ರಿಷಿ ಸುನಕ್ ಕೈತಪ್ಪುತ್ತಾ ಬ್ರಿಟನ್ ಪ್ರಧಾನಿ ಸ್ಥಾನ? ಸೋಮವಾರ ಫಲಿತಾಂಶ ಪ್ರಕಟ
ಬ್ರಿಟನ್‌ನ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ನಾಯಕನ ಸ್ಥಾನಕ್ಕೆ ಚುನಾವಣೆ ಆಗಿದ್ದು ಮತದಾನ ಮುಕ್ತಾಯವಾಗಿದೆ. ಸೋಮವಾರ ನಾಯಕನ ಘೋಷಣೆ ಆಗಲಿದೆ. ಆ ಮೂಲಕ ಬ್ರಿಟನ್‌ಗೆ ಹೊಸ ಪ್ರಧಾನಿ ಆಯ್ಕೆಯಾಗಲಿದ್ದಾರೆ. ಭಾರತ ಮೂಲದ ರಿಷಿ ಸುನಕ್ ಮತ್ತು ಲಿಜ್ ಟ್ರುಸ್ ಅವರಿಬ್ಬರಲ್ಲಿ ಒಬ್ಬರು ಮುಂದಿನ ಬ್ರಿಟನ್ ಪ್ರಧಾನಿ ಆಗಲಿದ್ದಾರೆ.
ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಕ್ ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಫೇವರಿಟ್ ಎನಿಸಿದ್ದರೂ ಚುನಾವಣೆಯಲ್ಲಿ ಸೋಲುವ ಸಾಧ್ಯತೆ ಹೆಚ್ಚಿರುವುದು ಸಮೀಕ್ಷೆಗಳು ಸೂಚಿಸಿವೆ.
ಸಮೀಕ್ಷೆಗಳ ಪ್ರಕಾರ ರಿಷಿ ಸುನಕ್ ಕನ್ಸರ್ವೇಟಿವ್ ಪಕ್ಷದ ನಾಯಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮೊದಲ ಕೆಲ ಸುತ್ತುಗಳಲ್ಲಿ ಮುನ್ನಡೆ ಹೊಂದಿದ್ದರೂ ನಂತರದ ಸುತ್ತುಗಳಲ್ಲಿ ಭಾರೀ ಹಿನ್ನಡೆ ಹೊಂದಿದರಂತೆ. ಲಿಜ್ ಟ್ರುಸ್ ಗೆಲುವಿನ ಸಾಧ್ಯತೆ ಶೇ. 90ಕ್ಕಿಂತ ಹೆಚ್ಚು ಎಂದು ಅಂದಾಜು ಮಾಡಿರುವುದು ಇಲ್ಲಿ ಗಮನಾರ್ಹ. ರಿಷಿ ಗೆಲುವಿನ ಸಾಧ್ಯತೆ ಶೇ. 10ಕ್ಕಿಂತಲೂ ಕಡಿಮೆ ಎನ್ನಲಾಗಿದೆ.
ಆದರೂ ಕೆಲವರ ಪ್ರಕಾರ ರಿಷಿ ಸುನಕ್ ಸೋತರೂ ತೀರಾ ಹೀನಾಯವಾಗಿ ಸೋಲೊಪ್ಪುವ ಸಾಧ್ಯತೆ ಇಲ್ಲ. ತೀವ್ರ ಪೈಪೋಟಿಯನ್ನಂತೂ ನೀಡುತ್ತಾರೆ. ಅವರು ಗೆದ್ದರೂ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತದೆ. ಆದರೆ, ಬಹುತೇಕ ಸಮೀಕ್ಷೆಗಳು ಮಾತ್ರ ಲಿಜ್ ಟ್ರುಸ್ ಗೆಲುವನ್ನೇ ಸೂಚಿಸುತ್ತಿವೆ.
ರಿಷಿ ಸುನಕ್ ಬ್ರಿಟನ್‌ನ ಮಾಜಿ ಹಣಕಾಸು ಸಚಿವರಾದರೆ, ಲಿಜ್ ಟ್ರುಸ್ ಹಾಲಿ ವಿದೇಶಾಂಗ ಸಚಿವೆಯಾಗಿದ್ದಾರೆ. ಅಷ್ಟಕ್ಕೂ ರಿಷಿ ಸುನಕ್ ಸೋಲು ನಿರೀಕ್ಷಿತವಾ? ಅವರೊಂದು ವೇಳೆ ಸೋತರೆ, ಅದಕ್ಕೆ ಏನು ಕಾರಣ?

ಮೊದಲ ಹಂತದಲ್ಲಿ ಮುಂದಿದ್ದ ರಿಷಿ
ಬೋರಿಸ್ ಜಾನ್ಸನ್ ರಾಜೀನಾಮೆಯಿಂದ ತೆರವಾದ ಪ್ರಧಾನಿ ಸ್ಥಾನಕ್ಕೆ ಏಳೆಂಟು ಜನರು ಸ್ಪರ್ಧೆ ಮಾಡಿದ್ದವರು. ಅವರ ಪೈಕಿ ರಿಷಿ ಸುನಕ್ ಮತ್ತು ಲಿಜ್ ಟ್ರುಸ್ ಅವರಿಬ್ಬರು ಅಂತಿಮವಾಗಿ ಕಣದಲ್ಲಿ ಉಳಿದುಕೊಂಡಿದ್ದರು.
ಆಡಳಿತಾರೂಢ ಪಕ್ಷದ ನಾಯಕರಾದವರು ಪ್ರಧಾನಿ ಹುದ್ದೆ ಪಡೆಯುತ್ತಾರೆ. ಅಂತೆಯೇ, ಈಗ ಕನ್ಸರ್ವೇಟಿವ್ ಪಕ್ಷದ ನಾಯಕ ಸ್ಥಾನಕ್ಕೆ ಚುನಾವಣೆ ನಡೆದಿದೆ. ಇದು ಎರಡು ಹಂತದಲ್ಲಿ ನಡೆದ ಚುನಾವಣೆ ಆಗಿದೆ. ಮೊದಲ ಹಂತದಲ್ಲಿ ಕನ್ಸರ್ವೇಟಿವ್ ಪಕ್ಷದ ಜನಪ್ರತಿನಿಧಿಗಳು ಮತ ಚಲಾಯಿಸಿದ್ದರು. ಏಳೆಂಟು ಜನರು ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದರು. ಒಂದೊಂದೇ ಸುತ್ತಿನ ಮತದಾನದಲ್ಲಿ ಒಬ್ಬೊಬ್ಬರೇ ಅಭ್ಯರ್ಥಿಗಳು ಹೊರಬೀಳುತ್ತಾ ಹೋಗಿದ್ದರು. ಅಂತಿಮವಾಗಿ ರಿಷಿ ಸುನಕ್ ಮತ್ತು ಲಿಜ್ ಟ್ರುಸ್ ಮಾತ್ರವೇ ಉಳಿದುಕೊಂಡರು.
ಮೊದಲ ಹಂತದ ಎಲ್ಲಾ ಸುತ್ತುಗಳಲ್ಲೂ ರಿಷಿ ಸುನಕ್ ಮೊದಲ ಸ್ಥಾನ ಪಡೆದದ್ದು ವಿಶೇಷ. ಹೀಗಾಗಿ, ರಿಷಿ ಸುನಕ್ ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ನೆಚ್ಚಿನ ಅಭ್ಯರ್ಥಿ ಎನಿಸಿದ್ದರು. ಆದರೆ, ಎರಡನೇ ಹಂತದ ಚುನಾವಣೆಯ ರೂಪವೇ ಬೇರೆ ಆಗಿದೆ.
ಎರಡನೇ ಹಂತದಲ್ಲಿ ಕನ್ಸರ್ವೇಟಿವ್ ಪಕ್ಷದ ಎಲ್ಲಾ ಸಾಮಾನ್ಯ ಸದಸ್ಯರೂ ಮತದಾನದ ಹಕ್ಕು ಹೊಂದಿದ್ದಾರೆ. ಈ ಪಟ್ಟದ ಒಟ್ಟು 1.6 ಲಕ್ಷ ಸದಸ್ಯರಿದ್ದಾರೆ. ರಿಷಿ ಸುನಕ್ ಮತ್ತು ಲಿಜ್ ಟ್ರುಸ್ ಅವರು ಕನ್ಸರ್ವೇಟಿವ್ ಸದಸ್ಯರನ್ನು ಒಲಿಸಿಕೊಳ್ಳಲು ವಿವಿಧ ಕಡೆ ಚರ್ಚಾ ಕಾರ್ಯಕ್ರಮಗಳನ್ನು ನಡೆಸಿದ್ದರು, ತಮ್ಮ ವಿಚಾರಧಾರೆಗಳನ್ನು ಪ್ರಸ್ತುಪಡಿಸಿದ್ದರು. ಮೂಲಗಳ ಪ್ರಕಾರ, ಕನ್ಸರ್ವೇಟಿವ್ ಪಕ್ಷದ ಸಾಮಾನ್ಯ ಸದಸ್ಯರಿಗೆ ರಿಷಿ ಸುನಕ್ ಬಗ್ಗೆ ಅಸಮಾಧಾನ ಇದೆ. ಹೀಗಾಗಿ, ಮೊದಲ ಹಂತದ ಚುನಾವಣೆ ಮುಗಿದಾಗಲೇ ತಜ್ಞರು ರಿಷಿ ಸುನಕ್ ಎರಡನೇ ಹಂತದಲ್ಲಿ ಗೆಲ್ಲುವುದು ಕಷ್ಟ ಎಂದು ಊಹಿಸಿದ್ದರು. ಅದು ಬಹುತೇಕ ನಿಜವಾಗುವಂತೆ ತೋರುತ್ತಿದೆ.

ರಿಷಿ ಸುನಕ್ ಬಗ್ಗೆ ಯಾಕೆ ಅಸಮಾಧಾನ?
ರಿಷಿ ಸುನಕ್ ಬಹಳ ಕ್ಷಿಪ್ರ ಗತಿಯಲ್ಲಿ ರಾಜಕೀಯದಲ್ಲಿ ಉನ್ನತ ಹಂತಕ್ಕೆ ಏರಿದವರು. ಹೆಚ್ಚು ರಾಜಕೀಯ ಅನುಭವ ಇಲ್ಲದಿದ್ದರೂ ಸಚಿವರಾಗಿ ಗಮನ ಸೆಳೆದವರು. ಹಣಕಾಸು ಸಚಿವರಾಗಿ ಕೋವಿಡ್ ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಿದ್ದವರು. ಹೆಚ್ಚು ಓದಿದವರು, ವಾಗ್‌ಚಾತುರ್ಯ ಹೊಂದಿದವರು, ಜಾಣ್ಮೆ ಇರುವವರು... ಇಷ್ಟೆಲ್ಲಾ ಇದ್ದರೂ ರಿಷಿ ಸುನಕ್ ಅವರ ಜನಪ್ರಿಯತೆ ಕಳೆದ ಎರಡು ವರ್ಷಗಳಿಂದ ಕುಸಿದಿರುವುದು ಬ್ರಿಟನ್ ರಾಜಕೀಯ ವಲಯದಲ್ಲಿ ಮೇಲ್ನೋಟಕ್ಕೆ ತೋರುತ್ತದೆ.

ಪ್ರಧಾನಿಗೆ ವಂಚಿಸಿದ ಆಪಾದನೆ
ವಿವಿಧ ವಿವಾದಗಳಿಂದಾಗಿ ಬೋರಿಸ್ ಜಾನ್ಸನ್ ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಅವರ ಸಚಿವ ಸಂಪುಟದ ಸದಸ್ಯರೇ ಸಾಲುಸಾಲಾಗಿ ರಾಜೀನಾಮೆ ನೀಡಿದ ಪರಿಣಾಮವಾಗಿ ಬೋರಿಸ್ ಜಾನ್ಸನ್ ಬೇಗನೇ ಪ್ರಧಾನಿ ಹುದ್ದೆ ತ್ಯಜಿಸಬೇಕಾಯಿತು. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೊದಲಿಗರಲ್ಲಿ ರಿಷಿ ಸುನಕ್ ಒಬ್ಬರು. ಹಣಕಾಸು ಸಚಿವ ಸ್ಥಾನಕ್ಕೆ ಇವರು ರಾಜೀನಾಮೆ ಕೊಟ್ಟ ಬಳಿಕ ಬೋರಿಸ್ ಸಂಪುಟದಲ್ಲಿ ರಾಜೀನಾಮೆ ಪರ್ವ ಶುರುವಾಯಿತು. ಬೋರಿಸ್ ಜಾನ್ಸನ್‌ಗೆ ಆಪ್ತರಾಗಿದ್ದ ರಿಷಿ ಸುನಕ್ ಈ ರೀತಿ ನಿರ್ಧಾರ ಕೈಗೊಂಡಿದ್ದು ಬಹಳ ಮಂದಿಗೆ ಅಪಥ್ಯವೆನಿಸಿತ್ತು. ಯಾಕೆಂದರೆ ಬೋರಿಸ್ ಜಾನ್ಸನ್ ಬಹಳ ಜನಪ್ರಿಯತೆಯಲ್ಲಿ ಇದ್ದವರು. ಅವರ ಬೆನ್ನಿಗೆ ರಿಷಿ ಸುನಕ್ ಚೂರಿ ಹಾಕಿದರೆಂಬ ಭಾವನೆ ಕನ್ಸರ್ವೇಟಿವ್ ಪಕ್ಷದ ಬೆಂಬಲಿಗರಲ್ಲಿ ಇದೆ.
ಅಲ್ಲದೇ, ರಿಷಿ ಸುನಕ್ ರಾಜೀನಾಮೆ ನೀಡಿದ ಬಳಿಕ ರೆಡಿ ಫಾರ್ ರಿಷಿ ಡಾಟ್ ಕಾಮ್ ವೆಬ್‌ಸೈಟ್‌ನಲ್ಲಿ ತಮ್ಮ ಸಂದೇಶ ಇರುವ ವಿಡಿಯೋ ಪೋಸ್ಟ್ ಮಾಡಿದ್ದರು. ಆ ವೆಬ್‌ಸೈಟ್ ಇತ್ತೀಚೆಗೆ ನೊಂದಣಿಯಾಗಿರುವುದು ತಿಳಿದುಬಂದಿದೆ. ಅಂದರೆ ಪ್ರಧಾನಿ ಸ್ಥಾನಕ್ಕೆ ಏರಬೇಕೆಂಬ ಗುರಿ ರಿಷಿ ಸುನಕ್‌ಗೆ ಇತ್ತು. ಅದೇ ಉದ್ದೇಶಕ್ಕೆ ಅವರು ಬೋರಿಸ್ ಜಾನ್ಸನ್ ರಾಜೀನಾಮೆಗೆ ಕಾರಣವಾಗುವಂತೆ ಮಾಡಿದರು ಎಂಬ ಅಭಿಪ್ರಾಯ ದಟ್ಟವಾಗಿ ಹಬ್ಬಿದೆ. ಇದು ರಿಷಿ ಸುನಕ್ ಹಿನ್ನಡೆಗೆ ಪ್ರಮುಖ ಕಾರಣ ಎನ್ನಲಾಗಿದೆ.

ತೆರಿಗೆ ವಿಚಾರ
ರಿಷಿ ಸುನಕ್ ಅವರಿಗೆ ಹೆಚ್ಚು ಹೊಡೆತ ಕೊಟ್ಟ ಸಂಗತಿಯಲ್ಲಿ ತೆರಿಗೆ ವಿಚಾರ ಒಂದು. ಹಣಕಾಸು ಸಚಿವರಾಗಿ ಅವರು ಬಹಳಷ್ಟು ತೆರಿಗೆ ಹೆಚ್ಚಿಸಿದ್ದರು. ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸಲು ದೇಶಕ್ಕೆ ಹಣದ ಸಂಪನ್ಮೂಲ ಅಗತ್ಯವಿದ್ದ ಹಿನ್ನೆಲೆಯಲ್ಲಿ ಅವರು ತೆರಿಗೆ ಹೆಚ್ಚಿಸಬೇಕಾಯಿತಾದರೂ ಸಂಕಷ್ಟಪೀಡಿತ ಜನಸಾಮಾನ್ಯರಿಗೆ ಬಾರಿ ಬಾರಿ ತೆರಿಗೆ ಬರೆ ಹಾಕಿದ್ದು ಮಾತ್ರ ಕಟು ಟೀಕೆಗೆ ಒಳಗಾಗಿದೆ.
ಬ್ರಿಟನ್ ದೇಶದಲ್ಲಿ ಕಳೆದ ಏಳೆಂಟು ದಶಕದಲ್ಲೇ ಗರಿಷ್ಠ ಎನ್ನುವ ಮಟ್ಟಕ್ಕೆ ತೆರಿಗೆ ಏರಿಕೆ ಮಾಡಲಾಗಿದೆ. ಮಿಸ್ಟರ್ ಟ್ಯಾಕ್ಸ್ ಮ್ಯಾನ್ ಎಂದು ಕರೆಸಿಕೊಳ್ಳುವ ಮಟ್ಟಿಗೆ ರಿಷಿ ಸುನಕ್ ಅಪಖ್ಯಾತರಾಗಿದ್ದಾರೆ.

ಸಿರಿವಂತಿಕೆ
ರಿಷಿ ಸುನಕ್ ಕುಟುಂಬದ ಶ್ರೀಮಂತಿಕೆ ಬ್ರಿಟನ್ನಿಗರ ಕಣ್ಣು ಕುಕ್ಕಿದೆ. ಬ್ರಿಟನ್‌ನ ಜನಪ್ರತಿನಿಧಿಗಳ ಪೈಕಿ ರಿಷಿ ಅತ್ಯಂತ ಶ್ರೀಮಂತ ಎನಿಸಿದ್ದಾರೆ. ಬ್ರಿಟನ್ ದೇಶದ ಶ್ರೀಮಂತರ ಪಟ್ಟಿಯಲ್ಲಿ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಇದ್ದಾರೆ.
ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರ ಮಗಳಾದ ಅಕ್ಷತಾ ಮೂರ್ತಿ ಬ್ರಿಟನ್ ರಾಣಿಗಿಂತಲೂ ಹೆಚ್ಚು ಶ್ರೀಮಂತೆ ಎಂದು ಹೇಳಲಾಗುತ್ತದೆ. ಅಕ್ಷತಾ ಮೂರ್ತಿಯನ್ನು ಮದುವೆಯಾಗುವ ಮುಂಚೆಯೇ ರಿಷಿ ಸುನಕ್ ಕೋಟ್ಯಧಿಪತಿಯಾಗಿದ್ದರು.
ಸಾಮಾನ್ಯ ವಲಸಿಗ ಕುಟುಂಬದಿಂದ ಬಂದವನು ಎಂದು ರಿಷಿ ಸುನಕ್ ಹೇಳಿಕೊಂಡರೂ ಅವರು ಓದಿದ ಶಾಲಾ ಕಾಲೇಜುಗಳು ಅತ್ಯಂತ ಪ್ರತಿಷ್ಠಿತ ಎನಿಸಿರುವಂಥವು. ಅವರು ಓದಿದ ವಿಂಚೆಸ್ಟರ್ ಕಾಲೇಜಿನಲ್ಲಿ ಶಿಕ್ಷಣ ವೆಚ್ಚ ಬರೋಬ್ಬರಿ 45,934 ಪೌಂಡ್ (ಸುಮಾರು 42 ಲಕ್ಷ ರೂಪಾಯಿ). ನಂತರ ಅವರು ಆಕ್ಸ್‌ಫರ್ಡ್ ಯೂನಿವರ್ಸಿಟಿಯಲ್ಲಿ ಉನ್ನತ ಶಿಕ್ಷಣ ಅಭ್ಯಸಿಸಿದ್ದಾರೆ. ಅಮೆರಿಕದ ಸ್ಟಾನ್‌ಫೋರ್ಡ್ ಯೂನಿವರ್ಸಿಟಿಯಲ್ಲಿ ಎಂಬಿಎ ಪಡೆದಿದ್ದಾರೆ. ಇಷ್ಟೆಲ್ಲಾ ಓದಲು ಉಳ್ಳವರಿಗೆ ಮಾತ್ರ ಸಾಧ್ಯ. ರಿಷಿ ಸುನಕ್ ಸಾಮಾನ್ಯ ಕುಟುಂಬದವರೆಂಬುದೆಲ್ಲಾ ಸುಳ್ಳು ಎಂಬ ಅಭಿಪ್ರಾಯ ಇದೆ.
ಹಾಗೆಯೇ, ರಿಷಿ ಸುನಕ್ ಸಾಮಾನ್ಯ ಜನರೊಂದಿಗೆ ಬೆರೆಯುವುದಿಲ್ಲ. ಅವರದ್ದೇನಿದ್ದರೂ ಲೆವೆಲ್ ನೋಡುವ ಜಾಯಮಾನ. ಜನಸಾಮಾನ್ಯರ ಕಷ್ಟಗಳು ಅವರಿಗೆ ಗೊತ್ತಿಲ್ಲ. ಹೀಗಾಗಿ, ಎಗ್ಗಿಲ್ಲದೇ ತೆರಿಗೆ ಹಾಕುತ್ತಾರೆ ಎಂಬ ಮಾತುಗಳು ದಟ್ಟವಾಗಿ ಹರಿದಾಡುತ್ತಿವೆ. ಇವೆಲ್ಲಾ ವಿಚಾರಗಳು ರಿಷಿ ಸುನಕ್ ಅವರಿಗೆ ಎರಡನೇ ಹಂತದ ಚುನಾವಣೆಯಲ್ಲಿ ಹಿನ್ನಡೆಯಾಗಿರಬಹುದು ಎಂದು ಅಂದಾಜಿಸಲಾಗಿದೆ.
ಅತ್ತ, ಲಿಜ್ ಟ್ರುಸ್ ವೈಯಕ್ತಿಕವಾಗಿ ಯಾರಿಗೂ ಫೇವರಿಟ್ ಆಗಿಲ್ಲ. ವಿದೇಶಾಂಗ ಸಚಿವೆಯಾಗಿ ಅವರು ಮಾಡಿದ ಕೆಲಸ ಅಷ್ಟಕಷ್ಟೇ. ಆದರೆ, ರಿಷಿ ಸುನಕ್ ವಿರೋಧಿ ಮತಗಳ ಸಹಾಯದಿಂದ ಅವರು ಗೆಲುವು ಸಾಧಿಸಬಹುದು ಅಷ್ಟೇ. ರಿಷಿ ಸುನಕ್ ಎದುರು ಲಿಜ್ ಟ್ರುಸ್ ಜಾಗದಲ್ಲಿ ಬೇರೆ ಯಾರೇ ಅಭ್ಯರ್ಥಿ ಅಗಿದ್ದರೂ ಗೆಲುವು ಸಾಧಿಸುತ್ತಿದ್ದರು ಎಂದು ತಜ್ಞರು ಹೇಳುತ್ತಾರೆ. ನಾಳೆ, ಸೋಮವಾರ ಫಲಿತಾಂಶ ಪ್ರಕಟವಾಗುತ್ತಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications