ಡಿಕೆಸು-ಅಶ್ವಥ್ ನಾರಾಯಣ್ ಡಿಶುಂ ಡಿಶುಂ: ಎಚ್‌ಡಿಕೆ ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ!
ರಾಮನಗರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉಪಸ್ಥಿತಿಯಲ್ಲಿದ್ದ ಸರಕಾರೀ ಕಾರ್ಯಕ್ರಮವೊಂದರಲ್ಲಿ ರಾಜ್ಯ ರಾಜಕೀಯ ವ್ಯವಸ್ಥೆಯನ್ನು ಅಪಹಾಸ್ಯ ಮಾಡಿದಂತಹ ಘಟನೆ ನಡೆದಿದೆ. ಇದಕ್ಕೆ ಬಿಜೆಪಿ-ಕಾಂಗ್ರೆಸ್ ಎರಡೂ ಪಕ್ಷಗಳು ಹೊರತಾಗಿಲ್ಲ.
ಘಟನೆ ನಡೆದಿದ್ದಕ್ಕೆ ಎರಡೂ ಪಕ್ಷದ ಮುಖಂಡರು ತಮ್ಮತಮ್ಮ ನಾಯಕರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಮುಂಬರುವ ಅಸೆಂಬ್ಲಿ ಚುನಾವಣೆಗೆ ಎರಡೂ ಪಕ್ಷಗಳು ಪೂರ್ವತಯಾರಿ ಮಾಡಿಕೊಳ್ಳಲು ವೇದಿಕೆಯನ್ನು ಬಳಸಿಕೊಂಡಂತೆ ಕಾಣುತ್ತಿದೆ ಎಂದು ನಿನ್ನೆಯ ವಿದ್ಯಮಾನವನ್ನು ವ್ಯಾಖ್ಯಾನಿಸಲಾಗುತ್ತಿದೆ.
ಸಂಘರ್ಷದ ರಾಜಕಾರಣಕ್ಕೆ ಹೆಸರಾಗಿರುವ ರಾಮನಗರದ ರಾಜಕೀಯದಲ್ಲಿ ನೇರ ಹಣಾಹಣಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ. ಆದರೆ, ಸೋಮವಾರ ನಡೆದ ಘಟನೆಯಿಂದಾಗಿ ಎರಡೂ ರಾಷ್ಟ್ರೀಯ ಪಕ್ಷಗಳು ಮುಂದಿನ ದಿನಗಳಲ್ಲಿ ತಮ್ಮ ಪಾತ್ರ ಏನು ಎಂದು ಸಾರಲು ಹೊರಟಂತಿದೆ.
ಎಷ್ಟೇ ಅಭಿವೃದ್ದಿ ಕೆಲಸಗಳನ್ನು ಮಾಡಿದರೂ, ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ ಬಿಜೆಪಿ ಗೆಲ್ಲುವಷ್ಟು ಇನ್ನೂ ಸಶಕ್ತವಾಗಿಲ್ಲ ಎನ್ನುವುದು ಸದ್ಯದ ರಾಜಕೀಯ ಚಿತ್ರಣ. ಆದರೆ, ಜಿಲ್ಲೆಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ವಿದ್ಯಮಾನಗಳು ಜೆಡಿಎಸ್ ಪಕ್ಷಕ್ಕೆ ಎಚ್ಚರಿಕೆಯ ಗಂಟೆ ಎನ್ನುವುದು ಗಮನಿಸಬೇಕಾದ ವಿಚಾರ.
Recommended Video

ಇಲ್ಲಿನ ಜನರು ನನ್ನನ್ನು ಮನೆಮಗನಂತೆ ಕಾಣುತ್ತಿದ್ದಾರೆ, ಕುಮಾರಸ್ವಾಮಿ
ರಾಮನಗರ ನನ್ನ ಕರ್ಮಭೂಮಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಲವು ಬಾರಿ ಹೇಳಿದ್ದಾರೆ. ಇಲ್ಲಿನ ಜನರು ನನ್ನನ್ನು ಮನೆಮಗನಂತೆ ಕಾಣುತ್ತಿದ್ದಾರೆ ಎಂದು ಕುಮಾರಸ್ವಾಮಿ ಹಲವು ಬಾರಿ ಹೇಳಿದ್ದುಂಟು. ಇನ್ನು, ಜಿಲ್ಲೆಯ ಅಭಿವೃದ್ದಿಗೆ ಎಚ್‌ಡಿಕೆ ಮಹತ್ವದ ಪಾತ್ರವನ್ನು ವಹಿಸಿದ್ದೂ ಹೌದು. ಆದರೆ, ಜೆಡಿಎಸ್ ಇತ್ತೀಚಿನ ದಿನಗಳಲ್ಲಿ ಸೊರಗುತ್ತಿರುವುದು, ಜಿಲ್ಲೆಯಲ್ಲಿ ಬಿಜೆಪಿ ಎಂಟ್ರಿಗೆ ಕಾರಣವಾಗಬಹುದು ಎನ್ನುವುದನ್ನು ಸೋಮವಾರದ ಘಟನೆಯ ನಂತರ ವಿಶ್ಲೇಷಿಸಲಾಗುತ್ತಿದೆ.
|
ಕುಮಾರಸ್ವಾಮಿ ನೇರವಾಗಿ ಡಿಕೆ ಬ್ರದರ್ಸ್ ಅವರನ್ನು ಪ್ರಶ್ನಿಸಿದ್ದಾರೆ
"ರಾಮನಗರ ಜಿಲ್ಲೆಯನ್ನು ರಚನೆ ಮಾಡಿ ಅಭಿವೃದ್ದಿ ಮಾಡಿದವನು ನಾನು. ಇವರಿಬ್ಬರು ಯಾಕೆ ಕಿತ್ತಾಡಿಕೊಳ್ಳುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ. ಕಲ್ಲು ಬಂಡೆಗಳನ್ನು ನುಂಗಿ, ಮಣ್ಣು ಬಗೆದು ಪರರಿಗೆ ಬಿಕರಿ ಮಾಡಿಕೊಂಡು ಕೋಟೆ ಕೊತ್ತಲಗಳನ್ನು ಕಟ್ಟಿಕೊಂಡು ಮೆರೆಯುತ್ತಿರುವ ʼಡಿಸೈನ್ ವೀರರಿಗೆʼ ನಮ್ಮ ನೆಲ, ನಮ್ಮ ಜಲ ಎನ್ನುವುದು ಈಗ ನೆನಪಿಗೆ ಬಂದಿದೆ. ಆಭದ್ರತೆ ಅಡಿಪಾಯವನ್ನೇ ಅಲ್ಲಾಡಿಸುತ್ತಿದೆ! ಅಲ್ಲವೇ?" ಎಂದು ಕುಮಾರಸ್ವಾಮಿ ನೇರವಾಗಿ ಡಿಕೆ ಬ್ರದರ್ಸ್ ಅವರನ್ನು ಪ್ರಶ್ನಿಸಿದ್ದಾರೆ.

ಮೇಕೆದಾಟು ಪಾದಯಾತ್ರೆ ಮೂಲಕ ಕಾಂಗ್ರೆಸ್ ಇನ್ನಷ್ಟು ಮೈಲೇಜ್
ಕಾಂಗ್ರೆಸ್ ಪಕ್ಷದ ಸಾಧನೆ ದಿನದಿಂದ ದಿನಕ್ಕೆ ಉತ್ತಮಗೊಳ್ಳುತ್ತಿದೆ, ಜೆಡಿಎಸ್ ಪಕ್ಷ ಹಿನ್ನಡೆ ಅನುಭವಿಸುತ್ತಿದೆ ಎನ್ನುವುದಕ್ಕೆ ಇತ್ತೀಚಿನ ಹಲವು ಚುನಾವಣೆಗಳು ಸಾಕ್ಷಿ. ಹಳೇ ಮೈಸೂರು ಭಾಗದಲ್ಲೇ ಜೆಡಿಎಸ್ ತನ್ನ ಪ್ರಾಬಲ್ಯವನ್ನು ಕಳೆದುಕೊಳ್ಳುತ್ತಿದೆ. ಇದಕ್ಕೆ ಮಂಡ್ಯ, ತುಮಕೂರು, ಕೋಲಾರ ವಿಧಾನ ಪರಿಷತ್ ಚುನಾವಣೆಯೂ ಉದಾಹರಣೆಯಾಗಬಲ್ಲದು. ಮೇಕೆದಾಟು ಪಾದಯಾತ್ರೆ ಮೂಲಕ ಕಾಂಗ್ರೆಸ್ ಇನ್ನಷ್ಟು ಮೈಲೇಜ್ ಹೆಚ್ಚಿಸಿಕೊಳ್ಳಲು ತಂತ್ರಗಾರಿಕೆ ರೂಪಿಸುತ್ತಿದೆ. ಇದು ನೇರವಾಗಿ ಜೆಡಿಎಸ್ ಮತಬ್ಯಾಂಕಿಗೆ ಕೈಹಾಕಿದಂತೆ.

ಅದರ ಮುಂದುವರಿದ ಭಾಗವೇ ಸಿಎಂ ಬೊಮ್ಮಾಯಿ ಇದ್ದ ಕಾರ್ಯಕ್ರಮ
ರಾಮನಗರದಲ್ಲಿ ಡಿಕೆ ಬ್ರದರ್ಸ್ ಹಿಡಿತ ಬಿಗಿಗೊಳ್ಳುತ್ತಿದೆ, ಅಲ್ಲಿ ಅವರಿಗಿರುವ ಎದುರಾಳಿ ಜೆಡಿಎಸ್. ಪಕ್ಷ ಸಂಘಟನೆಯ ಕೊರತೆ, ಪ್ರಮುಖ ನಾಯಕರು ಹಿಮ್ಮುಖರಾಗುತ್ತಿರುವುದರಿಂದ ಜೆಡಿಎಸ್ ಜರ್ಝರಿತವಾಗುತ್ತಿದೆ. ಇದೇ ಒಳ್ಳೆಯ ಚಾನ್ಸ್ ಎಂದು ಬಿಜೆಪಿ ಜಿಲ್ಲಾ ರಾಜಕೀಯದಲ್ಲಿ ಪ್ರಾಬಲ್ಯ ಮೆರೆಯಲು ಯೋಜನೆ ಹಣೆಯುತ್ತಿದೆ. ಅದರ ಮುಂದುವರಿದ ಭಾಗವೇ ಸಿಎಂ ಬೊಮ್ಮಾಯಿ ಇದ್ದ ಕಾರ್ಯಕ್ರಮ. ಹಾಗಾಗಿ, ರಾಮನಗರದ ನಿನ್ನೆಯ ವಿದ್ಯಮಾನ ಮುಂದಿನ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳ ಜಿದ್ದು ಹೇಗೆ ಇರಲಿದೆ ಎನ್ನುವುದರ ಪೂರ್ವಭಾವಿ ತಾಲೀಮು.
ಇದು, ದಳಪತಿಗಳು ಮುಂದಿನ ಕಾರ್ಯತಂತ್ರ ರೂಪಿಸಲು ಕೊಟ್ಟ ಎಚ್ಚರಿಕೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.ಇದನ್ನು ಕುಮಾರಸ್ವಾಮಿ ಯಾವರೀತಿ ನಿಭಾಯಿಸಿಕೊಂಡು ಹೋಗಲಿದ್ದಾರೆ ಎನ್ನುವುದು ಕಾದು ನೋಡಬೇಕಿದೆ.












Click it and Unblock the Notifications