ಮೊದಲ ಹೆಜ್ಜೆಯಲ್ಲೇ ಸಿದ್ದರಾಮಯ್ಯಗೆ ಬಿಸಿ ಮುಟ್ಟಿಸಿದರೇ ಖರ್ಗೆ?
ಕೆಪಿಸಿಸಿಯಲ್ಲಿ ಮೊದಲ ಪಂಕ್ತಿಯಲ್ಲಿ ನಿಲ್ಲುವ ಇಬ್ಬರು ನಾಯಕರಾದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವುದಕ್ಕೆ ಭಾರತ್ ಜೋಡೋ ಪಾದಯಾತ್ರೆಯ ವೇಳೆ ರಾಹುಲ್ ಗಾಂಧಿ ಇವರಿಬ್ಬರನ್ನು ಒಗ್ಗೂಡಿಸುವುದಕ್ಕೆ ಮುಂದಾಗಿದ್ದು ಉದಾಹರಣೆಯಾಗಬಲ್ಲದು.
ಬಸವಳಿದಿರುವ ರಾಜ್ಯ ಕಾಂಗ್ರೆಸ್ಸಿಗೆ ರಾಹುಲ್ ಗಾಂಧಿಯವರ ಈ ಯಾತ್ರೆ ಹೊಸ ಟಾನಿಕ್ ನೀಡಿರುವುದಂತೂ ಹೌದು. ಚುನಾವಣಾ ವರ್ಷವಾಗಿರುವುದರಿಂದ ಕೆಪಿಸಿಸಿ ಹೇಗೆ ಇದರ ಲಾಭವನ್ನು ಪಡೆದುಕೊಳ್ಳಬಹುದು ಎನ್ನುವುದು ಡಿಕೆಶಿ ಮತ್ತು ಸಿದ್ದರಾಮಯ್ಯನವರಿಗೆ ಬಿಟ್ಟ ವಿಚಾರವಾಗಿದೆ.
ಎಐಸಿಸಿಗೆ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧೆ ಮತ್ತವರ ಆಯ್ಕೆ ಬಹುತೇಕ ಖಚಿತವಾಗುತ್ತಿದ್ದಂತೆಯೇ, ಕೆಪಿಸಿಸಿಯಲ್ಲಿ ಹಲವು ಬದಲಾವಣೆಗಳಾಗಬಹುದು ಎಂದು ವ್ಯಾಖ್ಯಾನಿಸಲಾಗುತ್ತಿತ್ತು. ಈಗ, ಖರ್ಗೆ ಶತಮಾನದ ಇತಿಹಾಸವುಳ್ಳ ಕಾಂಗ್ರೆಸ್ಸಿನ ಬಾಸ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.
ಗಾಂಧಿ ಕುಟುಂಬದ ನೆರಳಿನಲ್ಲಿ ಕೆಲಸ ನಿರ್ವಹಿಸುವುದಿಲ್ಲ ಎಂದು ಖರ್ಗೆ ಹೇಳಿದ್ದರು. ಖರ್ಗೆ ಅಧಿಕಾರ ಸ್ವೀಕರಿಸಿದ ನಂತರ ಇಟ್ಟ ಮೊದಲ ಪ್ರಮುಖ ಹೆಜ್ಜೆಯನ್ನು ಅವಲೋಕಿಸಿದಾಗ ಮೂಲ ಕಾಂಗ್ರೆಸ್ಸಿಗರಿಗೆ ಹೆಚ್ಚಿನ ಮಣೆ ಹಾಕುವ ನಿರ್ಧಾರಕ್ಕೆ ಖರ್ಗೆ ಮುಂದಿನ ದಿನಗಳಲ್ಲಿ ಬರಬಹುದು ಎನ್ನುವುದು ರಾಜಕೀಯ ಪಂಡಿತರ ವ್ಯಾಖ್ಯಾನ.

ಖರ್ಗೆಯವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಸೋನಿಯಾ, ರಾಹುಲ್
ಮಲ್ಲಿಕಾರ್ಜುನ ಖರ್ಗೆಯವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸುವ ಸಲುವಾಗಿ ರಾಹುಲ್ ಗಾಂಧಿಯವರು ಕೂಡಾ ಒಂದು ದಿನ ತಮ್ಮ ಪಾದಯಾತ್ರೆಯನ್ನು ಮೊಟಕುಗೊಳಿಸಿದ್ದರು. ಗಾಂಧಿ ಕುಟುಂಬದ ಅತ್ಯಂತ ನಿಷ್ಟ ಸಿಪಾಯಿಯಾಗಿರುವ ಖರ್ಗೆಯವರು ಅಧಿಕಾರ ಸ್ವೀಕರಿಸಿದ ನಂತರದ ಮೊದಲ ಹೆಜ್ಜೆಯಲ್ಲಿ ಹೊಸ ಸ್ಟೀರಿಂಗ್ ಕಮಿಟಿಯನ್ನು (ಸಂಚಲನಾ ಸಮಿತಿ) ರಚಿಸಿದ್ದಾರೆ. ಇದರಲ್ಲಿ, ರಾಜ್ಯದಲ್ಲಿ ಮೂವರಿಗೆ ಮಣೆಹಾಕಲಾಗಿದೆ. ಇಲ್ಲೇ ಇರುವುದು ವಿಷಯ..

ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು
ಎಐಐಸಿಯ ಮಾಜಿ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಕಾಂಗ್ರೆಸ್‌ನ ಹೊಸ ಸಮಿತಿಯಲ್ಲಿ ಸ್ಥಾನ ದೊರಕಿದೆ. ಮಾತ್ರವಲ್ಲದೇ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರನ್ನೂ ಸ್ಟೀರಿಂಗ್ ಕಮಿಟಿಯ ಭಾಗವನ್ನಾಗಿ ಮಾಡಲಾಗಿದೆ. ಇದರಲ್ಲಿ ಕರ್ನಾಟಕದಿಂದ ಎಚ್.ಕೆ ಪಾಟೀಲ್, ಕೆ.ಎಚ್.ಮುನಿಯಪ್ಪ ಮತ್ತು ದಿನೇಶ್ ಗುಂಡೂರಾವ್ ಅವರಿಗೆ ಸ್ಥಾನ ದೊರಕಿದೆ. ಇವರೆಲ್ಲರೂ ಮೂಲ ಕಾಂಗ್ರೆಸ್ಸಿಗರು ಎನ್ನುವುದು ಗಮನಿಸಬೇಕಾದ ವಿಚಾರ.

ಸಿದ್ದರಾಮಯ್ಯನವರ ಸರಕಾರ ಅಧಿಕಾರದಲ್ಲಿದ್ದಾಗ ದಿನೇಶ್ ಗುಂಡೂರಾವ್
ಸಿದ್ದರಾಮಯ್ಯನವರ ಸರಕಾರ ಅಧಿಕಾರದಲ್ಲಿದ್ದಾಗ ದಿನೇಶ್ ಗುಂಡೂರಾವ್ ಅವರು ಸಿದ್ದರಾಮಯ್ಯನವರ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದವರು. ಇದಾದ ನಂತರ, ಬೇರೆ ರಾಜ್ಯಗಳ ಜವಾಬ್ದಾರಿಯನ್ನು ದಿನೇಶ್ ಅವರಿಗೆ ನೀಡಿದ್ದರಿಂದ ರಾಜ್ಯ ಕಾಂಗ್ರೆಸ್ಸಿನ ಚಟುವಟಿಕೆಗಳಲ್ಲಿ ದಿನೇಶ್ ಅಷ್ಟೇನೂ ಸಕ್ರಿಯರಾಗಿರಲಿಲ್ಲ. ಜೊತೆಗೆ, ಇತ್ತೀಚಿನ ದಿನಗಳಲ್ಲಿ ಡಿಕೆಶಿ ಪಾಳಯದ ಜೊತೆಗೆ ಹತ್ತಿರಾಗುತ್ತಿದ್ದಾರೆ ಎನ್ನುವ ಮಾತು ಕೆಪಿಸಿಸಿಯಲ್ಲಿ ಕೇಳಿ ಬರುತ್ತಿದೆ.

ಕೆ.ಎಚ್.ಮುನಿಯಪ್ಪ ಮತ್ತು ಸಿದ್ದರಾಮಯ್ಯನವರ ನಡುವಿನ ಸಂಬಂಧ
ಇನ್ನು, ಕೆ.ಎಚ್.ಮುನಿಯಪ್ಪ ಮತ್ತು ಸಿದ್ದರಾಮಯ್ಯನವರ ನಡುವಿನ ಸಂಬಂಧ ಹಳಸಿ ಹೋಗಿರುವುದು ಗೊತ್ತಿರುವ ವಿಚಾರ. ಎಐಸಿಸಿ ಉಸ್ತುವಾರಿ ರಣದೀಪ್ ಸುರ್ಜೇವಾಲ ಅವರು ಮುನಿಯಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ್ದರು, ಇದಾದ ನಂತರ ಭಾರತ್ ಜೋಡೋ ಪಾದಯಾತ್ರೆಯಲ್ಲೂ ಮುನಿಯಪ್ಪ ಹೆಜ್ಜೆ ಹಾಕಿದ್ದರು. ಇನ್ನು, ಎಚ್.ಕೆ.ಪಾಟೀಲ್ ಕೂಡಾ ಸಿದ್ದರಾಮಯ್ಯನವರ ಪರಮಾಪ್ತರೇನೂ ಅಲ್ಲ. ಹಾಗಾಗಿ, ಮಲ್ಲಿಕಾರ್ಜುನ ಖರ್ಗೆ ಸಂಚಲನಾ ಸಮಿತಿಗೆ ಆಯ್ಕೆ ಮಾಡಿದ ಮೂವರ ಹೆಸರು, ಸಿದ್ದರಾಮಯ್ಯನವರಿಗೆ ಆರಂಭದಲ್ಲೇ ಬಿಸಿಮುಟ್ಟಿಸುವ ಕೆಲಸವಾಗಿರಬಹುದು ಎನ್ನುವ ಮಾತು ಕೆಪಿಸಿಸಿಯಲ್ಲಿ ಕೇಳಿ ಬರುತ್ತಿದೆ.












Click it and Unblock the Notifications