ಪಂಜಾಬ್ ಚುನಾವಣೆ ಭರವಸೆ ಮಹಾಪೂರ: ಆದರೆ ಶೇ.10ರಷ್ಟು ಮಹಿಳೆಯರಿಗೆ ಮಾತ್ರ ಟಿಕೆಟ್!
ಚಂಡೀಗಢ, ಫೆಬ್ರವರಿ 03: ಪಂಜಾಬ್‌ನಲ್ಲಿ ಸುಮಾರು ಅರ್ಧದಷ್ಟು ಮತದಾರರು ಮಹಿಳೆಯರು. ಆದರೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಕೇವಲ ಶೇ.10ರಷ್ಟು ಮಂದಿಗೆ ಮಾತ್ರ ಟಿಕೆಟ್ ನೀಡಲಾಗಿದೆ. ರಾಜ್ಯದಲ್ಲಿ ಒಟ್ಟು 2.77 ಕೋಟಿ ಮತದಾರರಿದ್ದು, ಇದರಲ್ಲಿ 1.46 ಕೋಟಿ ಪುರುಷರು ಮತ್ತು 1.31 ಕೋಟಿ ಮಹಿಳೆಯರು ಆಗಿದ್ದಾರೆ.
ವಿಪರ್ಯಾಸವೆಂದರೆ ಪಂಜಾಬ್‌ನಲ್ಲಿ ಮಹಿಳೆಯರು ಅಧಿಕವಿದ್ದರೂ ಮಹಿಳೆಯರನ್ನು ಕೇವಲ ಮತದಾರರಾಗಿ ಸ್ವಾಗತಿಸಲಾಗುತ್ತಿದೆಯೇ ಹೊರತು ರಾಜಕಾರಣಿಗಳು ಅಥವಾ ಶಾಸಕರಾಗಿ ಯಾವ ಪಕ್ಷವು ಪರಿಗಣಿಸುತ್ತಿಲ್ಲ. ರಾಜ್ಯದಲ್ಲಿ ಮಹಿಳಾ ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಮಹಿಳೆಯರಿಗೆ ಹಲವಾರು ಚುನಾವಣಾ ಪೂರ್ವ ಭರವಸೆಯನ್ನು ನೀಡುತ್ತಿದೆ. ರಾಜಕೀಯ ಪಕ್ಷಗಳು ರೂಪಾಯಿ 1000ರಿಂದ ರೂಪಾಯಿ 2000ರವರೆಗಿನ ಮಾಸಿಕ ನಗದು ಭರವಸೆ ನೀಡಿದೆ.
ಕಾಂಗ್ರೆಸ್ ಮತ್ತು ಅಕಾಲಿದಳ ಮಾಸಿಕ 2000 ರೂ ನೀಡುವ ಭರವಸೆಯನ್ನು ನೀಡಿದ್ದರೆ, ಆಮ್ ಆದ್ಮಿ ಪಕ್ಷ 18 ವರ್ಷ ಮೇಲ್ಪಟ್ಟ ಪ್ರತಿ ಮಹಿಳೆಯ ಬ್ಯಾಂಕ್ ಖಾತೆಗೆ ತಿಂಗಳಿಗೆ 1000 ರೂಪಾಯಿ ಜಮೆ ಮಾಡುವ ಭರವಸೆ ನೀಡಿದೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಇನ್ನೂ ಬಿಡುಗಡೆ ಮಾಡಿಲ್ಲ, ಆದರೆ ಅದರ ಪಂಜಾಬ್ ಮುಖ್ಯಸ್ಥ ನವಜೋತ್ ಸಿಧು ಈಗಾಗಲೇ ಎಂಟು ಉಚಿತ ಎಲ್‌ಪಿಜಿ ಸಿಲಿಂಡರ್‌ಗಳ ಜೊತೆಗೆ ಗೃಹಿಣಿಯರಿಗೆ ರೂ 2,000 ಘೋಷಿಸಿದ್ದಾರೆ.

ಭರವಸೆ ಓಕೆ, ರಾಜಕೀಯಕ್ಕೆ ಮಾತ್ರ ಎಂಟ್ರಿಯಿಲ್ಲ!
ಭರವಸೆಗಳನ್ನು ನೀಡಿದ ರಾಜಕೀಯ ಪಕ್ಷಗಳು ಟಿಕೆಟ್ ನೀಡಲು ಹಿಂದೇಟು ಹಾಕುತ್ತಿವೆ. 117 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 11 ಮಹಿಳೆಯರಿಗೆ, ಎಎಪಿ 12 ಮಹಿಳೆಯರಿಗೆ, ಬಿಜೆಪಿ-ಪಿಎಲ್‌ಸಿ-ಎಸ್‌ಎಡಿ (ಸಂಯುಕ್ತ) ಮೈತ್ರಿ ಎಂಟು ಮತ್ತು ಎಸ್‌ಎಡಿ-ಬಿಎಸ್‌ಪಿ ಮೈತ್ರಿಕೂಟ ಕೇವಲ ಐವರು ಮಹಿಳೆಯರಿಗೆ ಟಿಕೆಟ್ ನೀಡಿದೆ. ಮಹಿಳೆಯರಿಗೆ ಕನಿಷ್ಠ ಶೇ.33 ಮೀಸಲಾತಿ ನೀಡುವ ಭರವಸೆಯನ್ನು ನೀಡಿದ ಕಾಂಗ್ರೆಸ್ ಶೇ.9.40ರಷ್ಟು ಮಹಿಳೆಯರಿಗೆ ಮಾತ್ರ ಟಿಕೆಟ್ ನೀಡಿದೆ. ಎಎಪಿ ಶೇ 10.25 ಮಹಿಳೆಯರಿಗೆ ಟಿಕೆಟ್ ನೀಡಿದೆ. ಬಿಜೆಪಿ-ಪಿಎಲ್‌ಸಿ-ಎಸ್‌ಎಡಿ(ಎಸ್) ಮೈತ್ರಿಕೂಟ ಕೇವಲ ಶೇ.6.83 ಮಹಿಳೆಯರಿಗೆ ಮತ್ತು ಅಕಾಲಿದಳ-ಬಿಎಸ್‌ಪಿ ಮೈತ್ರಿಕೂಟ ಕೇವಲ ಐದು ಮಹಿಳೆಯರನ್ನು (ಶೇ.4.27) ಕಣಕ್ಕಿಳಿಸಿದೆ.

ಕಾಂಗ್ರೆಸ್‌ನಿಂದ ಶೇ.10 ಮಹಿಳೆಯರಿಗೆ ಟಿಕೆಟ್
ಕಾಂಗ್ರೆಸ್ ಕೇವಲ 10 ಪ್ರತಿಶತಕ್ಕಿಂತ ಕಡಿಮೆ ಮಹಿಳೆಯರಿಗೆ ಏಕೆ ಟಿಕೆಟ್ ನೀಡಿದೆ ಎಂದು ಕಾಂಗ್ರೆಸ್ ಪಕ್ಷದ ನಾಯಕಿ ಅಲ್ಕಾ ಲಾಂಬಾರನ್ನು ಪ್ರಶ್ನಿಸಿದಾಗ, "ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಅವರು 'ಲಡ್ಕಿ ಹೂ ಲಡ್ ಸಕ್ತಿ ಹೂ' (ಮಹಿಳೆಯರು ಹೋರಾಡಬಲ್ಲರು) ಎಂಬ ಘೋಷಣೆಯನ್ನು ಎತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಕನಿಷ್ಠ 127 ಮಹಿಳೆಯರು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಪಂಜಾಬ್‌ನಲ್ಲಿಯೂ 11 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ," ಎಂದು ತಿಳಿಸಿದ್ದಾರೆ.

ಆಮ್ ಆದ್ಮಿ ಪಕ್ಷದಿಂದ ಅಧಿಕ ಮಹಿಳೆಯರಿಗೆ ಟಿಕೆಟ್
ಇಂಡಿಯಾ ಟುಡೆಯೊಂದಿಗೆ ಮಾತನಾಡಿದ ಆಮ್ ಆದ್ಮಿ ಪಕ್ಷದ ಖರಾರ್ ಅಭ್ಯರ್ಥಿ ಅನ್ಮೋಲ್ ಗಗನ್ ಮಾನ್, "ಇತರ ಯಾವುದೇ ಪಕ್ಷಗಳಿಗೆ ಹೋಲಿಸಿದರೆ ಪಂಜಾಬ್‌ನಲ್ಲಿ ಆಪ್ ಅತಿ ಹೆಚ್ಚು ಮಹಿಳೆಯರನ್ನು ಕಣಕ್ಕಿಳಿಸಿದೆ. ನಾವು ಮಹಿಳೆಯರಿಗೆ ಸರಿಯಾದ ಪ್ರಾತಿನಿಧ್ಯವನ್ನು ನೀಡಿದ್ದೇವೆ. ಸರ್ವಜೀತ್ ಮನುಕೆ ಅವರನ್ನು ಎಎಪಿ ಶಾಸಕಾಂಗ ಪಕ್ಷದ ಉಪನಾಯಕರನ್ನಾಗಿ ಮಾಡಲಾಯಿತು. ಕಣದಲ್ಲಿರುವ ಹೆಚ್ಚಿನ ನಾಯಕರು ಇಲ್ಲಿಯೇ ಹುಟ್ಟಿ ಬೆಳೆದವರು," ಎಂದು ಗಾಯಕಿ-ರಾಜಕಾರಣಿ ಅನ್ಮೋಲ್ ಗಗನ್ ಮಾನ್ ಹೇಳಿದ್ದಾರೆ.

ಪ್ರಿಯಾಂಕಾ ಗಾಂಧಿ ಮಾತು ಧಿಕ್ಕರಿಸಿದ ಪಂಜಾಬ್
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಫೆಬ್ರವರಿ-ಮಾರ್ಚ್‌ನಲ್ಲಿ ಚುನಾವಣೆ ನಡೆಯಲಿರುವ ಐದು ರಾಜ್ಯಗಳ ಪೈಕಿ ಯುಪಿಯಲ್ಲಿ ಪಕ್ಷದ ಶೇಕಡ 40ರಷ್ಟು ಮಹಿಳೆಯರಿಗೆ ಪಕ್ಷದ ಟಿಕೆಟ್ ನೀಡುವುದಾಗಿ ಘೋಷಿಸಿದ್ದರು. ಪಂಜಾಬ್ ಸೇರಿದಂತೆ ಇತರ ರಾಜ್ಯಗಳಲ್ಲಿ ಪಕ್ಷದ ಘಟಕಗಳು ಕೂಡಾ ಇದೆ ಕ್ರಮ ಕೈಗೊಳ್ಳಲಿದೆ. ಆದಾಗ್ಯೂ, ಪಂಜಾಬ್‌ನಲ್ಲಿನ ಕಾಂಗ್ರೆಸ್ ಘಟಕವು ಅದರ ಉನ್ನತ ನಾಯಕತ್ವದ ಮಾತನ್ನು ಧಿಕ್ಕರಿಸಿದೆ. ಕಾಂಗ್ರೆಸ್‌ನ 11 ಅಭ್ಯರ್ಥಿಗಳ ಪೈಕಿ ಮಾಜಿ ಮುಖ್ಯಮಂತ್ರಿ ರಾಜಿಂದರ್ ಕೌರ್ ಭಟ್ಟಾಲ್ ಮತ್ತು ಕ್ಯಾಬಿನೆಟ್ ಸಚಿವರಾದ ಅರುಣಾ ಚೌಧರಿ ಮತ್ತು ರಜಿಯಾ ಸುಲ್ತಾನಾ ಅವರು ವರ್ಷಗಳ ರಾಜಕೀಯ ಅನುಭವವನ್ನು ಹೊಂದಿರುವವರು ಆಗಿದ್ದಾರೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications