ಉಳ್ಳಾಲದ ವಿದ್ಯಾ ಕುಮಾರಿ ಈಗ ಉಡುಪಿಯ ಜಿಲ್ಲಾಧಿಕಾರಿ!
ಉಡುಪಿಯ ನೂತನ ಜಿಲ್ಲಾಧಿಕಾರಿಯಾಗಿ ಡಾ. ವಿದ್ಯಾ ಕುಮಾರಿ ಕೆ. ಶನಿವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರ ಸ್ವೀಕಾರ ಮಾಡಿದರು. ಉಡುಪಿ ಜಿಲ್ಲಾಧಿಕಾರಿಯಾಗಿದ್ದ ಕೂರ್ಮಾರಾವ್ ಎಂ. ಅವರನ್ನು ಸರ್ಕಾರ ವರ್ಗಾವಣೆ ಮಾಡಿದ್ದು, ಡಾ. ವಿದ್ಯಾ ಕುಮಾರಿ ಕೆ. ಅವರನ್ನು ನೂತನ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿತ್ತು.
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಪಾವೂರು ಗ್ರಾಮದವರಾದ ಡಾ. ವಿದ್ಯಾ ಕುಮಾರಿ ಕೆ. ಪಕ್ಕದ ಉಡುಪಿಯ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದರು. ನಿರ್ಗಮಿತ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಅಧಿಕಾರ ಹಸ್ತಾಂತರ ಮಾಡಿದರು.

ಕೂರ್ಮಾರಾವ್ ಎಂ. ಉಡುಪಿ ಜಿಲ್ಲಾಧಿಕಾರಿಯಾಗಿ 1 ವರ್ಷ 10 ತಿಂಗಳ ಕಾಲ ಕಾರ್ಯನಿರ್ವಹಿಸಿದ್ದರು. ವಿಧಾನಸಭೆ ಚುನಾವಣೆ, ಮಳೆಗಾಲದ ಸಂದರ್ಭದಲ್ಲಿ ಅತ್ಯುತ್ತಮ ರೀತಿಯಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದರು. ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಆಡಳಿತ ಯಂತ್ರದಲ್ಲಿ ಬದಲಾವಣೆ ಆಗುತ್ತಿದ್ದು, ಜಿಲ್ಲಾಧಿಕಾರಿಗಳ ವರ್ಗಾವಣೆಯಾಗುತ್ತಿದೆ.
ಡಾ. ವಿದ್ಯಾ ಕುಮಾರಿ ಕೆ. ಪರಿಚಯ; ಉಳ್ಳಾಲ ತಾಲೂಕಿನ ಪಾವೂರು ಗ್ರಾಮದವರಾದ ಡಾ. ವಿದ್ಯಾ ಕುಮಾರಿ ಕೆ. ಮಂಗಳೂರಿನಲ್ಲಿ ಶಿಕ್ಷಣ ಪಡೆದಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮೊದಲು ಕೆಎಎಸ್ ಅಧಿಕಾರಿಯಾಗಿದ್ದ ವಿದ್ಯಾ ಕುಮಾರಿ 2021ರಲ್ಲಿ ಐಎಎಸ್ ಅಧಿಕಾರಿಯಾಗಿ ಬಡ್ತಿ ಹೊಂದಿದರು.
ಡಾ. ವಿದ್ಯಾ ಕುಮಾರಿ ಕೆ. ಚಿತ್ರದುರ್ಗದಲ್ಲಿ ಪ್ರೊಬೆಷನರಿ ಉಪವಿಭಾಗಾಧಿಕಾರಿಯಾಗಿ, ಮೈಸೂರು ಕಾರ್ಪೋರೇಷನ್ ಕೌನ್ಸಿಲ್ ಕಾರ್ಯದರ್ಶಿಯಾಗಿ, ಹುಣಸೂರು ಉಪವಿಭಾಗಾಧಿಕಾರಿಯಾಗಿ, ಮೈಸೂರು ಮುಡಾ ಕಾರ್ಯದರ್ಶಿಯಾಗಿ, ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ಜಂಟಿ ನಿರ್ದೇಶಕಿಯಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
ವೈದ್ಯಕೀಯ ಶಿಕ್ಷಣ ಇಲಾಖೆಯ ಉಪ ಕಾರ್ಯದರ್ಶಿಯಾಗಿ, ಕೆಎಸ್‌ಟಿಡಿಸಿ ಜನರಲ್ ಮ್ಯಾನೇಜರ್ ಆಗಿ, ಪ್ರವಾಸೋದ್ಯಮ ಇಲಾಖೆಯ ಜಂಟಿ ಆಯುಕ್ತರಾಗಿ, ಕೋಲಾರ ಮತ್ತು ಉಡುಪಿಯ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಮತ್ತು ಬೆಂಗಳೂರು ವಿಭಾಗದ ಅಪರ ಪ್ರಾದೇಶಿಕ ಆಯುಕ್ತರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಡಾ. ವಿದ್ಯಾ ಕುಮಾರಿ ಕೆ. 2020ರಲ್ಲಿ ಹಂಪಿ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದರು. 2021ರಲ್ಲಿ ಐಎಎಸ್ ಅಧಿಕಾರಿಯಾಗಿ ಬಡ್ತಿ ಹೊಂದಿದರು. ತುಮಕೂರು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಕೆಲಸ ಮಾಡಿದರು. ಈಗ ಉಳ್ಳಾಲದ ಪಕ್ಕದ ಉಡುಪಿಗೆ ಜಿಲ್ಲಾಧಿಕಾರಿಯಾಗಿ ಆಗಮಿಸಿದ್ದಾರೆ.
ಬೀಳ್ಕೊಡುಗೆ ಸಮಾರಂಭ; ಉಡುಪಿಯ ನಿರ್ಗಮಿತ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಅವರಿಗೆ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಅಯೋಜಿಸಿದ್ದ ಸಮಾರಂಭದಲ್ಲಿ ಜಿಲ್ಲಾಡಳಿತದ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು.
ಸಮಾರಂಭದಲ್ಲಿ ಮಾತನಾಡಿದ ಅವರು, "ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ 1 ವರ್ಷ 10 ತಿಂಗಳ ಕಾಲ ಕಾರ್ಯನಿರ್ವಹಿಸಿದ್ದು ಅತ್ಯುತ್ತಮ ರೀತಿಯ ಮರೆಯಲಾಗದ ಅನುಭವ ನೀಡಿದೆ. ಜಿಲ್ಲೆಯ ಅಭಿವೃದ್ದಿಗಾಗಿ ಮುಂದಿನ ದಿನದಲ್ಲಿ ಯಾವುದೇ ಹುದ್ದೆಯಲ್ಲಿದ್ದರೂ ತನ್ನಿಂದ ಅಗತ್ಯವಿರುವ ಸಹಕಾರ ನೀಡಲಾಗುವುದು" ಎಂದರು.
"ಉಡುಪಿ ಜಿಲ್ಲೆಯನ್ನು ರಾಜ್ಯದಲ್ಲೇ ಸದಾ ಮಾದರಿ ಜಿಲ್ಲೆಯನ್ನಾಗಿ ಮಾಡುವ ತುಡಿತ ಜಿಲ್ಲೆಯ ಸಾರ್ವಜನಿಕರು ಮತ್ತು ನೌಕರರ ವಲಯದಲ್ಲಿದೆ. ಈ ಸ್ಪೂರ್ತಿ ಸದಾ ಕಾಲ ಇದೇ ರೀತಿ ಮುಂದುವರೆಯಬೇಕು, ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ ಅವಧಿಯಲ್ಲಿ ಜಿಲ್ಲೆಯ ಜನತೆ ಮತ್ತು ಅಧಿಕಾರಿ ಹಾಗೂ ಸಿಬ್ಬಂದಿಗಳು ಉತ್ತಮ ರೀತಿಯ ಸಹಕಾರ ನೀಡಿದ್ದು, ಎಲ್ಲರ ಸಹಕಾರದಿಂದ ಒಂದು ತಂಡದ ರೀತಿಯಲ್ಲಿ ಜಿಲ್ಲೆಯ ಪ್ರಗತಿಗೆ ಕಾರ್ಯನಿರ್ವಹಿಸಲು ಸಾಧ್ಯವಾಯಿತು" ಎಂದು ಹೇಳಿದರು.
ಉಡುಪಿ ಜಿಲ್ಲಾ ಪಂಚಾಯಿತಿ ಸಿಇಓ ಪ್ರಸನ್ನ ಮಾತನಾಡಿ, "ಜಿಲ್ಲಾಧಿಕಾರಿ ಕೂರ್ಮಾರಾವ್ ಅವರ ತಾಳ್ಮೆಯ ಗುಣ, ನಿರ್ಣಯಗಳನ್ನು ತೆಗೆದುಕೊಳ್ಳುವ ಗುಣ ಎಲ್ಲಾ ಅಧಿಕಾರಿಗಳಿಗೆ ಮಾದರಿಯಾಗಬೇಕು. ಜಿಲ್ಲಾ ಪಂಚಾಯತಿಯ ಹಲವು ಯಶಸ್ವಿ ಯೋಜನೆಗಳಿಗೆ ಉತ್ತಮ ಸಹಕಾರ ನೀಡಿದ್ದು, ಚುನಾವಣೆಯಲ್ಲಿ ಸ್ವೀಪ್ ಮೂಲಕ ರಾಜ್ಯ ಮತ್ತು ದೇಶದಲ್ಲೇ ಗಮನ ಸೆಳೆಯುವಂತಹ ಕಾರ್ಯಕ್ರಮಗಳನ್ನು ಇವರ ಮಾರ್ಗದರ್ಶನದಲ್ಲಿ ಮಾಡಲಾಗಿದೆ. ಇಂಜಿನಿಯರಿಂಗ್ ವಿದ್ಯಾಭ್ಯಾಸ ಪಡೆದಿರುವ ಇವರಿಂದ ಎನ್.ಐ.ಸಿ. ಮೂಲಕ ಕಂದಾಯ ಇಲಾಖೆಗೆ ವಿವಿಧ ರೀತಿಯ ಬಹುಪಯೋಗಿಯ 3 ನೂತನ ತಂತ್ರಾಂಶಗಳನ್ನು ಸಿದ್ದಪಡಿಸುವ ಕಾರ್ಯ ನಡೆಯುತ್ತಿದೆ" ಎಂದರು.












Click it and Unblock the Notifications