ವಿವಾದಿತ ಕೃಷಿ ಕಾಯ್ದೆಯನ್ನು ಪ್ರಧಾನಿ ಮೋದಿ ಹಿಂಪಡೆಯಲು ಕಾರಣವೇನು?
ನವದೆಹಲಿ, ನವೆಂಬರ್ 19: ಕೃಷಿ ಕಾಯ್ದೆ ರದ್ದತಿ ಹಾಗೂ ಚುನಾವಣೆಗೆ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ಹೇಳಿಕೊಂಡರೂ ವಸ್ತುನಿಷ್ಠವಾಗಿ ಅದನ್ನು ಒಪ್ಪಲು ಅಸಾಧ್ಯವಾಗಿದೆ.
2022ರ ಆರಂಭದಲ್ಲಿ ಉತ್ತರ ಪ್ರದೇಶ, ಪಂಜಾಬ್ ಸೇರಿ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಯಲಿದೆ. ಪಂಜಾಬ್‌ನಲ್ಲಿ ಬಿಜೆಪಿ ತನ್ನ ಆಸೆಯನ್ನು ಬಿಟ್ಟಿತ್ತು, ಆದರೆ ಉತ್ತರ ಪ್ರದೇಶದ ಪೂರ್ವಾಂಚಲ ಹಾಗೂ ಪಂಜಾಬ್ ಗಡಿಗೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಕೃಷಿ ಕಾಯ್ದೆಯು ಬಿಜೆಪಿಗೆ ಭಾರಿ ಏಟು ನೀಡುತ್ತಿರುವುದು ಇತ್ತೀಚಿನ ಸಮೀಕ್ಷೆಗಳನ್ನು ಕಂಡುಬಂದಿದೆ.
ಕೃಷಿ ಕಾನೂನು ವಾಪಸ್ ಸೇರಿ ಮೋದಿ ಭಾಷಣದ ಪ್ರಮುಖಾಂಶಗಳು
ಇನ್ನೊಂದೆಡೆ, ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೊಸ ಪಕ್ಷವನ್ನು ಆರಂಭಿಸಿ ಬಿಜೆಪಿ ಜತೆ ಮೈತ್ರಿಯ ಮುನ್ಸೂಚನೆ ನೀಡಿದ್ದರು. ಆದರೆ ಅದಕ್ಕೆ ಕೃಷಿ ಕಾಯ್ದೆ ಹಿಂಪಡೆಯುವ ಷರತ್ತನ್ನು ಹಾಕಿದ್ದರು, ಈ ಬಗ್ಗೆ ಬಿಜೆಪಿಯ ನಾಯಕರ ಜತೆ ಚರ್ಚೆಯನ್ನೂ ನಡೆಸಿದ್ದರು.
ಇದೆಲ್ಲದರ ಪರಿಣಾಮವಾಗಿ ಕೇಂದ್ರ ಸರ್ಕಾರವು ಕೃಷಿ ಕಾಯ್ದೆಯನ್ನು ರದ್ದುಗೊಳಿಸುವ ಒಲ್ಲದ ಮನಸ್ಸಿನ ತೀರ್ಮಾನಕ್ಕೆ ಮುಂದಾಗಿದೆ. ಈಗ ಬಿಜೆಪಿಗೆ ಇರುವ ಸವಾಲು ಏನೆಂದರೆ ಈ ಕ್ರಮವನ್ನು ಪಂಜಾಬ್ ಹಾಗೂ ಉತ್ತರ ಪ್ರದೇಶದ ಮತದಾರರು ಹೇಗೆ ಸ್ವೀಕರಿಸುತ್ತಾರೆ ಎನ್ನುವುದಾಗಿದೆ.
ಒಂದೊಮ್ಮೆ ಕೇಂದ್ರದ ನಿರ್ಧಾರವನ್ನು ಧನಾತ್ಮಕವಾಗಿ ಸ್ವೀಕರಿಸಿದರೆ ಬಿಜೆಪಿಗೆ ಇದು ಶುಭಸುದ್ದಿಯಾಗಲಿದೆ, ಸ್ವೀಕರಿಸದಿದ್ದರೆ ಚುನಾವಣಾ ಸೋಲಿನ ಜತೆಗೆ ಕೃಷಿ ಕಾಯ್ದೆಯನ್ನು ಸ್ವಾಗತಿಸಿದ ಇತರೆ ರಾಜ್ಯಗಳ ಕೃಷಿಕರು ಹಾಗೂ ಬಿಜೆಪಿ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ.
ಹೀಗಾಗಿ, ಮೋದಿಯ ಈ 'ಮಾಸ್ಟರ್‌ಸ್ಟ್ರೋಕ್' ನಿಜವಾಗಿಯೂ ಬಿಜೆಪಿಗೆ ಚುನಾವಣಾ ಫಲಿತಾಂಶಕ್ಕೆ 'ಮಾಸ್ಟರ್‌ಸ್ಟ್ರೋಕ್' ಆಗಲಿದೆಯೇ ಎಂದು ತಿಳಿಯಲು ಇನ್ನು ನಾಲ್ಕೈದು ತಿಂಗಳು ಕಾಯಬೇಕಿದೆ.
ನವೆಂಬರ್ ತಿಂಗಳಿನಲ್ಲೇ ಮತ್ತೊಂದು ಘೋಷಣೆ: ಪ್ರಧಾನಿ ನರೇಂದ್ರ ಮೋದಿಯವರು ಎರಡನೇ ಬಾರಿ ನವೆಂಬರ್ ತಿಂಗಳಿನಲ್ಲಿ ಮಹತ್ವದ ಘೋಷಣೆ ಮಾಡಿದ್ದಾರೆ, 2016ರ ನವೆಂಬರ್ 08ರಂದು ಪ್ರಧಾನಿ ಮೋದಿ 500 ಹಾಗೂ 1000 ರುಪಾಯಿ ಮುಖಬೆಲೆಯ ನೋಟು ಅಮಾನ್ಯೀಕರಣ ಮಾಡಿ ಮಹತ್ವದ ಘೋಷಣೆ ಮಾಡಿದ್ದರು. ಇದೀಗ ಹಲವು ತಿಂಗಳುಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದರೂ ನವೆಂಬರ್ ತಿಂಗಳಿನಲ್ಲೇ ಮೋದಿ ಈ ಮಹತ್ವದ ತೀರ್ಮಾನ ತೆಗೆದುಕೊಂಡಿರುವುದು ಆಶ್ಚರ್ಯ ಮೂಡಿಸಿದೆ.
ರೈತರಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು: ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷೆಯ ಕಾನೂನಾದ ಮೂರು ಕೃಷಿ ಕಾಯ್ದೆಗಳು ಆರಂಭದಿಂದಲೇ ವ್ಯಾಪಕ ವಿರೋಧ ವ್ಯಕ್ತವಾಗಿದ್ದವು. ವರ್ಷದಿಂದ ರೈತರು ಬೀದಿಬದಿಯಲ್ಲಿ ಕುಳಿತು ಪ್ರತಿಭಟಿಸುತ್ತಲೇ ಇದ್ದರು.
ಹೀಗಾಗಿ ಕೊನೆಗೂ ರೈತರ ಪ್ರತಿಭಟನೆಗೆ ಮಣಿಸು ವಿವಾದಿತ ಕಾಯ್ದೆ ಹಿಂಪಡೆಯಲು ಮೋದಿ ತೀರ್ಮಾನಿಸಿದಂತಿದೆ. ಒಂದು ಹಂತದಲ್ಲಿ ವಿರೋಧ ಪಕ್ಷಗಳು ಪ್ರತಿಭಟಿಸಿ ಸುಮ್ಮನಾದರೂ ಸಹಾ ರೈತರೂ ಹೋರಾಟವನ್ನು ಮುಂದುವರೆಸಿದ್ದರು.
ಪ್ರಧಾನಿ ಮೋದಿ ತಾಯಿಗೆ ಪತ್ರ ಬರೆದಿದ್ದ ರೈತರು: ಕೃಷಿ ಕಾಯ್ದೆಯನ್ನು ರದ್ದುಪಡಿಸುವಂತೆ ಪ್ರಧಾನಿ ಮೋದಿ ತಾಯಿಗೆ ರೈತರು ಪತ್ರಬರೆದಿದ್ದರು. ಕೃಷಿ ಕಾಯ್ದೆಯನ್ನು ರದ್ದುಪಡಿಸಲು ನೀವು ನಿಮ್ಮ ಮಗ ಮೋದಿಗೆ ತಿಳಿ ಹೇಳಿ ಎಂದು ಪತ್ರದ ಮೂಲಕ ಮನವಿ ಮಾಡಿದ್ದರು.
ಮೈಕೊರೆಯುವ ಚಳಿಯಲ್ಲೂ ರೈತರು, ಮಕ್ಕಳು, ಮಹಿಳೆಯರು ರಸ್ತೆ ಬದಿಯಲ್ಲಿ ನಿಂತು ಪ್ರತಿಭಟನೆ ಮಾಡುತ್ತಿದ್ದಾರೆ. ನಾವು ದೆಹಲಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ನಿಮ್ಮೆಲ್ಲ ಶಕ್ತಿಯನ್ನು ಬಳಸಿ ಪ್ರಧಾನಿ ಮೋದಿಯವರ ಮನಸ್ಸು ಬದಲಿಸುವಂತೆ ಮಾಡಿ. ಹಾಗದಲ್ಲಿ ಇಡೀ ದೇಶವೇ ನಿಮಗೆ ಕೃತಜ್ಞತೆ ಸಲ್ಲಿಸಲಿದೆ ಎಂದು ಮನವಿ ಮಾಡಿದ್ದರು. ಈ ಪತ್ರವೂ ಪ್ರಭಾವ ಬೀರಿರಬಹುದು ಎನ್ನಲಾಗಿದೆ.
ಇಂದು ಸಿಖ್ ಸಮುದಾಯದ ಸಂತ ಗುರು ನಾನಕ್ ಅವರ ಜನ್ಮದಿನ. ನೂತನ ಮೂರು ಕೃಷಿ ಕಾಯಿದೆ ಜಾರಿಗೆ ಪಂಜಾಬ್‌ನಲ್ಲೇ ಅತಿಹೆಚ್ಚು ವಿರೋಧ ವ್ಯಕ್ತವಾಗಿತ್ತು. ರೈತರು ಮನೆ-ಮಠ ತೊರೆದು ಸರ್ಕಾರದ ಈ ವಿವಾದಿತ ಕಾನೂನಿನ ವಿರುದ್ದ ತಿರುಗಿ ಬಿದ್ದಿದ್ದರು. ಇದೀಗ ರೈತರ ಕೋಪ ಶಮನ ಮಾಡಲು ಗುರು ಪೂರಬ್ ದಿನವೇ ಈ ಘೋಷಣೆ ಮಾಡಿದ್ದಾರೆ.