್ಮ ಪ್ರತಿಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಿ, ಸೇವೆಯ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡುತ್ತೇವೆ. ನಿಮ್ಮ ಅಮೂಲ್ಯ ಪ್ರತಿಕ್ರಿಯೆಗೆ ಧನ್ಯವಾದಗಳು ಎಂದು ಹೇಳಿದೆ.












Click it and Unblock the Notifications