ಭಾರತದ ಯಾವ ರಾಜ್ಯಗಳು ಹಿರಿಯರಿಗೆ ಉತ್ತಮ ಗುಣಮಟ್ಟದ ಜೀವನ ನೀಡುತ್ತಿವೆ?
ನವದೆಹಲಿ, ಆಗಸ್ಟ್ 11: ದೇಶದಲ್ಲಿ ಹಿರಿಯ ನಾಗರಿಕರಿಗೆ ಅಥವಾ ವೃದ್ಧರಿಗೆ ಅತ್ಯುತ್ತಮ ಜೀವನ ಗುಣಮಟ್ಟ ಒದಗಿಸುತ್ತಿರುವ ರಾಜ್ಯಗಳು ಯಾವುವು? ದೇಶದ ಯಾವ ರಾಜ್ಯಗಳು ಹಿರಿಯರಿಗೆ ಬದುಕಲು ಪ್ರಶಸ್ತವಾಗಿವೆ?
ಭಾರತದಲ್ಲಿ ವೃದ್ಧರು ನಡೆಸುವ ಜೀವನದ ಗುಣಮಟ್ಟವನ್ನು ಅಳೆಯುವ ಕಾರ್ಯಸೂಚಿಯಲ್ಲಿ ಈ ಪ್ರಶ್ನೆಗಳಿಗೆ ಉತ್ತರ ದೊರೆತಿದೆ. ಬುಧವಾರ ಸರ್ಕಾರ ಈ ಸಂಬಂಧ ವರದಿ ಬಿಡುಗಡೆ ಮಾಡಿದೆ. ಪ್ರಧಾನಿ ಮೋದಿ ಆರ್ಥಿಕ ಸಲಹಾ ಸಮಿತಿಯ ಅಧ್ಯಕ್ಷ ಬಿಬೆಕ್ ದೆಬ್ರಾಯ್ ಬುಧವಾರ ವರದಿ ಬಿಡುಗಡೆ ಮಾಡಿದ್ದಾರೆ. ದೇಶದಲ್ಲಿ ಹಿರಿಯ ನಾಗರಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪ್ರತಿಬಿಂಬಿಸುವ ಗುರಿಯೊಂದಿಗೆ ಇನ್‌ಸ್ಟಿಟ್ಯೂಟ್ ಫಾರ್ ಕಾಂಪಿಟೆಟಿವ್‌ನೆಸ್ ಅಧ್ಯಯನ ನಡೆಸಿದ್ದು, ಈ ಅಧ್ಯಯನ ಹಿರಿಯ ನಾಗರಿಕರ ಕುರಿತು ಹಲವು ಅಂಶಗಳನ್ನು ಹೊರಹಾಕಿದೆ.
ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ವಯೋಮಾನದ ಪ್ರಾದೇಶಿಕ ಮಾದರಿಗಳನ್ನು ಅಧ್ಯಯನ ಒಳಗೊಂಡಿದೆ ಹಾಗೂ ಯಾವ ರಾಜ್ಯ ವಯಸ್ಸಾದವರನ್ನು ಹೆಚ್ಚು ಒಳಗೊಂಡಿದೆ ಎಂಬುದರ ಕುರಿತು ಮಾಹಿತಿ ನೀಡಿದೆ. ಮುಂದಿದೆ ವಿವರ...

ನಾಲ್ಕು ಅಂಶಗಳ ಮೇಲೆ ಹಿರಿಯರ ಜೀವನ ಗುಣಮಟ್ಟ ಸೂಚ್ಯಂಕ
ಹೆಚ್ಚು ವಯಸ್ಸಾದವರನ್ನು ಹೊಂದಿರುವ ರಾಜ್ಯಗಳು, ತುಲನಾತ್ಮಕವಾಗಿ ಹೆಚ್ಚು ವಯಸ್ಸಾದವರನ್ನು ಹೊಂದಿರುವ ರಾಜ್ಯಗಳು, ಈಶಾನ್ಯ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಈ ನಾಲ್ಕು ಅಂಶಗಳ ನೆಲೆಯಲ್ಲಿ ಅಧ್ಯಯನ ನಡೆದಿದೆ. ಆರ್ಥಿಕ ಯೋಗಕ್ಷೇಮ, ಸಾಮಾಜಿಕ ಯೋಗಕ್ಷೇಮ, ಆರೋಗ್ಯ ವ್ಯವಸ್ಥೆ ಹಾಗೂ ಆದಾಯ ಭದ್ರತೆ ಈ ನಾಲ್ಕು ಅಂಶಗಳ ಮೇಲೆ ಸೂಚ್ಯಂಕವನ್ನು ಗುರುತಿಸಲಾಗಿದೆ ಎಂಟು ಉಪ ಅಂಶಗಳನ್ನೂ ಅಧ್ಯಯನ ಒಳಗೊಂಡಿದೆ. ಆರ್ಥಿಕ ಸಬಲೀಕರಣ, ಶೈಕ್ಷಣಿಕ ಸಾಧನೆ, ಉದ್ಯೋಗ, ಸಾಮಾಜಿಕ ಸ್ಥಾನಮಾನ, ದೈಹಿಕ ಭದ್ರತೆ, ಆರೋಗ್ಯ ಮೂಲಸೌಕರ್ಯ, ಮಾನಸಿಕ ಯೋಗಕ್ಷೇಮ, ಸಾಮಾಜಿಕ ಭದ್ರತೆ ಹಾಗೂ ಇವೆಲ್ಲದಕ್ಕೂ ಪೂರಕವಾಗಿರುವ ಪರಿಸರ ಈ ಎಂಟು ಅಂಶಗಳ ಮೇಲೆ ಸೂಚ್ಯಂಕವನ್ನು ಗುರುತಿಸಲಾಗಿದೆ.

ಹಿರಿಯರ ಜೀವನ ಗುಣಮಟ್ಟದಲ್ಲಿ ಯಾವ್ಯಾವ ಸೂಚ್ಯಂಕ ಹೇಗಿದೆ?
ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಆದಾಯ ಭದ್ರತಾ ನಿಯತಾಂಕದಲ್ಲಿ ಕಳಪೆ ಗುಣಮಟ್ಟ ಹೊಂದಿವೆ ಎಂದು ಅಧ್ಯಯನ ತಿಳಿಸಿದೆ. ಆದಾಯ ಭದ್ರತೆಯಲ್ಲಿ ರಾಜ್ಯಗಳು ರಾಷ್ಟ್ರೀಯ ಸರಾಸರಿ 33.03ಕ್ಕಿಂತ ಕಡಿಮೆ ಅಂಕಗಳನ್ನು ಗಳಿಸಿವೆ. ಶೈಕ್ಷಣಿಕ ಸಾಧನೆ ಹಾಗೂ ಉದ್ಯೋಗದ ವಿಷಯದಲ್ಲಿ 21 ರಾಜ್ಯಗಳು ಕಡಿಮೆ ಕಾರ್ಯಕ್ಷಮತೆ ದಾಖಲಿಸಿವೆ. ಇದರಿಂದಾಗಿ ಆರ್ಥಿಕ ಯೋಗಕ್ಷೇಮ ಸೂಚ್ಯಂಕ ಕಳಪೆಯಾಗಿದೆ (44.7) ಎಂದು ತಿಳಿಸಿದೆ.

ಹಿರಿಯರಿಗೆ ಉತ್ತಮ ಜೀವನ ಗುಣಮಟ್ಟ ರೂಪಿಸಿರುವ 4 ರಾಜ್ಯಗಳಿವು...
ಎಲ್ಲಾ ರಾಜ್ಯಗಳ ಪೈಕಿ ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶ ವಯಸ್ಸಾದವರನ್ನು ಹೆಚ್ಚು ಹೊಂದಿರುವ ಪ್ರದೇಶವಾಗಿ ಗುರುತಿಸಿಕೊಂಡಿವೆ. ವಯಸ್ಸಾದವರನ್ನು ಹೆಚ್ಚು ಹೊಂದಿರುವ ಪೈಕಿ ರಾಜಸ್ಥಾನ 54.61 ಅಂಕಗಳನ್ನು ಪಡೆದಿದ್ದರೆ, ಹಿಮಾಚಲ ಪ್ರದೇಶ ತುಲನಾತ್ಮಕವಾಗಿ ಹೆಚ್ಚು ವಯಸ್ಸಾದವರನ್ನು ಹೊಂದಿದ ರಾಜ್ಯವಾಗಿ 61,04 ಅಂಕಗಳನ್ನು ಹೊಂದಿದೆ.
ಈಶಾನ್ಯ ರಾಜ್ಯಗಳ ಪೈಕಿ ಮಿಜೋರಾಂ 59.79 ಅಂಕಗಳನ್ನು ಪಡೆದುಕೊಂಡಿದ್ದರೆ, ಕೇಂದ್ರಾಡಳಿತ ಪ್ರದೇಶಗಳಲ್ಲಿ ಚಂಡೀಗಢ 63.78 ಅಂಕಗಳನ್ನು ಗಳಿಸಿದೆ.
ವೃದ್ಧರಿಗೆ ಆರೋಗ್ಯ ವ್ಯವಸ್ಥೆಯಲ್ಲಿ ದೇಶ ಮುಂದಿದೆ
ಭಾರತದಾದ್ಯಂತ ಆರೋಗ್ಯ ವ್ಯವಸ್ಥೆಯಲ್ಲಿ 66.97 ಅಂಕಗಳೊಂದಿಗೆ ಗರಿಷ್ಠ ಸರಾಸರಿ ಗಳಿಸಿದೆ. ಸಾಮಾಜಿಕ ಯೋಗಕ್ಷೇಮದಲ್ಲಿ 62.34 ಅಂಕಗಳನ್ನು ಗಳಿಸಿರುವುದಾಗಿ ಅಧ್ಯಯನ ತಿಳಿಸಿದೆ.
ಕೇಂದ್ರಾಡಳಿತ ಪ್ರದೇಶದಲ್ಲಿ ಜಮ್ಮು ಕಾಶ್ಮೀರ ಅತ್ಯಂತ ಕಡಿಮೆ, 46.16 ಅಂಕಗಳನ್ನು ಪಡೆದಿದೆ. ಈಶಾನ್ಯ ರಾಜ್ಯಗಳ ಪೈಕಿ ಅರುಣಾಚಲ ಪ್ರದೇಶ 46.16 ಅಂಕಗಳನ್ನು ಪಡೆದುಕೊಂಡಿದೆ. ತೆಲಂಗಾಣ ಹಾಗೂ ಗುಜರಾತ್ ಕ್ರಮವಾಗಿ 38.19 ಹಾಗೂ 49.00 ಕಡಿಮೆ ಅಂಕಗಳನ್ನು ಪಡೆದುಕೊಂಡಿವೆ.












Click it and Unblock the Notifications