ಅರಣ್ಯ ಪ್ರದೇಶವನ್ನೂ ಮಾರಿಬಿಡಿ ಎನ್ನುತ್ತಿದ್ದಾರೆ ಟಿಂಬರ್ ಉದ್ಯಮಿಗಳು!
ಜಗತ್ತಿನಲ್ಲಿ ಎಲ್ಲವೂ ಖಾಸಗೀಕರಣದ ಮಾಯೆಗೆ ಸಿಲುಕುತ್ತಿದೆ. ಒಂದು ಕಡೆ ಅಭಿವೃದ್ಧಿಯ ನೆಪ, ಮತ್ತೊಂದು ಕಡೆ ನಷ್ಟದ ಲೆಕ್ಕ ತೋರಿಸಿ ಸರ್ಕಾರದ ಉದ್ಯಮಗಳನ್ನ ಖಾಸಗಿ ಜಾಲಕ್ಕೆ ಸಿಲುಕಿಸಲಾಗುತ್ತಿದೆ. ಆದರೆ ಇದೀಗ ಟಿಂಬರ್ ಮಾಫಿಯಾ ಕಣ್ಣು ಕಾಡಿನ ಮೇಲೂ ಬಿದ್ದಿದೆ. ಈ ಕಾರಣಕ್ಕೆ ಅರಣ್ಯ ಪ್ರದೇಶ ಖಾಸಗೀಕರಣ ಮಾಡಿ ಅಂತಾ ರಷ್ಯಾ ಸರ್ಕಾರದ ಮೇಲೆ ಟಿಂಬರ್ ಉದ್ಯಮಿಗಳು ಒತ್ತಡ ಹಾಕುತ್ತಿದ್ದಾರೆ.
ರಷ್ಯಾದ ಖ್ಯಾತ ಟಿಂಬರ್ ಕಂಪನಿ ಸಿಇಒ ಕಾನ್ಸ್‌ಟಾಂಟಿನ್ ಲಷ್ಕೆವಿಷ್ ಈ ಬೇಡಿಕೆ ಇಟ್ಟಿದ್ದಾರೆ. ಕಾಡು ನಾಶವಾಗದಂತೆ ತಡೆಯೋದಕ್ಕೆ ಈ ಪ್ಲ್ಯಾನ್ ಸೂಕ್ತ ಎಂದಿದ್ದಾರೆ ಕಾನ್ಸ್‌ಟಾಂಟಿನ್ ಲಷ್ಕೆವಿಷ್. ರಷ್ಯಾದಲ್ಲಿನ ಶೇ. 3ರಷ್ಟು ಅರಣ್ಯವನ್ನು ಖಾಸಗಿ ಕಂಪನಿಗಳಿಗೆ ನೀಡಿ. ಆ ಜಾಗದಲ್ಲೇ ಕೃತಕವಾಗಿ ಕಾಡು ಬೆಳೆಸಿ, ಉದ್ಯಮಗಳ ಅಗತ್ಯತೆ ಪೂರೈಸಿಕೊಳ್ಳಬಹುದು ಅಂತಾ ಕಾನ್ಸ್‌ಟಾಂಟಿನ್ ಲಷ್ಕೆವಿಷ್ ಪ್ಲ್ಯಾನ್ ಕೊಟ್ಟಿದ್ದಾರೆ.
ಆದ್ರೆ ಕಾನ್ಸ್‌ಟಾಂಟಿನ್ ಲಷ್ಕೆವಿಷ್ ನೀಡಿರುವ ಈ ಐಡಿಯಾ ಪರಿಸರ ಪ್ರೇಮಿಗಳು ಹಾಗೂ ತಜ್ಞರ ಆಕ್ರೋಶಕ್ಕೆ ಕಾರಣವಾಗಿದೆ. ಕಾಡುಗಳನ್ನ ಖಾಸಗಿ ಕಂಪನಿಗೆ ವಹಿಸುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ.

ಸೈಬೀರಿಯಾ ಪ್ರಾಂತ್ಯದಲ್ಲಿ ಏನಾಗುತ್ತಿದೆ..?
ಜಗತ್ತಿಗೆ ಶೇಕಡ 10ರಷ್ಟು ಆಕ್ಸಿಜೆನ್ ಪೂರೈಕೆ ಆಗುತ್ತಿರುವುದು ರಷ್ಯಾದ ಕಾಡುಗಳಿಂದ. ಅದರಲ್ಲೂ ರಷ್ಯಾದ ಅರಣ್ಯ ಸಂಪತ್ತು ಬಹುಪಾಲು ಅವಲಂಬಿಸಿರುವುದು ಸೈಬೀರಿಯಾ ಮೇಲೆ. ಆದರೆ ಗ್ಲೋಬಲ್ ವಾರ್ಮಿಂಗ್‌ನ ವ್ಯತಿರಿಕ್ತ ಪರಿಣಾಮ ಹೆಚ್ಚಾಗುತ್ತಿದೆ. ಸೈಬೀರಿಯಾದಲ್ಲಿ ಹಬ್ಬಿರುವ ಕಾಡ್ಗಿಚ್ಚು ಮಾನವನ ವಿನಾಶಕ್ಕೆ ನಾಂದಿ ಹಾಡಿದಂತಿದೆ. ಏಕೆಂದರೆ ಸೈಬೀರಿಯಾ ಪ್ರಾಂತ್ಯದಲ್ಲಿ ಹಬ್ಬಿರುವ ಅರಣ್ಯ ಪ್ರದೇಶ ಹಾಗೂ ಅಲ್ಲಿನ ಮಣ್ಣು ಭಾರಿ ಪ್ರಮಾಣದಲ್ಲಿ ಕಾರ್ಬನ್ ಸಂಯುಕ್ತಗಳನ್ನು ಒಳಗೊಂಡಿರುತ್ತದೆ. ಇದೀಗ ಹೊತ್ತಿರುವ ಕಾಡ್ಗಿಚ್ಚಿನ ಪರಿಣಾಮ ಊಹೆಗೂ ನಿಲುಕದಷ್ಟು ಕಾರ್ಬನ್ ಡೈಆಕ್ಸೈಡ್ ಹಾಗೂ ಕಾರ್ಬನ್ ಮೊನಾಕ್ಸೈಡ್ ವಾತಾವರಣ ಸೇರುತ್ತಿದೆ. ಈಗಾಗಲೇ 250 ಮೆಗಾಟನ್ ಕಾರ್ಬನ್ ಸೈಬೀರಿಯಾ ಕಾಡ್ಗಿಚ್ಚಿನಿಂದ ವಾತಾವರಣ ಸೇರಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇಕಡ 35ರಷ್ಟು ಹೆಚ್ಚಾಗಿದೆ.

ಚಳಿ ಚಳಿ ತುಂಬಾ ಚಳಿ..!
ಸೈಬೀರಿಯಾ ರಷ್ಯಾದ ಪ್ರಮುಖ ಪ್ರಾಂತ್ಯಗಳಲ್ಲಿ ಒಂದು. ಸೈಬೀರಿಯಾ ಉತ್ತರ ಧ್ರುವ ಪ್ರದೇಶದಿಂದ ಕೇವಲ 6 ಸಾವಿರ ಕಿಲೋಮೀಟರ್ ದೂರದಲ್ಲಿದೆ. ಈಗ ನೀವೆ ಊಹಿಸಿ, ಇಲ್ಲಿ ಚಳಿಯ ಪ್ರಮಾಣ ಹೇಗಿರಬಹುದು ಎಂಬುದನ್ನ. ಇಲ್ಲಿ ವರ್ಷವೆಲ್ಲಾ ಚಳಿಯೇ ಆವರಿಸಿರುತ್ತದೆ. ಅದೆಷ್ಟರಮಟ್ಟಿಗೆ ಎಂದರೆ ಬೇಸಿಗೆ ಬಂದರು ಕೂಡ ಉಷ್ಣಾಂಶ 15 ಡಿಗ್ರಿ ಮೀರುವುದಿಲ್ಲ. ಹಾಗಾದರೆ ಚಳಿಗಾಲವನ್ನು ನೀವೇ ಊಹೆ ಮಾಡಿಕೊಳ್ಳಿ.
ಉದಾಹರಣೆಗೆ 1884ರಲ್ಲಿ ದಾಖಲಾಗಿದ್ದ 7.8 ಡಿಗ್ರಿ ಉಷ್ಣಾಂಶ ರಾಜ್ಯ ರಾಜಧಾನಿಯ ಇತಿಹಾಸದಲ್ಲಿ ಅಂತ್ಯಂತ ಕನಿಷ್ಠವಾಗಿದೆ. ಇಷ್ಟು ಚಳಿಗೆ ಇಡೀ ಬೆಂಗಳೂರು ನಡುಗಿ ಹೋಗಿತ್ತು. ಹಾಗೆ ನೋಡಿದರೆ ಸೈಬೀರಿಯಾ ಪ್ರಾಂತ್ಯದಲ್ಲಿ ಇದು ಮಾಮೂಲಿ ತಾಪಮಾನ, ಅಲ್ಲಿ ಬೇಸಿಗೆಯಲ್ಲೂ ಇಷ್ಟೇ ಕನಿಷ್ಠ ತಾಪಮಾನ ಇರುತ್ತದೆ. ಹೀಗಾಗಿ ಅಲ್ಲಿನ ಭೂಮಿ ಸದಾ ತೇವದಿಂದ ಕೂಡಿರುತ್ತದೆ.

ಚಳಿಯಲ್ಲೂ ಬೆಂಕಿ ಹೊತ್ತಿಕೊಂಡಿದೆ
ಇಷ್ಟು ಕನಿಷ್ಠ ತಾಪಮಾನ ಇರುವ ಪ್ರದೇಶ ಸೈಬೀರಿಯಾದಲ್ಲೂ ಕಾಡ್ಗಿಚ್ಚು ಹಬ್ಬಿದೆ. ಸೈಬೀರಿಯಾದ ನಗರಗಳ ಮೇಲೆ ಕಾರ್ಬನ್ ಮೋಡಗಳು ರಾರಾಜಿಸುತ್ತಿವೆ. ಲಕ್ಷಾಂತರ ಎಕರೆ ಕಾಡಿಗೆ ಬೆಂಕಿ ಬಿದ್ದಿದ್ದು, ಬೆಂಕಿ ನಂದಿಸಲು ರಷ್ಯಾ ಸರ್ಕಾರ ಪರದಾಡುತ್ತಿದೆ. ತಾಪಮಾನ ಹೆಚ್ಚಾಗಿರುವ ಪ್ರದೇಶದಲ್ಲಿ ಕಾಡ್ಗಿಚ್ಚು ಹೊತ್ತುವುದು ಮಾಮೂಲಿ ಎನ್ನಬಹುದು. ಆದರೆ ಇಲ್ಲಿ ಆಗಿರುವುದು ಉಲ್ಟಾ, ಚಳಿ ಮತ್ತು ತೇವಾಂಶ ಇದ್ದರೂ ಕಾಡು ಧಗಧಗನೆ ಹೊತ್ತಿ ಉರಿಯುತ್ತಿದೆ. ತೇವಾಂಶ ಹೆಚ್ಚಿರುವ ಪರಿಣಾಮ ಭಾರಿ ಪ್ರಮಾಣದ ಮಾಲಿನ್ಯ ಉಂಟಾಗುತ್ತಿದೆ.

ಸಸ್ಯಗಳ ಪಳಿಯುಳಿಕೆ ಇದಕ್ಕೆ ಕಾರಣ
ಆರ್ಕಟಿಕ್ ತಪ್ಪಲು ಪ್ರದೇಶದಲ್ಲಿ ಸದಾ ಕಾಲ ತೇವ ಇರುವ ಹಿನ್ನೆಲೆಯಲ್ಲಿ, ಅಲ್ಲಿನ ವಾತಾವರಣಕ್ಕೆ ಒಗ್ಗುವ ಸಸ್ಯ ಸಂಕುಲ ಹರಡಿಕೊಂಡಿದೆ. ಆದರೆ ಕ್ಲಿಷ್ಟಕರ ಸಂದರ್ಭದಲ್ಲಿ ಬಹುಪಾಲು ಸಸ್ಯಗಳು ಈ ತೇವಾಂಶದಲ್ಲಿ ಕೊಳೆತುಬಿಡುತ್ತವೆ. ಕೊಳೆತ ಸಸ್ಯ ಒಣಗಲು ಅಲ್ಲಿ ಅವಕಾಶವೇ ಇಲ್ಲ. ವರ್ಷವಿಡೀ ಸರಿಯಾಗಿ ಬಿಸಿಲನ್ನೇ ಕಾಣದ ನೆಲದಲ್ಲಿ ಕೊಳೆತ ಸಸ್ಯಗಳ ರಾಶಿ ಲಕ್ಷಾಂತರ ವರ್ಷಗಳಿಂದ ಹರಡಿಕೊಂಡಿದೆ. ಈಗ ಸೈಬೀರಿಯಾ ಭಾಗದಲ್ಲಿ ಬಿದ್ದ ಬೆಂಕಿ ಕಾಡಿನ ಜೊತೆಗೆ, ಕೊಳೆತ ಸಸ್ಯಗಳನ್ನೂ ಸುಡುತ್ತಿದೆ. ಹೀಗಾಗಿ ಸಹಜವಾಗಿ ಕಾರ್ಬನ್ ಡೈಆಕ್ಸೈಡ್ ಹಾಗೂ ಕಾರ್ಬನ್ ಮೊನಾಕ್ಸೈಡ್ ಯಥೇಚ್ಛವಾಗಿ ವಾತಾವರಣಕ್ಕೆ ಸೇರುತ್ತಿದೆ. ಇದು ಹೀಗೆ ಮುಂದುವರಿದರೆ ಓಝೋನ್ ಪದರಕ್ಕೆ ಭಾರಿ ಪ್ರಮಾಣದ ಹಾನಿ ಕಟ್ಟಿಟ್ಟಬುತ್ತಿ.

ಬಿಸಿ ಹೊಗೆ ಧ್ರುವ ಪ್ರದೇಶದತ್ತ ನುಗುತ್ತಿದೆ..!
ಸೈಬೀರಿಯಾ ಅರಣ್ಯದಲ್ಲಿ ಹೊತ್ತಿ ಉರಿಯುತ್ತಿರುವ ಬೆಂಕಿ ಕಾರ್ಬನ್ ವಿಷ ಮಿಶ್ರಿತ ಗಾಳಿಯನ್ನು ಉತ್ತರ ಧ್ರುವ ಪ್ರದೇಶದ ಕಡೆಗೆ ತಳ್ಳುತ್ತಿದೆ. ಈಗಾಗಲೇ ಉತ್ತರ ಧ್ರುವದಲ್ಲಿ ಬಹುಪಾಲು ಮಂಜು ಕರಗಿಹೋಗಿದೆ. ಈ ಮಧ್ಯೆ ಕಾರ್ಬನ್ ವಿಷ ಹಾಗೂ ಬಿಸಿಗಾಳಿ ಅದೇ ಮಂಜು ಆವರಿತ ಪ್ರದೇಶದ ಕಡೆಗೆ ನುಗ್ಗುತ್ತಿರುವುದು ವಿನಾಶಕ್ಕೆ ನಾಂದಿ ಹಾಡಿದೆ. ಧ್ರುವ ಪ್ರದೇಶದಲ್ಲಿ ಹರಡಿರುವ ಹಿಮ ಮತ್ತಷ್ಟು ಕರಗುವಂತೆ ಈ ಗಾಳಿ ಪ್ರಚೋದಿಸುತ್ತಿದೆ. ಹೀಗೆ ಆದರೆ ಮುಂದಿನ ದಿನಗಳಲ್ಲಿ ಸಮುದ್ರದ ಮಟ್ಟ ಏರಿಕೆಯಾಗುವ ಜೊತೆಗೆ, ಭೂಮಿಯ ತಾಪಮಾನ ಹಿಡಿತಕ್ಕೆ ಸಿಗದಷ್ಟು ಹೆಚ್ಚಬಹುದೆಂದು ವಿಜ್ಞಾನಿಗಳು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.












Click it and Unblock the Notifications