ರಷ್ಯಾದ 10 ಶ್ರೀಮಂತರ ಬುಡ ಅಲ್ಲಾಡಿಸಿದ ಯುಎಸ್ ನಿರ್ಬಂಧ!
ಮಾಸ್ಕೋ, ಮಾರ್ಚ್ 03: ರಷ್ಯಾವು ಉಕ್ರೇನ್ ಮೇಲೆ ಆಕ್ರಮಣ ಮಾಡಿದ ಬಳಿಕ ಹಲವಾರು ದೇಶಗಳು ರಷ್ಯಾದ ಮೇಲೆ ಆರ್ಥಿಕ ನಿರ್ಬಂಧವನ್ನು ಹೇರಿದೆ. ಆರ್ಥಿಕ ನಿರ್ಬಂಧ ಮಾತ್ರವಲ್ಲದೇ ಇತರೆ ಹಲವು ನಿರ್ಬಂಧಗಳನ್ನು ಕೂಡಾ ಹೇರಲಾಗಿದೆ. ರಷ್ಯಾದ ಬೆಕ್ಕುಗಳ ಮೇಲೂ ಕೂಡಾ ನಿರ್ಬಂಧ ಹೇರಲಾಗಿದೆ. ಪ್ಯಾರಿಸ್ ಮ್ಯೂಸಿಯಂನಿಂದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮೇಣದ ಪ್ರತಿಮೆಯನ್ನು ಕೂಡಾ ತೆಗೆದುಹಾಕಲಾಗಿದೆ.
ಅಮೆರಿಕಾದ ಜೋ ಬೈಡೆನ್ ಆಡಳಿತವೂ ಕೂಡಾ ಕಳೆದ ವಾರ ವ್ಲಾಡಿಮಿರ್ ಪುಟಿನ್ ಸರ್ಕಾರದ ಮೇಲೆ ನಿರ್ಬಂಧಗಳನ್ನು ಹೇರಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಯುಎಸ್‌ನ ಶ್ರೀಮಂತರಿಗೆ ಭಾರೀ ಪೆಟ್ಟು ಬಿದ್ದಿದೆ. ಯುಎಸ್ ನಿರ್ಬಂಧವು ರಷ್ಯಾದ 10 ಶ್ರೀಮಂತರ ಪಾಲಿಗೆ ಕೆಟ್ಟ ಕಾಲವಾಗಿದೆ. ವರದಿಗಳ ಪ್ರಕಾರ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೂಡಾ ಅತ್ಯಂತ ಶ್ರೀಮಂತ ವ್ಯಕ್ತಿ ಆಗಿದ್ದಾರೆ.
ರಷ್ಯಾದ ಮೇಲೆ ಅಮೆರಿಕ ಸೇರಿ ಹಲವು ರಾಷ್ಟ್ರಗಳು ಹೇರಿದ ಆರ್ಥಿಕ ನಿರ್ಬಂಧದಿಂದಾಗಿ ಹೊಡೆತವನ್ನು ಪಡೆದ ಹಲವು ಶ್ರೀಮಂತರ ಪೈಕಿ ರಷ್ಯಾದ ಅಧ್ಯಕ್ಷ ಪುಟಿನ್ ಕೂಡಾ ಒಬ್ಬರಾಗಿದ್ದಾರೆ. ಇಲಾಖೆಗಳ ಪ್ರಕಾರ ವ್ಲಾಡಿಮಿರ್ ಪುಟಿನ್ ತನ್ನ ಅಪಾರ ಸಂಪತನ್ನು ನಿರ್ವಹಣೆ ಮಾಡಲು ಕುಟುಂಬದ ಸದಸ್ಯರನ್ನು ಬಳಸಿಕೊಳ್ಳುತ್ತಿದ್ದಾರೆ. ಈ ನಡುವೆ ಪ್ರಮುಖ ಹತ್ತು ರಷ್ಯಾದ ಶ್ರಿಮಂತರು ಭಾರೀ ಪೆಟ್ಟು ಅನುಭವಿಸಿದ್ದಾರೆ. ಈ ಶ್ರೀಮಂತರ ಬುಡ ಅಲ್ಲಾಡಿಸಿದೆ. ಆ ಶ್ರೀಮಂತರು ಯಾರು ಎಂದು ತಿಳಿಯೋಣ ಮುಂದೆ ಓದಿ....

1. ಸೆರ್ಗೆಯ್ ಬೊರಿಸೊವಿಚ್ ಇವನೊವ್
ಬೊರಿಸೊವಿಚ್ ಇವನೊವ್ ಅವರು ಪರಿಸರ ಸಂರಕ್ಷಣೆ, ಪರಿಸರ ವಿಜ್ಞಾನ ಮತ್ತು ಸಾರಿಗೆ ಕ್ಷೇತ್ರದ ರಷ್ಯಾದ ವಿಶೇಷ ಅಧ್ಯಕ್ಷೀಯ ಪ್ರತಿನಿಧಿಯಾಗಿದ್ದಾರೆ. ಸೆರ್ಗೆಯ್ ಬೊರಿಸೊವಿಚ್ ಇವನೊವ್ ಪುಟಿನ್ ಅವರ "ಹತ್ತಿರದ ಮಿತ್ರರಲ್ಲಿ" ಒಬ್ಬರು ಆಗಿದ್ದಾರೆ. ಈ ಹಿಂದೆ 2011 ರಿಂದ 2016 ರವರೆಗೆ ಅಧ್ಯಕ್ಷೀಯ ಕಾರ್ಯನಿರ್ವಾಹಕ ಕಚೇರಿಯ ಮುಖ್ಯಸ್ಥರಾಗಿ ಮತ್ತು ಪ್ರಸ್ತುತ ಸ್ಥಾನವನ್ನು ಉಳಿಸಿಕೊಳ್ಳುವ ಮೊದಲು ರಷ್ಯಾದ ಉಪ ಪ್ರಧಾನ ಮಂತ್ರಿ ಮತ್ತು ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದರು. ಅವರು ಕೆಜಿಬಿಯಲ್ಲಿ ಪುಟಿನ್ ಜೊತೆಗೆ ಸೇವೆ ಸಲ್ಲಿಸಿದರು ಮತ್ತು ನಂತರ ರಷ್ಯಾದ ಒಕ್ಕೂಟದ ಭದ್ರತಾ ಮಂಡಳಿಯ ಖಾಯಂ ಸದಸ್ಯರಾದರು.

2. ಸೆರ್ಗೆಯ್ ಬೊರಿಸೊವಿಚ್ ಇವನೊವ್ ಪುತ್ರ ಸೆರ್ಗೆಯ್ ಸೆರ್ಗೆವಿಚ್ ಇವನೊವ್
ಸೆರ್ಗೆವಿಚ್ ಇವನೊವ್ ಅವರು ರಾಜ್ಯ ಬೆಂಬಲಿತ ವಜ್ರ ಗಣಿಗಾರಿಕೆ ಕಂಪನಿಯಾದ ಅಲ್ರೋಸಾದ ಸಿಇಒ ಆಗಿದ್ದಾರೆ. ಅಲ್ರೋಸಾ ರಷ್ಯಾದಿಂದ ಭಾಗಶಃ ಒಡೆತನದಲ್ಲಿದೆ. ವಿಶ್ವದ ವಜ್ರದ ಗಣಿಗಾರಿಕೆ ಸಾಮರ್ಥ್ಯದ 28% ರಷ್ಟು ಸಾಮರ್ಥ್ಯವನ್ನು ಹೊಂದಿದೆ. ವರದಿಗಳ ಪ್ರಕಾರ ಕಳೆದ ವರ್ಷ ಇದರ ಮಾರಾಟವು 4.2 ಬಿಲಿಯನ್ ಡಾಲರ್ ಆಗಿತ್ತು. ಕಂಪನಿಯು ಗುರುವಾರ ಹೊಸ ಸಾಲ ಮತ್ತು ಇಕ್ವಿಟಿ ನಿರ್ಬಂಧಗಳಿಗೆ ಒಳಪಟ್ಟ 11 ರಷ್ಯಾದ ಘಟಕಗಳಲ್ಲಿ ಒಂದಾಗಿದೆ. ಫೋರ್ಬ್ಸ್ ಪ್ರಕಾರ ಅಲ್ರೋಸಾ 6.2 ಶತಕೋಟಿ ಡಾಲರ್ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ ಮತ್ತು ನ್ಯೂಯಾರ್ಕ್ ನಗರದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ.

3. ನಿಕೊಲಾಯ್ ಪ್ಲಾಟೊನೊವಿಚ್ ಪಟ್ರುಶೆವ್
ನಿಕೊಲಾಯ್ ಪ್ಲಾಟೊನೊವಿಚ್ ಪಟ್ರುಶೆವ್ ಅವರು ಪುಟಿನ್ ಅವರೊಂದಿಗೆ ಕೆಜಿಬಿಯಲ್ಲಿ ಸೇವೆ ಸಲ್ಲಿಸಿದರು. ನಂತರ ಸೋವಿಯತ್ ಒಕ್ಕೂಟದ ಕೆಜಿಬಿಯ ಮುಖ್ಯ ಉತ್ತರಾಧಿಕಾರಿ ಸಂಸ್ಥೆಯಾದ ಫೆಡರಲ್ ಸೆಕ್ಯುರಿಟಿ ಸರ್ವೀಸ್‌ನ ಮುಖ್ಯಸ್ಥರಾದರು. ಪಟ್ರುಶೆವ್ ಈಗ ರಷ್ಯಾದ ಒಕ್ಕೂಟದ ಭದ್ರತಾ ಮಂಡಳಿಯ ಕಾರ್ಯದರ್ಶಿಯಾಗಿದ್ದಾರೆ ಮತ್ತು ಹಿಂದೆ 2018 ರಲ್ಲಿ ನಿರ್ಬಂಧ ಮಾಡಲಾಗಿತ್ತು. ರಷ್ಯಾದ ಮಾಜಿ ಗುಪ್ತಚರ ಅಧಿಕಾರಿ ಅಲೆಕ್ಸಾಂಡರ್ ಲಿಟ್ವಿನೆಂಕೊ ವಿಷಪ್ರಾಶನ ಮಾಡಿದ ವಿಚಾರದಲ್ಲಿ ನಿಕೊಲಾಯ್ ಪ್ಲಾಟೊನೊವಿಚ್ ಪಟ್ರುಶೆವ್ ಹೆಸರು ಕೂಡಾ ಕೇಳಿ ಬಂದಿದೆ.

4. ನಿಕೊಲಾಯ್ ಪಟ್ರುಶೆವ್ ಪುತ್ರ ಆಂಡ್ರೆ ಪಟ್ರುಶೆವ್
ನಿಕೊಲಾಯ್ ಪಟ್ರುಶೆವ್ ಪುತ್ರ ಆಂಡ್ರೆ ಪಟ್ರುಶೆವ್ ಅವರನ್ನು 2019 ರಲ್ಲಿ ರಷ್ಯಾದಲ್ಲಿ ಮೂರನೇ ಅತಿದೊಡ್ಡ ತೈಲ ಉತ್ಪಾದಕ ಗಾಜ್‌ಪ್ರೊಮ್ ನೆಫ್ಟ್‌ನ ಸಿಇಒ ಆಗಿ ನೇಮಿಸಲಾಯಿತು. ಕಳೆದ ವಾರದ ಆರ್ಥಿಕ ನಿರ್ಬಂಧಗಳಿಗೆ ಒಳಪಟ್ಟ 11 ರಷ್ಯಾದ ಘಟಕಗಳಲ್ಲಿ ತೈಲ ಕಂಪನಿಯು ಸಹ ಒಂದಾಗಿದೆ.

5. ಇಗೊರ್ ಇವನೊವಿಚ್ ಸೆಚಿನ್
ಇಗೊರ್ ಇವನೊವಿಚ್ ಸೆಚಿನ್ ರಾಸ್ನೆಫ್ಟ್‌ನ ಸಿಇಒ, ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ನಿರ್ದೇಶಕರ ಮಂಡಳಿಯ ಉಪಾಧ್ಯಕ್ಷರು ಆಗಿದ್ದಾರೆ. ರಾಸ್ನೆಫ್ಟ್ ವಿಶ್ವದ ಅತಿದೊಡ್ಡ ಸಾರ್ವಜನಿಕವಾಗಿ ವ್ಯಾಪಾರ ಮಾಡುವ ತೈಲ ಕಂಪನಿಗಳಲ್ಲಿ ಒಂದಾಗಿದೆ. ಇಗೊರ್ ಇವನೊವಿಚ್ ಸೆಚಿನ್‌ರನ್ನು ಪುಟಿನ್ ನಂತರ ರಷ್ಯಾದಲ್ಲಿ ಎರಡನೇ ಅತ್ಯಂತ ಶಕ್ತಿಶಾಲಿ ವ್ಯಕ್ತಿ ಎಂದು ಕರೆಯಲಾಗುತ್ತದೆ. ಅವರು 2008 ರಿಂದ 2012 ರವರೆಗೆ ರಷ್ಯಾದ ಒಕ್ಕೂಟದ ಉಪ ಪ್ರಧಾನ ಮಂತ್ರಿಯಾಗಿಯೂ ಸೇವೆ ಸಲ್ಲಿಸಿದರು. ಹಿಂದಿನ ಸೋವಿಯತ್ ಮಿಲಿಟರಿ ಇಂಟರ್ಪ್ರಿಟರ್, ಬಿಪಿಯೊಂದಿಗೆ 16 ಶತಕೋಟಿ ಡಾಲರ್ ಒಪ್ಪಂದವನ್ನು ಪಡೆದುಕೊಳ್ಳಲು ಸಹಾಯ ಮಾಡಿದರು. ಇದು ರಷ್ಯಾದ ಕಂಪನಿಗೆ ಬ್ರಿಟಿಷ್ ತೈಲ ಕಂಪನಿಯಲ್ಲಿ 5 ಪ್ರತಿಶತದಷ್ಟು ಪಾಲನ್ನು ನೀಡಿತು ಎಂದು 2011 ರಲ್ಲಿ ರಾಯಿಟರ್ಸ್ ವರದಿ ಮಾಡಿದೆ.

6. ಇಗೊರ್ ಇವನೊವಿಚ್ ಸೆಚಿನ್ ಪುತ್ರ ಇವಾನ್ ಇಗೊರೆವಿಚ್ ಸೆಚಿನ್
ಇವಾನ್ ಇಗೊರೆವಿಚ್ ಅವರು ರೋಸೆನೆಫ್ಟ್‌ನಲ್ಲಿ ಉಪ ವಿಭಾಗದ ಮುಖ್ಯಸ್ಥರಾಗಿದ್ದಾರೆ ಎಂದು ವರದಿಯಾಗಿದೆ. ಇವಾನ್ ಇಗೊರೆವಿಚ್ ಸೆಚಿನ್, ರಷ್ಯಾ ಅಧ್ಯಕ್ಷ ಪುಟಿನ್ ನಂತರ ರಷ್ಯಾದಲ್ಲಿ ಎರಡನೇ ಅತ್ಯಂತ ಶಕ್ತಿಶಾಲಿ ವ್ಯಕ್ತಿ ಎಂದು ಕರೆಯಲಾಗುವ ಇಗೊರ್ ಇವನೊವಿಚ್ ಸೆಚಿನ್‌ರ ಪುತ್ರ.

7. ಅಲೆಕ್ಸಾಂಡರ್ ಅಲೆಕ್ಸಾಂಡ್ರೊವಿಚ್ ವೇದ್ಯಖಿನ್
ಅಲೆಕ್ಸಾಂಡರ್ ಅಲೆಕ್ಸಾಂಡ್ರೊವಿಚ್ ವೇದ್ಯಖಿನ್ ಪ್ರಸ್ತುತ ರಷ್ಯಾದ ಅತಿದೊಡ್ಡ ಹಣಕಾಸು ಸಂಸ್ಥೆಯಾದ ಸ್ಬೆರ್‌ಬ್ಯಾಂಕ್‌ನ ಕಾರ್ಯನಿರ್ವಾಹಕ ಮಂಡಳಿಯ ಮೊದಲ ಉಪ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದರ ವಿರುದ್ಧ ಈ ವಾರ ನಿರ್ಬಂಧ ಹೇರಲಾಗಿದೆ. Sberbank ರಷ್ಯಾದ ಬ್ಯಾಂಕ್ ಆಸ್ತಿಗಳ ಮೂರನೇ ಒಂದು ಭಾಗವನ್ನು ಹೊಂದಿದೆ. Sberbank ಯುಎಸ್ ಡಾಲರ್‌ಗಳಲ್ಲಿ ಮಾಡಲು ಪ್ರಯತ್ನಿಸುವ ಯಾವುದೇ ಪಾವತಿಗಳನ್ನು ಯುಎಸ್ ಹಣಕಾಸು ಸಂಸ್ಥೆಗಳು ತಿರಸ್ಕರಿಸುವ ನಿರ್ಬಂಧ ಇದಾಗಿದೆ.

8. ಆಂಡ್ರೆ ಸೆರ್ಗೆವಿಚ್ ಪುಚ್ಕೋವ್
ಆಂಡ್ರೆ ಸೆರ್ಗೆವಿಚ್ ಪುಚ್ಕೋವ್ ಈ ವಾರ ನಿರ್ಬಂಧ ಹೇರಲಾದ ರಷ್ಯಾದ ಎರಡನೇ ಅತಿದೊಡ್ಡ ಹಣಕಾಸು ಸಂಸ್ಥೆಯಾದ ವಿಟಿಬಿ ಬ್ಯಾಂಕ್‌ನಲ್ಲಿ ಉನ್ನತ-ಶ್ರೇಣಿಯ ಕಾರ್ಯನಿರ್ವಾಹಕರಾಗಿದ್ದಾರೆ. ದಿ ವಾಲ್ ಸ್ಟ್ರೀಟ್ ಜರ್ನಲ್ ಪ್ರಕಾರ ಅವರು ಈ ಹಿಂದೆ ಎಫ್‌ಸಿ ಡೈನಮೋ ಮಾಸ್ಕೋ ಫುಟ್‌ಬಾಲ್ ಕ್ಲಬ್‌ನ ಅಧ್ಯಕ್ಷರಾಗಿದ್ದರು. ನಿರ್ಬಂಧಗಳನ್ನು ಘೋಷಿಸಿದ ನಂತರ ವಿಟಿಬಿ ಅನ್ನು ಯುಎಸ್ ಲಾಬಿ ಮಾಡುವ ಸಂಸ್ಥೆಯಿಂದ ಕೈಬಿಟ್ಟಿದೆ. ಇದರ ವೆಬ್‌ಸೈಟ್ ಇನ್ನು ಮುಂದೆ ಕ್ರಿಯಾತ್ಮಕವಾಗಿರುವುದಿಲ್ಲ. ಪುಚ್ಕೋವ್ ಅವರು ಮಾಸ್ಕೋ ಮೂಲದ ಎರಡು ರಿಯಲ್ ಎಸ್ಟೇಟ್ ಕಂಪನಿಗಳಲ್ಲಿ ಪಾಲನ್ನು ಹೊಂದಿದ್ದಾರೆ.

9. ಯೂರಿ ಸೊಲೊವಿವ್
ಯೂರಿ ಸೊಲೊವಿವ್ ವಿಟಿಬಿ ಬ್ಯಾಂಕ್‌ನಲ್ಲಿ ಮಂಡಳಿಯ ಮೊದಲ ಉಪ ಅಧ್ಯಕ್ಷ-ಅಧ್ಯಕ್ಷರಾಗಿದ್ದರು. ಅವರು ಈ ಹಿಂದೆ ಲಂಡನ್‌ನ ಲೆಹ್ಮನ್ ಬ್ರದರ್ಸ್ ಮತ್ತು ಡಾಯ್ಚ್ ಬ್ಯಾಂಕ್‌ನಲ್ಲಿ ಕೆಲಸ ಮಾಡಿದ್ದರು. ಅವರು ಪ್ರಸ್ತುತ ಎಫ್‌ಸಿ ಡೈನಮೋ ಮಾಸ್ಕೋ ಫುಟ್‌ಬಾಲ್ ಕ್ಲಬ್‌ನ ನಿರ್ದೇಶಕರ ಮಂಡಳಿಯ ಅಧ್ಯಕ್ಷರಾಗಿದ್ದಾರೆ.

10. ಗಲಿನಾ ಒಲೆಗೊವ್ನಾ ಉಲ್ಯುಟಿನಾ
ಯೂರಿ ಸೊಲೊವಿವ್ ಅವರ ಮಾಜಿ ಪತ್ನಿ ಗಲಿನಾ ಒಲೆಗೊವ್ನಾ ಉಲ್ಯುಟಿನಾ "ಗೋಲ್ಡನ್ ಪಾಸ್ಪೋರ್ಟ್ ಯೋಜನೆ" ಯಲ್ಲಿ ತೊಡಗಿಸಿಕೊಂಡಿದ್ದರು. ರಷ್ಯಾದ ಗಣ್ಯರು ದೇಶದಲ್ಲಿ ಹೂಡಿಕೆ ಮಾಡುವ ಮೂಲಕ ಪೌರತ್ವಕ್ಕಾಗಿ "ಪಾವತಿ" ಮಾಡುವುದು ಗೋಲ್ಡನ್ ಪಾಸ್ಪೋರ್ಟ್ ಯೋಜನೆ ಆಗಿದೆ. ಇದರ ಅಡಿಯಲ್ಲಿ ಕನಿಷ್ಠ 2 ಮಿಲಿಯನ್ ಯುರೋಗಳಷ್ಟು ಹೂಡಿಕೆ ಅಗತ್ಯವಿದೆ. ಅದರ ನಂತರ ವ್ಯಕ್ತಿಯು ಸೈಪ್ರಸ್‌ನ ಗೋಲ್ಡನ್ ಪಾಸ್‌ಪೋರ್ಟ್ ಪಡೆಯಬಹುದಾಗಿದೆ. ಅಂತಹ ವ್ಯವಸ್ಥೆಯು ಶ್ರೀಮಂತ ವಿದೇಶಿಯರು ಕೆಲವು ದೇಶಗಳಲ್ಲಿ ಕನಿಷ್ಠ ಪ್ರಮಾಣದ ಹೂಡಿಕೆಗೆ ಬದಲಾಗಿ ಪೌರತ್ವವನ್ನು ಪಡೆಯಲು ಅನುಮತಿಸುತ್ತದೆ. ಯುಎಸ್, ಕೆನಡಾ ಮತ್ತು ಯುರೋಪ್‌ನಲ್ಲಿ ಗೋಲ್ಡನ್ ಪಾಸ್‌ಪೋರ್ಟ್‌ಗಳನ್ನು ಈಗ ರಷ್ಯಾದ ವಿರುದ್ಧ ನಿರ್ಬಂಧಗಳ ಅಡಿಯಲ್ಲಿ ಸೀಮಿತಗೊಳಿಸಲಾಗಿದೆ. (ಒನ್‌ಇಂಡಿಯಾ ಸುದ್ದಿ) (ಚಿತ್ರ ಕೃಪೆ: getty images)












Click it and Unblock the Notifications