ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಣ್ಣಿನ ನಾಯಿಗಳ ಹರಕೆ ಸಲ್ಲಿಸುವ ವಿಶಿಷ್ಟ ಹಬ್ಬ...!

|
Google Oneindia Kannada News

ಮಡಿಕೇರಿ, ಡಿಸೆಂಬರ್ 17: ಕೊಡಗಿನ ಪ್ರಸಿದ್ಧ ನಾಪೋಕ್ಲು ಬಳಿಯ ಬೇತು ಮಕ್ಕಿ ಶ್ರೀ ಶಾಸ್ತಾವು ದೇಗುಲದಲ್ಲಿ ಸಡಗರ ಸಂಭ್ರಮದಿಂದ ಹಬ್ಬಾಚರಣೆ ನಡೆಯುತ್ತಿದೆ. ಈಗಾಗಲೇ ಹರಕೆಯಾಗಿ ನಾಯಿಯನ್ನು ಒಪ್ಪಿಸುವ ಕಾರ್ಯ ಮುಗಿದಿದ್ದು, ಡಿಸೆಂಬರ್ 19ಕ್ಕೆ ಹಬ್ಬಕ್ಕೆ ತೆರೆ ಬೀಳಲಿದೆ. ಇಲ್ಲಿರುವ ದೇಗುಲ ಮತ್ತು ಇಲ್ಲಿ ನಡೆಯುವ ಹಬ್ಬಾಚರಣೆಯು ಬೇರೆಡೆಗೆ ಹೋಲಿಸಿದರೆ ವಿಭಿನ್ನ ಹಾಗೂ ವೈಶಿಷ್ಟ್ಯತೆಯಿಂದ ಕೂಡಿದೆ. ಈ ಹಬ್ಬದಲ್ಲಿ ಹರಕೆಯ ಮಣ್ಣಿನ ನಾಯಿ ಒಪ್ಪಿಸುವುದು ಎತ್ತು ಪೋರಾಟ, ದೀಪಾರಾಧನೆ, ಅಜ್ಜಪ್ಪ ಮತ್ತು ವಿಷ್ಣುಮೂರ್ತಿ ಕೋಲಗಳನ್ನು ನಡೆಸಲಾಗುತ್ತದೆ. ಹಬ್ಬದ ಪ್ರಮುಖ ಘಟ್ಟ ಮಣ್ಣಿನ ನಾಯಿಯನ್ನು ಹರಕೆಯಾಗಿ ಒಪ್ಪಿಸುವದಾಗಿದೆ. ಇದು ಅಚ್ಚರಿಯಾಗಿ ಕಂಡರೂ ಇದರ ಹಿಂದೆ ದೈವಿಕ ನಂಬಿಕೆಯಿರುವುದನ್ನು ಕಾಣಬಹುದಾಗಿದೆ.

ಈಗಾಗಲೇ ಹಬ್ಬ ಆರಂಭವಾಗಿದ್ದು, ಹಬ್ಬಕ್ಕೆ ಸುಮಾರು ಎರಡು ವಾರಗಳ ಹಿಂದೆಯೇ ಮಣ್ಣಿನಿಂದ ನಾಯಿಯನ್ನು ತಯಾರು ಮಾಡುವ ಕೆಲಸವನ್ನು ಹಬ್ಬಕ್ಕಿಂತ ಹದಿನೈದು ದಿನ ಮೊದಲು ಅಂದರೆ ವೃಶ್ಚಿಕ ಮಾಸದಲ್ಲಿ ಹರಕೆಯ ನಾಯಿಗಳನ್ನು ತಯಾರಿಸಿ ಬೇತು ಗ್ರಾಮದ 12 ಕುಲದವರು 12 ಜೊತೆ ನಾಯಿಯನ್ನು ಹರಕೆಯ ರೂಪದಲ್ಲಿ ಸಲ್ಲಿಸುತ್ತಾರೆ. ಇದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯವಾಗಿದೆ. ಹಬ್ಬದ ಮೊದಲ ದಿನ ಬೆಳಗಿನ ಜಾವ ಯಾರೂ ಕಾಣದಂತೆ ಬೇತು ಮಂದ್ ಸಮೀಪದ ಕರ್ಪತಚ್ಚನ್ ನಡೆ ಎಂಬ ಸ್ಥಳಕ್ಕೆ ಈ ನಾಯಿಗಳನ್ನು ಸಾಗಿಸಿ ನಂತರ ಬೆಳಿಗ್ಗೆ 11 ಗಂಟೆ ಸುಮಾರಿಗೆ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ.

ನಾಯಿಕೊಂಡೊಯ್ಯುವಾಗ ಸುಳಿದಾಡುವಂತಿಲ್ಲ

ನಾಯಿಕೊಂಡೊಯ್ಯುವಾಗ ಸುಳಿದಾಡುವಂತಿಲ್ಲ

ಆ ನಂತರ ಮೊದಲಿಗೆ ತಕ್ಕ ಮುಖ್ಯಸ್ಥರು(ದೇವಾಲಯಕ್ಕೆ ಸಂಬಂಧಿಸಿದವರು) ಮತ್ತು ಆ ನಂತರ ಮಣ್ಣಿನ ನಾಯಿಯ ಹರಕೆ ಹೊತ್ತವರು ಸೇರಿದಂತೆ ಸಂಬಂಧಪಟ್ಟ ಮುಖ್ಯಸ್ಥರೊಡನೆ ಮಣ್ಣಿನ ನಾಯಿಗಳನ್ನು ಶೇಖರಿಸಿಟ್ಟ ಸ್ಥಳಕ್ಕೆ ತೆರಳಿ ಹೂ ಗಂಧಗಳ ಲೇಪನಗಳಿಂದ ಅವುಗಳನ್ನು ಪೂಜಿಸಿ ದೇವಾಲಯಕ್ಕೆ ಹೊತ್ತು ತರಲಾಗುವದು. ಈ ಸಂದರ್ಭ ಯಾರೂ ಇವರ ಎದುರು ಕಾಣಿಸಿಕೊಳ್ಳಬಾರದು ಎಂಬ ನಂಬಿಕೆ ಇಲ್ಲಿದ್ದು, ಹೀಗಾಗಿಯೇ ನಾಯಿಗಳನ್ನು ಹೊತ್ತೊಯ್ಯುವ ಮಾರ್ಗದಲ್ಲಿ ಗ್ರಾಮಸ್ಥರು ಸುಳಿದಾಡದಂತೆ ಸೂಚಿಸಲಾಗುತ್ತದೆ. ಇದೆಲ್ಲದರ ನಡುವೆ ಮತ್ತೊಂದು ಶಾಸ್ತ್ರವೂ ಇದ್ದು, ಅದು ಏನೆಂದರೆ ಮಣ್ಣಿನ ಹರಕೆ ನಾಯಿಗೆ ರೊಟ್ಟಿಯನ್ನು ತಯಾರಿಸುವುದಾಗಿದೆ.

ನಾಯಿಗಳಿಗೆ ಅಕ್ಕಿ ರೊಟ್ಟಿಯ ನೈವೇದ್ಯ

ನಾಯಿಗಳಿಗೆ ಅಕ್ಕಿ ರೊಟ್ಟಿಯ ನೈವೇದ್ಯ

ನಾಯಿ ಒಪ್ಪಿಸುವ ಒಂದು ದಿನ ಮುಂಚಿತವಾಗಿ ಸಂಬಂಧಿಸಿದ ಕುಟುಂಬದ ಪುರುಷರು ದೇವಾಲಯದ ಸಮೀಪ ಕಲ್ಲಿನ ಒಲೆ ನಿರ್ಮಿಸಿ ಸೌದೆಯನ್ನು ಸಂಗ್ರಹಿಸಿಡುತ್ತಾರೆ. ಆ ನಂತರ ಹನ್ನೆರಡು ಕುಟುಂಬದ ಮಹಿಳೆಯರು ದೇವಾಲಯದ ಸಮೀಪದ ನಿಗದಿತ ಮನೆಯಲ್ಲಿ ರಾತ್ರಿ ಉಳಿದುಕೊಂಡು ಮುಂಜಾನೆ ತಣ್ಣೀರು ಸ್ನಾನದೊಂದಿಗೆ ಶುದ್ಧದಿಂದ ಅಕ್ಕಿ ಕುಟ್ಟಿ ರೊಟ್ಟಿ ತಯಾರಿಸಿ ನಾಯಿ ಹೊತ್ತು ತರುವ ದಾರಿಯುದ್ದಕ್ಕೂ ತಮ್ಮನ್ನು ಯಾರಿಗೂ ಕಾಣಿಸಿಕೊಳ್ಳದಂತೆ ಬಾಳೆಲೆ ಚೂರಿನೊಂದಿಗೆ ರೊಟ್ಟಿಯ ನೈವೇದ್ಯ ಇಡಲಾಗುತ್ತದೆ. ಇನ್ನು ಊರಿನ ಸುತ್ತಮುತ್ತಲಿನವರ ಮನೆಯಲ್ಲಿ ತಮ್ಮ ಸಾಕು ಪ್ರಾಣಿಗಳಿಗೆ ತೊಂದರೆಯಾದರೆ, ಮನೆಯಲ್ಲಿ ನಾಯಿಗಳು ವೃದ್ಧಿಯಾಗದಿದ್ದರೆ ಮಣ್ಣಿನ ನಾಯಿಯ ಹರಕೆಯನ್ನು ಮಾಡಿ ಅರ್ಪಿಸುವುದು ಜತೆಗೆ ಕೆಲವರು ತೋಟ ಗದ್ದೆಗೂ, ತಮ್ಮ ಇಷ್ಟಾರ್ಥ ಸಿದ್ಧಿಗೂ ಮಣ್ಣಿನ ನಾಯಿಯ ಹರಕೆ ಮಾಡಿಕೊಳ್ಳುವ ಸಂಪ್ರದಾಯವೂ ಇಲ್ಲಿನ ಜನರಲ್ಲ್ಲಿದೆ.

ದೀಪಾರಾಧನೆ ವಿಷ್ಣುಮೂರ್ತಿ ಕೋಲ

ದೀಪಾರಾಧನೆ ವಿಷ್ಣುಮೂರ್ತಿ ಕೋಲ

ಈಗಾಗಲೇ ಆರಂಭವಾಗಿರುವ ಹಬ್ಬದಲ್ಲಿ ದೇವರಿಗೆ ಮಣ್ಣಿನ ಹರಕೆ ನಾಯಿ ಒಪ್ಪಿಸುವ ಹಬ್ಬ ಮುಗಿದಿದ್ದು, ಡಿಸೆಂಬರ್ 17 ರಂದು ಕೊಟ್ಟಿ ಪಾಡುವ ಕಾರ್ಯಕ್ರಮ ನಡೆಯಲಿದ್ದು, 18 ರಂದು ರಾತ್ರಿ 10 ಗಂಟೆಗೆ ವೈಶಿಷ್ಟ್ಯ ಪೂರ್ಣವಾದ ದೀಪಾರಾಧನೆ (ಅಂದಿ ಬೊಳಕ್) ಹಾಗೂ ಕರಿಬಾಳೆ, ಕುಟ್ಟಿಚಾತ, ನುಚ್ಚುಟ್ಟೆ ಕೋಲಗಳು ನಡೆಯಲಿವೆ. ಡಿ.19ರಂದು ಪೂರ್ವಾಹ್ನ ಅಜ್ಜಪ್ಪ ಕೋಲ ಹಾಗೂ ಅಪರಾಹ್ನ ವಿಷ್ಣುಮೂರ್ತಿ ಕೋಲದ ಮೇಲೇರಿ (ಅಗ್ನಿ ಪ್ರವೇಶ) ನಡೆಯುವುದರೊಂದಿಗೆ ಈ ಬಾರಿಯ ಮಕ್ಕಿಶಾಸ್ತಾವು ದೇಗುಲದ ಹಬ್ಬಕ್ಕೆ ತೆರೆಬೀಳಲಿದೆ.

ಎತ್ತುಗಳ ಸಿಂಗರಿಸಿ ದೇವಾಲಯಕ್ಕೆ ಪ್ರದಕ್ಷಿಣೆ

ಎತ್ತುಗಳ ಸಿಂಗರಿಸಿ ದೇವಾಲಯಕ್ಕೆ ಪ್ರದಕ್ಷಿಣೆ

ಎತ್ತುಪೋರಾಟ ಮತ್ತು ಕೋಲದ ಬಗ್ಗೆ ಹೇಳುವುದಾದರೆ ಹಬ್ಬದ ನಡು ಮಧ್ಯಾಹ್ನ ಗ್ರಾಮಸ್ಥರು ಎತ್ತುಗಳನ್ನು ಸಿಂಗರಿಸಿ ಅವುಗಳ ಬೆನ್ನಮೇಲೆ ಶ್ವೇತವಸ್ತ್ರದಲ್ಲಿ ಹರಕೆಯ ಅಕ್ಕಿಯನ್ನು ಕಟ್ಟಿ ದೇವಾಲಯಕ್ಕೆ ಕರೆತರುತ್ತಾರೆ. ಬಳಿಕ ಚಂಡೆ ವಾದ್ಯದೊಂದಿಗೆ ಅವುಗಳನ್ನು ದೇವಾಲಯದ ಕಟ್ಟೆಯ ಸುತ್ತ ಓಡಿಸಲಾಗುತ್ತದೆ. ಮಾರನೆಯ ದಿನ ಬೆಳಿಗ್ಗೆಯಿಂದಲೇ ದೇವಾಲಯದ ನಿರ್ದಿಷ್ಟ ಸ್ಥಳದಲ್ಲಿ ಅಜ್ಜಪ್ಪ ಹಾಗೂ ವಿಷ್ಣುಮೂರ್ತಿ ಕೋಲಗಳು ನಡೆಯುತ್ತವೆ. ತಿರುವಳನಿಗೆ ತೆಂಗಿನಗರಿಗಳಿಂದ ಮಾಡಿದ ಅಲಂಕೃತ ಪೋಷಾಕನ್ನು ಧರಿಸಲಾಗುತ್ತದೆ. ಬಳಿಕ ಚಂಡೆ ವಾದ್ಯ ಮೊಳಗುತ್ತಿದ್ದಂತೆಯೇ ತಿರುವಳನ ಮೇಲೆ ದೇವರು ಅವಾಹನೆಗೊಂಡು ನರ್ತಿಸುತ್ತಾ ಸಾಗುತ್ತವೆ. ಈ ಸಂದರ್ಭದ ದೃಶ್ಯ ನೆರೆದವರಲ್ಲಿ ರೋಮಾಂಚನವನ್ನುಂಟು ಮಾಡುತ್ತದೆ.

ಭಕ್ತರ ಕಷ್ಟಕ್ಕೆ ಪರಿಹಾರ ಹೇಳುವ ದೇವರು

ಭಕ್ತರ ಕಷ್ಟಕ್ಕೆ ಪರಿಹಾರ ಹೇಳುವ ದೇವರು

ಮಧ್ಯಾಹ್ನ ಕೆಂಡದ ರಾಶಿಯ ಮೇಲೆ ಕೋಲಗಳು ಬೀಳುವ ಮೇಲೇರಿ ಕಾರ್ಯಕ್ರಮಗಳು ನಡೆಯುತ್ತವೆ. ಆ ನಂತರ ಬೆಳ್ಳಿಯ ಮುಖವಾಡ ಧರಿಸಿ ದೇವಾಲಯದ ಪ್ರಾಂಗಣಕ್ಕೆ ಬಂದು ಭಕ್ತರ ಇಷ್ಟಾರ್ಥಗಳು ನೆರವೇರಲಿ ಎಂದು ಹರಸುತ್ತದೆ. ಈ ಸಂದರ್ಭ ಭಕ್ತರು ತಮ್ಮ ಕಷ್ಟ ಸುಖಗಳನ್ನು ಹೇಳಿಕೊಂಡು ದೇವರಿಂದ ಪರಿಹಾರ ಪಡೆಯುತ್ತಾರೆ. ರಾತ್ರಿ ಸುಮಾರು ಎರಡು ಗಂಟೆಗಳ ಕಾಲ ನಡೆಯುವ ದೀಪಾರಾಧನೆ ನಡೆಯುತ್ತದೆ.

ಹಬ್ಬದ ದಿನಗಳು ಹೊರತುಪಡಿಸಿ ನೀರವ ಮೌನ

ಹಬ್ಬದ ದಿನಗಳು ಹೊರತುಪಡಿಸಿ ನೀರವ ಮೌನ

ವರ್ಷದಲ್ಲಿ ಹಬ್ಬದ ಸಂದರ್ಭ ಮಾತ್ರ ಜನ ಸೇರುತ್ತಾರೆ. ಉಳಿದಂತೆ ದಿನನಿತ್ಯ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆಯಾದರೂ ಸದಾ ನೀರವ ಮೌನ ಇಲ್ಲಿ ನೆಲೆಸಿರುತ್ತದೆ. ಈ ತಾಣಕ್ಕೆ ಬರುವವರು ಕೊಡಗಿನ ಮಡಿಕೇರಿ ಅಥವಾ ವೀರಾಜಪೇಟೆಗೆ ಬಂದರೆ ಅಲ್ಲಿಂದ ನಾಪೋಕ್ಲುಗೆ ತೆರಳಿದರೆ ಅಲ್ಲಿನ ಬೇತು ರಸ್ತೆಯಲ್ಲಿ ಸುಮಾರು ಎರಡು ಕಿ.ಮೀ ಸಾಗಿದರೆ ಮಕ್ಕಿ ಶಾಸ್ತಾವು ತಾಣವನ್ನು ತಲುಪಬಹುದಾಗಿದೆ.

ತ್ರಿಶೂಲಧಾರಿ ಶಾಸ್ತಾವು ದೇವರ ಮೂರ್ತಿ

ತ್ರಿಶೂಲಧಾರಿ ಶಾಸ್ತಾವು ದೇವರ ಮೂರ್ತಿ

ಈ ದೇವಾಲಯವು ದಿಬ್ಬದ ಮೇಲೆ ನೆಲೆನಿಂತಿದ್ದು, ರಸ್ತೆಯಿಂದಲೇ ಸಿಗುವ ಮೆಟ್ಟಿಲುಗಳನ್ನೇರಿ ಮೇಲ್ಭಾಗಕ್ಕೆ ಬಂದರೆ ಸಮತಟ್ಟಾದ ಜಾಗದಲ್ಲಿ ಸುಮಾರು ಐದು ಅಡಿ ಎತ್ತರದ ವೃತ್ತಾಕಾರದ ಕಟ್ಟೆಯೊಂದು ಎದುರಾಗುತ್ತದೆ. ಈ ಕಟ್ಟೆಯ ನಡುವೆ ತ್ರಿಶೂಲಧಾರಿ ಶಾಸ್ತಾವು ದೇವರ ಮೂರ್ತಿಯಿದೆ. ಅಲ್ಲದೆ ದೇವರಿಗೆ ಆಶ್ರಯವಾಗಿ ಒಂದು ಹಲಸಿನ ಮರವಿದ್ದು ಸುತ್ತಲೂ ಹರಕೆಯಾಗಿ ಅರ್ಪಿಸಿದ ಮಣ್ಣಿನ ನಾಯಿಗಳನ್ನು ಕಾಣಬಹುದಾಗಿದೆ.

English summary
A festive celebration is being held at the Betu Makki Sri Shastavu Temple near the famous Napoklu in Kodagu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X