ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದಾದ ಬಳಿಕ ಪ್ರವಾಸೋದ್ಯಮ ಹೇಗಿದೆ?

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370ನೇ ವಿಧಿಯನ್ನು ರದ್ದಾಗಿದ್ದು ಬಹಳ ದೊಡ್ಡ ಘಟನೆ. ಕಾಶ್ಮೀರ ಕಣಿವೆಯಲ್ಲಿ ಮಹತ್ತರ ಬದಲಾವಣೆ ಆಗುವ ನಿರೀಕ್ಷೆಯಂತೂ ಇತ್ತು.

2019, ಆಗಸ್ಟ್ 5ರಂದು ಆರ್ಟಿಕಲ್ 370 ಮತ್ತು 35(A) ರದ್ದಾಗಿ ಇಂದಿಗೆ ಸರಿಯಾಗಿ ಮೂರು ವರ್ಷ ಆಗಿದೆ. ಈಗ ಮೂರು ವರ್ಷದಲ್ಲಿ ಕಣಿವೆ ರಾಜ್ಯದಲ್ಲಿ ಎಷ್ಟು ಬದಲಾವಣೆ ಆಗಿದೆ ಎಂಬ ಕುತೂಹಲವಂತೂ ಇದೆ. ಭಯೋತ್ಪಾದನೆ ಚಟುವಟಿಕೆ ಬಹುತೇಕ ನಿಂತಿದೆ ಎಂದು ಸರಕಾರ ಹೇಳಿಕೊಳ್ಳುತ್ತಲೇ ಇತ್ತೀಚೆಗೆ ಕಾಶ್ಮೀರೇತರ ಮಂದಿ ಮೇಲೆ ಉಗ್ರರ ದಾಳಿ ಮಾಡುವ ಪ್ರಕರಣ ಹೆಚ್ಚುತ್ತಿದೆ.

ಜಮ್ಮು ಮತ್ತು ಕಾಶ್ಮೀರದ ಪ್ರಮುಖ ಆದಾಯ ಮೂಲ ಅದರ ಪ್ರವಾಸೋದ್ಯಮ. ಈ ಉದ್ಯಮದ ಸ್ಥಿತಿ ಈಗ ಹೇಗಿದೆ?. ಉಗ್ರರ ದಾಳಿ ಭೀತಿ ಮಧ್ಯೆ ಜನರು ಕಣಿವೆ ರಾಜ್ಯದತ್ತ ಪ್ರವಾಸ ಹೋಗುತ್ತಿದ್ದಾರಾ? ಎಂಬುದು ಕುತೂಹಲ.

ಜಮ್ಮು ಕಾಶ್ಮೀರದಲ್ಲಿ ಪ್ರವಾಸೀ ಸ್ಥಳ ನೋಡುವುದಕ್ಕೆ ಮಾತ್ರ ಜನರು ಹೋಗುತ್ತಾರಾ, ಅಥವಾ ಬೇರೆ ಆಕರ್ಷಣೆ ಇದೆಯಾ? ಸರಕಾರ ಯಾವೆಲ್ಲಾ ಅಂಶಗಳಿಗೆ ಒತ್ತು ಕೊಡುತ್ತಿದೆ ಎಂಬಿತ್ಯಾದಿ ವಿವರ ಇಲ್ಲಿದೆ.

ಕೇಂದ್ರ ಸಚಿವರು ಹೇಳುವುದೇನು?

ಆರ್ಟಿಕಲ್ 370 ರದ್ದು ಸೇರಿದಂತೆ ನರೇಂದ್ರ ಮೋದಿ ಸರಕಾರ ಕೈಗೊಂಡ ಪರಿವರ್ತನಶೀಲ ಯೋಜನೆಗಳಿಂದಾಗಿ ಕಳೆದ ಹಲವಾರು ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಪ್ರವಾಸೀ ತಾಣಗಳು ಮತ್ತು ವಿಮಾನ ನಿಲ್ದಾಣಗಳಲ್ಲಿ ಪ್ರವಾಸಿಗ ಸಂಖ್ಯೆ ದಾಖಲೆ ಮಟ್ಟದಲ್ಲಿ ಇದೆ" ಎಂದು ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಹೇಳುತ್ತಾರೆ.

2021 ಅಕ್ಟೋಬರ್‌ನಿಂದ 2022 ಮಾರ್ಚ್‌ವರೆಗಿನ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ 79 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ತೆರಳಿದ್ದಾರೆ ಎಂದು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಖಾತೆ ಸಚಿವರೂ ಆದ ರೆಡ್ಡಿ ನಿನ್ನೆ ಗುರುವಾರ ಟ್ವೀಟ್ ಮಾಡಿದ್ದಾರೆ.

ಸರಕಾರದ ಗಮನ

ಸರಕಾರದ ಗಮನ

ಜಮ್ಮು ಮತ್ತು ಕಾಶ್ಮೀರದ ಆದಾಯ ಮೂಲವಾದ ಪ್ರವಾಸೋದ್ಯಮದ ಅಭಿವೃದ್ಧಿಗೆ ಸರಕಾರ ಒತ್ತು ಕೊಟ್ಟಿದೆ. ಈ ಕ್ಷೇತ್ರಕ್ಕೆ 786 ಕೋಟಿ ರೂ ಹಣ ನೀಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಬಿಡುಗಡೆಯಾದ ಹಣದಲ್ಲಿ ಶೇ. 184ರಷ್ಟು ಹೆಚ್ಚಳವಾಗಿದೆ.

ಶ್ರೀನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಚಾರ ಹೆಚ್ಚಾಗಿದೆ. ಈ ವರ್ಷದ ಏಪ್ರಿಲ್ ಒಂದೇ ತಿಂಗಳಲ್ಲಿ 102 ವಿಮಾನ ಸಂಚಾರ ಆಗಿದೆ. ಇದು ಆ ಏರ್‌ಪೋರ್ಟ್ ಇತಿಹಾಸದಲ್ಲೇ ಹೊಸ ದಾಖಲೆ. ಆ ತಿಂಗಳಲ್ಲಿ 15 ಸಾವಿರಕ್ಕೂ ಹೆಚ್ಚು ವಿಮಾನ ಪ್ರಯಾಣಿಕರು ಕಾಶ್ಮೀರಕ್ಕೆ ಬಂದು ಹೋಗಿದ್ದಾರೆ.

ಇದನ್ನು ಗಮನದಲ್ಲಿಟ್ಟುಕೊಂಡು ಸರಕಾರ ಶ್ರೀನಗರ್ ಏರ್ಪೋರ್ಟ್‌ನಲ್ಲಿ ಮತ್ತೊಂದು ಟರ್ಮಿನಲ್ ನಿರ್ಮಿಸಲು ಯೋಜಿಸುತ್ತಿದೆ.

ಜನಾಕರ್ಷಣೆಗೆ ಕಾರಣವೇನು?

ಜನಾಕರ್ಷಣೆಗೆ ಕಾರಣವೇನು?

ಜಮ್ಮು ಮತ್ತು ಕಾಶ್ಮೀರ ಭೂಮಿಯ ಸ್ವರ್ಗ ಎನ್ನುತ್ತಾರೆ. ಇಲ್ಲಿರುವ ಪ್ರವಾಸೀ ಸ್ಥಳಗಳು ಮನಮೋಹಕ. ಜನರು ಜಮ್ಮು ಮತ್ತು ಕಾಶ್ಮೀರಕ್ಕೆ ಕೇವಲ ಪ್ರವಾಸಿ ತಾಣಗಳನ್ನಷ್ಟೇ ನೋಡಲು ಹೋಗುತ್ತಿಲ್ಲ, ಬೇರೆ ನಿಮಿತ್ತವೂ ಹೋಗುತ್ತಿರುವುದು ಅಂಕಿ ಅಂಶಗಳಿಂದ ತಿಳಿದುಬರುತ್ತದೆ.

ಅಮರನಾಥ ಯಾತ್ರೆಗೆ ಜನರು ಹೋಗುತ್ತಾರೆ. ಸಾಹಸೀ ಚಟುವಟಿಕೆಗಳಿಗಾಗಿಯೂ ಜನರು ಕಣಿವೆ ರಾಜ್ಯಕ್ಕೆ ಹೋಗುತ್ತಾರೆ. ಸುಪ್ರಸಿದ್ಧ ದಾಲ್ ಲೇಕ್ ಬಳಿ ಜೆಟ್ ಸ್ಕೈ ರೈಡಿಂಗ್ ಸೌಲಭ್ಯ ಒದಗಿಸಲಾಗುತ್ತದೆ. ಅದೂ ಕೂಡ ಪ್ರವಾಸಿಗರ ಆಕರ್ಷಣೆಯಾಗಿದೆ. ಎರಡು ವರ್ಷಗಳ ಹಿಂದಷ್ಟೇ ಇಲ್ಲಿ ಆರಂಭವಾದ ಜೆಟ್ ಸ್ಕೈ ರೈಡ್ ಬಹಳ ಜನಪ್ರಿಯವಾಗಿದೆ. ಯೂರೋಪ್‌ನ ಸ್ವಿಟ್ಜರ್ಲ್ಯಾಂಡ್ ಮೊದಲಾದ ಸ್ಥಳಗಳಲ್ಲಿ ಇರುವ ಜೆಟ್ ಸ್ಕೈ ಈಗ ನಮ್ಮ ಕಾಶ್ಮೀರದಲ್ಲೂ ಲಭ್ಯ ಇರುವುದು ವಿಶೇಷ.

ಜಮ್ಮು ಮತ್ತು ಕಾಶ್ಮೀರದಲ್ಲಿ ಈವರೆಗೂ ಅಷ್ಟಾಗಿ ಹೆಸರು ಮಾಡದ, ಆದರೆ ಬಹಳ ಆಕರ್ಷಣೀಯವೆನಿಸಿದ ಸ್ಥಳಗಳಿಗೂ ಪ್ರವಾಸೋದ್ಯಮ ಇಲಾಖೆ ಒತ್ತುಕೊಡುತ್ತಿದೆ. ಬಾರಾಮುಲ್ಲಾದಲ್ಲಿರುವ ವಾತ್ಲಬ್, ಪಹಲ್ಗಾಂನಲ್ಲಿರುವ ಗಾಲ್ಫ್ ಅಂಗಣ ಇತ್ಯಾದಿ ಹಲವು ಸ್ಥಳಗಳ ಆಯ್ಕೆ ಪ್ರವಾಸಿಗರಿಗೆ ಇದೆ.

ಕಾಶ್ಮೀರದ ಪ್ರಮುಖ ಪ್ರವಾಸಿ ಸ್ಥಳಗಳು

ಕಾಶ್ಮೀರದ ಪ್ರಮುಖ ಪ್ರವಾಸಿ ಸ್ಥಳಗಳು

ದಾಲ್ ಲೇಕ್, ಟುಲಿಪ್ ಗಾರ್ಡನ್, ಸೋನಾಮಾರ್ಗ್, ಶಂಕರಾಚಾರ್ಯ ಗುಡ್ಡ, ಗುಲ್ಮರ್ಗ್ ಗೊಂಡೋಲಾ, ನುಭ್ರ ವ್ಯಾಲಿ, ಆಫರ್ವತ್ ಪೀಕ್, ಅಮರನಾಥ, ಆರು ವ್ಯಾಲಿ, ನಿಶಾತ್ ಗಾರ್ಡನ್, ನಿಗೀನ್ ಲೇಕ್, ಝೋಜಿಲಾ ಪಾಸ್.

ಶ್ರೀನಗರ ಬಳಿ ಇರುವ ಟುಲಿಪ್ ಗಾರ್ಡನ್‌ಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿದೆ. ಪ್ರತಿಕೂಲ ಹವಾಮಾನ ಇಲ್ಲದಿದ್ದರೆ ಅಮರನಾಥ ಮಂದಿರಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳ ಸಂಖ್ಯೆ ಈ ಬಾರಿ ದಾಖಲೆ ಮಟ್ಟಕ್ಕೆ ಏರುತ್ತಿತ್ತು ಎಂಬುದು ಅಧಿಕಾರಿಗಳ ಅನಿಸಿಕೆ.

ಕೇವಲ ಆರು ತಿಂಗಳ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ 79 ಲಕ್ಷ ಪ್ರವಾಸಿಗರು ಭೇಟಿ ನೀಡಿರುವುದು ಸಣ್ಣ ವಿಷಯವೇನಲ್ಲ. ಕಣಿವೆ ರಾಜ್ಯ ವಿಶೇಷ ಸ್ಥಾನಮಾನ ಕಳೆದುಕೊಂಡರೂ ಬೆಳವಣಿಗೆಯಲ್ಲಿ ಮುಂದಡಿ ಇಡುತ್ತಿರುವುದು ಸ್ವಾಗತಾರ್ಹ.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+