ಕಾಫಿನಾಡು ಚಿಕ್ಕಮಗಳೂರಿನಲ್ಲಿ 12 ವರ್ಷಕೊಮ್ಮೆ ಅರಳುವ ನೀಲಿಕುರುಂಜಿ ಹೂವಿನ ವಿಶೇಷತೆ
ಚಿಕ್ಕಮಗಳೂರು, ಆಗಸ್ಟ್, 29: ಕಾಫಿನಾಡಿನಲ್ಲಿ ಅರಳಿ ನಿಂತಿರುವ ಅಪರೂಪದ ಹೂವೊಂದು ಇಲ್ಲಿನ ಪ್ರಕೃತಿ ಸೌಂದರ್ಯದ ಶ್ರೀಮಂತಿಕೆಯನ್ನು ಇಮ್ಮಡಿಗೊಳಿಸಿದೆ. ಇದು ನೋಡಲು ಸುಂದರವಾಗಿ ಕಾಣುತ್ತಿದ್ದು, ನೋಡುಗರನ್ನು ತನ್ನತ್ತ ಸೆಳೆಯುತ್ತಿದೆ. 12 ವರ್ಷಗಳಿಗೊಮ್ಮೆ ಅರಳುವ ಈ ಹೂವು ಕಾಫಿನಾಡಿನ ಸೌಂದರ್ಯದ ದಿಕ್ಕನ್ನೇ ಬದಲಿಸಲಿದೆ. ಅಪರೂಪದ ನೀಲಿ ಕುರುಂಜಿ ನೋಡುಗರ ಕಣ್ಮನ ಸೆಳೆಯುವುದರ ಜೊತೆಗೆ ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿದೆ.
ನೀಲಿ ಬಣ್ಣದಿಂದ ಕಂಗೊಳಿಸುತ್ತಿರುವ ಪರ್ವತಗಳು
ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಚಿಕ್ಕಮಗಳೂರಿನ ಗಿರಿ, ಪರ್ವತ ಶ್ರೇಣಿಗಳ ಸಾಲು ಇದೀಗ ಈ ಹೂವಿನ ಪ್ರಭಾವದಿಂದ ನೀಲಿ ರೂಪ ಪಡೆದುಕೊಳ್ಳುತ್ತಿವೆ. ಬೆಟ್ಟ, ಗುಡ್ಡಗಳೆಲ್ಲ ನೀಲಿಯಾಗಿ ಕಂಗೊಳಿಸುವ ಕಾಲ ಸನ್ನಿಹವಾಗಿದೆ. ರಸ್ತೆಯ ಪಕ್ಕದಲ್ಲಿ ಅರಳಿ ನಿಂತಿರುವ ಕುರುಂಜಿ ಹೂವು ಪ್ರವಾಸಿಗರನ್ನು ಆಕರ್ಷಿಸುತ್ತಲೇ ಇದೆ. ಪಶ್ಚಿಮಘಟ್ಟ ಅರಣ್ಯ ವ್ಯಾಪ್ತಿಯ ಸಾಲಿನಲ್ಲಿ ಮಾತ್ರ ಈ ಹೂವು ಹೆಚ್ಚಾಗಿ ಅರಳುತ್ತದೆ. ಕಾಫಿನಾಡಿನ ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಈ ಹೂವುಗಳ ಅರಳಿ ನಿಂತಿವೆ. ಮುಳ್ಳಯ್ಯನಗಿರಿ, ಮಲ್ಲಂದೂರಿನ ಕಲ್ಲುಬಂಡೆ ಗುಡ್ಡ ಸುತ್ತಲೂ ದಟ್ಟನೆಯದಾಗಿ ಅರಳಿ ನಿಂತಿವೆ.

12 ವರ್ಷಗಳಿಗೊಮ್ಮ ಅರಳುವ ಹೂವು
ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿ ಓಡಾಡುವ ಪ್ರವಾಸಿಗರನ್ನು ಈ ಹೂವುಗಳು ಸ್ವಾಗತಿಸುತ್ತಿವೆ. ಪಶ್ವಿಮಘಟ್ಟ ಸಂರಕ್ಷಿತ ಪ್ರದೇಶ ಆಗಿರುವುದರಿಂದ ಈ ಹೂವು ಇನ್ನೂ ಜೀವಂತವಾಗಿದೆ. ಪ್ರತಿ 12 ವರ್ಷಗಳಿಗೊಮ್ಮೆ ಕಾಫಿನಾಡನ್ನು ಭೂ ಲೋಕದ ಸ್ವರ್ಗವಾಗಿಸುತ್ತದೆ. ಈ ಹೂವಿಗೆ ಧಾರ್ಮಿಕವಾಗಿಯೂ ಇತಿಹಾಸವಿದೆ. ಸುಬ್ರಹ್ಮಣ್ಯ ವೆಳ್ಳಿನ ಮದುವೆ ಆಗುವಾಗ ಇದರ ಮಾಲೆಯನ್ನೇ ಬಳಸಿದ್ದರು. ಆಗಿನಿಂದ ಈ ಗುರ್ಗಿಯನ್ನು ಕೇರಳ, ತಮಿಳುನಾಡಿಗರು ಪ್ರೇಮದ ಸಂಕೇತವಾಗಿ ಪ್ರೇಮದ ಹೂವೂ ಅಂತಲೂ ಕರೆಯುತ್ತಾರೆ. ಆದ್ದರಿಂದ ಇದು ಅರಳಿದ ಕೂಡಲೇ ಮೊದಲು ಸುಬ್ರಹ್ಮಣ್ಯನಿಗೆ ಅರ್ಪಿಸುತ್ತಾರೆ. ಮಳೆ, ಗಾಳಿ, ನೀರು, ಬೆಳಕು ಹಾಗೂ ಪ್ರಕೃತಿಯ ಸಮತೋಲನವಾಗಿದ್ದಾಗ ಮಾತ್ರ ಈ ಹೂ ಅರಳಲಿದೆ. ಗುರ್ಗಿ ಹೂವಿನಲ್ಲಿ ನಾನಾ ವಿಧಗಳಿದ್ದು, 5, 7, 12, 14 ವರ್ಷಗಳಿಗೆ ಅರಳುವ ಪ್ರಬೇಧದ ಹೂವುಗಳೂ ಇವೆ. ಇದರ ಕಾಂಡದಲ್ಲಿ ಔಷಧಿಯ ಗುಣಗಳಿರುವುದರಿಂದ ನಾನಾ ಖಾಯಿಲೆಗೂ ಬಳಸುತ್ತಾರೆ.

ಬೆಟ್ಟ, ಗುಡ್ಡಗಳ ಸೌಂದರ್ಯ ಬದಲಿಸಿದ ಹೂವು
ಸದ್ಯಕ್ಕೆ ಕಾಫಿನಾಡಿನ ಗಿರಿಶಿಖರಗಳಲ್ಲಿ ಅರಳಿ ನಿಂತಿರುವ, ಮತ್ತಷ್ಟು ಹೂವುಗಳು ಅರಳುವ ಸನಿಹದಲ್ಲಿದ್ದು, ಬೆಟ್ಟ, ಗುಡ್ಡಗಳ ಸೌಂದರ್ಯವನ್ನು ಬದಲಿಸುತ್ತಿದೆ. ನೋಡುಗರ ಕಣ್ಮನದಲ್ಲಿ ಅಚ್ಚಳಿಯದೆ ಉಳಿದುಬಿಡುತ್ತದೆ. ಒಟ್ಟಾರೆ ಪ್ರಕೃತಿಯ ಒಡಲಾಳದಲ್ಲಿ ಇನ್ನೆಷ್ಟು ಸೌಂದರ್ಯದ ರಾಶಿ ಮನೆ ಮಾಡಿದೆಯೋ ಗೊತ್ತಿಲ್ಲ. ಕಾಫಿನಾಡಿನಲ್ಲಿ ಒಂದೊಂದು ಕಾಲದಲ್ಲೂ ಒಂದೊಂದು ರೀತಿಯ ಸೌಂದರ್ಯ ಮನೆ ಮಾಡಿರುತ್ತದೆ. ಈವರೆಗೆ ಹಸಿರಿನಿಂದ ಕಂಗೊಳಿಸುವ ಬೆಟ್ಟ, ಗುಡ್ಡಗಳನ್ನು ನೋಡಿದ್ದ ನಾವು, ನೀವು ಇನ್ಮುಂದೆ ನೀಲಿ ಬೆಟ್ಟಗಳನ್ನು ನೋಡಬೇಕು ಅಂದರೆ ಕಾಫಿನಾಡಿಗೆ ಬರಲೇಬೇಕು. ತಿಂಗಳುಗಳ ಕಾಲ ಅರಳಿ ನಿಲ್ಲುವ ಹೂವುಗಳು ಇಲ್ಲಿನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತಾ ಹೋಗುತ್ತವೆ.












Click it and Unblock the Notifications