Exit Poll : ಆರ್. ಆರ್. ನಗರದಲ್ಲಿ ಬಿಜೆಪಿ, ಕಾಂಗ್ರೆಸ್ ನೇರ ಹಣಾಹಣಿ
ಬೆಂಗಳೂರು, ನವೆಂಬರ್ 07: ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆ ಫಲಿತಾಂಶ ನವೆಂಬರ್ 10ರಂದು ಪ್ರಕಟವಾಗಲಿದೆ. ನವೆಂಬರ್ 3ರಂದು ನಡೆದ ಚುನಾವಣೆಯಲ್ಲಿ ಶೇ 45.24ರಷ್ಟು ಮತದಾನವಾಗಿತ್ತು.
Recommended Video
ಉಪ ಚುನಾವಣೆ ಘೋಷಣೆಯಾದ ದಿನದಿಂದ ಆರ್. ಆರ್. ನಗರ ಕ್ಷೇತ್ರ ಕುತೂಹಕ್ಕೆ ಕಾರಣವಾಗಿತ್ತು. ಬಿಜೆಪಿ ಅಭ್ಯರ್ಥಿ ಯಾರು? ಎಂಬ ಕುತೂಹಲ ನಾಮಪತ್ರ ಸಲ್ಲಿಕೆ ಮಾಡಲು 2 ದಿನ ಬಾಕಿ ಇರುವ ತನಕ ಇತ್ತು.

ಚುನಾವಣಾ ಅಧಿಸೂಚನೆ ಪ್ರಕಟವಾಗುವ ಮೊದಲೇ ಕಾಂಗ್ರೆಸ್ ಪಕ್ಷ ಹೆಚ್. ಕುಸುಮಾ ಅಭ್ಯರ್ಥಿ ಎಂದು ಘೋಷಣೆ ಮಾಡಿತ್ತು. ಉಪ ಚುನಾವಣೆ ಕಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ನಡೆಯಲಿದೆ ಎಂಬ ಲೆಕ್ಕಾಚಾರವಿತ್ತು.
2018ರ ಚುನಾವಣೆಯಲ್ಲಿ ಆರ್. ಆರ್. ನಗರ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ 60 ಸಾವಿರಕ್ಕೂ ಅಧಿಕ ಮತಗಳನ್ನು ಪಡೆದಿದ್ದರು. ಆದ್ದರಿಂದ, ಜೆಡಿಎಸ್ ಸಹ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿತ್ತು. ವಿ. ಕೃಷ್ಣಮೂರ್ತಿ ಅವರನ್ನು ಅಭ್ಯರ್ಥಿಯಾಗ ಕಣಕ್ಕಿಳಿಸಿತ್ತು.
ಈ ಬಾರಿಯ ಉಪ ಚುನಾವವಣೆಯಲ್ಲಿ ಬಿಜೆಪಿಯಿಂದ ಮುನಿರತ್ನ, ಕಾಂಗ್ರೆಸ್‌ನಿಂದ ಹೆಚ್. ಕುಸುಮಾ ಮತ್ತು ಜೆಡಿಎಸ್‌ನಿಂದ ವಿ. ಕೃಷ್ಣಮೂರ್ತಿ ಸೇರಿದಂತೆ 16 ಅಭ್ಯರ್ಥಿಗಳು ಆರ್. ಆರ್. ನಗರ ಕ್ಷೇತ್ರದಲ್ಲಿ ಕಣದಲ್ಲಿದ್ದರು.
ಸಿ-ವೋಟರ್ ನಡೆಸಿದ ಚುನಾವಣೋತ್ತರ ಸಮೀಕ್ಷೆ ಶನಿವಾರ ಪ್ರಕಟವಾಗಿದ್ದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಪೈಪೋಟಿ ನಡೆದಿದೆ. ಬಿಜೆಪಿಯ ಮುನಿರತ್ನ ಅವರು ಗೆಲುವು ಸಾಧಿಸಲಿದ್ದಾರೆ. ಉಪ ಚುನಾವಣೆಯಲ್ಲಿ ಮುನಿರತ್ನ ಶೇ 37.8ರಷ್ಟು ಮತಗಳನ್ನು ಪಡೆಯಲಿದ್ದಾರೆ.
ಕಾಂಗ್ರೆಸ್‌ನ ಹೆಚ್. ಕುಸುಮಾ ಶೇ 31.1ರಷ್ಟು ಮತಗಳನ್ನು ಪಡೆಯಲಿದ್ದಾರೆ. ಜೆಡಿಎಸ್‌ನ ವಿ. ಕೃಷ್ಣಮೂರ್ತಿ ಶೇ 14ರಷ್ಟು ಮತ ಪಡೆದರೆ, ಇತರ ಅಭ್ಯರ್ಥಿಗಳು ಶೇ 17.2ರಷ್ಟು ಮತಗಳನ್ನು ಪಡೆಯಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ.
ರಾಜರಾಜೇಶ್ವರಿ ನಗರ ಕ್ಷೇತ್ರ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಕ್ಷೇತ್ರದ ಸಂಸದರು ಡಿ. ಕೆ. ಸುರೇಶ್. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸಹೋದರ ಡಿ. ಕೆ. ಸುರೇಶ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಿಸಬೇಕು ಎಂದು ಬಿರುಸಿನ ಪ್ರಚಾರವನ್ನು ನಡೆಸಿದ್ದರು.
ಆರ್. ಆರ್. ನಗರ ಕ್ಷೇತ್ರದಲ್ಲಿ ಇದುವರೆಗೂ ಬಿಜೆಪಿ ಸೋತರೆ ಅದಕ್ಕೆ ಕಾರಣ ಮುನಿರತ್ನ. ಈ ಬಾರಿ ಗೆದ್ದರೆ ಅದಕ್ಕೂ ಮುನಿರತ್ನ ಕಾರಣ ಎಂಬ ಮಾತು ಚಾಲ್ತಿಯಲ್ಲಿತ್ತು. ಅದರಂತೆ ಕ್ಷೇತ್ರದಲ್ಲಿ ಎರಡು ಬಾರಿ ಗೆದ್ದಿದ್ದ ಮುನಿರತ್ನ ಅವರು ಬಿಜೆಪಿ ಸೇರಿ ಉಪ ಚುನಾವಣೆ ಅಭ್ಯರ್ಥಿಯಾಗಿದ್ದರು.
ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಚಾರದಲ್ಲಿ ಹಿಂದುಳಿದಿರಲಿಲ್ಲ. ಹೆಚ್. ಕುಸುಮಾ ಅವರು ಮೊದಲ ಬಾರಿಗೆ ಚುನಾವಣೆ ಕಣಕ್ಕೆ ಇಳಿದರೂ ಕ್ಷೇತ್ರದ ತುಂಬಾ ಸಂಚಾರ ನಡೆಸಿ ಪ್ರಚಾರವನ್ನು ಮಾಡಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪ್ರಚಾರಕ್ಕೆ ಕೈ ಜೋಡಿಸಿದ್ದರು.












Click it and Unblock the Notifications