ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಾಮರಾಜನಗರದಲ್ಲಿ ಹಿಂಗಾರು ಮಳೆಗೆ ಜಲಾಶಯಗಳು ಭರ್ತಿ

|
Google Oneindia Kannada News

ಚಾಮರಾಜನಗರ, ನವೆಂಬರ್ 15: ಸಾಮಾನ್ಯವಾಗಿ ಮುಂಗಾರು ಮಳೆಗೆ ಜಲಾಶಯಗಳು ಭರ್ತಿಯಾಗುತ್ತವೆ. ಆದರೆ ಚಾಮರಾಜನಗರದಲ್ಲಿ ಹಿಂಗಾರು ಮಳೆಯ ಅಬ್ಬರಕ್ಕೆ ಕೆರೆಕಟ್ಟೆಗಳು, ಜಲಾಶಯಗಳು ಭರ್ತಿಯಾಗಿರುವುದು ಒಂದೆಡೆ ಜನರಲ್ಲಿ ಸಂತಸ ತಂದಿದ್ದರೆ, ಮತ್ತೊಂದೆಡೆ ಆತಂಕವನ್ನು ಸೃಷ್ಟಿಸಿದೆ.

ಹಾಗೆ ನೋಡಿದರೆ ಚಾಮರಾಜನಗರ ಜಿಲ್ಲೆಯಲ್ಲಿ ಸುರಿಯುವ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಕೆಲವೊಂದು ಕೆರೆ, ಜಲಾಶಯಗಳು ಭರ್ತಿಯಾಗುತ್ತಿರಲಿಲ್ಲ. ಹೀಗಾಗಿ ರೈತರು ಸೇರಿದಂತೆ ಜನಸಾಮಾನ್ಯರು ನೀರಿನ ಸಮಸ್ಯೆಯನ್ನು ಎದುರಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಉತ್ತಮವಾಗಿ ಮಳೆ ಸುರಿಯುತ್ತಿರುವುದು ಜತೆಗೆ ನದಿಯಿಂದ ನೀರು ತುಂಬಿಸುತ್ತಿರುವ ಕಾರಣ ಬಹುತೇಕ ಕೆರೆಗಳು ತುಂಬಿ ಕೋಡಿ ಬಿದ್ದಿವೆ.

ಸುವರ್ಣಾವತಿ ಜಲಾಶಯ ಬಹುತೇಕ ಭರ್ತಿ

ಸುವರ್ಣಾವತಿ ಜಲಾಶಯ ಬಹುತೇಕ ಭರ್ತಿ

ಈ ನಡುವೆ ಜಿಲ್ಲೆಯಲ್ಲಿ ಹಿಂಗಾರು ಮಳೆ ಉತ್ತಮವಾಗಿ ಸುರಿಯುತ್ತಿರುವ ಕಾರಣ ಚಾಮರಾಜನಗರ ತಾಲೂಕಿನ ಅಟ್ಟುಗುಳಿ ಪುರ ಸಮೀಪ ಇರುವ ಸುವರ್ಣಾವತಿ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಜಲಾಶಯದಿಂದ ಭಾನುವಾರ ಮುಂಜಾನೆಯಿಂದ 400 ಕ್ಯೂಸೆಕ್ ನೀರನ್ನು ನಾಲೆಗಳಿಗೆ ಹರಿಸಲಾಗುತ್ತಿದೆ.

ಈ ಜಲಾಶಯವು ಸಮುದ್ರ ಮಟ್ಟಕ್ಕಿಂತ 2454 ಅಡಿ ಎತ್ತರದಲ್ಲಿದ್ದು, ಮಳೆಯ ಕಾರಣ ಬೇಡಗುಳಿ, ಪುಣಜನೂರು, ದಿಂಬಂನಿಂದ ನೀರು ಹೆಚ್ಚಾಗಿ ಹರಿದು ಬರುತ್ತಿದೆ. ಇನ್ನೊಂದೆಡೆ ಚಿಕ್ಕಹೊಳೆ ಜಲಾಶಯಕ್ಕೆ ತಾಳವಾಡಿ, ಕೊಂಗಳ್ಳಿ ಸುತ್ತಮುತ್ತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಜಲಾಶಯ ಭರ್ತಿಯಾಗಲು ಕೇವಲ 5 ಅಡಿ ಮಾತ್ರ ಬಾಕಿಯಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದೇ ಆದರೆ ಹೆಚ್ಚುವರಿ ನೀರನ್ನು ನಾಲೆಗೆ ಬಿಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

 ಭರ್ತಿಯಾಗುವತ್ತ ಮೆಟ್ಟೂರು ಜಲಾಶಯ

ಭರ್ತಿಯಾಗುವತ್ತ ಮೆಟ್ಟೂರು ಜಲಾಶಯ

ಇದೆಲ್ಲದರ ನಡುವೆ ಹನೂರು ತಾಲೂಕಿನ ಅಜ್ಜಿಪುರ ಸಮೀಪದ ಉಡುತೊರೆ ಜಲಾಶಯವು ಕೂಡ ಮಳೆಯಿಂದ ಭರ್ತಿಯಾಗಿದ್ದು, ಹೀಗಾಗಿ 400 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ. ಬಹಳಷ್ಟು ವರ್ಷಗಳ ಬಳಿಕ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದು, ನೀರನ್ನು ಬಿಡುಗಡೆ ಮಾಡುತ್ತಿರುವ ಹಿನ್ನಲೆಯಲ್ಲಿ ತಳಭಾಗದಲ್ಲಿರುವವರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

ಇನ್ನು ರಾಜ್ಯದಲ್ಲಿ ಉತ್ತಮ ಮಳೆಯಾಗಿ ಕಬಿನಿ ಮತ್ತು ಕೆಆರ್‍ಎಸ್‍ ಜಲಾಶಯದಿಂದ ನೀರು ಹೆಚ್ಚಿನ ಪ್ರಮಾಣದಲ್ಲಿ ತಮಿಳುನಾಡಿಗೆ ಹರಿದು ಹೋಗುತ್ತಿರುವುದರಿಂದ ತಮಿಳುನಾಡಿನ ಮೆಟ್ಟೂರು ಜಲಾಶಯ ಬಹುತೇಕ ಭರ್ತಿಯಾಗಿದ್ದು, 120 ಅಡಿ ಗರಿಷ್ಠ ಮಟ್ಟದ ಜಲಾಶಯದಲ್ಲಿ ಈಗ 119 ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಈ ಜಲಾಶಯದ ನೀರು ಸಂಗ್ರಹ ಸಾಮರ್ಥ್ಯ 93.4 ಟಿಎಂಸಿಯಾಗಿದ್ದು, ಸದ್ಯ 91.8 ಟಿಎಂಸಿ ನೀರು ಸಂಗ್ರಹವಿದೆ. 12,396 ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದ್ದು, ಸದ್ಯ 12,150 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

 ಮನೆ- ಗುಡ್ಡ ಕುಸಿತ, ಸೇತುವೆ ಮೇಲೆ ನೀರು

ಮನೆ- ಗುಡ್ಡ ಕುಸಿತ, ಸೇತುವೆ ಮೇಲೆ ನೀರು

ಈಗಾಗಲೇ ಚಾಮರಾಜನಗರ ಜಿಲ್ಲೆಯಲ್ಲಿ ಮಳೆ ಸುರಿಯುತ್ತಿರುವುದರಿಂದ ಕೊಳ್ಳೇಗಾಲ ನಗರದ 31ನೇ ವಾರ್ಡ್ ವ್ಯಾಪ್ತಿಯ ಬಸ್ತಿಪುರ ಗ್ರಾಮದ ನಾಯಕ ಬಡಾವಣೆಯ ರಾಚನಾಯ್ಕ ಎಂಬುವರ ಮನೆಗೋಡೆ ಕುಸಿದಿದೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಮಳೆಯಿಂದಾಗಿ ಅಂತರಾಜ್ಯ ಸಂಪರ್ಕ ಕಲ್ಪಿಸುವ ಚಾಮರಾಜನಗರ ಜಿಲ್ಲೆಯ ಹನೂರು ಲೊಕ್ಕನಹಳ್ಳಿ ಮಧ್ಯೆ ಇರುವ ಸೇತುವೆ ಮುಳುಗಡೆಯಾಗಿ ನೀರು ಹರಿಯುತ್ತಿದೆ.

ಸುವರ್ಣಾವತಿ ಜಲಾಶಯದಿಂದ ಹೆಚ್ಚುವರಿ ನೀರನ್ನು ಹೊರಬಿಟ್ಟಿರುವ ಕಾರಣ ಜಿಲ್ಲೆಯ ಯಳಂದೂರು ತಾಲ್ಲೂಕಿನ‌ ಮದ್ದೂರು ಸಮೀಪದ ಮುಸ್ಲಿಂ ಸಮುದಾಯದ ದರ್ಗಾ ಮುಳುಗಡೆಯಾಗುತ್ತಿದೆ. ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಸಹ ಮಹಾಮಳೆಗೆ ಭೂಕುಸಿತ ಉಂಟಾಗುತ್ತಿದ್ದು, ಬಂಡೆಗಲ್ಲುಗಳು ರಸ್ತೆಗೆ ಉರುಳಿ ಬಿದ್ದಿವೆ.

 ಮಳೆ ತಂದ ಆವಾಂತರ

ಮಳೆ ತಂದ ಆವಾಂತರ

ಪವಾಡ ಪುರುಷ ಮಲೆಮಹದೇಶ್ವರ ಬೆಟ್ಟದ ವಡ್ಗಲ್ ರಂಗನಾಥಸ್ವಾಮಿ ದೇವಾಲಯದ ಸಮೀಪದಲ್ಲಿ ಭೂಕುಸಿತ ಉಂಟಾಗಿ ಎರಡು ಬಂಡೆಗಳು ರಸ್ತೆಗೆ ಉರುಳಿಬಿದ್ದಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಒಟ್ಟಾರೆಯಾಗಿ ಚಾಮರಾಜನಗರ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆ ಒಂದಷ್ಟು ಅವಾಂತರವನ್ನು ಸೃಷ್ಟಿಸಿದ್ದು, ಜನ ಪರದಾಡುವಂತೆ ಮಾಡಿದೆ.

English summary
Reservoirs usually fill up with monsoon rains. However, in Chamarajanagar, the lakes and reservoirs are filled with the post monsoon rains.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X