ಶಿಂಜೊ ಅಬೆ: ಉದಾರಿಗಳ ಪಕ್ಷದೊಳಗೊಬ್ಬ ರಾಷ್ಟ್ರೀಯವಾದಿ
ಜಪಾನ್ ದೇಶದ ಮಾಜಿ ಪ್ರಧಾನಿ ಶಿಂಜೊ ಅಬೆ ಜುಲೈ 8ರಂದು ಹತ್ಯೆಯಾಗಿದ್ದಾರೆ. ಚುನಾವಣಾ ಪ್ರಚಾರದ ವೇಳೆ ಅವರನ್ನು ಕೊಲ್ಲಲಾಗಿದೆ. 41 ವರ್ಷದ ಯಮಾಗಾಮಿ ಟೆಟ್ಸುಯಾ ಹಾರಿಸಿದ ಎರಡು ಗುಂಡಿಗೆ ಕುಸಿದುಬಿದ್ದಿದ್ದ ಅಬೆ ಕೆಲ ಹೊತ್ತಿನ ಬಳಿಕ ಆಸ್ಪತ್ರೆಯಲ್ಲಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟರೆಂದು ಹೇಳಲಾಗಿದೆ. ಪೊಲೀಸರು ಆರೋಪಿ ಯಮಾಗಾಮಿಯನ್ನು ಬಂಧಿಸಿದ್ದಾರೆ.
ಶಿಂಜೊ ಅಬೆ ಎರಡು ಬಾರಿ ಪ್ರಧಾನಿಯಾಗಿದ್ದರು. 2006-07 ಮತ್ತು 2012-2020 ರ ಅವಧಿಯಲ್ಲಿ ಜಪಾನ್ ಪಿಎಂ ಆಗಿದ್ದರು. ಜಪಾನ್ ಇತಿಹಾಸದಲ್ಲಿ ಅತಿ ಹೆಚ್ಚು ಕಾಲ ಪ್ರಧಾನಿ ಆದ ದಾಖಲೆ ಶಿಂಜೊ ಅಬೆಯದ್ದು.
ಜಪಾನ್ ದೇಶದಲ್ಲಿ ಮಾಜಿ ಪ್ರಧಾನಿಗಳ ಹತ್ಯೆಯಾಗುವ ಪರಂಪರೆಯೇ ಸೃಷ್ಟಿಯಾದಂತಾಗಿದೆ. ಶಿಂಜೊ ಅಬೆ ಸೇರಿ ಐದು ಮಾಜಿ ಪ್ರಧಾನಿಗಳು ಜಪಾನ್‌ನಲ್ಲಿ ಹತ್ಯೆಯಾಗಿದ್ದಾರೆ.
ಜಪಾನ್ ದೇಶ ಸಂಕಷ್ಟದಲ್ಲಿರುವಾಗ ಪ್ರಧಾನಿಯಾದ ಶಿಂಜೊ ಅಬೆ ಸಾಕಷ್ಟು ಬಿಗಿ ಕ್ರಮಗಳ ಮೂಲಕ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ತರುವಲ್ಲಿ ಯಶಸ್ವಿಯಾಗಿದ್ದರು. 67 ವರ್ಷದ ಶಿಂಜೊ ಅಬೆ ಅಲ್ಸರ್ ಕಾಯಿಲೆಯ ಕಾರಣಕ್ಕೆ ಅಧಿಕಾರದಿಂದ ಕೆಳಗಿಳಿದಿದ್ದರು. 2007ರಲ್ಲೂ ಅವರು ಇದೇ ಕಾಯಿಲೆ ಕಾರಣಕ್ಕೆ ಅಧಿಕಾರ ಬಿಟ್ಟುಕೊಟ್ಟಿದ್ದರು.
ಜಪಾನ್ ದೇಶದ ಹೌಸ್ ಆಫ್ ಕೌನ್ಸಿಲರ್ಸ್ (ಮೇಲ್ಮನೆ- ರಾಜ್ಯಸಭೆ) ಚುನಾವಣೆಗೆ ಎರಡು ದಿನ ಇರುವಂತೆ ಈ ದಾರುಣ ಘಟನೆ ಸಂಭವಿಸಿದೆ. ಯಾಕಾಗಿ ಈ ಹತ್ಯೆ ಆಯಿತು ಎಂಬುದು ಗೊತ್ತಾಗಿಲ್ಲ. ಆದರೆ, ಶಿಂಜೊ ಅಬೆಯ ಜೀವನ ಮತ್ತು ವ್ಯಕ್ತಿತ್ವ ವಿಶೇಷವಾದುದು.

ಉದಾರಿಗಳ ಮಧ್ಯೆ ರಾಷ್ಟ್ರೀಯವಾದಿ
ಶಿಂಜೊ ಅಬೆ ಲಿಬರಲ್ ಡೆಮಾಕ್ರಟಿಕ್ ಪಕ್ಷದವರು. ನಮ್ಮ ಭಾರತದಲ್ಲಿ ಹಲವು ದಶಕಗಳ ಕಾಲ ಕಾಂಗ್ರೆಸ್ ಪಕ್ಷ ಪ್ರಾಬಲ್ಯ ಸಾಧಿಸಿರುವ ರೀತಿಯಲ್ಲಿ ಜಪಾನ್ ದೇಶದಲ್ಲಿ ಲಿಬರಲ್ ಡೆಮಾಕ್ರಟಿಕ್ ಪಾರ್ಟಿಯ ಅಧಿಪತ್ಯ ನಡೆದಿದೆ.
ಎಲ್‌ಡಿಪಿಯದ್ದು ಉದಾರವಾದಿ ಚಿಂತನೆ ಇರುವ ಪಕ್ಷ. ಆ ಪಕ್ಷಕ್ಕೆ ಶಿಂಜೊ ಅಬೆ ಎರಡು ಬಾರಿ ಅಧ್ಯಕ್ಷರಾದವರು. ಆದರೆ, ಶಿಂಜೊ ಅಬೆಯನ್ನು ಬಲಪಂಥೀಯ ಚಿಂತನೆಯ ನಾಯಕ ಎಂದು ಪರಿಗಣಿಸಲಾಗಿದೆ. ಇವರ ರಾಷ್ಟ್ರೀಯವಾದದ ಬಗ್ಗೆ ಅವರ ಸ್ವಂತ ಪಕ್ಷದಲ್ಲೇ ಅಸಮಾಧಾನ ಇತ್ತು. ಎಡಪಂಥ ಚಿಂತನೆಯ ಬಣಗಳು ಅಸಮಾಧಾನ ಹೊಂದಿದ್ದವು. ಇವರ ಆಡಳಿತದ ಅವಧಿಯಲ್ಲಿ ನೆರೆಯ ಚೀನಾ ಮತ್ತು ಸೌತ್ ಕೊರಿಯಾ ದೇಶಗಳೂ ಅತಂಕದಲ್ಲಿದ್ದವು. ಯಾಕೆಂದರೆ ಜಪಾನ್ ದೇಶದ ಆತ್ಮರಕ್ಷಣೆಯ ಕಾನೂನನ್ನು ಬದಲಿಸಲು ಹೊರಟಿದ್ದರು. ಈ ಕಾಯ್ದೆ ಜಾರಿಯಾಗಿದ್ದರೆ ಜಪಾನ್ ಹಾಗು ಅದರ ಮಿತ್ರ ರಾಷ್ಟ್ರಗಳ ಮೇಲೆ ಯಾರಾದರೂ ದಾಳಿ ನಡೆಸಿದ್ದೇ ಆದಲ್ಲಿ ಆತ್ಮರಕ್ಷಣೆಯಾಗಿ ಆ ಶತ್ರು ನಾಡಿನ ಮೇಲೆ ಆಕ್ರಮಣ ಮಾಡಲು ಅವಕಾಶ ಇರುತ್ತಿತ್ತು. ಇದನ್ನು ನೆರೆಯ ದೇಶಗಳಾದ ಕೊರಿಯಾ ಮತ್ತು ಚೀನಾ ಪ್ರಬಲವಾಗಿ ವಿರೋಧಿಸಿದ್ದವು.
ಎರಡನೇ ವಿಶ್ವ ಮಹಾಯುದ್ಧದಲ್ಲಿ ಅಮೆರಿಕ ಹಾಕಿದ ಎರಡು ಅಣು ಬಾಂಬ್‌ಗಳಿಂದ ಜಪಾನ್ ಬಹುತೇಕ ನಾಮಾವಶೇಷವಾಗಿತ್ತು. ಅಲ್ಲಿಂದ ಅದು ಫೀನಿಕ್ಸ್‌ನಂತೆ ಚೇತರಿಸಿಕೊಳ್ಳಲು ಅಮೆರಿಕವೇ ಕಾರಣ. ಯುದ್ಧದ ಬಳಿಕ ಜಪಾನ್ ದೇಶಕ್ಕೆ ಸಂವಿಧಾನ ರಚಿಸಿಕೊಟ್ಟಿದ್ದು ಅಮೆರಿಕವೇ. ಜಪಾನ್‌ನಲ್ಲಿ ಪರೋಕ್ಷವಾಗಿ ಅಮೆರಿಕವೇ ಆಡಳಿತ ನಡೆಸುತ್ತಿತ್ತೂ ಎನ್ನಬಹುದು. ಇಂಥ ಸ್ಥಿತಿಯಲ್ಲಿ ಶಿಂಜೊ ಅಬೆ ಜಪಾನ್ ದೇಶದ ಸಂವಿಧಾನ ಬದಲಿಸುವ ಮಾತುಗಳನ್ನು ಆಡುತ್ತಿದ್ದರು.

ಪ್ರತಿಷ್ಠಿತರ ಕುಟುಂಬದವರು
ಶಿಂಜೊ ಅಬೆ ಪ್ರತಿಷ್ಠಿತ ರಾಜಕೀಯ ಕುಟುಂಬದಿಂದ ಬಂದವರಾದ್ದರಿಂದ ಅಧಿಕಾರಕ್ಕೇರುವುದು ಕಷ್ಟವಾಗಲಿಲ್ಲ. ಇವರ ತಾತ ನೊಬುಸುಕೆ ಕಿಶಿ ಪ್ರಧಾನಿಯಾಗಿದ್ದವರು. ಇವರ ತಂದೆ ಶಿಂಟಾರೊ ಅಬೆ ಮಾಜಿ ವಿದೇಶಾಂಗ ಸಚಿವರು.
1954, ಸೆಪ್ಟೆಂಬರ್ 21ರಂದು ಟೋಕಿಯೋದಲ್ಲಿ ಜನಿಸಿದ ಶಿಂಜೊ ಅಬೆ 1993ರಲ್ಲಿ ಮೊದಲ ಬಾರಿಗೆ ಸಂಸದರಾಗಿ ಚುನಾಯಿತರಾದರು. ನಂತರ ಎಲ್‌ಡಿಪಿ ಪಕ್ಷದ ಸಂಘಟನೆಯೊಳಗೆ ವಿವಿಧ ಸ್ತರಗಳಲ್ಲಿ ಕೆಲಸ ಮಾಡಿದರು. 2005-06ರಲ್ಲಿ ಜುನಿಚಿರೋ ಕೋಯಿಜುಮಿ ನಾಯಕತ್ವದ ಅಡಿ ಎಲ್‌ಡಿಪಿಯ ಮುಖ್ಯ ಕ್ಯಾಬಿನೆಟ್ ಸೆಕ್ರೆಟರಿಯಾಗಿದ್ದರು.

ನಾಲ್ಕು ಬಾರಿ ಪ್ರಧಾನಿ
2006ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾದರು. ಯುದ್ಧದ ಬಳಿಕ ಅತಿ ಕಿರಿಯ ವಯಸ್ಸಿನ ಜಪಾನ್ ಪ್ರಧಾನಿ ಎನಿಸಿದರು. ಆದರೆ ಅವರ ಅವಧಿಯಲ್ಲಿ ಮೇಲ್ಮನೆಗೆ ನಡೆದ ಚುನಾವಣೆಯಲ್ಲಿ ಎಲ್‌ಡಿಪಿ ಹೀನಾಯ ಸೋಲನುಭವಿಸಿತು. ಅನಾರೋಗ್ಯದ ಕಾರಣವೊಡ್ಡಿ ರಾಜೀನಾಮೆ ನೀಡಿದರು. ವಾಸ್ತವದಲ್ಲಿ ಚುನಾವಣೆಯ ಸೋಲಿನಿಂದಾಗಿ ಅವರು ರಾಜೀನಾಮೆ ನೀಡಿದ್ದರೆನ್ನಲಾಗಿದೆ.
2012ರಲ್ಲಿ ಅವರು ಮತ್ತೆ ಅಖಾಡಕ್ಕೆ ಇಳಿದು ಪ್ರಧಾನಿಯಾದರು. 2014 ಮತ್ತು 2017ರಲ್ಲೂ ಅವರೇ ಪ್ರಧಾನಿಯಾಗಿ ಮುಂದುವರಿದರು. ಈ ಮೂಲಕ ಜಪಾನ್ ಇತಿಹಾಸದಲ್ಲಿ ಅತಿ ಹೆಚ್ಚು ವರ್ಷ ಕಾಲ ಪ್ರಧಾನಿಯಾದ ದಾಖಲೆ ಅವರದ್ದಾಗಿದೆ.

ಟ್ರಂಪ್, ಮೋದಿ ಜೊತೆಗಿನ ಸ್ನೇಹ
ಅಮೆರಿಕ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಜೊತೆ ಜಪಾನ್ ಪ್ರಧಾನಿ ಶಿಂಜೊ ಅಬೆ ಸ್ನೇಹ ಗಾಢವಾಗಿತ್ತು ಎನ್ನಲಾಗಿದೆ. ನರೇಂದ್ರ ಮೋದಿ ತಮ್ಮ ಟ್ವಿಟ್ಟರ್‌ನಲ್ಲಿ ಫಾಲೋ ಮಾಡುತ್ತಿರುವ ಮೂರು ಜಾಗತಿಕ ನಾಯಕರ ಅಕೌಂಟ್‌ಗಳಲ್ಲಿ ಅಬೆಯದ್ದೂ ಒಂದು.
ಅಮೆರಿಕ, ಜಪಾನ್, ಆಸ್ಟ್ರೇಲಿಯಾ ಮತ್ತು ಭಾರತ ಈ ನಾಲ್ಕು ದೇಶಗಳು ಸೇರಿ ಕ್ವಾಡ್ ಗುಂಪು ರಚಿಸಿವೆ. ಇದು ಹಿಂದೂ ಮಹಾಸಾಗರದಲ್ಲಿ ಚೀನಾದ ಪ್ರಾಬಲ್ಯಕ್ಕೆ ಸೆಡ್ಡು ಹೊಡೆಯಲು ಮಾಡಲಾಗಿರುವ ಒಂದು ಗುಂಪು. ಇದರಲ್ಲಿ ಶಿಂಜೊ ಅವರದ್ದು ಪ್ರಮುಖ ಪಾತ್ರ ಇದೆ. ಟ್ರಂಪ್ ಅಮೆರಿಕ ಅಧ್ಯಕ್ಷರಾಗಿದ್ದಾಗ ಕ್ವಾಡ್ ಗುಂಪಿಗೆ ಜೀವ ಸಿಕ್ಕಿತು.

ಆರ್ಥಿಕತೆ ನಿರ್ವಹಣೆ
2006ರಲ್ಲಿ ಶಿಂಜೊ ಅಬೆ ಪ್ರಧಾನಿಯಾದಾಗ ಜಪಾನ್ ಆರ್ಥಿಕವಾಗಿ ಕುಸಿದುಹೋಗುವಂತಿತ್ತು. ಆಗ ಅಬೆ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಂಡು ಆರ್ಥಿಕತೆಯನ್ನು ಹಳಿಗೆ ತಂದಿದ್ದರು. ಆದರೆ, ಒಂದೇ ವರ್ಷ ಅಧಿಕಾರದಲ್ಲಿದ್ದದ್ದು. 2012ರಲ್ಲಿ ಮತ್ತೆ ಪ್ರಧಾನಿಯಾದಾಗ ಅವರು ತಮ್ಮ ಹಿಂದಿನ ಆರ್ಥಿಕ ನೀತಿಗಳನ್ನೇ ಮುಂದುವರಿಸಿದರು.
ಬಡ್ಡಿದರಗಳನ್ನು ಗಣನೀಯವಾಗಿ ಇಳಿಸಿದರು. ಜನರು ಸುಲಭವಾಗಿ ಹಣ ಪಡೆದು ಖರ್ಚು ಮಾಡುವಂತಹ ವಾತಾವರಣ ನಿರ್ಮಿಸಿದರು. ಸರಕಾರ ಕೂಡ ಸಾಕಷ್ಟು ಹಣವನ್ನು ವಿವಿಧ ಯೋಜನೆಗಳ ರೂಪದಲ್ಲಿ ಆರ್ಥಿಕತೆಗೆ ತಳ್ಳಿತು. ಮೂಲಸೌಕರ್ಯ ವೃದ್ಧಿಗೆ ಹೆಚ್ಚು ಹಣ ವಿನಿಯೋಗಿಸಿತು. ಹೆಚ್ಚು ಮಹಿಳೆಯರಿಗೆ ಉದ್ಯೋಗಾವಕಾಶ ನೀಡಿದರು. ಕಾರ್ಮಿಕ ವರ್ಗದ ಕೊರತೆ ನೀಗಿಸಲು ಹೆಚ್ಚು ವಲಸಿಗರಿಗೆ ಅವಕಾಶ ಕೊಟ್ಟರು. ಡೊನಾಲ್ಡ್ ಟ್ರಂಪ್ ಜೊತೆಗಿನ ಸ್ನೇಹವನ್ನು ಶಿಂಜೊ ಜಪಾನ್ ಅನುಕೂಲಕ್ಕೆ ಬಳಸಿಕೊಂಡರು. ಇವೆಲ್ಲಾ ಕ್ರಮಗಳಿಂದ ಜಪಾನ್ ಆರ್ಥಿಕತೆ ಚೇತರಿಕೆಗೆ ಬಂತು. ಅವರ ಆರ್ಥಿಕ ನೀತಿಗಳು ಅಬೆನಾಮಿಕ್ಸ್ ಎಂದು ಖ್ಯಾತವಾದವು.

ಶಿಂಜೊ ಅಬೆ ರಾಜೀನಾಮೆ ನೀಡಿದ್ದು
2020ರಲ್ಲಿ ಕೋವಿಡ್ ಬಂದ ಬಳಿಕ ಜಪಾನ್ ಆರ್ಥಿಕತೆ ಮತ್ತೆ ಸಂಕಷ್ಟಕ್ಕೆ ಸಿಲುಕಿತು. 'ಅಬೆನಾಮಿಕ್ಸ್' ಎಂದೇ ಖ್ಯಾತವಾಗಿದ್ದ ಶಿಂಜೊ ಅಬೆಯ ಆರ್ಥಿಕ ನೀತಿಗಳು ಫಲಪ್ರದವಾಗದೇ ಹೋದವು. ಅಷ್ಟೇ ಅಲ್ಲ, ಕೋವಿಡ್ ಸಾಂಕ್ರಾಮಿಕ ರೋಗವನ್ನು ಶಿಂಜೊ ಅಬೆ ಸರಿಯಾಗಿ ನಿರ್ವಹಿಸಲಿಲ್ಲ ಎಂಬ ಟೀಕೆಯೂ ಇದೆ.2020, ಅಗಸ್ಟ್ 28ರಂದು ರಾಜೀನಾಮೆ ನೀಡಿದರು.
ಶಿಂಜೊ ಅಬೆ ಅಧಿಕಾರದಿಂದ ಕೆಳಗಿಳಿದರೂ ಅವರ ಜನಪ್ರಿಯತೆ ಕುಂದಲಿಲ್ಲ. ಲಿಬರಲ್ ಡೆಮಾಕ್ರಾಟಿಕ್ ಪಕ್ಷದೊಳಗೆ ಅವರ ಪ್ರಭಾವ ಗಾಢವಾಗಿಯೇ ಇತ್ತು. ಅವರು ಮತ್ತೊಮ್ಮೆ ಪ್ರಧಾನಿಯಾಗುವ ಎಲ್ಲಾ ಸಾಧ್ಯತೆಗಳು ಮತ್ತು ಕುರುಹುಗಳು ಕಂಡಿದ್ದವು.
(ಒನ್ಇಂಡಿಯಾ ಸುದ್ದಿ)












Click it and Unblock the Notifications